ದಾರಿ ದರ್ಪಣ
ಈ ಮಾತು ನಡೆದು ಈಗಾಗಲೇ ಕೆಲವು ವರ್ಷಗಳೇ ಉರುಳಿವೆ. ಲಂಡನ್ ನಗರಕ್ಕೆ ಸಮೀಪದಲ್ಲಿರುವ ,ಸ್ವಿಂಡನ್ ನಗರದಲ್ಲಿ ನಮ್ಮ ಆಪ್ತರಾದ ಶ್ರೀನಿವಾಸ ಹಾಗೂ ಗೌರಿ ವಾಸವಾಗಿದ್ದಾರೆ. ಅಲ್ಲಿಗೆ ನಮ್ಮ ಮನೆಯಿಂದ 3-4 ಗಂಟೆಗಳ ರಸ್ತೆ ಕಾರಿನಲ್ಲಿ.ಅವರ ಮನೆಯಲ್ಲಿ ಸತ್ಯನಾರಾಯಣನ ಪೂಜೆ . ಬೆಳಗ್ಗೆ ಹೋಗಿ ಮತ್ತೆ ಸಂಜೆಗೆ ಹಿಂತಿರುಗುವುದೆಂದರೆ ಸ್ವಲ್ಪ ಆಯಾಸದ ಕೆಲಸವೇ! ಅಲ್ಲಿ ಮೂರ್ತಿಯೇ ಪೂಜೆ ಮಾಡಿಸುವವರಿದ್ದರಿಂದ ಡ್ರೈವ್ ಮಾಡಿದುದೇ ಅಲ್ಲದೆ , ಪೂಜೆ ಮಾಡಿಸಲು ಒಂದೇ ಸಮನೆ ಕುಳಿತಿರಬೇಕಾಗುತ್ತದೆ . ಆಮೇಲೆ ಮತ್ತೆ ಹಿಂತಿರುಗಿ ಬರುವುದು ದೂರದ ಮಾತು. ಆದ್ದರಿಂದ ನಾನೂ ಮೂರ್ತಿ ಹಿಂದಿನ ದಿನವೇ ಹೊರಡುವುದೆಂದು ನಿರ್ಧರಿಸಿದೆವು. ಶುಕ್ರವಾರ ಸಂಜೆ ನಾನು ಕೆಲಸ ಮುಗಿಸಿ ಮನೆಗೆ ಬರುವ ವೇಳೆಗೆ ಮೂರ್ತಿ ತಯಾರಾಗಿ ಕುಳಿತಿದ್ದರು. ಅವರು ಈಗಾಗಲೇ ಕೆಲಸದಿಂದ ನಿವೃತ್ತರಾಗಿದ್ದರಲ್ಲ! ಹೀಗೆ ಹೊರಗೆ ಹೋಗುವ ಅವಕಾಶಗಳು ಅವರಿಗೆ ತುಂಬ ಬೇಕಾದವುಗಳೇ ಆಗಿದ್ದವು. ನಾನೂ ಕೆಲಸದಿಂದ ಬಂದೊಡನೆಯೇ ಕೈಕಾಲು ಮುಖ ತೊಳೆದು ಬೇರೆ ಸೀರೆಯುಟ್ಟು ಮುಖಕ್ಕೆ ಒಂದಿಷ್ಟು ಪೇಂಟ್ ಬಳಿದು ಸಿದ್ಧವಾಗಿ ನಿಂತೆ. ಗಂಟೆ ಆಗಲೇ 6-15 ತೋರಿಸುತ್ತಿತ್ತು.ನಾವಿರುವುದು ಮಾಂಚೆಸ್ಟರ್ ಗೆ ಸೇರಿದ ಒಂದು ಬಡಾವಣೆಯಲ್ಲಿ.”ಆಶ್ಟನ್ ಅಂಡರ್ ಲೈನ್" ಅದರ ಹೆಸರು. ಇಂಗ್ಲೆಂಡಿನ ಬಡವಾಣೆಗಳ ಕೆಲ ಹೆಸರುಗಳಂತೂ ಬಹಳ ವಿಚಿತ್ರವಾದವುಗಳು. ಕನ್ನಡಕ್ಕೆ ಅನುವಾದ ಮಾಡಿದಾಗ ಕೆಲವಂತೂ ...