ನಾನು ಮತ್ತು ನಮ್ಮವರ ಸ್ವೀಟಿ
ನಾನು ಮತ್ತು ನಮ್ಮವರ
ಸ್ವೀಟಿ
ಹಲವಾರು ವರ್ಷಗಳ ಹಿಂದೆ
ನನ್ನ ಕೊಡೆ ಲೇಖನ ಓದಿದ ನೆನಪಿದೆ. ನಾನು ಈ ಲೇಖನ ಬರೆಯುವಾಗ ಇದು ಅದರ ಅನುಕರಣೆಯಾಗಬಾರದು ಎಂಬ
ಎಚ್ಚರಿಕೆಯೂ ಇದೆ. ಎಲ್ಲಿ ಇದು “ಅದರಂತೆ” ಎಂದು ಎನಿಸಿಬಿಡುತ್ತದೋ ಎಂಬ ಗಾಬರಿಯಿಂದಲೇ ಇಷ್ಟು
ದಿನಗಳವರೆಗೆ ಈ ಲೇಖನ ಬರೆಯಲು ಪ್ರಾರಂಭಿಸದೆ ಇದ್ದೆ. ಆದರೆ ನನ್ನ ಒಂದು ಅನುಭವ ಯಾರದೋ
ಅನುಭವವನ್ನು ನೆನಪಿಗೆ ತಂದುಕೊಡುತ್ತದೆ ಎಂದರೆ ಅದಕ್ಕೆ ನಾನು ಹೊಣೆಯಲ್ಲ.ಅಲ್ಲದೆ ಒಬ್ಬಿರಿಗಾದ
ತೆರನ ಅನುಭವ ಮತ್ತೊಬ್ಬರಿಗೂ ಆಗಬಾರದೆಂದೇನೂ
ಇಲ್ಲವಲ್ಲ ! ಎಂದೆಲ್ಲ ತರ್ಕಿಸಿ ಈ ಲೇಖನಕ್ಕೆ ಕೈ ಹಾಕುತ್ತಿದ್ದೇನೆ.
ನಾನು ಇಂಗ್ಲೆಂಡಿಗೆ ಬಂದು
ನೆಲಸಿ ಮೂರು ವರ್ಷಗಳೇ ಉರುಳಿವೆ.ಆದರೆ ಮೊಟ್ಟಮೊದಲ ಬಾರಿ ಇಂಗ್ಲೆಂಡಿನಲ್ಲಿ ಕಾಲಿಟ್ಟ ದಿನದ
ನೆನಪು ಇನ್ನೂ ಹಚ್ಚ ಹಸುರಾಗಿದೆ. ತಿಳಿ ಹಸಿರು ಬಣ್ಣದ “ವಾಕ್ಸಾಲ್ ಆಸ್ಟ್ರಾ” ನನ್ನನ್ನು
ಎದುರುಗೊಳ್ಳಲು ಬಂದಿತ್ತು.ನನಗಾಗಿ ನನ್ನ ಹೆಸರಲ್ಲೇ ಖರೀದಿಸಿ ತಂದಿದ್ದರು ಮೂರ್ತಿ.ಹೊಚ್ಚಹೊಸ
ಕಾರಲ್ಲವಾದರೂ ಹಳೆಯದೇನೂ ಅಲ್ಲ. ಅಚ್ಚುಕಟ್ಟಾದ ಸುಂದರಮೈಮಾಟದ ಆಕರ್ಷಕ ಗಾಡಿ ನನಗೂ ಮೆಚ್ಚಿಗೆಯಾಯಿತು.
’ಮೂರ್ತಿ, ಇದಕ್ಕೆ ಒಂದು ಒಳ್ಳೆ ಹೆಸರಿಡೋಣ’ ಎಂದೆ. ಉತ್ಸಾಹದಲ್ಲಿ. ಮೂರ್ತಿಯೂ ನನ್ನ ಉತ್ಸಾಹ ಕಂಡು ’ಯಾಕಾಗಬಾರದು?....ಆದರೆ ಯಾವ
ಹೆಸರಿಡೋದು?’ಎಂದರು.
ಅದಷ್ಟೆ ನನಗೆ
ಬೇಕಾಗಿದ್ದದ್ದು.
ತಕ್ಷಣ ’ರೋಜಿ’ ಅಂತ
ಇಡೋಣ್ವ ? ಅಂದೆ. ’ಛೇ ಛೇ ಏನೇ ಇದು ಇಷ್ಟು ಯೋಚನೆ ಮಾಡಬೇಡವ?
ಇದರ ಬಣ್ಣ ಹಸಿರು, ನೀನು ರೋಜಿ ಅಂತ ಇಡ್ತೀಯ?ಅದೂ ಅಲ್ದೆ ನೋಡು ಇಂಗ್ಲೀಷಿನ ರೋಜಿ ಬರಬರುತ್ತ ನಮ್ಮ ಬಾಯಲ್ಲಿ ರೋಸಿ ಆಗಿ ಕಡೆಗೆ ಕಾರು ರೋಸಿ ನಮ್ಮಿಂದ ದೂರಹೋಗಿಬಿಟ್ಟರೆ?
ಅಂದರು.’ನೀವ್ಹೇಳೋದೂ ಸರಿ,ಹಾಗಾದ್ರೆ ನೀವೇ ಒಂದು
ಹೆಸರ್ಹೇಳಿ’ ಎಂದೆ. ಬಹಳ ಯೋಚಿಸಿ ಕೊನೆಗೆ ’ಸ್ವೀಟಿ ಅಂದರೆ ಹೇಗೆ’? ಅಂದರು.”ಸ್ವೀಟಿ
’ ಹೆಸರು ಮುದ್ದಾಗಿದೆ. ಕರೆಯಲು ಹಿತವಾಗಿದೆ. ನನಗೂ ಇಷ್ಟವಾಯಿತು.ಆ ಹೆಸರೇ ಇಡೋದು ಅಂತ
ತೀರ್ಮಾನವಾಯಿತು.ಅಂದಿನಿಂದ ಸ್ವೀಟಿ ನಮ್ಮ ಮನೆಯ ಸದಸ್ಯಳಾದಳು. ನಾನು ಸ್ವೀಟಿಯನ್ನು
ಮೆಚ್ಚಿಕೊಂಡೆ ನಿಜ, ಆದರೆ ಸ್ವೀಟಿಗೆ ನಾನು ಮೆಚ್ಚುಗೆಯಾಗಬೇಕಲ್ಲ!ನನ್ನ
ಹೆಸರು ಹೊತ್ತುತಂದ ಗ್ರಹಚಾರವೋ,ನನ್ನ ಜಾತಕಕ್ಕೆ ಇರುವ ಕಷ್ಟ ಕೋಟಲೆಗಳ
ಅನುಭವದ ಅನಿವಾರ್ಯತೆಯೋ ತಿಳಿಯದು. ಮನೆಗೆ ಬಂದ
ಮೂರೇ ತಿಂಗಳಲ್ಲಿ ಸ್ವೀಟಿ ತೊಂದರೆ ಕೊಡಲು ಪ್ರಾರಂಭಿಸಿದಳು.ತೊಂದರೆ ಎಂದರೆ ಮೊಂಡಾಟ.ಒಮ್ಮೊಮ್ಮೆ
ಒಂದೊಂದು ರೀತಿಯಲ್ಲಿ! ನಾವು ಅವಳಬಗ್ಗೆ ಸ್ವಲ್ಪ ಅಪ್ರೀತಿಯಿಂದ ಮಾತನಾಡಿದರೂ ಸಾಕು,ಸಿಟ್ಟು ಬರುತ್ತಿತ್ತು. ಸಿಟ್ಟು ಬಂದರೆ ಜಪ್ಪಯ್ಯ ಅಂದರೂ ಮುಂದೆ ಹೋಗುತ್ತಿರಲಿಲ್ಲ.ಕ್ಷಮಾಯಾಚನೆ
ಮಾಡಿದ ಹೊರತು ಕದಲುತ್ತಿರಲಿಲ್ಲ. ಇಷ್ಟಕ್ಕೇ ಮುಗಿಯಿತೆ? ತೀರ
ಕೋಪಬಂದಿತೆಂದರೆ ಕಂಡವರ ಕೈಹಿಡಿದು
ಸರಿರಾತ್ರಿಯಲ್ಲಿ ಪಲಾಯನ ಮಾಡಿಬಿಡುತ್ತಿದ್ದಳು.
ಮೊದಲ ಬಾರಿ ಈಕೆ ಪಲಾಯನ ಮಾಡಿದಾಗ ನಮಗೆ ಚಿಂತೆಯೇ
ಆಗಿತ್ತು. ರಾತ್ರಿ ಮಲಗುವಾಗ ಮನೆಯ ಮುಂದೆ ನಿಂತಿದ್ದ’ಸ್ವೀಟಿ’ ಬೆಳಗಿನ ವೇಳೆಗೆ ಇಲ್ಲ ಎಂದಾಗ
ತುಂಬ ದುಖವಾಯಿತು.ಮೂರ್ತಿಗಂತೂ ಯದ್ವಾತದ್ವ ಬೇಸರ.ಪೋಲೀಸರಿಗೆ ವಿಷಯ ತಿಳಿಸಿಯಾಯಿತು.ಸಂಜೆಯಾದರೂ
ಸುದ್ದಿಯಿಲ್ಲ ನಮ್ಮ ಪಾಲಿಗೆ ಸ್ವೀಟಿ ಇನ್ನಿಲ್ಲ ಎಂದುಕೊಂಡು ಸ್ನಾನ ಮಾಡಿ ಸೂತಕ ಕಳೆದುಕೊಂಡೆವು,
ಮಾರನೇದಿನ ಹೊಸಕಾರಿಗಾಗಿ ಬೇಟೆಯಾಡಬೇಕೆಂದು ನಿಶ್ಚಯಿಸಿ ಮಲಗಿದೆವು. ಆದರೆ
ಬೆಳಗಾಗುತ್ತಿದ್ದಂತೆಯೇ ಪೋಲಿಸರಿಂದ ’ಸ್ವೀಟಿ’ ಸಿಕ್ಕಿದ ಸುದ್ದಿ ಬಂದಿತು.ಪ್ರಾಯಶಃ ನಾವು ಬೇರೆ
ಕಾರುಕೊಳ್ಳುವ ಆಲೋಚನೆ ಮಾಡಿದ್ದು ಆಕೆಗೆ ತಿಳಿದಿರಬೇಕೇನೋ! ಹೇಗಾದರಾಗಲಿ , ಸ್ವೀಟಿ ಮನೆಗೆ ಹಿಂತಿರುಗುತ್ತಿರುವುದು ಒಂದು ರೀತಿಯಲ್ಲಿ
ನೆಮ್ಮದಿಯಾಯಿತು.ಆದರೆ ಹೊಸಕಾರಿನ ಆಸೆ ಹಾಗೇ ಉಳಿದಿದ್ದಕ್ಕೆ ಬೇಸರವೂ ಆಯಿತು.ಆದರೆ
ತೋರಿಸಿಕೊಳ್ಳಲು ಸಾಧ್ಯವೇ?
ಯಾರದೋ ಎರವಲು ಕಾರಿನಲ್ಲಿ
ಹೋಗಿ ಮುನಿಸಿಕೊಂಡು ನಿಂತಿದ್ದ ಆಕೆಯನ್ನು ಎದುಗೊಂಡಾಯಿತು.ನನ್ನನ್ನು ನೋಡಿದಕೂಡಲೇ ನಗದಿದ್ದರೂ
ವ್ಯಂಗ್ಯವಾಡಿರಬಹುದೇ?ಎಂದೆನಿಸದೆ
ಇರಲಿಲ್ಲ.ಮನಸ್ಸಿಗೆ ಅನ್ನಿಸಿದ್ದೆಲ್ಲ ಹೇಳಲು ಸಾಧ್ಯವೇ? ಹೇಳಿ
ಉಳಿಯಬಲ್ಲೆನೇ?ಉಸಿರೆತ್ತಿದರೆ ಮತ್ತೇನಾದರೂ ಅನಾಹುತವಾದೀತು ಎಂದು ಚಕಾರವೆತ್ತದೆ ಮನೆಗೆ
ಕರೆತಂದಾಯಿತು
ನೋವಿನಿಂದ ಒಂದೇ ಸಮನೆ
ನರಳುತ್ತಿದ್ದಳು. ಬಾಯನ್ನು ಹರಿದು, ಕಿವಿಯನ್ನು
ಕಿತ್ತು, ಇಡೀ ಮೈಯನ್ನು ಎದ್ವಾತದ್ವ ಚಚ್ಚಿ ಕರೆದುಕೊಂಡು ಹೋದವರು ತಮ್ಮ
ಪ್ರೀತಿಯನ್ನು ತೋರಿಸಿದ್ದರು.’ಮಾಡಿದ್ದುಣ್ಣೋ ಮಹರಾಯ’ ಅನುಭವಿಸಲೇಬೇಕು.ಕೂಡಲೆ ಇನ್ಷೂರೆನ್ಸ್
ಕಂಪೆನಿಗೆ ಫೋನ್ ಮಾಡಿ ವಿಶಯ ತಿಳಿಸಿ ಸ್ವೀಟಿಯನ್ನು ನರ್ಸಿಂಗ್ ಹೋಂಗೆ ದಾಖಲು ಮಾಡಿಯಾಯಿತು.ಇಂಗ್ಲೆಂಡಿನಲ್ಲಿ
ಇನ್ನೂ ನೀತಿ ನಿಯಮ ಕಾನೂನುಗಳು ಉಳಿದುಕೊಂಡಿವೆ.ಅದ್ದರಿಂದ ಯಾವ ತೊಂದರೆಯೂ ಇಲ್ಲದೆ
ಚಿಕಿತ್ಸೆಯೆಲ್ಲ ಮುಗಿದು ನವಯೌವ್ವನೆಯಾಗಿ ಮತ್ತೆ ಮನೆ ಸೇರಿದಳು ಮಹರಾಯಿತಿ.ಹಳೆಯಕಾಯಿಲೆಗಳೂ
ಹೊಸದರೊಂದಿಗೆ ಗುಣವಾಗಿದ್ದವು ಎಂಬುದು ಸಂತಸದ ಸಂಗತಿ.ಹುಟ್ಟಿನಿಂದಲೇ ಸುಂದರಿ, ಈಗ ಇನ್ನೂ ಆಕರ್ಷಣಿಯವಾಗಿದ್ದಳು.ಅಂದಿನಿಂದ ನಾನೂ ಸ್ವೀಟಿಯ ಬಗ್ಗೆ ಮುತುವರ್ಜಿ
ತೋರಿಸತೊಡಗಿದೆ.ಮೂರ್ತಿಯಂತೂ ಸರಿಯೇ ಸರಿ ಆಕೆಯ ಆರೈಕೆಯಲ್ಲೇ ಹೆಚ್ಚು ಸಮಯ
ಕಳೆಯುತ್ತಿದ್ದರು.ಸೀಟಿಗೆ ಕವರುಗಳು, ಸ್ಟೀರಿಂಗ್ ಬೀಗ,..... ಇತ್ಯಾದಿ ಎಲ್ಲಾ ಹೊಂದಿಸಿ ಆಘಾತದಿಂದ ಚೇತರಿಸಿಕೊಂಡ ವ್ಯಕ್ತಿಗೆ ಮಾಡಬೇಕಾದ ಎಲ್ಲ
ಆರೈಕೆಯನ್ನೂ ಮಾಡತೊಡಗಿದೆವು.ಸ್ವೀಟಿಯೂ ನಮ್ಮ ಒಳ್ಳೆಯತನಕ್ಕೆ ಮೆಚ್ಚಿಕೊಂಡಂತೆ
ತೋರಿತು.ನಾಲ್ಕೈದು ವಾರಗಳು ಉರುಳಿದವು.ದಿನಾ ಬೆಳಗ್ಗೆ ಏಳುತ್ತಲೇ ಒಮ್ಮೆ ಕಿಟಕಿಯಿಂದ ಇಣುಕುಹಾಕಿ
ನನ್ನ ಸಂಗಾತಿ ಸ್ಥಿರವಾಗಿರುವುದನ್ನು ಖಾತ್ರಿ ಮಾಡಿಕೊಳ್ಳುತ್ತಿದ್ದೆ.ಬಿಸಿಲು, ಮಳೆ ಎನ್ನದೆ ಯಾವಾಗಲೂ
ರಸ್ತೆಯಲ್ಲಿರಬೇಕಾದ ಅವಳ ಪರಿಸ್ಥಿತಿಗಾಗಿ ನನಗೂ ದುಖಃವಾಗುತ್ತಿತ್ತು.ಆದರೇನು ಮಾಡುವುದು?ಮನೆ ಬದಲಾಯಿಸುವ ತನಕ ಈ ತೊಂದರೆ ಇದ್ದದ್ದೇ.ಮನೆಯಿಂದ ಒಂದು ಕಿಲೋಮೀಟರ್ ದೂರದಲ್ಲಿರುವ
ಗ್ಯಾರೇಜಿನಲ್ಲಿ ಅವಳನ್ನು ಬಿಡುವುದೂ ಸಾಧ್ಯವಿರಲಿಲ್ಲ
ಮೂರ್ತಿಗೆ ಹೇಳಿ ’ಈಗಿರುವ ಮನೆಯನ್ನು
ಬಿಟ್ಟು ಬೇರೆ ಮನೆಯನ್ನು ಕೊಂಡುಕೊಳ್ಳುವ ವಿಚಾರವನ್ನು ಗಟ್ಟಿಮಾಡಬೇಕು’
ಎಂಬೆಲ್ಲ ಆಲೋಚನೆಗಳೂ
ಬಂದದ್ದುಂಟು.ಈ ನಡುವೆ ನಡೆದ ಘಟನೆ ಮರೆಯುತ್ತ ಬಂದಹಾಗೆ ಸ್ವೀಟಿ ನಮ್ಮ ಮೇಲಿನ ಸಿಟ್ಟನ್ನು
ಬಿಟ್ಟಿದ್ದಾಳೆ ಎಂಬುದು ಮನವರಿಕೆಯಾಯಿತು.ಸ್ವೀಟಿಯ ಮನವೊಲಿಸಿಕೊಳ್ಳಲು ನಾನೂ ನಾನಾ ರೀತಿಯಲ್ಲಿ
ಪ್ರಯತ್ನಿಸುತ್ತಿದ್ದೆ.ಬಂದವರೆದುಗೆ ನಮ್ಮ ಸ್ವೀಟಿಯ ಸೌಂದರ್ಯವನ್ನು ಹೊಗಳಿದ್ದೇ ಹೊಗಳಿದ್ದು!
ಆಕೆಯ ಬಣ್ಣ ನೋಡಿ ಎಷ್ಟು ಚೆನ್ನಾಗಿದೆ, ಆಕೆಯ
ಮೂಗಿನ ನತ್ತುಗಳು ನೋಡಿ ಎಷ್ಟು ಚೆನ್ನಾಗಿ ಹೊಳೆಯುತ್ತಿವೆ. ಎರಡೂ ಕಡೆ ಮೂಗು ಚುಚ್ಚಿಕೊಂಡ ಆಕೆ
ಥೇಟ್ ಮದರಾಸಿನ ಆಯ್ಯರ್ ಹೆಣ್ಮಗಳ ತರಹ
ಕಾಣುವುದಿಲ್ಲವೇ?
( ಹೆಡ್ಲೈಟುಗಳ
ಮೇಲ್ಭಾಗದಲ್ಲಿ ಇರುವ ಸಣ್ಣ ಕೆಂಪು ದೀಪಾಕೃತಿಗಳು,
ಕ್ಷಮಿಸಿ, ಅದೇ ಸ್ವಾಮಿ ಇಂಡಿಕೇಟರ್ಗಳು). ಸ್ವೀಟಿಯನ್ನು ಹೊಗಳುವುದರಲ್ಲಿ
ಮೂರ್ತಿಯೂ ಹಿಂದೆ ಬೀಳಲಿಲ್ಲ. ಬಂದವರೆದುರಿಗೆ ಅವಳ ವೇಗ, ಪೆಟ್ರೋಲಿನ
ಹಿತವಾದ ಬಳಕೆ ಒಂದೇ ಎರಡೇ ಅವಳನ್ನು ಹೊಗಳಿದ್ದೇ
ಹೊಗಳಿದ್ದು! ಮೊದಲೇ ಸ್ವೀಟಿಯನ್ನು ಕಂಡರೆ ಬಹಳ ಮೆಚ್ಚುಗೆ. ಇನ್ನು ಹೊಗಳುವ ಅವಕಾಶ ಸಿಕ್ಕಿದರೆ
ಬಿಟ್ಟಾರೆಯೇ ?
ಹೊಗಳಿಕೆಯನ್ನು ಕೇಳಿದವರಿಗೆ
ಬೇಸರವಾಯಿತೋ ಇಲ್ಲವೋ, ನಮ್ಮ ಸ್ವೀಟಿಗೆ ಮಾತ್ರ ನಮ್ಮ ಈ ಹೊಗಳಿಕೆ
ಅಜೀರ್ಣವಾಯಿತು. ತನ್ನನ್ನು ಬಹಳ ಇಷ್ಟಪಡುತ್ತಾರೆ ಎಂದು ಆನಿಸಿದ್ದೇ ಸಾಕು ಸ್ವಲ್ಪವೂ ತಡಮಾಡದೆ
ಅಂದೇ ರಾತ್ರೆ ಯಾರದೋ ಜೊತ್ಯಲ್ಲಿ ಪ್ರಯಾಣ ಮಾಡಿಬಿಟ್ಟಳು. ಬೆಳಿಗ್ಗೆ ಎದ್ದು ಎಂದಿನಂತೆ
ನೋಡುತ್ತೇನೆ ಸ್ವೀಟಿ ನಿಂತಿದ್ದ ಜಾಗ ಬಿಕೋ ಎನ್ನುತ್ತಿದೆ. “ರೀ ಮೂರ್ತಿ ಏಳ್ರೀ ನೋಡ್ರೀ
ಏನಾಗಿದೆ ಅಂತ.” ಎಂದು ಕೂಗಿಕೊಂಡೆ. ಶನಿವಾರದ
ಬೆಳಗಿನ ಸವಿನಿದ್ದೆಯ ಗುಂಗಿನಲ್ಲಿ ಮಲಗಿದ್ದ ಮೂರ್ತಿ ಹಾಸಿಗೆಯಿಂದಲೇ ’ಏನೇ ಅದು ನಿಂದು
ಏಳುತ್ತಲೇ ರಾಮಾಯಣ? ರಜಾ ದಿನ ಸ್ವಲ್ಪಹೊತ್ತು ನಿರಾಳವಾಗಿ ಮಲಗುವುದಕ್ಕೂ ಬಿಡೋಲ್ವಲ್ಲ?’ ಎಂದು ಆಕ್ಷೇಪಿಸಿದರು. ;ನಂದೇನ್ರೀ ರಾಮಾಯಣ ಎಲ್ಲಾ ನಿಮ್ಮ
ಸ್ವೀಟೀದು, ಇವತ್ತಾಗ್ಲೆ ಎಲ್ಲೋ ಪಾರಾರಿಯಾಗಿದ್ದಾಳೆ ಗೊತ್ತ?’ ಅಂದೆ ಅಸಹನೆಯಿಂದ. ’ ಹೌದೇನೆ ?ಅಯ್ಯೋ ರಾಮ ಇದೇನು
ಗ್ರಹಚಾರ ಬಂತಪ್ಪ, ಹುಂ ಇನ್ನೇನು ಮಾಡೋದು? ತಗೋ
ಫೋನು , ಪೋಲೀಸರಿಗೆ ಫೋನ್ ಮಾಡೋಣ. ಅಂದರು. ಕೋಪದಿಂದಲೇ ಮೂರ್ತಿಯ ಕೈಗೆ
ಫೋನನ್ನು ಸಾಗಿಸಿದೆ. ಮೂರ್ತಿ ಫೋನ್ ಮಾಡಿದರು. ಆ ಪೋಲೀಸ್ ಮಹಾಶಯ ವಿವರವನ್ನೆಲ್ಲ ಕೇಳಿದ ಮೇಲೆ
"ಅಯ್ಯೋ ! ನಿಮ್ಮದು ವಾಕ್ಸಾಲ ಸಾರ್, ತುಂಬ ಚಂಚಲೆ ಸಾರ್
ಆಕೆ.ನಡತೆ ಸ್ವಲ್ಪವೂ ಚೆನ್ನಾಗಿಲ್ಲ, ಸಿಕ್ಕಿದವರ
ಜೊತೆಯಲ್ಲಿಓಡಿಹೋಗಿಬಿಡ್ತಾಳೆ ಅಂತೀನಿ!
ಅವಳ ಹೆಸರನಲ್ಲಿ ಏನೋ ಗುಟ್ಟಿದೆ ಅನ್ನಿಸುತ್ತೆ ಸಾರ್, ’ವಾಕ್ಸ್ ವಿತ್ ಅಲ್’ ಆದ್ದರಿಂದಲೇ ವಾಕ್ಸಾಲ್ ಅಂತಿರಬಹುದೇ? ಅದಕ್ಕೇ ಇರ್ಬೇಕು ಯಾರು ಬೇಕಾದ್ರು ಅವಳ ಬೀಗ ತೆಗೆಯೋ ಹಾಗಿರೋದು. ನನ್ನ ಹತ್ರನೂ ಇದ್ಲು
ಸಾರ ಒಬ್ಬಳು ವಾಕ್ಸಾಲ್ ವಂಶದೋಳು, ಆರೇ ತಿಂಗ್ಳು , ಆರೇ ತಿಂಗ್ಳು ಅಂತೀನಿ. ನಾನೂ ನಿಮ್ಮ ತರಹ
ರಸ್ತೇಲೆ ನಿಲ್ಲಿಸ್ತಿದ್ದೆ, ಬರೋ ಹೋಗೋರಿಗೆ ಯಾರಿಗೆ ಕಣ್ಣು ಹೊಡೆದಳೋ
ಏನ್ ಕಥೆಯೋ ಅಂತೂ ಒಂದು ದಿನ ಇದ್ದಕಿದ್ದ ಹಾಗೆ ಯಾರದೋ ಜೊತೆಯಲ್ಲಿ ಪಲಾಯನ ಮಾಡಿಬಿಟ್ಟಳು. ಮತ್ತೆ
ಅವಳನ್ನ ನೋಡ್ಲೇ ಇಲ್ಲ. ಆದ್ರೆ ಇದು ಬರಿ ಅವಳ ತಪ್ಪಲ್ಲ ಬಿಡಿ ಸಾರ್. ನೋಡೊದಿಕ್ಕೆ ಲಕ್ಷಣವಾದ
ಮೈಮಾಟ ಇದೆನೋಡಿ, ಯಾರನ್ನು ಬೇಕಾದ್ರೂ ಆಕರ್ಷಿಸಿಬಿಡ್ತಾಳೆ. ನೋಡಿದವರು
ಕಣ್ಣು ಹಾಕಿದರು ಅಂತಾನೇ ಗ್ಯಾರಂಟಿ. ಬಹಳ ಎಚ್ಚರಿಕೆಯಿಂದ ಇರ್ಬೇಕು, ಆಯ್ತು
ನಮಗೇನಾದ್ರು ಸಿಕ್ಕಿದರೆ ತಕ್ಷಣ ತಿಳಿಸ್ತೀವಿ." ಅಂತ ದೊಡ್ಡ ಭಾಷಣವನ್ನೇ ಬಿಗಿದದ್ದು
ಫೋನಿನ ಸ್ಪೀಕರ್ ಆನ್ ಅಗಿದ್ದರಿಂದ ನನಗೂ ತಿಳಿಯುತ್ತಿತ್ತು’ಮೊದಲೇ ಕಾರು ಕಳೆದುಕೊಂಡಿರುವ ಬೇಸರ,
ಈ ಭಾಷಣ ಬೇರೆ’ ಎಂದು ಮೂರ್ತಿ ಫೋನನ್ನು ಕುಕ್ಕಿದರು.
ಸ್ನಾನ ಮಾಡಿ ತಿಂಡಿ ತಿಂದುಹತ್ತಿರದಲ್ಲೇ
ಇದ್ದ ಅಂಗಡಿಯಿಂದ ಮನೆಗೆ ಬೇಕಾದ ಕೆಲವು ಪದಾರ್ಥಗಳನ್ನು ತಂದಾಯಿತು. ಕಾರಿಲ್ಲದೆ ದೂರ ಹೋಗುವ
ಮಾತೇ ಇಲ್ಲವಲ್ಲ! ಅಲ್ಲಾ ಈ ಸ್ವೀಟಿ ಹೋಗೋದು ಹೋದ್ಲು, ಶನಿವಾರಾನೇ
ಯಾಕೆ ಹೋದ್ಲು? ಬೇರೆ ಯಾವ ದಿನಾನು ಸಿಕ್ಲಿಲ್ಲವೆ? ಇವಳ ದೆಸೆಯಿಂದ ನಾವು ಎಲ್ಲೂ ಹೋಗೋ ಹಾಗಿಲ್ಲ." ನಾನು ಗೊಣಗಿದೆ.
ಆದರೆ ಯಾವ ಪ್ರಯೋಜನಕ್ಕೆ? ”ಸಧ್ಯ ಈ ಓಡಿಹೋಗುವ ಕಾರ್ಯಕ್ರಮವನ್ನು ಶನಿವಾರಕ್ಕೇ ಇಟ್ಟು
ಕೊಳ್ಳುತ್ತಾಳಲ್ಲ, ಅದೇ ನಮ್ಮ ಪುಣ್ಯ . ಇಲ್ಲದಿದ್ದರೆ ಆಫೀಸಿಗೆ ರಜೆ
ಹಾಕಿ ಮನೆಯಲ್ಲಿ ಕುಳಿತಿರಬೇಕಾಗುತ್ತಿತ್ತು’ಎಂಬುದು ಮೂರ್ತಿಯ ನಿಟ್ಟುಸಿರಿನ ಮಾತು. ಅಂತೂ
ನಮ್ಮದೇ ಆದ ರೀತಿಯಲ್ಲಿ ನಾವು ಸ್ವೀಟಿಯ ಗೈರುಹಾಜರಿಯ ಪರಿಣಾಮಗಳನ್ನು ಎಣಿಸುತ್ತಾ, ಪೋಲೀಸರಿಂದ ಏನಾದರೂ ಸುದ್ದಿ ಬಂದೀತೆಂದು ನಿರೀಕ್ಷಿಸುತ್ತ ಮನೆಯಲ್ಲೇ ಕುಳಿತಿದ್ದೆವು.
ನಮ್ಮ ನಿರೀಕ್ಷೆ ಸುಳ್ಳಾಗಲಿಲ್ಲ. ಮಧ್ಯಾಹ್ನ ಒಂದು ಗಂಟೆಯ ವೇಳೆಗೆಫೋನು
ರಿಂಗಾಯಿಸಿತು.ರಿಸೀವರನ್ನೆತ್ತಿ ’ಹಲೋ’ ಎಂದೆ.”ಕುಡ್ ಐ ಸ್ಪೀಕ್ ಟು ಮಿಸ್ಟರ್ ಮೂರ್ತಿ ಪ್ಲೀಸ್ ’
ಎಂದಿತು ಧ್ವನಿ. ತಕ್ಷಣ ಫೋನನ್ನು ಮೂರ್ತಿಗೆ ವರ್ಗಾಯಿಸಿದೆ. ’ ಸಾರ್ ನಿಮ್ಮ ಗಾಡಿ ಸಿಕ್ಕಿದೆ
, ಇಲ್ಲೇ ನಿಮ್ಮ ಮನೆಗೆ ಹತ್ತಿರದ ರೈಲ್ವೇ ಸ್ಟೇಷನ್ ಬಳಿ ಇದೆ,’ ಸುದ್ದಿ ಕೇಳಿ ಇಬ್ಬರಿಗೂ ಸ್ವಲ್ಪ ನೆಮ್ಮದಿಯಾಯಿತು ಎಂದು ಬೇರೆ ಹೇಳಬೇಕೆ?
ಬಹಳ ದೂರಹೋಗಿಲ್ಲವಲ್ಲ ಎಂದುಕೊಂಡು
ದರ್ಶನಗೊಂಡು ಕರೆತರಲು ಹೊರಟೆವು, ಹೋಗಿ ನೋಡಿದರೆ ಯಾವ
ರೀತೀಯ ಏಟೂ ಇಲ್ಲ,ಯಾರೊಡನೆ ಸರಸವಾಡಿದ ಕುರುಹೂ ಇಲ್ಲ. ಆದರೆ ಮನೆಯಿಂದ
ಹೊರಡುವಾಗಲೇ ಸ್ಟೀರಿಂಗಿಗೆ ಹಾಕಿದ ಬೀಗವನ್ನು ತೆಗೆದು ಹಿಂದಿನ ಸೀಟಿನಮೇಲೆ ಇಟ್ಟದ್ದುಈಗಲೂ
ಅಲ್ಲಿಯೇ ಇತ್ತು ( ನಾವು ಅಂಡುಕೊಂಡದ್ದು! ಯಾರಿಗೆ ಗೊತ್ತು ರಾತ್ರೆ ಮೂರ್ತಿ ಬೀಗ ಹಾಕಲು ಮರೆತು ಅಲ್ಲೇ
ಇಟ್ಟಿದ್ದರೋ?) ಎರೆದುಕೊಳ್ಳುವ ಮುನ್ನ ನಮ್ಮ ಹೆಂಗಸರು ಕಿವಿಯ ಓಲೆ
ಹಾಗೂ ಮೂಗಿನ ನತ್ತನ್ನು ತೆಗೆದಿಡುವುದಿಲ್ಲವೇ ಹಾಗೆ !
ಇದೊಂದು ಹೊಸ ರೀತಿಯ ನಾಟಕ ಎನಿಸಿತು. ಅಲ್ಲ ಎಲ್ಲ ಬಿಟ್ಟು ರೈಲ್ವೆ ಸ್ಟೇಷನ್
ಬಳಿ ಬಂದದ್ದೇಕೆ, ಒಬ್ಬಳೆ ಬಂದಳೋ ಯಾರದಾದರೂ ಜೊತೆಯಲ್ಲಿ ಬಂದಿದ್ದಳೋ?
ಒಬ್ಬಳೇ ಬಂದಿದ್ದರೆ ಉದ್ದೇಶವೇನಿರಬಹುದು? ಇಂಗ್ಲೆಂಡ್
ದೇಶವನ್ನು ಬಿಟ್ಟುಹೋಗುವ ಆಲೋಚನೆಯೋ? ಅಥವ ನಮ್ಮಿಂದ ತಲೆಮರೆಸಿಕೊಂಡು
ಹೋಗುವ ಪಲಾಯನ ವಾದವೋ? ಉತ್ತರಿಸುವವರಾರು? .... ಯುದ್ಧದಲ್ಲಿ ಸೋತ ಸೈನಿಕನ ಕಳೆಯನ್ನು ಹೊತ್ತ ಸ್ವೀಟಿಯೊಬ್ಬಳನು ಬಿಟ್ಟರೆ? ಅವಳೊ ನಮ್ಮೊಡನೆ ಸತ್ಯಾಗ್ರಹ ಮಾಡಿದ್ದಾಳೆ. ಹೀಗಾಗಿ ಆ ಒಗಟು ಇಂದಿಗೂ ಒಗಟೆ. ಅಂತೂ
ಷೋಡಷೋಪಚಾರಗಳನ್ನು ಮಾಡಿ ಮನ್ನಿಸಿ ಮನೆಗೆ
ಕರೆತಂದಾಯಿತು. ’ಮೂರನೆಯ ಬಾರಿಗೆ ಮನೆಗೆ ಬಂದ ಮಹರಾಯಿತಿ ಮತ್ತೆ ಮುನಿಸಿಕೊಂಡು ಮನೆ ಬಿಟ್ಟು
ಹೋಗದಿದ್ದರೆ ಸಾಕು.’ ಎಂದು ನಾವು ಸ್ವೀಟಿಯ ಬಗ್ಗೆ ಬಹಳ ಎಚ್ಚರಿಕೆಯಿಂದ ವರ್ತಿಸತೊಡಗಿದೆವು.ಅವಳು
ಮನೆಬಿಟ್ಟು ಪದೇ ಪದೇ ಹೀಗೆ ಹೋಗುತ್ತಿರುವುದ ಬಗ್ಗೆಯೂ ಚಕಾರವೆತ್ತಲಿಲ್ಲ. ನನಗೇನು? ಏನಾದರೂ ಮಾಡಿಕೊಳ್ಳಲಿ ಎಂದು ನಾನು ಸುಮ್ಮನಾದೆ.ಮೂರ್ತಿ ಇನ್ನೂ ಹೆಚ್ಚು ಹೆಚ್ಚು
ಆರೈಕೆಮಾಡತೊಡಗಿದರು. ಸ್ವೀಟಿಯ ಬಗ್ಗೆ ಮೂರ್ತಿ ತೋರಿಸುತಿದ್ದ ಪ್ರೀತಿಯನ್ನು ನೋಡಿದಾಗ ನನಗೆ
ಒಮ್ಮೊಮ್ಮೆ ಅಸೂಯೆ ಆಗುತಿತ್ತು.ಒಳಗೊಳಗೇ ಸವತಿ ಮಾತ್ಸರ್ಯ ನನ್ನು ಕಾಡತೊಡಗಿತು.ನನ್ನ ಮನೆಯಲ್ಲೇ
ನಾನು ಪರಕೀಯಳಾಗುತ್ತಿದ್ದೇನೆ ಎನಿಸುತ್ತಿತ್ತು. ವಿಧಿಯಿಲ್ಲ ಸಹಿಸಿಕೊಳ್ಳಲೇಬೇಕು
ದಿನಗಳು ಕಳೆಯುತ್ತಿದ್ದವು, ವಾರಗಳು ಉರುಳುತ್ತಿದ್ದವು. ಆದರೆ ಅದೇನು ಗ್ರಹಚಾರವೋ ತಿಂಗಳುಗಳು
ಉರುಳುವುದು ಸಲೀಸಾಗಲಿಲ್ಲ.ನಮ್ಮ ಎಲ್ಲ ರೀತಿಯ ಆರೈಕೆ ಉಪಚಾರಗಳೂ ಸ್ವೀಟಿಗೆ ಸಂತೋಷಕೊಡಲಿಲ್ಲ ಎನ್ನುವುದು ದೃಢವಾಯಿತು,
ಏಕೆ ಎನ್ನುತ್ತೀರೋ. ಶುಕ್ರವಾರ ರಾತ್ರೆ ಮನೆ ಮುಂದೆ ಅಚ್ಚುಕಟ್ಟಾಗಿ
ಗುಂಡುಕಲ್ಲಿನಂತೆ , ದೃಢವಾಗಿ ಹಸನ್ಮುಖದಿಂದ( ನಮ್ಮ ಊಹೆ) ನಿಂತಿದ್ದ
ಸ್ವೀಟಿ ಶನಿವಾರ ಬೆಳಗ್ಗೆ ನೋಡುವ ವೇಳೆಗೆ ಮಾಯವಾಗಿ ಬಿಡುವುದೆ? ಈ
ಬಾರಿಯಂತೂ ಸ್ವೀಟಿ ಓಡಿಹೋಗುವ ಹೊಲಬೂ ಇರಲಿಲ್ಲ. ಯಾರು ಗಾದೆ ಮಾಡಿದರೋ "ಕಟ್ಟಿಕೊಂಡವಳು
ಕಡೆಯ ತನಕ" ನಾವೇನು ಸ್ವೀಟಿಯನ್ನು ಬಾಡಿಗೆಗೆ ಕರೆತಂದದ್ದಲ್ಲ. ಶಾಸ್ತ್ರೋಕ್ತವಾಗಿ
ಸ್ವಂತವಾಗಿಸಿಕೊಂಡದ್ದೇ!
ಸ್ವೀಟಿ ಓಡಿಹೋಗುವಾಗ ಏನಿಲ್ಲದಿದ್ದರೂ
ವ್ಯಕ್ತಿಗಳ ಚಾಲು ಚಲನಗಳನ್ನು ನೋಡಿಯಲ್ಲವೇ ಹೋಗುವುದು?ಕರೆದುಕೊಂಡು
ಹೋದವರು ತನ್ನನ್ನು ಜಾಗ್ರತೆಯಿಂದ ನೋಡಿಕೊಳ್ಳುತ್ತಾರೆ ಎಂದು ದೃಢಮಾಡಿಕೊಂಡಲ್ಲವೇ ಮನೆಬಿಡುವುದು?
ಕಂಡಕಂಡವರ ಕೈಹಿಡಿದು ಮಾಯವಾಗಿಬಿಡುವುದೆ? ಈ ಬಾರಿ
ಕರೆದುಕೊಂಡು ಹೋದವರಂತೂ ಆಕೆಯ ರೂಪವನ್ನೇ ವಿಕಾರ ಮಾಡಿ ಕಳುಹಿಸಿದ್ದರು. ಅದೆಷ್ಟು ಜನರ ಆಕ್ರಮಣ
ನಡೆದಿತ್ತೋ ಬಲ್ಲವರಾರು?ಗುರುತೂ ಸಿಗಲಾರದಷ್ಟು ಬದಲಾಗಿದ್ದ
ಸ್ವೀಟಿಯನ್ನು ಪೋಲೀಸರ ನೆರವಿನಿಂದ ನೆರವಾಗಿ ಆಸ್ಪತ್ರೆಗೆ ಸೇರಿಸಿದ್ದಾಯಿತು. ಈ ಬಾರಿ ಬಿದ್ದ
ಏಟಿನಿಂದ ಚೇತರಿಸಿಕೊಳ್ಳಲು ಸ್ವೀಟಿಗೆ
ಸುಮಾರು ಒಂದು ವಾರವೇ ಹಿಡಿಯಿತು.ಅಂತೂ
ಪುನಃ ಮನೆಗೆ ಬಂದಳು ಮಹರಾಯಿತಿ.( ಪದೇ ಪದೇ ಜಗಳವಾಡಿ ತವರುಮನೆಗೆ ಹೋಗಿಬರುವ ಹೇಂಡತಿಯಂತೆ!). ನನಗಂತೂ ಇವಳ ಈ ನಡವಳಿಕೆ
ಬೇಸರವಾಗಿತ್ತು.ನಿಯತ್ತಿಲ್ಲದವಳು! ಉಂಡ ಮನೆಗೆ ಬಗೆಯುವ ಸ್ವಭಾವ( ಅಲ್ಲಾ ಜನಕ್ಕೆ ನಿತ್ತಿಲ್ಲ
ಅಂದರೆ ಕಾರಿಗೂ ಬೇಡವೇ?). ಛೆ ನಾವು ಇವಳಿಗೆ ಎಷ್ಟು ಉಪಚಾರ ಮಾಡಿದರೂ
ಅಷ್ಟೆ. ಇವಳೇನೂ ನಮ್ಮ ಜೊತೆಗೆ ಹೊಂದಿಕೊಂಡು ಹೋಗುವ ಲಕ್ಷಣ ಕಾಣುವುದಿಲ್ಲ
ಎನಿಸಿತು.ಇದ್ಯಾವುದೋ ಕೆಟ್ಟನಕ್ಷತ್ರದ
ಕಾರು ಮಾರಿಬಿಡೋಣ ಮೂರ್ತಿ’ ಎಂದೆ. ಅವರಿಗೂ ನನ್ನ ಆಲೋಚನೆ ಸರಿ ಎನ್ನಿಸಿರಬೇಕು, ಮೌನದಿಂದಲೇ ಒಪ್ಪಿಗೆ ಕೊಟ್ಟರು . ಮಾರಿಬಿಡುವುದೇ ಸರಿ ಬೇರೆ
ಯಾವುದನ್ನಾದರೂ ಕೊಂಡುಕೊಂಡರಾಯಿತು, ಎಂದು ಆಲೋಚಿಸಿದೆವು.ಆದರೆ ತಕ್ಷಣ
ಕೊಂಡುಕೊಳ್ಳಲು ಹಣ ಬೇಕಲ್ಲ!’ಇರಲಿ ಸ್ವಲ್ಪ ನಿಧಾನಿಸಿ ಕೊಡರಾಯಿತು. ಹೇಗೂ ಈಗಿನ್ನೂ ಮನೆಗೆ
ಬಂದಿದ್ದಾಳೆ. ಇನ್ನು ಕೆಲವು ವಾರಗಳಂತೂ ಖಂಡಿತ ಎಲ್ಲೂ ಹೋಗುವುದಿಲ್ಲ. ಆಮೇಲೆ ನೋಡಿಕೊಳ್ಳೋಣ.
’ಎಂದು ಸುಮ್ಮನಾದೆವು
ಏಪ್ರಿಲ್ ತಿಂಗಳ ನಾಲ್ಕನೇ ತಾರೀಖು
ಕನ್ನಡಬಳಗದ ಕಾರ್ಯಕ್ರಮ, ಹೋಗಲೇಬೇಕು ನಮ್ಮ ಸ್ವೀಟಿಯನ್ನೇ ಕರೆದುಕೊಂಡು
ಹೋಗೋಣ , ನಮ್ಮವಳೇ
ಇರುವಾಗ ಬೇರೆಯವರ ಜೊತೆಯಲ್ಲೆನು ಹೋಗುವುದು? ಅಂದರು ಮೂರ್ತಿ, ಎಷ್ಟಾದರೂ ಮೃದು ಸ್ವಭಾವ! ಅಲ್ಲಾರೀ ನೀವೇನೋ ಸ್ವೀಟೀನ ಕರ್ಕೊಂಡ್ಹೋಗೋಣ ಅಂತೀರಿ,
ಒಂದುವೇಳೆ ಬೆಳಗ್ಗೆ ನಾವು ಏಳೋ ಹೊತ್ತಿಗೆ ನಿಮ್ಮ ಈ ಮುದ್ದಾದ ಸ್ವೀಟಿ
ಮಾಯವಾಗಿಬಿಟ್ಟರೇ......? ಎಂದಂದು ನನ್ನ ಸಿಟ್ಟನ್ನು
ತೋರಿಸಿಕೊಂಡೆ.ಮೂರ್ತಿ ಸ್ವೀಟಿಯ ಬಗ್ಗೆ ಇಷ್ಟು ಅಕ್ಕರೆ ತೋರಿಸಿದುದು ನನಗೆ ಇಷ್ಟವಾಗಿರಲಿಲ್ಲ.
"ಸುಮ್ನಿರೇ , ನಿನ್ನ ಮಾತನ್ನ , ಸ್ವೀಟಿಯೇನಾದರೂ ಕೇಳಿಸಿಕೊಂಡರೆ ಮುಗಿಯಿತು ಖಂಡಿತ
ಅನಾಹುತವಾಗುತ್ತೆ" ಎಂದು ನನ್ನನ್ನು ತಡೆದರು. ಏನಾದರೂ ಮಾಡಿಕೊಳ್ಳಲಿ ಎಂದು ನಾನೂ
ವಿಷಯವನ್ನು ಬೆಳೆಸದೆ ಬಿಟ್ಟೆ.ಮಾರನೇ ದಿನ
ಬೆಳಗ್ಗೆ ಬೇಗನೆ ಎದ್ದು ಸ್ನಾನ ಪೂಜಾದಿಗಳನ್ನು ಮಾಡಿ ಸಿದ್ಧಳಾಗುತ್ತಿದ್ದೆ. ನಾನು ಸಿದ್ಧವಾಗುವ
ವೇಳೆಗೆ ಮೂರ್ತಿಯೂ ಎದ್ದು ಸ್ನಾನಕ್ಕೆ ಹೋಗಲು ಹೆಗಲ ಮೇಲೆ ಟವೆಲ್ಲನ್ನೇರಿಸಿಕೊಂಡು ರೂಮಿನ ತೆರೆದ
ಕಿಟಕಿ ಮುಚ್ಚಿ ಹೋಗೋಣವೆಂದು ಹೋದರು.ಸ್ವಾಭಾವಿಕವಾಗಿಯೇ ಕಣ್ಣು ಕಿಟಕಿಯಿಂದಾಚೆ ಇಣುಕಿತು. ’ಲೇ
ಸತ್ಯೂ ನೋಡು ಬಾಯಿಲ್ಲಿ ನೀನ್ ಮಾಡಿದ ಕೆಲ್ಸಾನ!ಅದೇನು ಶಕುನ ನುಡಿದೆಯೋ? ಸ್ವೀಟಿ ಹೊರಟ್ಹೋಗಿದಾಳೆ. ನಿನ್ನ ನಾಲಗೆಯಲ್ಲಿ ಅದೇನು ಭವಿಷ್ಯವಾಣಿ ಕುಳಿತಿದೆಯೋ
? ಇಲ್ಲಾ ನೀನಂದದ್ದು ಸ್ವೀಟೀಗೆ ಕೇಳಿಸಿತೋ ಅಂತೂ ಈಗ ಆಗಬಾರದ್ದು
ಆಗಿಹೋಯಿತು.ನನಗೇನಂತೆ ಈಗ ಕನ್ನಡಬಳಗದ ಕಾರ್ಯಕ್ರಮಕ್ಕೆ ಹೋಗಲಾಗುವುದಿಲ್ಲ ಅಷ್ಟೆ. ಈ ಹೆಂಗಸರ
ಸ್ವಭಾವವೇ ಹೀಗೆ ಮನಸ್ಸಿನಲ್ಲಿ ಏನೂ ಇಟ್ಟುಕೊಳ್ಳಲಾಗುವುದಿಲ್ಲ, ಈಗ
ಅನುಭವಿಸು.’ ಎಂದು ಒಂದೇ ಸಮನೆ ಕೋಪದಿಂದ ಕೂಗಾಡಿದರು.
ನನಗೆ ನನ್ನ ಮಾತು ನಿಜವಾಗಿದ್ದದ್ದಕ್ಕೆ
ಸಂತೋಷವೇನೂ ಆಗಿರಲಿಲ್ಲ. ಬದಲಾಗಿ ನನ್ನಮೇಲೆ ನನಗೇ ಕೋಪ ಬಂದಿತು.’ನಾನೇಕೆ
ಸುಮ್ಮನಿರಬಾರದಾಗಿತ್ತು? ಹೊಲಸು ನಾಲಗೆ ತನಗೆ ತಿಳಿದದ್ದನ್ನು
ನುಡಿದುಬಿಡುತ್ತದೆ’ ಎಂದು ನನ್ನ ನಾಲಗೆಯನ್ನು ಶಪಿಸಿಕೊಂಡೆ.”ಕ್ಷಮಿಸಿ ಮೂರ್ತಿ ಹೀಗೆ ಆಗುತ್ತದೆ
ಎಂದು ತಿಳಿದಿದ್ದರೆ ಖಂಡಿತ ಹೇಳುತ್ತಿರಲಿಲ್ಲ ’ ಎಂದು ನೊಂದುಕೊಂಡೆ.
ಮೂರ್ತಿ ಕೋಪದ ಸ್ವಭಾವದವರಲ್ಲ. ಅವರಿಗೆ
ಕೋಪ ಬರುವುದೇ ಇಲ್ಲ . ಬಂದರೆ ಕ್ಷಣಮಾತ್ರದಲ್ಲಿ ಮಾಯವಾಗಿಬಿಡುತ್ತದೆ. ಹೀಗಾಗಿ ನನ್ನ ಮೇಲಿನ ಕೋಪ
ಕೂಡಲೆ ಮಾಯವಾಯಿತು.’ ಸರಿ , ಹೋಗಲಿ ಬಿಡು ನೀನೇನು ಮಾಡುವುದಕ್ಕಾಗುತ್ತದೆ
, ಎಲ್ಲ ನಮ್ಮ ಗ್ರಹಚಾರ. ಈಗ ಮೊದಲು ಪೋಲೀಸರಿಗೆ ಫೋನ್ ಮಾಡಿ ವಿಷಯ ತಿಳಿಸಿ ನಂತರ ಎಲ್ಲಾದರೂ ಕಾರಿನ ವ್ಯವಸ್ಥೆ
ಮಾಡೋಣ ಸುಮ್ಮನಿರು ’ ಎಂದು ನನ್ನನ್ನೇ ಸಮಾಧಾನ ಮಾಡಿದರು
ಪೋಲಿಸರಿಗೆ ಫೋನ್ ಮಾಡಿ ಕಂಪ್ಲೇಂಟ್ ಕೊಟ್ಟಾಯಿತು . ’ಸದ್ಯ ಈ ಬಾರಿ ಕಳೆದ ಬಾರಿಯಂತೆ
ಭಾಷಣ ಮಾಡುವ ವ್ಯಕ್ತಿಯ ಕೈಗೆ ಸಿಕ್ಕಿಹಾಕಿಕೊಳ್ಳಲಿಲ್ಲ’ ಎಂದು ಸಮಾಧಾನದ ನಿಟ್ಟುಸಿರು ಬಿಟ್ಟರು
ಮೂರ್ತಿ. ಮೂರ್ತಿ ಈಗೇನು ಮಾಡೋದು? ಕನ್ನಡಬಳಗದ ಕಾರ್ಯಕ್ರಮಕ್ಕೆ
ಹೋಗೋದೋ ?ಬೇಡವೋ? ಎಂದೆ ಆತಂಕ
ವ್ಯಕ್ತಪಡಿಸುತ್ತ."ಅಜ್ಜಿಗೆ ಅರಿವೆ ಚಿಂತೆ, ಮೊಮ್ಮಗಳಿಗೆ ಮದುವೆ
ಚಿಂತೆ;" ಅಂದಹಾಗೆ ಮೂರ್ತಿಗೆ ಕಾರಿನ ಯೋಚನೆ ಬಲವಾದರೆ, ನನಗೆ ಕನ್ನಡಬಳಗದ ಕಾರ್ಯಕ್ರಮ ತಪ್ಪಿಹೋಗುತ್ತಲ್ಲ ಅಂತ ಯೋಚನೆ. ಅಂತು ಕಡೆಗೆ ಮೂರ್ತಿ
ತಮ್ಮ ಸ್ನೇಹಿತರೊಬ್ಬರಿಗೆ ಫೋನ್ ಮಾಡಿ ವಿಷಯತಿಳಿಸಿ ಕಾರನ್ನು ಎರವಲು ತೆಗೆದುಕೊಂಡರು. ನಮ್ಮ
ಗ್ರಹಚಾರ ಅಂದು ಬಳವೇ ಕೆಟ್ಟಿದ್ದಿರಬೇಕು. ನಾವು ತೆಗೆದುಕೊಂಡು ಹೋದ ಕಾರಿಗೂ ಯಾರೋ ಪುಣ್ಯಾತ್ಮ ಹಿಂದಿನಿಂದ
ಬಂದು ಜಖಂ ಮಾಡಿದ. ಅದಕ್ಕಾಗಿ ಒಂದಷ್ಟು ದಿನಗಳ ತಲೆ ಬಿಸಿಯಾಯಿತು.ಆದರೆ ಈಗ ಆ ವಿಷಯ
ಅಪ್ರಸ್ತುತ.ಅಂದೇ ರಾತ್ರಿ ಪೋಲೀಸರಿಂದ ಫೋನ್ ಬಂದಿತು. ಅವರು ನಮ್ಮ ಕಾರನ್ನು ಈಗಾಗಲೇ
ಹುಡುಕಿದ್ದರು.ಪ್ರಾಯಶಃ ಅವರಿಗೂ ಈ ವೇಳೆಗೆ ಸ್ವೀಟಿಯ ಚಲನವಲನಗಳು ಸಂಪೂರ್ಣವಾಗಿ
ತಿಳಿದಿರಬೇಕು.ಹುಡುಕುವುದಕ್ಕೆ ಅಷ್ಟು ಕಷ್ಟಪಟ್ಟಿರಲಾರರು
ಯಾವ ಜನ್ಮದ ಋಣಾನುಬಂಧವೋ ಮತ್ತೆ ಮನೆಗೆ
ಮರಳಿದಳು ನಮ್ಮ ಸ್ವೀಟಿ.
ಪುಣ್ಯಕ್ಕೆ ಈ ಬಾರಿ ಯಾವ ದೊಡ್ದ ಗಾಯಗಳೂ
ಇಲ್ಲದೆ ಬಂದಿದ್ದಳು.ಆದರೆ ಅವಳ ಬಾಯನ್ನು ಹರಿದು ಹಾಕಿದ್ದರು.ಸುಶ್ರಾವ್ಯವಾಗಿ ಹಾಡುತ್ತಿದ್ದ ಅವಳ
ಗಂಟಲಿಗೆ ಬೀಗ ಬಿದ್ದಿತ್ತು. ಆದರೆ ನಾವೂ ಈ ಬಾರಿ ಹಣ ಖರ್ಚು ಮಾಡುವ ಗೋಜಿಗೆ ಹೋಗಲಿಲ್ಲ.
ಮೂಗಿಯಾಗೇ ಉಳಿದರೆ ಎಷ್ಟೋ ವಾಸಿ.ಹೊರಗಿನವರ ಸಹವಾಸವೇ ಕಡಿಮೆಯಾಗುತ್ತದೆ ಅಂತ ಹಾಗೆಯೆ ಬಿಟ್ಟೆವು.
ನೋಡಲು ಸ್ವಲ್ಪ ವಿಕಾರವಾಗಿ ಕಂಡರೂ
ತಲೆಕೆಡಿಸಿಕೊಳ್ಲುವ ಗೋಜಿಗೆ ಹೋಗಲಿಲ್ಲ. ಹೇಗಾದರೂ ಮಾಡಿ ಇವಳಿಂದ ಬಿಡುಗಡೆ ಹೊಂದಬೇಕು ಎಂಬ ಹಠ
ಮೂಡಿತು ನನ್ನಲ್ಲಿ. ಎಲ್ಲೆಲ್ಲಿ ಕೊಟ್ಟು ಕೊಳ್ಳುವ ವ್ಯವಹಾರ ಮಾಡುತ್ತಾರೆ ಎಂದು ವಿಚಾರಿಸತೊಡಗಿದೆ.
ಈ ನನ್ನ ಆಲೋಚನೆ ಮೂರ್ತಿಗೆ ಸರಿ ಅಷ್ಟು
ಬರಲಿಲ್ಲವಾದರೂ
ನನ್ನ ನಿಶ್ಚಯಕ್ಕೆ ಎದುರಾಡಲಿಲ್ಲ.
ಇದೆಲ್ಲ ಸ್ವೀಟಿಯ ಅರಿವಿಗೂ ಬಂದಿರಬೇಕು."ತಾನೊಂದು ಯಂತ್ರವಾದರೇನು ತನಗೆ ತನ್ನದೇ ಆದ
ಭಾವನೆಗಳಿಲ್ಲವೇ? ತನ್ನ ಮನಸ್ಸಿಗೆ ಬಂದಕಡೆಗೆ ಹೋಗಲು
ಸ್ವಾತಂತ್ರವಿಲ್ಲವೇ? ಇವರು ತಮ್ಮ ಆಸೆ ಆಮಿಷಗಳನ್ನು ಪೂರೈಸಿಕೊಳ್ಳಲು ತನ್ನನ್ನು ಉಪಯೋಗಿಸಿಕೊಳ್ಳುತ್ತಾರೆಯೇ ಹೊರತು
ನನ್ನನ್ನು ಒಮ್ಮೆಯಾದರೂ ವಿಚಾರಿಸಿದ್ದಾರೆಯೆ? ಇವರ ಈ ತಿರಸ್ಕಾರವನ್ನು
ಸಹಿಸಿಕೊಂಡು ನಾನಿನ್ನೂ ಇಲ್ಲೇ ಇರಬೇಕೆ? ತನಗೇನು ಸ್ವಾಭಿಮಾನವಿಲ್ಲವೇ?"
ಇದಕ್ಕಿಂತ ಆತ್ಮಹತ್ಯೆಯೇ ಎಷ್ಟೊ ಮೇಲು ಅನ್ನಿಸಿರಲೂಬಹುದು. ಮುಂದಿನ ಎರಡು
ವಾರಗಳು ಉರುಳಿದ್ದೇ ಹೆಚ್ಚು , ಮನೆಯ ಮುಂದೆ ಸದಾ ಮಂಕಾಗಿ
ನಿಂತಿರುತ್ತಿದ್ದ ಸ್ವೀಟಿ ಮಾಯವಾಗಿದ್ದಳು. ’ದಿನ ಬೆಳಗಾದರೆ ಇವಳ ಗೋಳು ಇದ್ದದ್ದೇ . ನನಗಂತೂ
ಕಂಪ್ಲೇಂಟ್ ಕೊಟ್ಟೂ ಕೊಟ್ಟೂ ಸಾಕಾಗಿದೆ’ ಎಂದು ಗೊಣಗುತ್ತಲೇ ಮೂರ್ತಿ ಕಂಪ್ಲೇಂಟ್ ಕೊಟ್ಟು
ಸುಮ್ಮನಾದರು. ಇಂದಲ್ಲ ನಾಳೆ ಪೋಲೀಸರು ಅವಳ ಸುದ್ದಿ ತಂದಾರು ಎಂದು ಸುಮ್ಮನಾದೆವು.ಆದರೆ ವಾರಗಳು
ಒಂದರಮೇಲೊಂದು ಉರುಳಿದರೂ ಸ್ವೀಟಿಯ ಸುದ್ದಿಯೇ ಇಲ್ಲ.ಈಗ ನಮಗೆ ಸ್ವಲ್ಪ ಯೋಚನೆ
ಹತ್ತಿತು.ಪೋಲಿಸರಿಗೆ ಫೋನ್ ಮಾಡಿ ವಿಚಾರಿಸಿಯಾಯಿತು.ಪ್ರಯೋಜನವೇನೂ ಆಗಲಿಲ್ಲ.ಮೂರು ವಾರಗಳು
ನಿರೀಕ್ಷೆಯಲ್ಲೇ ಉರುಳಿದವು. ಸ್ವೀಟಿಯ ಸುಳಿವಿಲ್ಲ. ’ಹೀಗೇಕಾಯಿತು? ಸ್ವೀಟಿ
ಎಲ್ಲಿ ಹೋಗಿರಬಹುದು?ಮನೆಗೆ ಬಂದ ಹೊಸದರಲ್ಲಿಎಷ್ಟು ಚೆನ್ನಾಗಿದ್ದಳು,
ಇದ್ದಕಿದ್ದಂತೆ ಇವಳಿಗೇಕೆ ಇಂತಹ
ಸಹವಾಸವಾಯಿತು? ಪಾಪ ಎಲ್ಲಿ ಯಾರ ಕೈಗೆ ಸಿಕ್ಕಿಹಾಕಿಕೊಂಡಿದ್ದಾಳೋ?
ಹೇಗಿದ್ದಾಳೋ?’ ಎಂದು ಯೋಚಿಸುತ್ತ ಮಲಗಿದ್ದೆ ನಿದ್ದೆ
ಯಾವಗ ಬಂತೋ ತಿಳಿಯದು. ಫೋನಿನ ಗಂಟೆ ಒಂದೇ ಸಮನೆ ಕಿರುಚಿಕೊಳ್ಲತೊಡಗಿದಾಗ ಎಚ್ಚರವಾಯಿತು.
ಮೂರ್ತಿಯೂ ಎದ್ದರು ಫೋನ್ ಕೈಗೆತ್ತಿಕೊಂಡು ’ಹೆಲೋ ಒನ್, ಟೂ,ಟೂ ತ್ರೀ’ ಅಂದರು. ಯಾವುದೇ ಫೋನ್ ಬಂದರೂ ಅವರ ಯಾಂತ್ರಿಕ ಪ್ರತಿಕ್ರಿಯೆಯ ರೀತಿ. ’ ಸಾರ್ ನಾನು ಪೋಲೀಸ್ ಸ್ಟೇಶನ್ ನಿಂದ ಫೋನ್ ಮಾಡ್ತ
ಇದೀನಿ. ನಿಮಗೊಂದು ಗುಡ್ ನ್ಯೂಸ್. ನಿಮ್ಮ
ಕಾರು ಸ್ವೀಟಿ ಅಲ್ಲವೇ ಅವಳ ಹೆಸರು
, ಸಿಕ್ಕಿದಾಳೆ. ಆಸ್ಪತ್ರೇಲಿದಾಳೆ ನಾಳೆ ಬಂದು ಕರ್ಕೊಂಡ್ಹೋಗಿ. ಆದ್ರೆ
ನಿಮಗೊಂದು ಬ್ಯಾಡ್ ನ್ಯೂಸೂ ಇದೆ, ಸಿಕ್ಕಿರೋದು ನಿಮ್ಮ ಸ್ವೀಟಿಯ ಶವ!
ಏನ್ಸಾರ್ ಏನ್ಹೇಳ್ತಾ ಇದೀರಿ?
ಐಂ ಐ ಆಂ ಸಾರಿ ಮಿಸ್ಟರ್ ಮೂರ್ತಿ, ನೀವು ಕೊಟ್ಟಿದ್ದ ಗುರುತುಗಳಿಂದ ಆಕೇನೆ ನಿಮ್ಮ ಸ್ವೀಟಿ ಅಂತ
ಗೊತ್ತಾಯ್ತು. ಯಾರೋ ಖದೀಮರು ಜೀವ ತೆಗೆದದ್ದಷ್ಟೇ ಅಲ್ಲ ಅಗ್ನಿ ಸಂಸ್ಕಾರವನ್ನೂ ಮಾಡಿದ್ದಾರೆ.
ನಾನೇ ಆಕೇನ ಎರಡುಮೂರು ಬಾರಿ ಹುಡುಕಿದ್ದರಿಂದ ಅವಳ ಹೆಸರೂ ಗೊತ್ತಾಗಿದ್ದು ಕಂಡುಹಿಡಿಯೋದು
ಸುಲಭವಾಯ್ತು. ’ಯೆನಿ ವೇಸ್ ಐ ಆಂ ಸಾರಿ
ಒನ್ಸಗೈನ್ ’ . ವರದಿ ಒಪ್ಪಿಸಿ ಫೋನನ್ನು
ಕೆಳಗಿಟ್ಟ . ಮೂರ್ತಿ ಎಷ್ಟು ಹೊತ್ತಾದರೂ ಫೋನನ್ನೂ ಕೆಳಗಿಡದೆ ಮಾತೂ ಆಡದೆ ಇದ್ದದ್ದು
ನೋಡಿ”ಏನಾಯ್ತು ಮೂರ್ತಿ ಯಾಕ್ಹೀಗಿದೀರಿ? ’ ಅಂದೆ. ಎನೂ ಅರಿಯದವಳಂತೆ.
ಎಲ್ಲಾ ಮುಗೀತು ಕಣೆ ಸ್ವೀಟಿ ಇನ್ನಿಲ್ಲ .ಬೆಳಗ್ಗೆ ಎದ್ದು ಒಂದು ತರ್ಪಣ ಕೊಡಬೇಕು.ನಂತರ ಅವಳ
ಮೃತದೇಹವನ್ನು ( ಅಸ್ಥಿಪಂಜರವನ್ನು) ಗುರುತಿಸಿ ಬರಬೇಕು.ಕಡೆಗೂ ನಮ್ಮ ಮೇಲೆ ಸೇಡು
ತೀರಿಸಿಕೊಂಡಳು.’ ಎಂದು ಪೇಚಾಡಿಕೊಂಡರು.
ಹೋಗ್ಲಿ ಬಿಡಿ ಮೂರ್ತಿಅವಳಿಗಾಗಿ ಯಾಕೆ ದುಖಿಃಸುತ್ತೀರಿ? ಎಷ್ಟು ಮಾಡಿದರೂ ಅಷ್ಟೆ. ಅವಳ ಹಣೆಬರಹದಲ್ಲಿ ಇದ್ದದ್ದು ಆಯಿತು.ಎಂದೆ.
ನಿಜ ಹೇಳಬೇಕೆಂದರೆ ನನಗೆ ಸವತಿಯೊಬ್ಬಳ ಕಾಟ ನಿವಾರಣೆಯಾದಷ್ಟು ಸಂತೋಷವಾಗಿತ್ತು. ಇನ್ನುಮೇಲೆ
ಸ್ವೀಟಿಗಾಗಿ ನಾವು ಕಂಪ್ಲೇಂಟ್ ಕೊಡಬೇಕಾಗಿಲ್ಲವಲ್ಲ ಎಂಬುದು ಮೂರ್ತಿಗೆ ಸಮಾಧಾನದ
ವಿಷಯವಾಗಿತ್ತು.
ಅಂತೂ ನಮ್ಮ ಜೀವನದಲ್ಲಿ ಸರವಮಂಗಳೆಯಾಗಿ ಬಂದ ಸ್ವೀಟಿ ಮಹಾಮಾರಿಯಾಗಿ ಕಾಡಿ
ಕೊನೆಗೆ ತನ್ನ ಕೃತ್ಯಕ್ಕೆ ತಾನೇ ಬಲಿಯಾದಳು. . "ಮಾಡಿದ್ದುಣ್ಣೊ ಮಹರಾಯ”
ಉದಯವಾಣಿ ದೇಸಿಸ್ವರದಲ್ಲಿ ಸಾಕಷ್ಟು ಕಡಿತದೊಂದಿಗೆ 10-07-2021 ರಂದು ಪ್ರಕಟವಾಗಿದೆ
Comments
Post a Comment