ಗರ್ವ ಮುರಿಯಿತು

 

ಸ್ವಾತಂತ್ರ ಯೋಧ, ಮಾದರಿ ರೈತ , ಶಂಕರ, ವಾಣಿಜ್ಯ ವ್ಯವಹಾರ ಕುಶಲ ಚನ್ನಕೇಶವಯ್ಯ, ಪ್ರತಿಭಾನ್ವಿತ ರಂಗನಟ ಶಂಕರಪ್ಪನವರು,

ವೇದ ಬ್ರಹ್ಮ, ವೇದ ರತ್ನಾಕರ ಚನ್ನಕೇಶವ ಅವಧಾನಿ, ಆಸ್ತಿಕ ಬಂಧುಗಳ, ವಿಧ್ಯಾರ್ಥಿಗಳ ಗುರುಗಳು ..... ಹೀಗೆ ಬರೆಯುತ್ತ ಹೋದಷ್ಟೂ ಹಿಗ್ಗುವಂತಹುದು ಅವಧಾನಿಗಳ ವ್ಯಕ್ತಿತ್ವ.

ಇಂತಹವರ  ಜೀವನದಲ್ಲಿ ಅತಿ ಮಹತ್ವದ ಬದಲಾವಣೆಯನ್ನು ತಂದ ಅವರ  ಬಾಲ್ಯದ ಒಂದು ಘಟನೆ.

 

ಬಾಲಕ ಶಂಕರ ಮಾತು ಕಲಿತದ್ದು ಬಹಳ ನಿಧಾನ. ಆದರೆ ಕಲಿತ ಮೇಲೆ ಮಾತು ಅರಳು ಹುರಿದಂತೆ. ಕಂಠವೋ ಕಂಚಿನದು. ಮದುವೆ , ಮುಂಜಿ ಅಥವ ಯಾವುದೇ ಸಮಾರಂಭಗಳಲ್ಲಿ ವೇದದ ಘನಪಾಠ ನಡೆಯುವಾಗ ಶಂಕರ ಪ್ರಾರಂಭಿಸಿದ ಅಂದರೆ ಉಳಿದವರು ಸುಮ್ಮನಾಗಿ ಬರಿ ಕೇಳುಗರಾಗಿ ಬಿಡುತ್ತಿದ್ದರು. ಕಾರಣ  ಅವರಿಗ್ಯಾರಿಗೂ   ಬರುತ್ತಿರಲಿಲ್ಲ ಎಂದಲ್ಲ. ಇವರ ಸ್ಥಾಯಿಯಲ್ಲಿ ಹೇಳುವುದು ಕಷ್ಟವಾಗುತ್ತಿತ್ತು. ಬಹಳ ಬುದ್ಧಿವಂತನಾದ ಶಂಕರನಲ್ಲಿ ಸಹಜವಾಗಿಯೇ ಸ್ವಲ್ಪ ಅಹಂಕಾರ ಮನೆಮಾಡಿತ್ತು. ಪ್ರಾರಂಭಿಕವಾಗಿ ವಿದ್ಯಾಭ್ಯಾಸ ಮುಗಿದಮೇಲೆ ಹೆಚ್ಚಿನ ಕಲಿಕೆಗಾಗಿ ಹಿರಿಯರೊಬ್ಬರ ಬಳಿಗೆ ಹೋದ ಬಾಲಕ ಶಂಕರ. ಗೋತ್ರ ಹೇಳಿ ಅಭಿವಾದಯೇ ಮಾಡಿ ಅವರ ಮುಂದೆ ಕುಳಿತ. ಇಲ್ಲಿ ನಡೆದ ಸಂಭಾಷಣೆಯನ್ನು ಅವಧಾನಿಗಳ ಮಾತಿನಲ್ಲೇ ಹೇಳಿದರೆ ಸ್ವಾರಸ್ಯವಾಗಿರುತ್ತದೆ.

"ಏನಪ್ಪ ನಿನ್ನ ಹೆಸರು?"

"ಶಂಕರ"  ಹುಡುಗಎದೆಯುಬ್ಬಿಸಿ  ಹೇಳಿದ

"ಏನೇನು ಕಲ್ತ್ಕೊಂಡಿದೀಯ?"

"ಎಲ್ಲ ಬರುತ್ತೆ ಗುರುಗಳೆ ಯಾವುದು ಬೇಕಾದ್ರೂ ಕೇಳಿ ಹೇಳ್ತೀನಿ" ಉತ್ಸಾಹದ ಮಾತು

"ಹಾಗೋ ಹಾಗಾದ್ರೆ ರುದ್ರಪಾಠ ಬರುತ್ತೋ ? "

"ಓಹೋ ಬರುತ್ತೆ ಗುರುಗಳೆ"

"ಎಲ್ಲಿ ಹೇಳು ಮತ್ತೆ ನೋಡೋಣ"

ಉತ್ಸಾಹದಿಂದ ಭೇಷ್ ಎನಿಸಿಕೊಳ್ಳುವ ಹಂಬಲದಿಂದ ಬಾಯಿ ತೆಗೆದು ಪ್ರಾರಂಭಿಸಹೋದರೆ ಏನು ಮಾಡಿದರೂ ಒಂದಕ್ಷರವೂ ಬಾರದಾಯಿತು. ಒಂದು ನಿಮಿಷವಾಯಿತು, ಎರಡು ನಿಮಿಷವಾಯಿತು, ಎಷ್ಟು ನೆನಪಿಸಿಕೊಂಡರೂ ಬರುವುದಿಲ್ಲ. ಕಡೆಗೆ ಸೋತು

’ನನಗೆ ಬರುತ್ತೆ ಆದರೆ ಹೇಳೋಕ್ಕಾಗ್ತಾಯಿಲ್ಲ’ ಅಂದ

"ಸರಿ ಹೋಗ್ಲಿ ಪುರುಷಸೂಕ್ತ ಗೊತ್ತೋ?" ಗುರುಗಳ ಪ್ರಶ್ನೆ.

"ಹುಂ, ಗೊತ್ತಿದೆ."

ಪುನಃ ಅದೇ ಪುನರಾವರ್ತನೆ. ಅದೇ ಗೋಳಾಟ.

ಹೋಗಲಿ ’ಶುಕ್ಲಾಂಬರಧರಂ’ ಹೇಳ್ಬಿಡಪ್ಪ ಸಾಕು ಅಂದರು ಗುರುಗಳು

ಅದನ್ನೂ ಹೇಳಲಾರದೆ ಒದ್ದಾಡತೊಡಗಿದ ಶಂಕರ”

"ನನಗೆ ಖಂಡಿತ ಎಲ್ಲ ಬರುತ್ತೆ, ಆದ್ರೆ ಯಾಕೋ ಹೇಳೋಕ್ಹೋದ್ರೆ ಎಲ್ಲ ಮರೆತು ಹೋಗ್ತಾ ಇದೆ, ದಯವಿಟ್ಟು ಕ್ಷಮಿಸಿ" ಅಂತ ತನ್ನ ಅಸಹಾಯಕತೆಯನ್ನು ತೋಡಿಕೊಂಡ, ಕಣ್ಣಲ್ಲಿ ನೀರುತುಂಬಿ ಕೆಳಗುರುಳಲು ಕಾಯುತ್ತಿತ್ತು. ಇನ್ನು ಪರೀಕ್ಷೆ ಸಾಕೆನಿಸಿತೇನೋ ಕೂಡಲೆ ಆ ಹಿರಿಯರು

"ನೋಡಪ್ಪ ಇನ್ಯಾವತ್ತೂ ಎಲ್ಲ ಬರುತ್ತೆ ಅಂತ ಅಹಂಕಾರ ಪಡಬೇಡ, ಈಗ್ಹೇಳು ಎಲ್ಲಬರುತ್ತೆ  ಅಳಬೇಡ" ಅಂತ ತಲೆಯ ಮೇಲೆ ಕೈಯಿಟ್ಟು

ಆಶೀರ್ವದಿಸಿದರಂತೆ.

 "ಆಕೂಡಲೇ ಎಲ್ಲ ನೆನಪಿಗೆ ಬಂದು ಹೇಳುವುದು ಸಾಧ್ಯವಾಯಿತು. ಅವರು ನನ್ನ ಅಚ್ಚುಮಚ್ಚಿನ ಗುರುಗಳಾದರು.ಅವರ ಆ ಪಾಠ ನಾನು ಯಾವತ್ತೂ ಮರೆಯೋಲ್ಲ" ಎಂದು ತಮ್ಮ ಇಳಿವಯಸ್ಸಿನಲ್ಲಿಯೂ ನೆನಪಿಸಿಕೊಳ್ಳುತ್ತಿದ್ದರು. ಅಂದಿನಿಂದ ಕೊನೆಯುಸಿರಿರುವವರೆಗೆ ಅವರು ಒಮ್ಮೆಯೂ ಅಹಂಕಾರದಿಂದ ವರ್ತಿಸಿದ್ದನ್ನು ಯಾರೂ ನೋಡಲಿಲ್ಲ.

 

ಸಾಹಿತ್ಯ ಕ್ಷೇತ್ರದಲ್ಲಿ ಆಗತಾನೆ ಕಾಲಿಡುತ್ತಿದ್ದ ನನಗೆ ಪದೇ ಪದೇ ನನ್ನ ಅವಧಾನಿಗಳ ಉಪದೇಶವೆಂದರೆ " ಅಹಂಕಾರ ಪಡಬಾರದು, ಅಹಂಕಾರ ಬಂತೂಂದ್ರೆ ನಿನ್ನ ಬೆಳವಣಿಗೆ ಮುಗಿಯಿತು ಅಂತ ತಿಳಿ " ಎನ್ನುವುದು. ಅವರ  ಆ ಮಾತು  ಇನ್ನೂ ಕಿವಿಯಲ್ಲಿ ಮೊರೆಯುತ್ತಿರುವಾಗಲೇ ಅವರು ಈ ಲೋಕವನ್ನು ಬಿಡುತ್ತಾರೆಂದು ಕನಸಿನಲ್ಲೂ ಯೋಚಿಸಿರಲಿಲ್ಲ.

 ಎನ್ ಆರ್ ಐ ಕನ್ನಡಬಳಗ  ದಿಂದ ಪ್ರಕಟವಾಗಿದೆ

ಡಾ ಸತ್ಯವತಿ ಮೂರ್ತಿ

Comments

Popular posts from this blog

ದೇವಾ ಕರುಣೆಯ ನು ತೋರ ಲಾರೆಯ

ಕವಾಲಿ

ಹೊಂದಾಣಿಕೆ