ಆಸ್ಟ್ರೇಲಿಯಾ ಪ್ರವಾಸ ಕಥನ
ಆಸ್ಟ್ರೇಲಿಯಾ ಪ್ರವಾಸ ಕಥನ ( ಈ ವಿವರಗಳು ಸುಮಾರು 20 ವರ್ಷಕ್ಕೂ ಹಳೆಯದಾಗಿದ್ದು ಇತ್ತೀಚೆಗೆ ಆಗಿರಬಹುದಾದ ಬದಲಾವಣೆಗಳನ್ನು ಗಣನೆಗೆ ತೆಗೆದುಕೊಂಡಿಲ್ಲ) ಆಸ್ಟ್ರೇಲಿಯಾಕ್ಕೆ ಇದು ನನ್ನ ಮೊದಲ ಪ್ರಯಾಣವೇನೂ ಅಲ್ಲ. ಕಳೆದ ಡಿಸೆಂಬರ್ ನಲ್ಲಿ ಹೋಗಿ ಆರು ವಾರಗಳು ತಂಗಿದ್ದೆ . ಆದರೆ ಈ ಬಾರಿಯ ಪ್ರಯಾಣ ವಿಶೇವಾಗಿತ್ತು.ಮಗ ಡಿಗ್ರಿ ತೆಗೆದುಕೊಳ್ಳುವ ಸಮಾರಂಭವನ್ನು ನೋಡುವುದು ಸಂಭ್ರಮದ ವಿಷಯವಾಗಿತ್ತು. ಈ ಬಾರಿಯ ಪ್ರಯಾಣದಲ್ಲಿ ಮೂರ್ತಿ ಬೇರೆ ನನ್ನ ಜೊತೆಗಿದ್ದರು . ಪ್ರತಿಬಾರಿಯೂ ಅವರ ಕೆಲಸದ ಒತ್ತಡದಿಂದ ನಾನೊಬ್ಬಳೇ ಹೋಗಿ ಬರುವುದಾಗುತಿತ್ತು.ನಿಜವಾದ ಅರ್ಥದಲ್ಲಿ ಅದು ನಮ್ಮ ಪ್ರವಾಸವೇ ಸರಿ.ಮೇ 6 ನೇ ತಾರಿಖು ಬಹಳ ಕಾತರದಿಂದ ಎದುರು ನೋಡುತ್ತಿದ್ದ ದಿನ. ಆಸ್ಟ್ರೇಲಿಯದಲ್ಲಿ ಎಂ ಎಸ್ ಓದಿದ ನಮ್ಮ ಮಗ , ಮೇ ಹತ್ತನೇ ತಾರೀಖು ಶಾಸ್ತ್ರೋಕ್ತವಾದ ರೀತಿಯಲ್ಲಿ ಪದವಿ ಸ್ವೀಕರಿಸುವವನಿದ್ದ.ಯಾವುದೇ ತಂದೆ ತಾಯಿಗಳ ಜೀವನದ ಮಹತ್ವದ ದಿನಗಳಲ್ಲಿ ಒಂದು. ಆ ಸಮಾರಂಭಕ್ಕೆ ನಾವೂ ಬರಲೇಬೇಕೆಂಬ ಒತ್ತಾಯವೂ ಇದ್ದು ನಮಗೂ ಹೋಗುವ ಆಸೆ ತೀವ್ರವಾಗಿದ್ದುದರಿಂದ ಪ್ರಯಾಣಕ್ಕೆ ಸಿದ್ಧರಾಗಿದ್ದೆವು. 6 ನೇ ತಾರೀಖು ಶನಿವಾರ ಬೆಳಗ್ಗೆ 9:30 ಕ್ಕೆ ಹೊರಡುವ ಸಿಂಗಪೂರ್ ಏರ್ಲೈನ್ಸ್ ಹತ್ತಿ ಆಸ್ಟ್ರೇಲಿಯಾಕ್ಕೆ ಹೊರಟೆವು.ಗೋಳದ ಒಂದು ದಿಕ್ಕಿನಿಂದ ಇನ್ನೊಂದು ದಿಕ್ಕಿಗೆ ಸರ...