ಕ್ರೂರಾಣಾಸುರ
ಕ್ರೂರಾಣಾಸುರ
ಸ್ವರ್ಗದಲ್ಲಿ ಸಭೆ ಸೇರಿತ್ತು.ಇಂದ್ರ
ಅಗ್ನಿ ಯಮ ವರುಣನೇ ಮೊದಲಾಗಿ ಎಲ್ಲರೂ ಸೇರಿದ್ದರು.ಸಭೆಯ ಹಿರಿಯರಾಗಿ ಬ್ರಹ್ಮ, ವಿಷ್ಣು ಹಾಗೂ ಈಶ್ವರ ವಿರಾಜಮಾನರಾಗಿದ್ದರು. ಎಲ್ಲರ ಮುಖದಲ್ಲೂ
ಆತಂಕ.ಒಂದು ರೀತಿಯ ಬಿಗುಮಾನ ಕಾಣಿಸುತ್ತಿತ್ತು.ಏನೋ ಆಪತ್ತು ಬಂದಿದೆಯೆಂದು ಅವರುಗಳನ್ನು ನೋಡಿದ
ಕೂಡಲೇ ತಿಳಿಯುತ್ತಿತ್ತು. ಪ್ರಸ್ತುತ ಸಮಸ್ಯೆ ಎಂದರೆ ಮನುಷ್ಯ. ಬ್ರಹ್ಮ ಈ ಮನುಷ್ಯ ಸೃಷ್ಟಿಯನ್ನು
ಮಾಡಿದ್ದೇನೋ ಸರಿ ಅವನಿಗೆ ಬುದ್ಧಿಯನ್ನು ಕೊಟ್ಟು ತಪ್ಪು ಮಾಡಿದಂತೆ ತೋರುತ್ತಿತ್ತು.ಮನುಷ್ಯ
ಎಲ್ಲರನ್ನೂ ಮೀರಿಸಿ ಬೆಳೆಯತೊಡಗಿದ್ದ. ಮಾನವನ ವಿಕಾಸ ಅಮೀಬಾದಿಂದ ಮನುಷ್ಯನವರೆಗಾದ ಮೇಲೆ ಮುಂದೆ
ಯಾವ ರೀತಿ ಸೃಷ್ಟಿಯನ್ನು ಎಂದು ತಕ್ಷಣ ಹೊಳೆಯದೆ ಬ್ರಹ್ಮ ಮನುಷ್ಯನ ಬುದ್ಧಿಮತ್ತೆಯನ್ನು
ಹೆಚ್ಚುಮಾಡುತ್ತ ಹೋದ.ಅಂದರೆ ಮನುಷ್ಯನ ಮಾನಸಿಕ , ಬೌದ್ಧಿಕ
ವಿಕಾಸವಾಗುತ್ತಾ ಹೋಯಿತು ಪೀಳಿಗೆಯಿಂದ ಪೀಳಿಗೆಗೆ
ಬುದ್ಧಿ ಹೆಚ್ಚು ಹೆಚ್ಚು ಚುರುಕಾಗುತ್ತಾ ಹೋಯಿತು.ಪರಿಣಾಮ ಮನುಷ್ಯ ಇದುವರೆಗೆ ಸೃಷ್ಟಿಯ
ರಹಸ್ಯವಾಗಿ ಉಳಿದಿದ್ದ ಎಷ್ಟೋ ವಿಷಯಗಳನ್ನು ಅರಿತುಕೊಂಡ.ಹಕ್ಕಿಯಂತೆ ಹಾರಲು, ಮೀನಿನಂತೆ ಈಜಲು... ಒಂದೇ ಎರಡೇ ಬ್ರಹ್ಮನ ಸೃಷ್ಟಿತತ್ವವನ್ನು ಅರಿಯಲು ಮೊದಲು ಮಾಡಿದ.
ಬ್ರಹ್ಮನ ಸೃಷ್ಟಿಯನ್ನೇ ಅನುಕರಿಸುವ ಪ್ರಯತ್ನ ಮಾಡತೊಡಗಿದ.ಮನುಷ್ಯರನ್ನು ಸೃಷ್ಟಿ ಮಾಡುವ
ರಹಸ್ಯವನ್ನು ಕಂಡುಕೊಂಡ.. ಮನುಷ್ಯ ತಾನು ಬ್ರಹ್ಮನಿಗಿಂತಲೂ ಏನೂ ಕಡಿಮೆಇಲ್ಲವೆಂಬಂತೆ
ನಡೆದುಕೊಳ್ಳತೊಡಗಿದ.ದಿಕ್ಪಾಲಕರ ಕರ್ತವ್ಯವನ್ನೂ ಸರಿಯಾಗಿ ಮಾಡಲಾಗದಂತೆ ದಾಂಧಲೆ ಎಬ್ಬಿಸಿದ.
ಮರಗಿಡಗಳನ್ನು ಕಡಿದುಹಾಕಿ ಸೂರ್ಯದೇವನನ್ನು ಉತ್ತೇಜಿಸಿದ. ಅಗ್ನಿಯನ್ನು ಕೆಣಕಿ ಅವನ ಭಸ್ಮ ಮಾಡುವ
ಶಕ್ತಿಯನ್ನು ಪರೀಕ್ಷಿಸಿದ.ಕಾಲಕಾಲಕ್ಕೆ ಬರುತ್ತಿದ್ದ ಮಳೆಬೆಳೆಗಳನ್ನು ಏರುಪೇರು ಮಾಡಿದ. ಆದರೆ
ಇದಾವುದರ ಅರಿವೂ ಇರದೆ ತನ್ನ ಉನ್ಮತ್ತತೆಯಲ್ಲಿ ನಲಿದಾಡಿದ. ತಾನು ಸೃಷ್ಟಿಕರ್ತನನ್ನು
ಎದುರಿಸುವುದರಿಂದ ಆಗುವ ಅನಾಹುತಗಳ ಬಗೆಗೆ
ಯತ್ಕಿಂಚಿತ್ತೂ ಯೋಚಿಸಲಿಲ್ಲ.ಎಲ್ಲರೂ ಸೃಷ್ಟಿಯನ್ನು ಮಾಡಬಹುದಾಗಿದ್ದರೆ ಅದಕ್ಕೆ ಬ್ರಹ್ಮನೇಕೆ ಬೇಕಾಗಿತ್ತು?ಎಲ್ಲರೂ ಜಗತ್ತಿನ ಆಗುಹೋಗುಗಳನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು
ಸಾಧ್ಯವಾಗಿದ್ದಿದ್ದರೆ ವಿಷ್ಣುವೇಕಿರಬೇಕಾಗಿತ್ತು? ಎಂಬ ಸಾಮಾನ್ಯ ತಿಳುವಳಿಕೆಯೂ
ಇಲ್ಲದೆ ವರ್ತಿಸತೊಡಗಿದ.ವಿಜ್ಞಾನ ಎಂಬ ಆಯುಧದಿಂದ ಎಲ್ಲವನ್ನೂ ಜಯಿಸುವ ಶಕ್ತಿಯಿದೆಯೆಂದು ತಿಳಿದ.
ಪ್ರಕೃತಿಯನ್ನು ನಿರ್ದಾಕ್ಷಿಣ್ಯದಿಂದ ಬಳಸಿದ. ಎಲ್ಲಿ ಬೇಕೆಂದರಲ್ಲಿ ಮರಗಳನ್ನು ಕಡಿದ, ಮನೆಗಳನ್ನು ಕಟ್ಟಿದ, ಅಷ್ಟೇಕೆ ಸಹಜವಾಗಿ ಬೆಳೆಯುವ
ಬೆಳೆಗಳನ್ನು ತನ್ನ ವಿಜ್ಞಾನದ ಬಲದಿಂದ ದ್ವಿಗುಣಗೊಳಿಸಿದ. ಅವುಗಳ ಆಕಾರ , ಗಾತ್ರ , ಬಣ್ಣಗಳಲ್ಲಿ
ಬಹಳಷ್ಟು ವೈವಿಧ್ಯತೆಯನ್ನು ತಂದ. ವರುಣನನ್ನು ದುರುಪಯೋಗಿಸಿಕೊಂಡು ಯಂತ್ರಗಳನ್ನು
ಸೃಷ್ಟಿಸಿದ.ಇದನ್ನೆಲ್ಲ ಸಹಿಸದ ಪ್ರಕೃತಿ ತನ್ನ ವಿಕೋಪವನ್ನು ತೋರಿಸಿದಾಗ ಅವಳನ್ನು ತನ್ನದೇ ಆದ
ರೀತಿಯಲ್ಲಿ ಸಂತೈಸಲು ಪ್ರಯತ್ನಿಸಿದ. ಪ್ರಕೃತಿಯಲ್ಲಿ ಸಮತೋಲನ ತರಬೇಕಾದರೆ ಅದು ಹೇಗಿತ್ತೋ ಹಾಗೇ
ಬಿಡಬೇಕೆಂಬ ಸಾಮಾನ್ಯ ತಿಳುವಳಿಕೆಯೂ ಇಲ್ಲದೆ ತಾನು ಎಲ್ಲವನ್ನೂ ಸರಿ ಮಾಡಬಹುದೆಂಬ ಅಹಂಕಾರದಲ್ಲಿ
ಮೆರೆದ. ಒಟ್ಟಿನಲ್ಲಿ ಈ ಹಿಂದೆ ಆಗಿಹೋದ ಯಾವ ರಾಕ್ಷಸರಿಗೂ ಕಡಿಮೆಯಿಲ್ಲದೆ ಭೂದೇವಿಯನ್ನು
ಹೀಯಾಳಿಸಿದ. ಸೃಷ್ಟಿಯ ಅವಹೇಳನ ಮಾಡಿದ. ಭೂಮಿಯ ಮೇಲಿನ ಜೀವಗಳಲ್ಲಿ ಒಂದಲ್ಲ ಒಂದು ಖಾಯಿಲೆಯನ್ನು
ತಂದ. ಅಂಗೈಯಲ್ಲಿ ನೀರು ಹಾಕಿದಂತೆ ಇವನ ಕೆಲಸವಾಯ್ತು. ಒಂದು ಬೆರಳಿನ ಸಂದಿನಲ್ಲಿ ಬೀಳುವ
ನೀರನ್ನು ತಡೆಯಲು ಹೋಗಿ ಇನ್ನೊಂದು ಬೆರಳ ಸಂದಿಯಿಂದ ಸೋರುವಂತಾಯಿತು.
ಸೃಷ್ಟಿ ಸ್ಥಿತಿಲಯಗಳಿಗೆ ಕಾರಣರಾದ
ತ್ರಿಮೂರ್ತಿಗಳಿಗೂ ಅವರ ಅನುಜ್ಞೆಯಂತೆ ನಡೆಯುವ ದಿಕ್ಪಾಲಕರಿಗೂ ಇದರಿಂದ ಬಹಳ ಕೋಪ ಬಂದಿತು.
ಅದೇ ಕಾರಣದಿಂದಾಗಿ ಇಂದು ಎಲ್ಲರೂ ಒಟ್ಟಿಗೆ
ಸೇರಿದ್ದರು. ಮನುಷ್ಯ ತನ್ನ ಮಿತಿಯನ್ನು ಮೀರಿ ನಡೆಯುತ್ತಿದ್ದಾನೆ, ಅವನಿಗೆ ಬುದ್ಧಿ ಕಲಿಸಲೇ ಬೇಕು! ಅದಕ್ಕಾಗಿ ಯಾವರೀತಿ ಯೋಜನೆ
ಮಾಡಬೇಕೆಂಬುದನ್ನು ತೀರ್ಮಾನಿಸುವುದೇ ಇಂದಿನ ಸಭೆಯ ಉದ್ದೇಶವಾಗಿತ್ತು.
ಬ್ರಹ್ಮನಿಗೆ ಪರಿಸ್ಥಿತಿಯ
ಅರಿವಾಗಿತ್ತು.ತನ್ನ ಉದಾರತೆ ಮನುಷ್ಯನನ್ನುಯಾವ ಮಟ್ಟಕ್ಕೆ ಇಳಿಸಿದೆ ಎಂದು ಬಹಳ ಬೇಸರವಾಗಿತ್ತು.
ಅಷ್ಟೇಕೆ ತನ್ನನ್ನು ಮೀರಿ ಬೆಳೆಯತೊಡಗಿದ
ಮನುಷ್ಯನ ರೀತಿ ಬ್ರಹ್ಮನಿಗೆ ಒಂದು ಸವಾಲಾಗಿತ್ತು.ಸ್ವಲ್ಪ ಅವಮಾನವೂ ಎನ್ನಿಸಿತ್ತು.
ದೇವತೆಗಳೆಲ್ಲರಿಂದ ಹಲವಾರು ಪ್ರಶ್ನೆಗಳು , ಕಟಕಿ
ಮಾತುಗಳು ಇಂದಿನ ಸಭೆಯಲ್ಲಿ ಬರುತ್ತವೆಂದು ನಿರೀಕ್ಷಿಸಿದ್ದ. ಆದ್ದರಿಂದ ತನ್ನನ್ನು ಎದುರಿಸುವ
ಸವಾಲುಗಳಿಗೆ ಸಿದ್ಧನಾಗಿಯೇ ಬಂದಿದ್ದ.
ತನ್ನ ಉದಾರತೆಯಿಂದ, ಸಡಿಲತೆಯಿಂದ ಆಗಿರುವ ಅನಾಹುತಗಳ ಬಗ್ಗೆ ವಿಷಾದವಿದೆಯೆಂದು ತಿಳಿಸಿದ.
ಸುಮಾರು ಹೊತ್ತು ಚರ್ಚೆ ನಡೆದ ಮೇಲೆ ಬ್ರಹ್ಮ ತಾನು ಯೋಚಿಸಿರುವ ವಿಶಯವನ್ನು ಹೇಳಿದ.
ಇಷ್ಟೊಂದು ಕುಣಿದಾಡುತ್ತಿರುವ ಮನುಷ್ಯನ
ಅಹಂಕಾರವನ್ನು ಅಳಿಸಿ ಮನುಷ್ಯನೇ ಮನುಷ್ಯನಿಗೆ ಶತೃವಾಗುವಂತಹ ಉಪಾಅಯವನ್ನು ತರಬೇಕು,ಆಗ ಪ್ರತಿಯೊಬ್ಬರೂ ಇನ್ನೊಬ್ಬರಿಂದ ದೂರವಿರಲು ಪ್ರಯತ್ನಿಸುತ್ತಾ ತಮ್ಮ
ಸ್ವಾರ್ಥವನ್ನು ಚಿಂತಿಸುತ್ತಾರೆ. ಅಲ್ಲಿಗೆ ಮನುಶ್ಯನ ಈ ಆಟಾಟೋಪ ಮುಗಿಯುತ್ತದೆ.ಒಬ್ಬರನ್ನೊಬ್ಬರು
ಹತ್ತಿರ ಸೇರಿಸುವುದು ಇರಲಿ , ಇನ್ನೊಬ್ಬರ ಉಸಿರು ತಮಗೆ ತಾಕಿದರೆ
ಎಲ್ಲಿ ತಮಗೆ ತೊಂದರೆ ಯಾಗುತ್ತದೋ ಎಂದು ದೂರ ನಿಲ್ಲುತ್ತಾರೆ. ಮನೆಗಳಲ್ಲಿ ಪಾರ್ಟಿಗಳನ್ನು ಮಾಡಿ
ತಮ್ಮ ವೈಭವವನ್ನು ತೋರಿಸಿಕೊಳ್ಳುವ ಹಂಬಲ
ಮಾಯವಾಗಿ ಯಾರೂ ಬೇಡ ಎಂಬ ಸ್ಥಿತಿಗೆ ಬಂದು ಮೊದಲಿನ ಆತ್ಮೀಯತೆ ಮಾಯವಾಗಿ ಹೋಗುತ್ತದೆ.ಎಲ್ಲರೂ
ಒಟ್ಟಾಗಿ ಸೇರಿದರೆ ಚರ್ಚೆ, ಚರ್ಚೆಯಿಂದ ಯೋಜನೆಗಳು,ಯೋಜನೆಗಳಿಂದ ಹೊಸ ಪ್ರಯೋಗಗಳು., ಪ್ರಕೃತಿಯ ಅಲ್ಲೋಲ ಕಲ್ಲೋಲ.
ಅದನ್ನು ತಪ್ಪಿಸಲು ತಾನು ಈಗ ಒಂದು ಹೊಸ ಸೃಷ್ಟಿ" ಕ್ರೂರಾಣಾಸುರ"ನನ್ನು
ಹುಟ್ಟಿಸಿರುವುದಾಗಿಯೂ ಅದು ಕ್ಷಣ ಮಾತ್ರದಲ್ಲಿ
ಕೋಟಿಗಟ್ಟಲೆಯಲ್ಲಿ ವೃದ್ಧಿಯಾಗುವ ಶಕ್ತಿ ಉಳ್ಳದ್ದೆಂತಲೂ ಮನುಷ್ಯನ ಸ್ವಾತಂತ್ರವನ್ನು ಶೀಘ್ರವಾಗಿ
ಕಸಿದುಕೊಳ್ಳುವ ಶಕ್ತಿ ಅದಕ್ಕೆ ಇದೆಯೆಂತಲೂ ಹೇಳಿದ.ಅಷ್ಟೇ ಅಲ್ಲ ಮನುಷ್ಯನ ಅರಿವಿಗೆ ಬಾರದಂತೆ
ಅವನನ್ನು ಆಕ್ರಮಿಸಿ ನಾಶಮಾಡುತ್ತದೆ. ಈ ರಕ್ಕಸನ ಹಾವಳಿಯ ಅರಿವು ಮನುಷ್ಯನಿಗೆ ಆಗುವವೇಳೆಗೆ ಸಮಯ
ಮೀರಿರುತ್ತದೆ. ಅಂತಹ ಸಮಯದಲ್ಲಿ ಮನುಷ್ಯ ಸಾಯುವವರ ಸಂಖ್ಯೆಯನ್ನು ಕಡಿಮೆ ಮಾಡಲು
ಒದ್ದಾಡುವುದನ್ನು ಬಿಟ್ಟು ಬೇರೇನೂ ಮಾಡಲಾರ. ಈ ವ್ಯಸ್ತತೆಯಲ್ಲಿ ಬೇರೆ ಯಾವುದೇ ರೀತಿಯಲ್ಲಿ ನನ್ನ
ಸೃಷ್ಟಿಯನ್ನು ಏರುಪೇರುಗೊಳಿಸುವುದಕ್ಕೆ ಸಮಯವಿರುವುದಿಲ್ಲ. ನಾನು ಕೊಟ್ಟ ಬುದ್ಧಿಯನ್ನು
ವಿಪರೀತವಾಗಿ ಬಳಸಿಕೊಂಡ ಮನುಷ್ಯನಿಗೆ ಇದೇ ಸರಿಯಾದ ಶಿಕ್ಷೆ.
ಬ್ರಹ್ಮನ ವಿವರಣೆಯನ್ನು ಕೇಳಿದ ಸಭೆಯ
ಸದಸ್ಯರೆಲ್ಲರಿಗೂ ಇದೇ ಸರಿಯಾದ ಅಸ್ತ್ರ ಎನ್ನಿಸಿತು.ಈಶ್ವರನಿಗೆ ,ಬ್ರಹ್ಮನ ಈ ಯೋಜನೆಗೆ
ಯಾವ ಆಕ್ಷೇಪಣೆಯೂ ಇರಲಿಲ್ಲ. ವಿಷ್ಣು ಒಲ್ಲದ ಮನಸ್ಸಿನಿಂದಲೇ ಒಪ್ಪಿಗೆ ಇತ್ತಿದ್ದ. ಹೀಗೆ
ಎಲ್ಲರ ಒಪ್ಪಿಗೆಯೊಂದಿಗೆ ಬ್ರಹ್ಮ ಕ್ರೂರಾಣಾಸುರನನ್ನು ಭೂಮಿಗೆ ಕಳುಹಿಸಿದ.ಮನುಷ್ಯನ ಕಣ್ಣು ಮೂಗು
ಬಾಯಿಗಳಿಂದಾವನ ದೇಹದೊಳಗೆ ಪ್ರವೇಶಿಸಿ ಅವನ
ಉಸಿರು ಕಟ್ಟೂವಂತೆ ಮಾಡಿಅವನನ್ನು ಸಾವಿನ ದವಡೆಗೆ ನೂಕುವಂತೆ ಆದೇಶಿಸಿದ.ರಕ್ತಬೀಜಾಸುರನನ್ನೂ
ಮೀರಿಸಿ ಕ್ಷಣದಲ್ಲಿ ಲಕ್ಷಗಟ್ಟಲೆ ಸಂಖ್ಯೆಯಲ್ಲಿ ವೃದ್ಧಿಸುವಂತೆ ವರವನ್ನು ಕೊಟ್ಟ.ಈಶ್ವರ, ಒಬ್ಬರಿಂದಿನ್ನೊಬ್ಬರಿಗೆ ವಿದ್ಯುತ್ತಿನ
ವೇಗದಲ್ಲಿ ಹರಡುವ ಶಕ್ತಿಯನ್ನೂ ಇತ್ತ. ಈ ಕ್ರೂರಾಣಾಸುರನ ಅವತಾರ ಮನುಷ್ಯ ಕುಲಕ್ಕೇ ಒಂದು
ಸವಾಲನ್ನು ಹಾಕಿತು.ಕೋಟಿಗಟ್ಟಲೆ ಜನ ಸಾಯತೊಡಗಿದರು.ಮನುಷ್ಯ ಮನುಷ್ಯರು ಒಬ್ಬರನ್ನೊಬ್ಬರು ಹತ್ತಿರ
ಸೇರಿಸದಾದರು ಪರಸ್ಪರ ಇದ್ದ ಆತ್ಮೀಯತೆ, ವಾತ್ಸಲ್ಯ ಮಾಯವಾಗಿ ಪರಸ್ಪರ
ಹೆದರಿಕೆ ಆರಂಭವಾಯಿತು. ಮುಖ ಕೊಟ್ಟು ಮಾತನಾಡುವುದಿರಲಿ , ಸದಾ ಮೂಗು
ಬಾಯಿ ಮುಚ್ಚಿಕೊಂಡು ಮತ್ತೊಬ್ಬರಿಂದ ಕಣ್ಣುತಪ್ಪಿಸಿ ಓಡಾಡುವ ಪರಿಸ್ಥಿತಿ ಬಂದಿತು. ಒಬ್ಬರು
ಮುಟ್ಟಿದ್ದನ್ನು ಇನ್ನೊಬ್ಬರು ಮುಟ್ಟದಾದರು.ಎಲ್ಲೆ ನೋಡಿದರಲ್ಲಿ ಮನುಷ್ಯನಿಗೆ ಕ್ರೂರಾಣಾಸುರನೇ
ಕಾಣಿಸತೊಡಗಿದ.ಪತ್ರಿಕೆಗಳಲ್ಲಿ, ವ್ಯಪಾರ ವಾಣಿಜ್ಯಗಳಲ್ಲಿ ಈ
ಅಸುರನನ್ನು ಬಿಟ್ಟರೆ ಬೇರೆ ವಿಷಯವೆ ಇಲ್ಲದಾಯಿತು.ಉದ್ಯಮಗಳು ಕುಂಟತೊಡಗಿದವು. ಜನ ಮನೆಯಿಂದ
ಹೊರಗೆ ಬರಲು ಹೆದರತೊಡಗಿದರು. ಸಿನೆಮಾ ಮಂದಿರಗಳಾಗಲೀ , ಸಮುದ್ರದ
ದಡವಾಗಲೀ , ಇಲ್ಲ ಹೋಟೆಲ್ಗಳಾಗಲೀ ಎಲ್ಲ
ನಿರ್ಜನವಾಗತೊಡಗಿದವು.ಸಾಲಿನಲ್ಲಿ ನಿಂತು ಅಲ್ಲಿನ ಜನಜಂಗುಳಿಯಲ್ಲಿ ತಾನೂ ಒಬ್ಬ ಎಂದುಕೊಳ್ಳುವ
ಒಣಜಂಭ ಬೇಡವಾಯಿತು.ವಾಹನಗಳ , ತನ್ನ ಸೃಷ್ಟಿಗೆ ಹೆಮ್ಮೆ ಪಟ್ಟುಕೊಂಡಿದ್ದ
ಮನುಷ್ಯ ಈಗಯಾವುದೇ ವಾಹನವನ್ನೂ ಬಳಸಲು ಹೆದರುತ್ತಿದ್ದ. ತನ್ನಷ್ಟಕ್ಕೆ ತಾನೇ ಮನೆಯಿಂದ ಎಲ್ಲಿಯಾದರೂ ಹೋಗುವಾಅಸೆಯನ್ನೂ
ಮರೆತಿದ್ದ.ವಾಹನಗಳಿಗೆ ಬೇಕಾದ ಪೆಟ್ರೋಲ್ ಖರ್ಚಾಗದೇ ದೇಶಗಳು ತತ್ತರಿಸಿದವು. ಈ ಅಸುರನನ್ನು
ಕೊಲ್ಲುವ ಉಪಾಯದಿಂದಾಗಿ ಕೈ ಮೈಗೆಲ್ಲ ನಿರ್ಮಲೀಕರಣ ದ್ರವವನ್ನು ಹಚ್ಚಿಕೊಳ್ಳುತ್ತ ಓಡಾಡುತ್ತಿದ್ದರೂ
ಕ್ಷಣಕ್ಷಣಕ್ಕೂ ಬೆಚ್ಚಿ ಬೀಳುತ್ತಿದ್ದ.ಜನರೆಲ್ಲ ಮನೆಯಲ್ಲೇ ಕಾರಾಗೃಹವಾಸವನ್ನು
ಅನುಭವಿಸತೊಡಗಿದರು.
ಪ್ರತಿಯೊಂದಕ್ಕೂ ಲೈನ್ ನಲ್ಲಿ ನಿಂತು ದಣಿಯದೇ
ಹೋಗುತ್ತಿದ್ದ ಮನುಷ್ಯ ಇಂದು ಯಾವ" ಲೈನೂ ಬೇಡ ಎಲ್ಲ ಆನ್ ಲೈನ್" ಮಾಡೊಣಎಂಬ
ಮಟ್ಟಕ್ಕೆ ಬಂದಿದ್ದಾನೆ , ಈ ನಡುವೆ ವಿಶ್ವ ಆರೀಗ್ಯ ನಿಯಂತ್ರಣ ಸಂಸ್ಥೆ ಈ
ಕ್ರೂರಾಣುವನ್ನು ಕರೋನ ಎಂಬ ವಂಶಕ್ಕೆ ಸೇರಿದ ಕೀಟಾಣುವೆಂದು ಗುರುತಿಸಿ ಅದರಿಂದ ಉಂಟಾಗುತ್ತಿರುವ
ಈ ಖಾಯಿಲೆಗೆ ಕೋವಿಡ್19 ಎಂದು ನಾಮಕರಣ ಮಾಡಿತು.ಭೂಮಿಯ ಪ್ರತಿ ಇಂಚಿನಲ್ಲೂ ಈ ಕರೋನ ಹಾವಳಿ
ಸಹಿಸದಾಯಿತು.ಯಾವ ಸುಳಿವೂ ಇಲ್ಲದೆ ಇದ್ದಕಿದ್ದಂತೆ ಕೆಲವರು ಸತ್ತರೆ , ಕೆಲವರು
ಅಸಾಧ್ಯ ಜ್ವರ ಕೆಮ್ಮುಗಳಿಂದಬಳಲಿ ಸಾಯತೊಡಗಿದರು.ದಿನದಿನಕ್ಕೆ ಸಾಯುವವರ ಸಂಖ್ಯೆ ಹೆಚ್ಚುತ್ತಲೇ
ಹೋಯಿತು. ಇದನ್ನೆಲ್ಲ ಗಮನಿಸುತ್ತಿದ್ದ ವಿಷ್ಣುವಿಗೆ ಇನ್ನು ಸಹಿಸಲಾಗಲಿಲ್ಲ. ಇಂತಹ ಯಾವುದೇ
ಸಮಯದಲ್ಲಿ ತಾನೇ ಅವತಾರ ತಾಳಿಬಂದೋ , ಇಲ್ಲ ದೇವಿಯನ್ನು ಸಮಸ್ತ
ಶಕ್ತಿಗಳೊಂದಿಗೆ ಅವತರಿಸುವಂತೆಒಪ್ಪಿಸಿಯೋ ಪರಿಸ್ಥಿತಿಯನ್ನು ಹತೋಟಿಗೆ ತರುತ್ತಿದ್ದ.ಆದರೆ ಈಗ
ತಾನೂ ಬ್ರಹ್ಮನ ಈ ಕೆಲಸಕ್ಕೆ ಒಪ್ಪಿಗೆ ನೀಡಿದ್ದರಿಂದ
ಯಾವ ಅವತಾರಕ್ಕೂ ಅವಕಾಶವಿರಲಿಲ್ಲ.ಆದರೂ
ಅವನಿಗೆ ಮಾನವನ ಮೇಲೆ ಉಂಟಾದ ಕನಿಕರದಿಂದ ,ಜೊತೆಗೆ
ಇನ್ನೆಲ್ಲಿ ಸಂಪೂರ್ಣ ಮಾನವ ಜಾತಿಯೇ ಭಸ್ಮವಾಗಿ ಹೋಗುತ್ತದೋ ಎನ್ನುವ ಚಿಂತೆಯಲ್ಲಿ ಮನುಶ್ಯನಿಗೆ
ಕ್ರೂರಾಣಾಸುರನನ್ನು ಎದುರಿಸುವ ವಿಧಾನಕ್ಕೆ ಸೂಚಯಿತ್ತ.ಬುದ್ಧಿವಂತ ವಿಜ್ಞಾನಿಗಳಿಗೆ
"ವಾಕ್ಸಿನ್" ಪತ್ತೆ ಮಾಡಲು ಪ್ರೇರೇಪಿಸಿದ.ಭಸ್ಮಾಸುರನ ವರದಿಂದ ಅವನನ್ನೇ ಕೊಲ್ಲುವ
ತಂತ್ರವನ್ನು ನೆನಪಿಸಿದ/ ಹಾಗಾಗಿ ಕೀಟಣುವಿನಿಂದಲೇ ಕೀಟಾಣುವನ್ನು ಕೊಲ್ಲುವ ತನ್ನ ಹಳೆಯ
ಪ್ರಯತ್ನಗಳನ್ನು ನೆನಪಿನಲ್ಲಿಟ್ಟುಕೊಂಡು ಮನುಶ್ಯ
ಹಲವಾರು ವ್ಯಾಕ್ಸಿನ್ ಗಳನ್ನು ಪತ್ತೆ ಮಾಡಿದ.ಆದರೆ ಮನುಷ್ಯನ ಎಲ್ಲ ಪ್ರಯತ್ನಗಳನ್ನೂ
ಅಸಫಲಗೊಳಿಸುವ ಪಣತೊಟ್ಟ ಕ್ರೂರಾಣಾಸುರ ಬೇರೆ ಬೇರೆ ರೂಪಗಳಲ್ಲಿ ಅವತರಿಸತೊಡಗಿದ. ಮನುಷ್ಯನ
ಪ್ರತಿಭಟನೆ ಮುಂದುವರಿದಿದೆ.ಎಷ್ಟೇ ಪ್ರಯತ್ನ ಮಾಡಿದರೂ ಪರಿಸ್ಥಿತಿ ಹತೋಟಿಗೆ ಬರುತ್ತಿಲ್ಲ,
ಎಂಬುದು ಗಮನಿಸಬೇಕಾದ ಸಂಗತಿಯಾದರೂ , ಸ್ವಲ್ಪ
ಮಟ್ಟಿಗೆ ಭರವಸೆ ಮೂಡಿಸಿದೆ. ಜನಕ್ಕೆ ಕ್ರೂರಾಣಾಸುರನೊಂದಿಗೆ ಹೊಂದಿಕೊಂಡು ಬದುಕುವ ರೀತಿಯನ್ನು
ಕಲಿಸಿಕೊಡುತ್ತಿದೆ. ಇಷ್ಟರಮೇಲೆ ವಿಷ್ಣುವಿನ ಇಚ್ಛೆ.
"ಯದಾಯದಾಹಿ ಧರ್ಮಸ್ಯ
ಗ್ಲಾನಿರ್ಭವತಿ ಭಾರತ ; ಅಭ್ಯುತ್ಥಾನಮಧರ್ಮಸ್ಯ ತದಾತ್ಮಾನಂ
ಸೃಜಾಮ್ಯಹಂ"
ಎಲ್ಲೆಲ್ಲೆ ಯಾವಾಗ ಅಧರ್ಮ ತಲೆಯೆತ್ತುತ್ತದೆಯೋ ಅಲ್ಲಲ್ಲಿ ಪರಮಾತ್ಮನ
ಅವತಾರವಾಗುತ್ತದೆ.ದುಷ್ಟ ಸಂಹಾರವಾಗುತ್ತದೆ. ಹೇಗಾದರಾಗಲೀ ಕರೋನ ತೊಲಗಲಿ;ಸುಖ ಶಂತಿ ನೆಮ್ಮದಿಗಳು ಮತ್ತೆ ಬರಲಿ
ಮಾಸ್ಕನ್ನ ಹಾಕ್ಕೊಳ್ಳಿ ಡಿಸ್ಟೆನ್ಸು ಇಟ್ಕೊಳ್ಳಿ
ಹ್ಯಾಂಡ್ ಶೇಕು ಕೊಡ್ಬೇಡಿ
ಕೈಮುಗಿಯೋದ್ಮರಿಬೇಡಿ
ಒಬ್ಬರಿಗೊಬ್ರು ಹತ್ರ ನಿಲ್ಬೇಡಿ
ಎದುರಿಗ್ನಿಂತುಸಿರಾಡ್ಬೇಡಿ
ಡಿಸಿನ್ಫ಼ೆಕ್ಟೆಂಟ್ ಸದಾ ಹತ್ರಾನೆ
ಇಟ್ಕೊಳ್ಳಿ
ವಾಷ್ಬೇಸಿನ್ನು ಟಾಯ್ಲೆಟ್ಟು ಕ್ಲೀನಾಗಿ
ಇಟ್ಕೊಳ್ಳಿ
ಬಾಗಿಲ್ಹಾಕ್ಕೊಂಡ್ಸದಾ ಒಳ್ಗೇನೆ
ಇರ್ಬೇಕು
ಕರೋನಾ ಮಾರಿ ಹೆದರಿಕೊಂಡ್ಹೋಗ್ಬೇಕು
ಕರೋನ ವೈರಸ್ಗೆ ಉಸಿರ್ಕಟ್ಠೋಗ್ಲಿ
ದಮ್ಮಯ್ಯ ಅಡ್ಬಿದ್ದೆ ಅಂತೆದ್ದೋಡೋಗ್ಲಿ
ಡಾ ಸತ್ಯವತಿ ಮೂರ್ತಿ
Comments
Post a Comment