ಈ ಪರಿಯ ಸೊಬಗು
ಈ ಪರಿಯ ಸೊಬಗು ಸುಂದರವಾದ ನಗುನಗುತ್ತಿರುವ ಮುಖ.ಮೈ ತುಂಬುವ ಬಿಳಿಯುಡುಗೆ. ಬೆನ್ನಿಗೆ ಅಂಟಿಕೊಂಡಂತೆ ಎರಡು ರೆಕ್ಕೆಗಳು. ಇದು ಬಾಲ್ಯದಿಂದಲೂ ನನ್ನಲ್ಲಿ ಉಂಟಾದ ಪರಿಯ ಕಲ್ಪನೆ.ಅಮ್ಮ ನನಗೆ ’ಪರಿ’ಗಳ ಪವಾಡಗಳನ್ನು ಅಗಾಗ್ಗೆ ಹೇಳುತ್ತಿದ್ದುದೇ ಇದಕ್ಕೆ ಕಾರಣ.ಪ್ರಾಪಂಚಿಕ ತಿಳುವಳಿಕೆ ಕಡಿಮೆ ಇದ್ದಾಗಿನ ವಯಸ್ಸು. ’ಪರಿ’ ಯಾವಾಗಲಾದರೂ , ಹೇಗೆ ಬೇಕಾದರೂ ಬಂದು ಪವಾಡವೆಸಗುವಳೆಂದು ಸಂಪೂರ್ಣ ನಂಬಿದ್ದ ನಾನು ಕುಳಿತಾಗ , ನನ್ನ ಪಕ್ಕ ಸ್ಥಳ ಬಿಟ್ಟು ಮುದುರಿ ಕುಳಿತರೆ , ಮಲಗಿದಾಗ ನನ್ನ ಹಾಸಿಗೆಯ ಒಂದು ಬದಿಯನ್ನು ಪರಿಗಾಗಿ ಮೀಸಲಿಡುತ್ತಿದ್ದೆ. ಅಮ್ಮನ ಪ್ರಭಾವಕ್ಕೆ ಬಾಲ್ಯದಿಂದಲೂ ಒಳಗಾಗಿದ್ದ ನನ್ನಲ್ಲಿ ಅಮ್ಮನ ಕಲ್ಪನೆ ನಂಬಿಕೆಗಳೇ ಬೆಳೆದು ಉಳಿದಿದ್ದವು ಎಂದರೆ ತಪ್ಪಾಗಲಾರದು.ಅಮ್ಮನಂತೆ ನನಗೂ ಪವಾಡಗಳಲ್ಲಿ ನಂಬಿಕೆ. ಆದರೆ ನನ್ನ ಅಜ್ಜಿ ಹಾಗಲ್ಲ.ಆಕೆ ಇದಕ್ಕೆ ತದ್ವಿರುದ್ಧ.’ ಜೀವನ ಎಂದರೆ ಮಂತ್ರಕ್ಕುದುರುವ ಮಾವಿನ ಕಾಯಲ್ಲ.ಬಂದ ಕಷ್ಟ ಸುಖಗಳನ್ನು ಬಂದಂತೆ ಸ್ವೀಕರಿಸಿಎದುರಿಸಬೇಕು.ಅಂದಂದಿನ ಜೀವನವನ್ನು ಎದುರಿಸಿ ಮರುದಿನದ ಜೀವನಕ್ಕೆ ಸಿದ್ಧವಾಗಬೇಕು. ಅದು ಬಿಟ್ಟು ನೆನ್ನೆಯ ಅಥವ ನಾಳೆಯ ಚಿಂತೆಯಲ್ಲಿ ಮುಳುಗಿ ನಾವು ಬಯಸಿದ್ದನ್ನು ಕೊಡಬೇಕಾದರೆ ಯಾವುದೋ ಅವ್ಯಕ್ತ ಶಕ್ತಿಯೊಂದು ಬರಬೇಕು , ಎಂದು ಕೈಕಟ್ಟಿ ಕೂರುವುದು ಸರಿಯಲ್ಲ. ಜೀವನದ ವಾಸ್ತವತೆಯನ್ನು ಅರಿತು ಬದುಕಬೇಕು.---- ಇವು ಆಕ...