ಏಳು ಪಾವನ ಚರಣ /ಏಳು ಪರಮಾ ಕರುಣ
ಏಳು ಪಾವನ ಚರಣ /ಏಳು ಪರಮಾ ಕರುಣ
ಏಳು ದತ್ತಾತ್ರೇಯ /ಏಳು ಗುರುವೇ
ಏಳು ದೇವರದೇವ /ಗಾಣಗಾಪುರದೊಡೆಯ
ಏಳು ಭಕ್ತರರಕ್ಷ / ಪರಮ ಗುರುವೇ
ಹಕ್ಕಿ ಚಿಲಿಪಿಲಿ ಗಾನ /ಮಧುರತೆಯ ಸುರತಾನ
ನಿನಗೆ ಕಾದಿಹು/ದು ಶ್ರೀಪಾದನೆ
ಮಂದವಾಗೆಸೆಯುತಿಹ/ ಮಾರುತನು ತಾನಿಂದು
ನಿನಗೆ ಕಾದಿಹನಯ್ಯ ಬೆಳಗಾಯಿತೂ
ರಾಜ್ಯಪದವಿಯ ಪಡೆದ/ ರಜಕನಿಂದಿಹನಿಲ್ಲಿ
ಚರಣವಾರೋಗಿಸಲು/ ಏಳು ಗುರುವೇ
ವೇದವನೆ ನುಡಿದನಾ / ಕುಲಕೆ ಹೀನನು ತಾನು
ಬಂದಿಹನು ನಿನ್ನನ್ನು/ ಸೇವಿಸೆ ದೇವ
ವಿಶ್ವಮೂರ್ತಿಯು ನಿ/ನ್ನಪರಿಮಿತ ಶಕ್ತಿಯನು
ಅರಿತ ತಿವಿಕ್ರ/ಮ ಯತಿ / ಐತಂದಿಹನೂ
ಪರಿಪರಿಯ ಪುಷ್ಪದೊಳು /ನಿನ್ನ ಪೂಜಿಸಲು
ಕಾದು ನಿಂದಿಹನೇಳು/ ಬೆಳಗಾಯಿತೂ
ಬಂಜೆ ಎಮ್ಮೆಯು ಕರೆದ /ಅದ್ಭುತವ ನೋಡಿದಾ
ದಂಪತಿಗಳೈತಂದು /ನಿಂದಿಹರಿಲ್ಲಿ
ಅಷ್ಟರೂಪದಿ ಅಂದು /ದೀವಳಿಗೆಗೈತಂದು
ವಿಶ್ವರೂಪವ ನೀನು /ಮೆರೆದೆ ಗುರುವೇ
ಈಶ ಕಲ್ಲೇಶ ನೀ /ಈಶ ಸರ್ವೇಶನೀ
ಪೊಗಳುತಲಿಹನು/ ನರಹರಿ ಕವಿಯು
ಕುಷ್ಟರೋಗವ ಕಳೆದೆ /ಜ್ಞಾನವನು ಕರುಣಿಸಿದೆ
ಮೂರ್ಖನಿಗೆ ಬುದ್ಧಿಯನು/ ನೀಡಿದೆ ಗುರುವೆ
ನಿನ್ನ ನಂಬದೆ ಬಂದ/ ಎನಗನುಗ್ರಹಮಾಡಿ
ಎನ್ನ ಉದ್ಧರಿಸಿದಾ/ ಗುರುವೆ ಏಳು
ಎಂದು ಬೇಡುತಲಿಹನು/ ನಂದಿಕವಿ ಬಂದಿಲ್ಲಿ
ಬೆಳಗಾಯಿತೇಳಯ್ಯ/ ಪರಮ ಗುರುವೇ
ಭಕ್ತವೃಂದವು ನಿನ್ನ /ಸೇವೆಗೆ ಬಂದು
ನಿಂದಿಹರೇಳು/ ಬೆಳಗಾಯಿತೂ
ನಿನ್ನ ಸೇವಿಸಲೆಂದು /ಹಾಲು ತುಪ್ಪವ ತಂದು
ನೆರೆದಿಹರು ಶಿಷ್ಯರೇ/ಳಯ್ಯ ಗುರುವೇ
ಬಂಜೆ ಮುದುಕಿಯುಯೆನಗೆ/ ಪುತ್ರನನು ಕರುಣಿಸಿದೆ
ಎನ್ನ ಕರ್ಮವ ಕಳೆದು/ ಉದ್ಧರಿಸಿದೇ
ಎಂದು ಪಾಡುತ ಮಹಿಮೆ/ ನಿಂದಿಹಳು ಗಂಗಾ
ಏಳು ದತ್ತಯ್ಯನೇ /ಬೆಳಗಾಯಿತೂ
ಯತಿ ನರಸಿಂಹನಾಗಿ /ನಿನ್ನ ಹಡೆದಾ ಅಂಬ
ಬಂದಿಹಳು ನಿನ್ನನ್ನು /ಮುದ್ದಿಸಲು ತಾ
ಮೂಕನಾದನ ಮಗನ /ಮಾತುಗಳ ಲಾಲಿಸಲು
ಹಂಬಲಿಸಿ ಬಂದಿಹಳು /ಏಳು ಯತಿವರ
ಅವರೆ ಬಳ್ಳಿಯ ಕಿತ್ತು /ಅಕ್ಷಯದ ಹೊನ್ನಿತ್ತು
ಐಸಿರಿಯ ತುಂಬಿದಾ / ವಿಪ್ರನಂ ನೋಡೇಳು
ಹೊಲದ ಬೆಳೆಯನು ಕಿತ್ತು /ಎರಡುಪಟ್ಟನು ಬೆಳೆಸಿ
ಭಕ್ತಿಯೊಳಗಿಹ ಶಕ್ತಿ/ ಜಗಕೆ ತೋರಿದೆ ನೀನು
ಅಂದು ಭಾಸ್ಕರ ತಂದ /ನಾಲ್ಕು ಹಿಡಿಯಕ್ಕಿಯಲಿ
ನಾಲ್ಕು ಸಾಸಿರ ಉಂಡು/ ತಣಿದು ತೇಗಲು
ಮೂಕನಾದನು ತಾನು /ಭಾಸ್ಕರನು ಬೆರಗಿನಲಿ
ಎಚ್ಚರಿಸಲೂ ಏಳು /ಬೆಳಗಾಯಿತೂ
ಮಂಗಳವು ಗುರು ದತ್ತಾತ್ರೇಯಗೆ
ಮಂಗಳವು ಅನಸೂಯೆಗೊಲಿದ ತ್ರಿಮೂರ್ತಿಗೆ
ಮಂಗಳವು ನರಸಿಂಹ ಸರಸ್ವತಿಗೆ
ಮಂಗಳವು ಗಾಣಗಾಪುರದರಸಗೆ
ಡಾ ಸತ್ಯವತಿ ಮೂರ್ತಿ .
ತಿರುಪತಿಯಿಂದ ಪ್ರಕಟವಾಗುವ ಸಪ್ತಗಿರಿ ಮಾಸ ಪತ್ರಿಕೆಯಲ್ಲಿ ಪ್ರಕಟವಾಗಿದೆ
Comments
Post a Comment