ಬದುಕು ಕಾರಿನ ಬಂಡಿ



ಬದುಕು ಕಾರಿನ ಬಂಡಿ

ತಾಯ್ನಾಡನ್ನು ಬಿಟ್ಟು ತಬ್ಬಲಿಗಳಂತೆ ಪರದೇಶಕ್ಕೆ ಬಂದು , ಪರದೇಶಿಗಳಾಗಿ ನೆಲೆಸುವ ಪರಿಸ್ಥಿತಿಯಲ್ಲಿ ನಮ್ಮನ್ನು ಪ್ರೀತಿಸುವ ನಮ್ಮೊಡನೆ ಇರುವ ಸಂಗಾತಿ ಬೇಕಲ್ಲವೇ?
ನಾನು ಬೆಂಗಳೂರನ್ನು ಬಿಟ್ಟು ಮ್ಯಾಂಚೆಸ್ಟರ್ ಗೆ  ಬರುವ ವೇಳೆಗೆ ನನ್ನನ್ನು ಬರಮಾಡಿಕೊಳ್ಳಲು, ಆತ್ಮೀಯತೆಯ ಸವಿಯನ್ನು ನೀಡಲು ಏರ್ಪೋರ್ಟಿಗೇ ಬಂದಿದ್ದಳು ’ವಾಕ್ಸಾಲ್ ನಕ್ಷತ್ರ, ಆಸ್ಟ್ರಾ ರಾಶಿ’ಯಲ್ಲಿ ಜನಿಸಿದ ಪಚ್ಚೆಗಿಣಿ. ನೋಡಲು ಮುದ್ದಾಗಿದ್ದ ಆಕೆ ತನ್ನ ಸೌಂದರ್ಯದಿಂದ ಎಲ್ಲರ ಮನಸೆಳೆಯುವಂತಿದ್ದಳು. ಅವಳೊಡನೆ ಪ್ರಯಾಣಿಸುವುದು ಒಂದು ಸುಖಕರವಾದ ಅನುಭವ. ತನ್ನೊಡನೆ ಪ್ರಯಾಣಿಸಲು ಕುಳಿತವರ ಯೋಗಕ್ಶೇಮವನ್ನು ಎಲ್ಲ ರೀತಿಯಲ್ಲಿಯೂ ನೋಡಿಕೊಳ್ಳುವ ಅವಳು ಸ್ನೇಹಜೀವಿ. ಯಾವ ಸಮಯದಲ್ಲೂ ತೊಂದರೆ ಕೊಡುವ ಸ್ವಭಾವದವಳಲ್ಲ.ಅಂತೂ ನನ್ನವರೆಲ್ಲರನ್ನೂ ಬಿಟ್ಟು ಬಂದಿದ್ದ ನನಗೆ ಅಚ್ಚುಮೆಚ್ಚಿನ ಸಂಗಾತಿಯಾದಳು. ಕೆಲವೇ ತಿಂಗಳುಗಳಲ್ಲಿ ಅವಳನ್ನು ಬಿಟ್ಟಿರುವುದು ನನಗೆ ಬಹಳಕಷ್ಟವಾಗುತಿತ್ತು. ಅವಳು ನಮ್ಮನ್ನು ಗಮನಿಸಿಕೊಳ್ಳುತ್ತಿದ್ದಂತೆ ನಾನೂ ಅವಳ ಯೋಗಕ್ಷೇಮವನ್ನು ನೋಡಿಕೊಳ್ಳುತ್ತಿದ್ದೆ. ಕಾಲಕಾಲಕ್ಕೆ ಸ್ನಾನಮಾಡಿಸಿ ಅವಳನ್ನು ಸುಂದರವಾಗಿ ಕಾಣುವಂತೆ ನೋಡಿಕೊಳ್ಳುತ್ತಿದ್ದೆ. ಆದರೆ ಎಲ್ಲದ್ದಕ್ಕೂ ಒಂದು ಕೊನೆಯಿರುತ್ತದೆ. ಎಂತಹ ಒಳ್ಳೆ ದಿನಗಳೂ ಮುಗಿದುಹೋಗುತ್ತವೆ. ಇಲ್ಲಿ ಬಂದವರು ಅಲ್ಲಿಗೆ ಹೋಗಲೇ ಬೇಕು. ಹಾಗೆಯೇ ನನ್ನ’ಪಚ್ಚೆಗಿಣಿ’ಯ ಆಯಸ್ಸೂ ಮುಗಿದು ಒಮ್ಮೆಕೊನೆಯುಸಿರೆಳೆದಳು.( ಅದು ಒಂದು ದೊಡ್ಡ ಕತೆ ಅದನ್ನು ಈಗ ಹೇಳುವುದಕ್ಕೆ ಸಮಯವಿಲ್ಲ) ಕಾಲಾಯ ತಸ್ಮೈ ನಮಃ ಯಾರೇ ಇರಲಿ ಬಿಡಲಿ ಕಾಲ ಒಡುತ್ತಲೇ ಇರುತ್ತದೆ. ಹಾಗೆಯೇ ನಮ್ಮ ಅಗತ್ಯಗಳೂ ಯಾರಿಗಾಗಿಯೂ ಕಾಯುವುದಿಲ್ಲ. ಒಂದು ಅವಕಾಶ ತಪ್ಪಿದರೆ ಮತ್ತೊಂದನ್ನು ಹುಡುಕುತ್ತದೆ. ನಮ್ಮ ’ಪಚ್ಚೆ ಗಿಳಿ’ಯನ್ನು ಕಳೆದುಕೊಂಡ ನಾವು ಕೆಲದಿನಗಳವರೆಗೆ ಅವಳ ನೆನಪಿನಲ್ಲಿ ಊಟ ತಿಂಡಿ ಬಿಟ್ಟೆವು. ನಿದ್ರೆಯನ್ನು ಕಳೆದುಕೊಂಡೆವು. ಆದರೇನು ಅವಳ ಸ್ಥಾನಕ್ಕೆ ಬೇರೆಯವರನ್ನು ಹುಡುಕಲೇ ಬೇಕಾಗಿತ್ತು.ಮೂರ್ತಿಯಮಿತ್ರರೊಬ್ಬರು ತಮಗೆ ತಿಳಿದವರ ಬಳಿ ’ಸಿಟ್ರಾನ್’ ನಕ್ಶತ್ರದಲ್ಲಿ ಹುಟ್ಟಿದ ಶ್ವೇತಸುಂದರಿಯೊಬ್ಬಳಿದ್ದಾಳೆ. ಅವಳನ್ನು ಬೇಕಾದರೆ ಕರೆತಂದು ನೋಡಿ ಎಂದರು. ಅವರ ಮಾತಿಗೆ ಒಪ್ಪಿ ಶ್ವೇತಸುಂದರಿಯನ್ನು ಮನೆಗೆ ಕರೆ ತಂದಿದ್ದಾಯಿತು.ಆದರೆ ಅವಳಿಗೆ ನಮ್ಮ ಮೇಲಿನ ಸಿಟ್ಟೋ ತನ್ನ ಮನೆಯನ್ನು ತೊರೆದು ಬಂದ ದುಖಃವೋ ಅಂತೂ ನಮ್ಮನ್ನು ಕಂಡರೆ ಸಿಟ್ಟಿಗೇಳುತ್ತಿದ್ದಳು. ನಿಂತ ಜಾಗದಿಂದ ಕದಲುವುದೇ ಇಲ್ಲ ಎಂದು ಒಮ್ಮೊಮ್ಮೆ ಹಟ ಮಾಡಿದರೆ ಒಮ್ಮೊಮ್ಮೆ ರಸ್ತೆಯಲ್ಲಿ ಸಿಗ್ನಲ್ ಗಳು ಬಂದು ನಿಲ್ಲ ಬೇಕಾದ  ಸಂದರ್ಭಗಳಲ್ಲಿ ತನಗೇನೂ ಸಂಬಂಧವಿಲ್ಲದಂತೆ  ಮುಂದೆಮುಂದೆ ಹೋಗಿ ನಮ್ಮನ್ನು ಅಪರಾಧಿಗಳಾಗಿಸುವ ಯತ್ನ ಮಾಡುತ್ತಿದ್ದಳು. ಬರಬರುತ್ತ ದಿನದಿನಕ್ಕೆ ಅವಳ ಸತ್ಯಾಗ್ರಹ ಹೆಚ್ಚಾಯಿತು. ಇನ್ನು ಅವಳನ್ನು ಬಲವಂತವಾಗಿ ನಮ್ಮೊಡನೆ ಇಟ್ಟುಕೊಳ್ಳುವುದು ಸರಿಯಿಲ್ಲ ಎಂದು ಯಾರಿಂದ ಅವಳನ್ನು ಕರೆದು ತಂದಿದ್ದೆವೋ ಅವರಿಗೇ ಹಿಂತಿರುಗಿಸಿದೆವು. ಶ್ವೇತಸುಂದರಿಯೇನೋ ನೆಮ್ಮದಿಯಾಗಿ ಮನೆ ಸೇರಿದಳು. ಆದರೆ ನಮ್ಮ ಕಷ್ಟ ಮಾತ್ರ ಬಗೆಹರಿಯಲಿಲ್ಲ.  ನಮ್ಮ ಹುಡುಕಾಟ ಮುಂದುವರಿಯಿತು. ಪತ್ರಿಕೆಗಳಲ್ಲಿ ವಾಂಟೆಡ್  ಕಾಲಂನಲ್ಲಿ ಜಾಹೀರಾತು ಕೊಟ್ಟಾಯಿತು. ಕಂಡಕಂಡವರ ಬಳಿ ನಮ್ಮ ಸಂಕಟವನ್ನು ಹೇಳಿಕೊಂಡು ನಮ್ಮ ಮನೆಗೊಬ್ಬ ಸುಂದರಿಯ ಅಗತ್ಯವಿದೆಯೆಂದು ತಿಳಿಸಿಯಾಯಿತು.
ಅಂತೂ ನಮ್ಮ ಎಡೆಬಿಡದ ಪ್ರಯತ್ನಗಳಿಂದ ಕೊನೆಗೆ’ರೆನೊ’ ನಕ್ಶತ್ರದಲ್ಲಿ”ಕ್ಲಿಯೊ" ರಾಶಿಯಲ್ಲಿ ಜನಿಸಿದ ’ಕೆಂಪಿ’ಯನ್ನು ಮನೆ ತುಂಬಿಸಿಕೊಂಡಾಯಿತು. ನಿಜವಾಗಿಯೂ ನಮ್ಮ ಪ್ರಯತ್ನಕ್ಕೆ ಸಾರ್ಥಕತೆ ದೊರೆಯಿತು. ಕೆಂಪಿ ಬಹಳ ಮುದ್ದಾಗಿದ್ದುದೇ ಅಲ್ಲದೆ ಸುಶೀಲಳು ಆಗಿದ್ದಳು. ಒಳ್ಳೆಯ ಮನೆತನದ ಹೆಣ್ಣು ಮಗಳು ನಮ್ಮೆಲ್ಲರ ಮನಸೆಳೆದಳು. ಅವಳನ್ನು ಆದರಿಸಿ ನೋಡಿಕೊಳ್ಳುವ ಜವಾಬ್ದಾರಿ ನನ್ನದಾಯಿತು. ಅದಕ್ಕೆ ಪ್ರತಿಯಾಗಿ ಅವಳೂ ನಮ್ಮನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದಳು. ಎಲ್ಲಿ ಹೋಗಬೇಕಾದರೂ ಅವಳು ತನ್ನ ಎಲ್ಲ ಜಾಣತನವನ್ನೂ ಬಳಸಿ ನಮ್ಮನ್ನು ತೃಪ್ತಿಯಿಂದಇಡಲು ಪ್ರಯತ್ನಿಸುತ್ತಿದ್ದಳು.ನಮ್ಮೆಲ್ಲರ ಮನವನ್ನು ಗೆದ್ದ ಕೆಂಪಿ ನಮ್ಮ ಅಚ್ಚುಮೆಚ್ಚಿನ ಸಂಗಾತಿಯಾಗಿ ಹಲವು ವರಷಗಳು ನಮ್ಮೊಡನೆ ಉಳಿದಳು. ಆದರೆ ಅದೇನು ಗ್ರಹಚಾರವೋ ಇದ್ದಕ್ಕಿದಂತೆ ಒಂದು ದಿನ ಅವಳಿಗೆ ರಸ್ತೆಯಲ್ಲೇ ಉಸಿರುಕಟ್ಟಿತು. ಮಲಗಿದವಳು ಮೇಲೇಳಲೇ ಇಲ್ಲ. ಆಂಬುಲನ್ಸ್ ಗೆ ಬರಹೇಳಿ ತುರ್ತು ಚಿಕಿತ್ಸೆಗೆ ಒಳಗು ಮಾಡಿದರೂ ಏನೂ ಪ್ರಯೋಜನವಾಗಲಿಲ್ಲ. ಅವಳಿಗೆ ದೇಹಕ್ಕಿಂತ ಮನಸ್ಸಿನ ಕಾಯಿಲೆ ಎಂದರು ಅವಳನ್ನುಪರೀಕ್ಷಿಸಿದ ಡಾಕ್ಟರು. ಅಂತೂ ಇಂತೂ ಕೆಂಪಿ ಇನ್ನಿಲ್ಲವಾದಳು. ಅಚ್ಚುಮೆಚ್ಚಿನ ಅತ್ಮೀಯ ಕೆಂಪಿ ಹೋದಳಲ್ಲ ಎಂದು ಅತ್ತೂ ಕರೆದು ಊಟ ನಿದ್ದೆ ಬಿಟ್ಟು ತೊಳಲಿದ್ದಾಯಿತು.ಆದರೇನು ಒಮ್ಮೆ ಹೋದವರು ಮತ್ತೆ ಬಂದಾರೆ? ಹಾಗೆಯೇ ನನ್ನ ಕೆಂಪಿಯೂ . ಎಂದು ಸಮಾಧಾನ ಮಾಡಿಕೊಂಡಾಯಿತು. ಅದೇ ನಕ್ಷತ್ರದಲ್ಲಿ’ಮೆಗೇನ್ ’ರಾಶಿಯಲ್ಲಿ ಹುಟ್ಟಿದ’ನೀಲವ್ವ’ನ ಮುಖ ನೋಡಿ ನಮಗಾಗಿದ್ದ ನೋವನ್ನು ಮರೆಯಲು ಪ್ರಯತ್ನಿಸತೊಡಗಿದೆವು. ಕ್ರಮೇಣ ನೀಲವ್ವ ತನ್ನ ಪ್ರೀತಿಯಿಂದ, ನಿಷ್ಠೆಯಿಂದ , ಸೇವಾ ಮನೋಭಾವದಿಂದ ನಮ್ಮನ್ನು ಬಹುಬೇಗ ಗೆದ್ದಳು. ಕೆಂಪಿಯನ್ನು ಕಳೆದುಕೊಂಡ ನಮ್ಮ ಕೊರಗನ್ನು ಕಡಿಮೆಮಾಡಿದಳು.
ಬರಬರುತ್ತ ನೀಲವ್ವನಿಗೂ ವಯಸ್ಸಗುತ್ತಾ ಬಂದಿತು. ಆದರೂ ನಮಗೆ ಯಾವ ತೊಂದರೆಯಿಲ್ಲದಂತೆ ನೋಡಿಕೊಳ್ಳುತ್ತಿದ್ದಳು. ಒಮ್ಮೆಯೂ ತನಗೆ ಅದು ಬೇಕು ಇದು ಬೇಕು ಎಂದಾಗಲೀ, ತನಗಿರುವ ಕೊರತೆಗಳನ್ನು ಹೇಳಿಕೊಳ್ಳುವುದಾಗಲೀ ಮಾಡುತ್ತಿರಲಿಲ್ಲ.ನಮ್ಮ ಕೆಲಸಗಳಿಗೆ ಅಡ್ಡಿಯಾಗದಂತೆ ನೋಡಿಕೊಳ್ಳುತ್ತಿದ್ದಳು.
ಒಮ್ಮೆ ನಾವು ಲೀಡ್ಸ್ ನಗರದ ಮಂದಿರ ಒಂದರಲ್ಲಿ ಪೂಜೆ ಮಾಡಿಸಲು ಹೋಗುತ್ತಿದ್ದೆವು.ಇದ್ದಕಿದ್ದಂತೆ ನೀಲವ್ವನ ಮುಖ ಕೆಂಪಗಾಯಿತು. ಇದೇನು ಸಂಕಟವೋ ಭಗವಂತ  ಪೂಜೆ ಮಾಡಿಸಲು ತಡವಾಗದೆ ಇದ್ದರೆ ಸಾಕು  ಎಂದು ಯೋಚಿಸುತ್ತಿರುವಾಗಲೇ ನೀಲವ್ವ ತನ್ನ ಸಂಕಟವನ್ನು ಅಡಗಿಸಿಕೊಂಡು ಲವಲವಿಕೆಯಿಂದ ಏನೂ ಆಯಾಸವಿಲ್ಲದೆ ಲೀಡ್ಸನ್ನು ತಲಪಿದಳು.ನಮಗೂ ಅವಳನೋವು ಮರೆತುಹೋಯಿತು. ಪೂಜೆ ಊಟ ಎಲ್ಲ ಮುಗಿದು ಅಲ್ಲಿಂದ ಹಿಂತಿರುಗಿ ಹೊರಡುವಾಗ ಆಗಲೇ ರಾತ್ರೆ ಹನ್ನೊಂದು ಘಂಟೆಯಾಗಿತ್ತು. ರಭಸದಿಂದ ಸುರಿಯುತ್ತಿರುವ ಮಳೆ. ಇನ್ನೇನು ಮನೆ ಬಂದಿತು ಎನ್ನುವಷ್ಟರಲ್ಲೇ ನೀಲವ್ವ ಉಸಿರೆಳೆಯತೊಡಗಿದಳು. ಕಷ್ಟಪಟ್ಟು ಅವಳನ್ನು ಮೆಲ್ಲಗೆ ಅಲ್ಲೇ ’ಹಾರ್ಡ್ ಶೋಳ್ಡರ್’ ನಲ್ಲಿ ಇದ್ದ ಫೋನಿನ ಬಳಿ ಕರೆತಂದಿದ್ದಾಯಿತು.
ಇನ್ನು ನನ್ನಿಂದ ಮುಂದೆಹೋಗಲು ಆಗದು ಎಂದು ಹಟ ಹಿಡಿದ ನೀಲವ್ವನನ್ನು ನೋಡಿ ಎ.ಎ ಆಸ್ಪತ್ರೆಯನ್ನು ಸಂಪರ್ಕಿಸಿ ಅವರಿಗೆ ನೀಲವ್ವನ ಸ್ಥಿತಿಯನ್ನು ವಿವರಿಸಿದ್ದಾಯಿತು. ಅರ್ಧಗಂಟೆಯ ನಂತರ ಬಂದ ಚಿಕಿತ್ಸಕ ನೀಲವ್ವನನ್ನು ಪರೀಕ್ಷಿಸಿ ಅವಳು ಬದುಕುವುದು ಕಷ್ಟ ಎಂದು ತಿಳಿಸಿದ. ಸ್ವಲ್ಪ ಮೊದಲೇ ಅವಳನ್ನು ವೈದ್ಯರ ಬಳಿಕರೆದುಕೊಂಡು ಹೋಗಿದ್ದರೆ ಅವಳು ಇನ್ನೂ ಒಂದು ಹತ್ತಾರು
ವರುಷ ಬದುಕುತ್ತಿದ್ದಳು ಎಂದಾಗ ಅವಳ ಅನಾರೋಗ್ಯವನ್ನು ಉದಾಸೀನ ಮಾಡಿದ ನಮಗೆ ನಾಚಿಕೆಯಾಯಿತು. ಅವಳನ್ನು, ಚಿಕಿತ್ಸಕ ತಂದ ಬಂಡಿಯ ನೆರವಿನಿಂದ ಮನೆಗೆ ಕರೆತಂದದ್ದಾಯಿತು.
ಮರುದಿನ ಅವಳನ್ನು ವಿಶೇಷ ತಜ್ಞ ವೈದ್ಯರಿಗೆ ತೋರಿಸಿದಾಗ
ಅವರು ಈಕೆಯನ್ನು ತುರ್ತು ಶಸ್ತ್ರಚಿಕೆತ್ಸೆಗೆ ಒಳಗು ಮಾಡಿ ಬದುಕಿಸಿದರೂ ಹೆಚ್ಚೆಂದರೆ ಒಂದುವರ್ಷ ಉಳಿಯಬಹುದು ಅಷ್ಟೆ. ಅದಕ್ಕೆ ಖರ್ಚಾಗುವ ಹಣ ಬಹಳ. ಅಪೇಕ್ಷೆಯಿದ್ದರೆ ಪ್ರಯತ್ನ ಮಾಡಬಹುದು ಎಂದರು. ಹಣ ಖರ್ಚುಮಾಡುವ ವಿಷಯದಲ್ಲಿ ನಮ್ಮ ಸ್ವಾರ್ಥ ಅಡ್ದಬಂದಿತು. ಶಸ್ತ್ರಚಿಕಿತ್ಸೆ ಬೇಡವೆಂದು ನಿರ್ಧರಿಸಿದೆವು. ಹಾಗಾಗಿ ನೀಲವ್ವ ಬಹಳದಿನ ಉಳಿಯಲಿಲ್ಲ. ಅವಳನ್ನು ಕಳೆದುಕೊಂಡಮೇಲೆ ನಮಗೆ ಬೇರೆಯಾರನ್ನೂ ಮನೆಗೆ ತರಲು ಮನಸ್ಸಾಗಲಿಲ್ಲ.ಹಾಗಾಗಿ ಸುಮಾರು ಒಂದುವರ್ಷ ಅವಳನೆನಪಿನಲ್ಲೇ ಕಾಲಕಳೆದೆವು.ಆದರೆ ಹಾಗೆ ಎಷ್ಟು ದಿನ ನಡೆದೀತು? ಇನ್ನೊಬ್ಬಳನ್ನು ಕರೆತರಲೇಬೇಕಾಯಿತು.
ಎಲ್ಲ ಕಡೆಯೂ ಸುತ್ತಿ ಹುಡುಕಾಡಿದರೂ   ಮನಸ್ಸಿಗೆ ಒಪ್ಪುವಂತೆ ಯಾರೂ ಸಿಗಲಿಲ್ಲ.  ದಿನಗಳುರುಳುತ್ತಿದ್ದಂತೆ ಒಂದು ದಿನ ಇದ್ದಕಿದ್ದಂತೆ’ಕಿಯಾ’ ನಕ್ಷತ್ರದಲ್ಲಿ’ವೆಂಗ ’ರಾಶಿಯಲ್ಲಿ ಜನಿಸಿದ ನೀಲವ್ವಳೊಬ್ಬಳ ಪರಿಚಯವಾಯಿತು. ಅವಳನ್ನು ನೋಡಿದೊಡನೆ ನಮಗೆ ನಮ್ಮ ನೀಲವ್ವನ ನೆನಪಾಗಿ ಇವಳೆ ಸರಿ ಎಂದು ನಿರ್ಧರಿಸಿ ಮನೆಗೆ ಕರೆತಂದೆವು. ಅವಳೂ ಸಂತೋಷದಿಂದ ನಮ್ಮೊಡನೆ ಬಂದಳು. ನಗುನಗುತ್ತ ನಮ್ಮೊಡನೆ ಇದ್ದಾಳೆ, ಅಷ್ಟೇ ಸಾಕು. ಇವಳನ್ನು ಆ ನಮ್ಮ ನೀಲವ್ವನನ್ನು ಉದಾಸೀನ ಮಾಡಿದಂತೆ ಮಾಡದೆ ಆರೋಗ್ಯವಾಗಿರುವಂತೆ ನೋಡಿಕೊಳ್ಳುವ ನಿರ್ಧಾರವನ್ನು ಮಾಡಿದ್ದೇವೆ.


ಡಾ/ ಸತ್ಯವತಿ ಮೂರ್ತಿ

ಉದಯವಾಣಿ  ದೇಸಿಸ್ವರ ದಲ್ಲಿ ದಿನಾಂಕ 29-05-2021 ರಂದು ಪ್ರಕಟವಾಗಿದೆ

Comments

Popular posts from this blog

ಕವಾಲಿ

ಏಳು ಪಾವನ ಚರಣ /ಏಳು ಪರಮಾ ಕರುಣ

ದೇವಾ ಕರುಣೆಯ ನು ತೋರ ಲಾರೆಯ