ದಾರಿ ದರ್ಪಣ
ಈ ಮಾತು ನಡೆದು ಈಗಾಗಲೇ ಕೆಲವು ವರ್ಷಗಳೇ ಉರುಳಿವೆ. ಲಂಡನ್ ನಗರಕ್ಕೆ ಸಮೀಪದಲ್ಲಿರುವ ,ಸ್ವಿಂಡನ್ ನಗರದಲ್ಲಿ ನಮ್ಮ ಆಪ್ತರಾದ ಶ್ರೀನಿವಾಸ ಹಾಗೂ ಗೌರಿ ವಾಸವಾಗಿದ್ದಾರೆ. ಅಲ್ಲಿಗೆ ನಮ್ಮ ಮನೆಯಿಂದ 3-4 ಗಂಟೆಗಳ ರಸ್ತೆ ಕಾರಿನಲ್ಲಿ.ಅವರ ಮನೆಯಲ್ಲಿ ಸತ್ಯನಾರಾಯಣನ ಪೂಜೆ . ಬೆಳಗ್ಗೆ ಹೋಗಿ ಮತ್ತೆ ಸಂಜೆಗೆ ಹಿಂತಿರುಗುವುದೆಂದರೆ ಸ್ವಲ್ಪ ಆಯಾಸದ ಕೆಲಸವೇ! ಅಲ್ಲಿ ಮೂರ್ತಿಯೇ ಪೂಜೆ ಮಾಡಿಸುವವರಿದ್ದರಿಂದ ಡ್ರೈವ್ ಮಾಡಿದುದೇ ಅಲ್ಲದೆ , ಪೂಜೆ ಮಾಡಿಸಲು ಒಂದೇ ಸಮನೆ ಕುಳಿತಿರಬೇಕಾಗುತ್ತದೆ . ಆಮೇಲೆ ಮತ್ತೆ ಹಿಂತಿರುಗಿ ಬರುವುದು ದೂರದ ಮಾತು. ಆದ್ದರಿಂದ ನಾನೂ ಮೂರ್ತಿ ಹಿಂದಿನ ದಿನವೇ ಹೊರಡುವುದೆಂದು ನಿರ್ಧರಿಸಿದೆವು. ಶುಕ್ರವಾರ ಸಂಜೆ ನಾನು ಕೆಲಸ ಮುಗಿಸಿ ಮನೆಗೆ ಬರುವ ವೇಳೆಗೆ ಮೂರ್ತಿ ತಯಾರಾಗಿ ಕುಳಿತಿದ್ದರು. ಅವರು ಈಗಾಗಲೇ ಕೆಲಸದಿಂದ ನಿವೃತ್ತರಾಗಿದ್ದರಲ್ಲ! ಹೀಗೆ ಹೊರಗೆ ಹೋಗುವ ಅವಕಾಶಗಳು ಅವರಿಗೆ ತುಂಬ ಬೇಕಾದವುಗಳೇ ಆಗಿದ್ದವು. ನಾನೂ ಕೆಲಸದಿಂದ ಬಂದೊಡನೆಯೇ ಕೈಕಾಲು ಮುಖ ತೊಳೆದು ಬೇರೆ ಸೀರೆಯುಟ್ಟು ಮುಖಕ್ಕೆ ಒಂದಿಷ್ಟು ಪೇಂಟ್ ಬಳಿದು ಸಿದ್ಧವಾಗಿ ನಿಂತೆ. ಗಂಟೆ ಆಗಲೇ 6-15 ತೋರಿಸುತ್ತಿತ್ತು.ನಾವಿರುವುದು ಮಾಂಚೆಸ್ಟರ್ ಗೆ ಸೇರಿದ ಒಂದು ಬಡಾವಣೆಯಲ್ಲಿ.”ಆಶ್ಟನ್ ಅಂಡರ್ ಲೈನ್" ಅದರ ಹೆಸರು. ಇಂಗ್ಲೆಂಡಿನ ಬಡವಾಣೆಗಳ ಕೆಲ ಹೆಸರುಗಳಂತೂ ಬಹಳ ವಿಚಿತ್ರವಾದವುಗಳು. ಕನ್ನಡಕ್ಕೆ ಅನುವಾದ ಮಾಡಿದಾಗ ಕೆಲವಂತೂ ತೀರ ಹಾಸ್ಯಾಸ್ಪದವಾಗಿ ಕಾಣುತ್ತವೆ. "ಲೈನ್ ನದಿಯ ಕೆಳಗಿನ ಬೂದಿಗುಡ್ಡೆ( Ashton Under Lyne)", "ಹಳೆ ಹಂದಿ(Oldaham)", "ವರದಕ್ಷಿಣೆ ರಸ್ತೆ ( Dowry Street)"ಇನ್ನೂ ಏನೇನೋ. ಇರಲಿ ನನ್ನ ಲೇಖನದ ವಸ್ತು ಅದಲ್ಲ . ಆದ್ದರಿಂದ ಹೆಚ್ಚು ವಿಶ್ಲೇಶಣೆಗೆ ಹೋಗುವುದಿಲ್ಲ. ಮನೆಯಿಂದ ಹೊರಡುವಾಗ ಸ್ವಾಭಾವಿಕವಾಗಿಯೆ ಇರುವ ಕಾಳಜಿಯಿಂದ ಮನೆಯನ್ನು ಸಂಪೂರ್ಣವಾಗಿ ಒಮ್ಮೆ ಚೆಕ್ ಮಾಡಿ ಗ್ಯಾಸ್ ಒಲೆ ಆರಿಸಿದ್ದಾಗಿದೆ, ಲೈಟ್ ಯಾವುದೂ ಉರಿತಾ ಇಲ್ಲ, ಸೆಂಟ್ರಲ್ ಹೀಟಿಂಗ್ ಆಫ಼್ ಆಗಿದೆ, ಎಲ್ಲ ಸರಿಯಾಗಿದೆ ಎಂದು ಖಾತ್ರಿ ಮಾಡಿಕೊಂಡು ,
ಕೊಂಡು ಹೋಗಬೇಕಾಗಿದ್ದ ವಸ್ತುಗಳನ್ನೆಲ್ಲ ಮುತುವರ್ಜಿಯಿಂದ ಇಟ್ಟುಕೊಂಡು ಮನೆಗೆ ಬೀಗ ಹಾಕಿ ಕಾರಿನಲ್ಲಿ ಕುಳಿತೆ. ಕಾರ್ ಸ್ಟಾರ್ಟ್ಮಾಡಿಯಾಯಿತು.ಮನೆಯಿಂದ ನಾಲ್ಕು ಗಜ ಮುಂದೆ ಹೋಗಿ ಎಡಕ್ಕೆ ತಿರುಗಿ ಕಾರು ನಿಲ್ಲಿಸಿದರು ಮೂರ್ತಿ. ಪ್ರಶ್ನಾರ್ಥಕವಾಗಿ ಅವರ ಕಡೆ ನೋಡುವ ವೇಳೆಗಾಗಲೇ ಅವರು ಕಾರಿನಿಂದಿಳಿದು ಮನೆಯಕಡೆಗೆ ಹೊರಟಿದ್ದರು. ಅವರು ಹಿಂತಿರುಗಿ ಬಂದಮೇಲೆ ತಿಳಿಯಿತು , ನಾವು ಹೋಗಬೇಕಾಗಿದ್ದ ಮನೆಯ ಅಡ್ರೆಸ್ಸನ್ನು ತರದೇ ಬಂದಿದ್ದರು. ಸದ್ಯ ಈಗಲೇ ನೆನಪಿಗೆ ಬಂತಲ್ಲ ಎಂದು ನಿಟ್ಟುಸಿರು ಬಿಟ್ಟು ಬೆಲ್ಟ್ ಹಾಕಿ ಕುಳಿತಿದ್ದಾಯಿತು. ಬೆಲ್ಟ್ ಹಾಕದೇ ಇದ್ದರೆ ಫೈನ್ ಬೀಳುವ ಹೆದರಿಕೆ. ಇದು ಎಲ್ಲರಿಗೂ ತಿಳಿದಿರುವ ವಿಚಾರ. ಎಲ್ಲ ಸರಿಯಾಗಿದೆ , ಇನ್ನೇನೂ ಮರೆತಿಲ್ಲ ಎಂದು ಖಾತ್ರಿ ಮಾಡಿಕೊಂಡು ಕಾರ್ ಸ್ಟಾರ್ಟ್ ಮಾಡಿದ್ದಾಯಿತು.ಯಾವ ರೀತಿಯ ವಿಘ್ನವೂ ನಮ್ಮ ಪ್ರಯಾಣವನ್ನು ಬಾಧಿಸದೆ ಇರಲಿ ಎಂದು " ಆಪದಾಮಪ ಹರ್ತಾರಂ ದಾತಾರಂ ಸರ್ವ ಸಂಪದಾಂ........." ಶ್ಲೋಕವನ್ನು ಹೇಳಿ ಮುಗಿಸಿದೆ. ಅಂತೂ ಪ್ರಯಾಣ ಸುಖಕರವಾಗಿ ಸಾಗಿತ್ತು.ಮಧ್ಯೆ ಮಧ್ಯೆ ಟ್ರಾಫಿಕ್ ಹಾವಳಿಯಿಂದ ಕಾರು ನಿಂತೂ ನಿಂತೂ ಪ್ರಯಾಣ ಮಾಡಬೇಕಾಗಿಬಂದರೂ ಯಾವ ತೊಂದರೆಯೂ ಇಲ್ಲದೆ ಸ್ವಿಂಡನ್ ನಗರದ ಬಳಿಗೆ ಬಂದೆವು. ಇದುವರೆವಿಗೆ ನಿಮಗೆ ಹೇಳದ ಒಂದುವಿಷಯವನ್ನು ಹೇಳಬೇಕು. ನಮ್ಮ ವಿಜ್ಞಾನ ಎಷ್ಟು ಬೆಳೆದಿದೆಯೆಂದರೆ ಎಲ್ಲರೂ ಆಶ್ಚರ್ಯ ಪಡುವಂತಹುದು. ಆದರೂ ನಾವು ದಿನನಿತ್ಯದಲ್ಲಿ ಅವನ್ನೆಲ್ಲ ಸಹಜವೇ ಎನ್ನುವ ಹಾಗೆ ಸ್ವೀಕರಿಸಿರುವುದೇ ಅಲ್ಲ, ಅವೆಲ್ಲ ನಮ್ಮ ಹಕ್ಕು ಎನ್ನುವಷ್ಟು ಮಟ್ಟಿಗೆ ,ಅದಕ್ಕೆ ಹೊಂದಿಕೊಂಡು ಬಿಟ್ಟಿದ್ದೇವೆ. ಅದಕ್ಕಾಗಿ ಆಶ್ಚರ್ಯ ತೋರಿಸಿ ಶ್ಲಾಘಿಸುವ ಘಟ್ಟವನ್ನು ಮೀರಿಬಿಟ್ಟಿದ್ದೇವೆ. ಮನುಷ್ಯನ ಯಾವುದೇ ಆವಿಷ್ಕಾರವೂ ನಮ್ಮಲ್ಲಿ ಆಶ್ಚರ್ಯವನ್ನುಂಟುಮಾಡುವ ಶಕ್ತಿಯನ್ನು ಕಳೆದುಕೊಂಡುಬಿಟ್ಟಿವೆ.ಒಂದುವೇಳೆ ಯಾರಾದರೂ ’ ಅಲ್ಲರೀ ನೋಡಿ ಈ ವಿಜ್ಞಾನ ಎಷ್ಟು ಬೆಳೆದುಬಿಟ್ಟಿದೆ ಶೂಸ್ ಗಳನ್ನ ತೊಳೆಯೋಕ್ಕೂ ಯಂತ್ರವೊಂದನ್ನು ತಂದಿದ್ದಾರಂತೆ’ ಅಂದರೆ ಅಯ್ಯೋ ಈಗೇನು ಬಿಡ್ರಿ. ಎಲ್ಲ ಬೆರಳತುದಿಯಲ್ಲಿ ಸಿಗುವ ಹಾಗಿದೆ. ಇಲ್ಲಿರೋ ನಾವು ದೂರದ ಅಮೆರಿಕ ಅಥವ ಇನ್ನಾವುದೇ ದೇಶದಲ್ಲಿರುವವರನ್ನು ನೋಡಿ ಮಾತನಾಡುತ್ತೇವೆ ಅಂದಮೇಲೆ ಇದೆಲ್ಲ ಏನ್ಮಹಾ ಅಂದು ಮಾತಿನಲ್ಲಿ ತೇಲಿಸಿ ಅದಕ್ಕೆ ಗಮನವನ್ನೂ ಕೊಡದೆ ಮುಂದೆ ನಡೆಯುತ್ತೇವೆ, ಅದು ಬೇರೆ ವಿಚಾರ.
ಮನುಷ್ಯನ ಬುದ್ಧಿಮತ್ತೆಯಿಂದ ಸೃಷ್ಟಿಸಿದ ಆಶ್ಚರ್ಯಗಳಲ್ಲಿ ನಮ್ಮ ’ನೇವಿಗಟರ್ರೂ’ ಒಂದು . ಕಾರಿನಲ್ಲಿ ಕುಳಿತು ಮ್ಯಾಪುಗಳನ್ನು ಹಿಡಿದು ಹುಡುಕುವ ಫಜೀತಿಯಾಗಲೀ , ರಸ್ತೆಯಲ್ಲಿ ಅಲ್ಲಲ್ಲಿ ಸಿಕ್ಕುವ ಸರ್ವೀಸ್ ಸ್ಟೇಷನ್ ಗಳಲ್ಲಿ ಕಾರನ್ನು ನಿಲ್ಲಿಸಿ ಕಂಡ ಕಂಡವರನ್ನು ರಸ್ತೆಗಾಗಿ ಕೇಳುವುದಾಗಲೀ ಇದಾವುದರ ಅಗತ್ಯವೂ ಇರದಂತೆ ನಮಗೆ ನಮ್ಮ ದಾರಿಯುದ್ದಕ್ಕೂ ಜೊತೆಜೊತೆಯಾಗಿ ನಡೆದು ನಮ್ಮ ಅಪೇಕ್ಷಿತ ಸ್ಥಳಕ್ಕೆ ಸುಖವಾಗಿ ಕರೆದುಕೊಂಡುಹೋಗುವ ಗೆಳೆಯ "ನೇವಿಗೇಟರ್".
ಮೂರ್ತಿ ಈಗಲೂ ಒಮ್ಮೊಮ್ಮೆ ನೆನಪಿಸಿಕೊಳ್ಳುತ್ತಾರೆ, ಈ ದೇಶಕ್ಕೆ ಬಂದ ಹೊಸದರಲ್ಲಿ ಅವರ ಗೆಳೆಯರು ಲಂಡನ್ ನಗರಕ್ಕೆ ಬಂದು ರಸ್ತೆ ತಪ್ಪಿ ಮನೆಗೆ ಫೋನ್ ಮಾಡಿ ಮಾರ್ಗದರ್ಶನವನ್ನು ಕೇಳುತ್ತಿದ್ದುದನ್ನು!
ಈ ನೇವಿಗೇಟರ್ ಬಂದು ಎಲ್ಲರ ಆತಂಕ ಚಿಂತೆಗಳನ್ನು ದೂರಮಾಡಿದೆ. ದಾರಿ ತಪ್ಪಿ ಹೋಗುವ ಭಯವನ್ನು ದೂರ ಮಾಡಿರುವ ಆಪ್ತಮಿತ್ರನೆಂದರೂ ತಪ್ಪಾಗಲಾರದು ಇಂಗ್ಲೆಂಡಿನಂತಹ , ಯಾಕೆ? ಪ್ರಪಂಚದ ಯಾವುದೇ ಮುಂದುವರಿದ ದೇಶಗಳಲ್ಲಿ ( ಇತ್ತೀಚಿನ ಇಂಡಿಯಾವೂ ಸೇರಿದಂತೆ) ಒಂದು ಬಾರಿ ರಸ್ತೆ ತಪ್ಪಿದರೆ ಮತ್ತೊಂದು ಸಾರೆ ಅದೇ ರಸ್ತೆಗೆ ಬರಲು ಗಂಟೆಗಳೇ ಹಿಡಿದರೂ ಹಿಡಿದೀತು. ಕಾರಣ ’ಒನ್ ವೇ’ , ಒಮ್ಮೆ ಹೋದವರು ಹಿಂತಿರುಗುವಂತಿಲ್ಲ. ಸ್ಮಶಾನಕ್ಕೆ ಹೋದ ಹೆಣ!
ಅಂತೂ ಈ ಜಂಜಾಟಗಳನ್ನೆಲ್ಲ ತಪ್ಪಿಸಲು ನಮ್ಮ ಸಹಪ್ರಯಾಣಿಕನಾಗಿ , ನಮ್ಮ ಮಿತ್ರನಾಗಿ ಅವತರಿಸಿರುವುದೇ ಈ ನಮ್ಮ ’ನೇವಿಗೇಟರ್’ , ನಮ್ಮ ಮನೆಯ ನೇವಿಗೇಟರ್ ಗೆ ನಾನು "ತಿಮ್ಮಿ" ಎಂದು ನಾಮಕರಣ ಮಾಡಿದ್ದೇನೆ. ಕಾರಣ ಇದರಲ್ಲಿ ಅಡಗಿರುವುದು ಒಂದು ಹೆಣ್ಣು ಧ್ವನಿ. ಜೀವರಹಿತ ವಸ್ತುಗಳಿಗೂ ನಾಮಕರಣ ಮಾಡಿ ಅವಗಳನ್ನೂ ಜೀವ ಇರುವ ಪ್ರಾಣಿಗಳಂತೆ ಗ್ರಹಿಸುವುದು ನನ್ನ ಸ್ವಭಾವ. ಯಾವುದೇ ವಸ್ತುವನ್ನೂ ಜೀವಂತವೆಂದು ಗಣಿಸುವವಳು ನಾನು. ಅದಕ್ಕಾಗಿ ಇನ್ನುಮೇಲೆ ತಿಮ್ಮಿ ಎಂದೇ ಪ್ರಯೋಗಿಸುತ್ತೇನೆ. ನಾನು ಕಾರಿನಲ್ಲಿ ಕುಳಿತ ತಕ್ಷಣ ತಿಮ್ಮಿಯನ್ನು ಸರಿಯಾಗಿ ಪ್ರತಿಷ್ಟಾಪಿಸಿ ಅವಳಿಗೆ ನಾವು ಹೋಗಬೇಕಾದ ಸ್ಥಳದ ವಿಳಾಸವನ್ನು ಕೊಟ್ಟು , ಅವಳಿಗೆ ಅದು ಅರ್ಥವಾಗಿದೆ ಎಂದು ಖಾತ್ರಿ ಮಾಡಿಕೊಂಡದ್ದೂ ಆಯಿತು. ನಮ್ಮ ’ತಿಮ್ಮಿ’ ಹೆಸರೇ ಹೇಳುವಂತೆ ಆಧುನಿಕ ಅಲಂಕಾರ ಮಾಡಿಕೊಂಡ ಅಪ್ಟುಡೇಟ್ ಅಮ್ಮಯ್ಯ ಅಲ್ಲ. ಮಂದ ಬುದ್ಧಿಯ ಅಲ್ಪ ತಿಳುವಳಿಕೆಯ ಹಳ್ಳಿ ಹೆಣ್ಮಗಳು. ಹೀಗಾಗಿ ಅವಳಿಗೆ ಪ್ರತಿ ಮನೆಯ ಬಳಿಗೆ ಹೋಗುವ ತಿಳುವಳಿಕೆಯಿಲ್ಲ. ಏನೋ ಹೆಚ್ಚು ಕಮ್ಮಿ ಯಾವ ವಿಳಾಸವನ್ನು ಕೊಟ್ಟಿರುತ್ತೇವೆಯೋ ಆ ಮನೆಯ ಪ್ರದೇಶಕ್ಕೆ ಕರೆದೊಯ್ಯುತ್ತಿದ್ದಳು. ಆದ್ದರಿಂದಲೇ ಅವಳ ಹೆಸರು ತಿಮ್ಮಿ!
ಅದಿರಲಿ ಮುಂದೆ ಓದಿ.
ಸ್ವಿಂಡನ್ ನಗರದ ಹೊರಗಣ ರಸ್ತೆಯವರೆಗೆ ಅಡ್ಡಿಯಿರಲಿಲ್ಲ. ಅದೆಲ್ಲ”ಮೋಟರ್ ವೇ’ ಅಲ್ಲಿಂದ ಮುಂದಕ್ಕೆ
"ಎಡಕ್ಕೆ ತಿರುಗಿ, ಬಲಕ್ಕೆ ತಿರುಗಿ, ಮುಂದಿರುವ ವೃತ್ತದ ಮೂರನೇ ದಾರಿಯಲ್ಲಿ ಹೊರಕ್ಕೆ ಬನ್ನಿ"...... ಇತ್ಯಾದಿ. ತಿಮ್ಮಿಯ ನಿರ್ದೇಶನ ಮುಂದುವರಿದಿತ್ತು. ಅವಳನ್ನೆ ಅನುಸರಿಸಿ ಹೋಗುತ್ತಿದ್ದ ನಮಗೆ ಬರಬರುತ್ತ ಸ್ವಲ್ಪ ಗಾಬರಿಯಾಗತೊಡಗಿತು. ಕಾರಣ ಅವಳು ಕರೆದುಕೊಂಡು ಹೋಗುತ್ತಿದ್ದ ರಸ್ತೆಯ ಅಕ್ಕಪಕ್ಕದಲ್ಲಿ ಬರೇ ಹೊಲಗಳು. ಒಂದಾದರೂ ಮನೆಯ ಸುಳಿವಿಲ್ಲ. ಯಾವುದೋ ರೈತನ ಹೊಲದೊಳಕ್ಕೆ ಕರೆದುಕೊಂಡುಹೋಗುವಂತಿತ್ತು. ನಾನಂತೂ ದತ್ತಾತ್ರೇಯನ ಜಪಕ್ಕೆ ಪ್ರಾರಂಭಿಸಿದೆ. ಮೂರ್ತಿಗೂ ಮನಸ್ಸಿನಲ್ಲೇ ಅಳುಕು. ಆದರೆ
”ಬಿಸಿತುಪ್ಪ’’! ಹೇಳಿದರೆ ಎಲ್ಲಿ ನನ್ನ ಗಾಬರಿ ಹೆಚ್ಚಾಗುತ್ತದೋ ಎಂಬ ಅಂಜಿಕೆ ಒಂದೆಡೆ, ಹೇಳದಿದ್ದರೆ ರಸ್ತೆಯನ್ನು ಕಳೆದುಕೊಂಡು ಪರದಾಡಬೇಕಲ್ಲ, ಎಂಬ ಆತಂಕ. ಆದರೂ ಹಿಂದಕ್ಕೆ ಬರಲು ದಾರಿಯಿಲ್ಲದೆ ಇದ್ದ ಕಾರಣ ಕಾರನ್ನು ಮುಂದಕ್ಕೇ ಓಡಿಸುತ್ತಿದ್ದರು. ಮೂರ್ತಿ ಕಾರಿನ ಬಾಗಿಲುಗಳನ್ನು ಭದ್ರಪಡಿಸಿ ಒಳಗಿನಿಂದ ಬೀಗ ಹಾಕಿರುವುದನ್ನು ಖಚಿತಮಾಡಿಕೊಂಡರು. ಮುಂದೆ ಮುಂದೆ ಹೋಗುತ್ತಿದ್ದಂತೆ ತಿಮ್ಮಿಯ ಎಡ ಬಲಗಳ ಆದೇಶ ಸಾಗಿಯೇ ಇತ್ತು. ತನ್ನ ಮಾರ್ಗದರ್ಶನವನ್ನು ಮುಂದುವರಿಸಿದ ತಿಮ್ಮಿ ಮತ್ತೆ ಬಲಕ್ಕೆ ತಿರುಗಿ ಎಂದಳು. ಒಂದಿನಿತೂ ಬೆಳಕಿರದ ಕಗ್ಗತ್ತಲೆ, ಇಂಗ್ಲೆಂಡಿನ ಡಿಸೆಂಬರ್ ಅಂತ್ಯದ ರಾತ್ರಿಯನ್ನು ಕೇಳಬೇಕೆ? ಕಣ್ಣಿಗೆ ಬೆಳಕು ಎಂದರೆ ಕಾರಿನ ಹೆಡ್ಲೈಟ್ ನಿಂದ ಬಂದದ್ದೇ. ಮೂರ್ತಿ ಅಜ್ಞಾಧಾರಿ ನಾಗನಂತೆ ಗಾಡಿಯನ್ನು ಬಲಕ್ಕೆ ಇನ್ನೇನು ತಿರುಗಿಸಬೇಕು! ಅವರ ಚುರುಕು ಕಣ್ಣುಗಳು ಮುಂದಿದ್ದ ಬೇಲಿಯತ್ತ ಹೊರಳಿದವು. ಅಲ್ಲಿ ಮುಂದೆ ಎಲ್ಲೂ ರಸ್ತೆಯಿಲ್ಲ.!
ಅದೊಂದು ಹೊಲದೊಳಕ್ಕೆ ಹೋಗುವ ದಾರಿ ಅಷ್ಟೆ. ಯಾವುದೋ ’ಫಾರ್ಮ್’ ಇರಬೇಕು.ತಕ್ಷಣ ಕಾರಿಗೆ ಬ್ರೇಕ್ ಹಾಕಿದರು.
ಈಗೇನು ಮಾಡುವುದು? ನಮಗೆ ಮಾರ್ಗ ತೋರಿಸುವ ತಿಮ್ಮಿಯೇ ಮಾರ್ಗ ತಪ್ಪಿದರೆ? ಬೇಲಿಯೇ ಎದ್ದು ಹೊಲವನ್ನು ಮೇಯ್ದರೆ? ಹರ ಕೊಲ್ಲಲ್ ಪರ ಕಾಯ್ವನೇ? ಹೋಗಬೇಕಾಗಿದ್ದ ಮನೆಯ ವಿಳಾಸವೊಂದನ್ನು ಬಿಟ್ಟರೆ ನಮಗೆ ಇನ್ಯಾವ ಮಾರ್ಗವೂ ಇಲ್ಲ. ದಾರಿಯನ್ನು ತೋರಿಸುವ ಯಾವ ಸೂಚಕ ಫಲಕಗಳನ್ನೂ ನಿರೀಕ್ಷಿಸುವುದು ಕಠಿಣವಾಗಿತ್ತು. ಉಳಿದದ್ದು ಒಂದೇ ದಾರಿ ’ಸಂಕಟ ಬಂದಾಗ ವೆಂಕಟ ರಮಣ’ ದತ್ತಾತ್ರೇಯನಲ್ಲಿ ಬಹಳ ನಂಬಿಕೆ ಇರುವ ನಾನು ನಮ್ಮನ್ನು ಈ ಕಷ್ಟದಿಂದ ಪಾರುಮಾಡಬೇಕೆಂದು ಮೊರೆಯಿಟ್ಟೆ. ಹೇಳದಿದ್ದರೂ ಮನಸ್ಸಿನಲ್ಲೇ ಮೂರ್ತಿಯೂ ಅವರ ಕೇಶವನನ್ನು ಕೇಳಿಕೊಂಡಿರಲೇ ಬೇಕು. ಆ ನಿರ್ಜನವಾದ ಕತ್ತಲೆಯ ಪ್ರದೇಶದಲ್ಲಿ ಯಾರಾದರೂ ನಮ್ಮನ್ನು ಕೊಲೆಮಾಡಿ ಎಸೆದು ಹೋಗಿದ್ದರೂ ಕೇಳುವವರಿರಲಿಲ್ಲ. ಸುಮಾರು ಒಂದು ಹತ್ತು ನಿಮಿಷಗಳು ಕಳೆದಿರಬೇಕು.
ಇದ್ದಕ್ಕಿದ್ದಂತೆ ಒಂದು ವಾಹನ ನಮ್ಮ ಕಾರಿಗಿಂತ ಸ್ವಲ್ಪ ಮುಂದೆ ಹೋಗಿ ನಿಂತಿತು. ಸಧ್ಯ ಯಾರೋ ಸಿಕ್ಕಿದರಲ್ಲ ಕೇಳೋಕ್ಕೆ ಅಂತ ನಾನು, ಮೂರ್ತಿ ಬೇಡ ಬೇಡವೆಂದು ಕೂಗುತ್ತಿದ್ದರೂ ಕಾರಿನಿಂದ ಇಳಿಯಲು ಸಿದ್ಧಳಾದೆ. ಅಷ್ಟರಲ್ಲಿ ಆ ವ್ಯಕ್ತಿಯೇ ನಮ್ಮ ಕಾರಿನಬಳಿ ಬಂದ. ಇದ್ದಕಿದ್ದಂತೆ ಹೆದರಿಕೆ ಉಂಟಾಗಿ ನಮ್ಮಿಬ್ಬರ ಹೃದಯ ಬಾಯಿಗೆ ಬರತೊಡಗಿತ್ತು. ಇನ್ನೇನು ಕಾದಿದೆಯೋ ಎಂದು ಉಸಿರು ಬಿಗಿಹಿಡಿದು ಕುಳಿತೆವು. ಸೀದ ಬಂದವನೆ ಕಿಟಕಿಯನ್ನು ತೆಗೆಯಲು ಹೇಳಿದ. ವಿಧಿಯಿರದ ಮೂರ್ತಿ ಹೆದರುತ್ತಲೇ ಮುಂದಿನ ಕಿಟಕಿಯನ್ನು ಕೊಂಚವೇ ತೆರೆದರು. ಅವನು "ಆರ್ ಯು ಓಕೆ? ಅಂದ. ಈಗ ಮೂರ್ತಿಗೆ ಕೊಂಚ ಧೈರ್ಯ ಬಂದಿತು. ನಾವು ರಸ್ತೆ ತಪ್ಪಿ ನಿಂತಿರುವುದನ್ನು ವಿವರಿಸಿದರು. ಎಲ್ಲವನ್ನೂ ಕೇಳಿಕೊಂಡ ಆತ ಬಹಳ ಸುಲಭವಾಗಿ, ನಿರ್ದಿಷ್ಟವಾಗಿ ನಮಗೆ ರಸ್ತೆಯನ್ನು ತಿಳಿಸಿಕೊಟ್ಟು, ತನ್ನ ಕಾರಿಗೆ ಹಿಂತಿರುಗಿದ. ಇನ್ನೊಂದು ಕ್ಷಣದಲ್ಲಿ ಅಲ್ಲಿಂದ ಅವನು ಹೊರಟುಹೋಗಿದ್ದ.
ದತ್ತಾತ್ರೇಯನ , ಕೇಶವನ ಧ್ಯಾನ ನಮ್ಮನ್ನು ಕಾಪಾಡಿತೇ? ಹಿರಿಯರು ಹೇಳುತ್ತಾರೆ ’ ದೇವರು ಎಲ್ಲ ಕಡೆಯಲ್ಲೂ ತಾನೇ ಪ್ರತ್ಯಕ್ಷವಾಗಿ ಬರಲಾರ, ಅದಕ್ಕೆ ಅವನು ಯಾರನ್ನಾದರೂ ನೆರವಿಗೆ ಕಳುಹಿಸುತ್ತಾನೆ ’ಅಂತ. ಅದು ನಿಜವಾಯಿತು. ಅಂತು ಆ ಅಪರಿಚಿತ ವ್ಯಕ್ತಿಯ ಮಾರ್ಗದರ್ಶನದ ಮೇರೆಗೆ ಹೊರಟು ನಾವು ಸ್ವಿಂಡನ್ ತಲಪಿದೆವು. ಈ ವೇಳೆಗೆ ನಮಗಾಗಿ ಕಾಯ್ದು ಕಾಯ್ದು ನಿರಾಶರಾಗಿದ್ದ ನಮ್ಮ ಸ್ನೇಹಿತರು ಊಟ ಮಾಡಿ ಮಲಗುವ ಸಿದ್ಧತೆಯಲ್ಲಿದ್ದರು . ನಾವು ಇದ್ದ ಕಡೆಯಿಂದ ಫೋನ್ ಸಿಗ್ನಲ್ ಸಹ ಸಿಗದೆ ಇದ್ದು ಅವರಿಗೆ ನಾವು ಸಿಕ್ಕಿಹಾಕಿಕೊಂಡ ವಿಚಾರವನ್ನು ತಿಳಿಸಲೂ ಆಗಿರಲಿಲ್ಲ. ಅಂತೂ ಅವರ ಮನೆಯನ್ನು ತಲಪಿದ ನಾವು ತಡವಾಗಿದ್ದರೂ ಊಟದ ಶಾಸ್ತ್ರ ಮಾಡಿ ಮಲಗಿದೆವು. ಬೆಳಗ್ಗೆ ಬೇಗನೆ ಎದ್ದು ಪೂಜೆಗೆ ಸಿದ್ಧಮಾಡಬೇಕಲ್ಲ!
ಮರುದಿನ ಬೆಳಗ್ಗೆ ಪೂಜೆ ಮುಗಿಸಿ , ಅಚ್ಚುಕಟ್ಟಾದ ಊಟ ಮಾಡಿ , ರಾತ್ರಿಯ ಉಟಕ್ಕೂ ಬುತ್ತಿ ತೆಗೆದುಕೊಂಡು ಅಲ್ಲಿಂದ ಹೊರಟೆವು. ಶ್ರೀನಿವಾಸ್ ಅವರಿಂದಲೇ ರಸ್ತೆಯನ್ನು ಗುರುತುಹಾಕಿಕೊಂಡು ಮೋಟರ್ವೇ ಯನ್ನು ಸುಲಭವಾಗಿ ತಲಪಿದೆವು. ಅಲ್ಲಿಂದ ಮುಂದೆ ಸ್ವಲ್ಪವೂ ಕಷ್ಟವಾಗಲಿಲ್ಲ. ಇಂಗ್ಲೆಂಡಿನ ರಸ್ತೆಗಳಲ್ಲಿ ಬಹಳ ಓಡಾಡಿದ್ದರಿಂದ ಯಾವ ತೊಂದರೆಯೂ ಇಲ್ಲದೆ ಮನೆಯನ್ನು ಬಂದು ಸೇರಿದೆವು. ಅಂದಿನಿಂದ ಮೂರ್ತಿ ಮೊದಲು ತಾವು ಹೇಗೆ ಮಾರ್ಗವನ್ನು ಗುರುತು ಹಾಕಿಕೊಳ್ಳುತ್ತಿದ್ದರೋ ಹಾಗೇ ಬರೆದಿಟ್ಟುಕೊಂಡು ಹೊರಡುತ್ತಿದ್ದರು." ಹಿಂದಕ್ಕೆ ತಪ್ಪು ಮುಂದಕ್ಕೆ ಬುದ್ಧಿ’! ಅಲ್ಲವೇ?
ಡಾ ಸತ್ಯವತಿ ಮೂರ್ತಿ
೦೭-೧೦-೨೧
ಕನ್ನಡಪ್ರಭ ಪತ್ರಿಕೆಯಲ್ಲಿ ೨೦೨೨ ಜನವರಿ ತಿಂಗಳಲ್ಲಿ ಪ್ರಕಟವಾಗಿದೆ.
Comments
Post a Comment