ಆಟೋಚಾಲಕನ ಕಥೆ -ವ್ಯಥೆ
ಆಟೋಚಾಲಕನ ಕಥೆ -ವ್ಯಥೆ
ಕಡಲ ತೀರದಲ್ಲಿ ಕುಳಿತ ರಾಜು ನೀರನ್ನೇ ದಿಟ್ಟಿಸುತ್ತಿದ್ದ. ಅಲೆಗಳು ಒಂದಾದಮೇಲೊಂದು
ಬಂದು ದಡಕ್ಕೆ ಅಪ್ಪಳಿಸುತ್ತಿದ್ದರೂ ದಡ ಮಾತ್ರ
ಯಾವ ಪ್ರತಿರೋಧವನ್ನೂ ತೋರಿಸದೇ ಶಾಂತವಾಗಿ ಅವುಗಳನ್ನು ಅಪ್ಪಿಕೊಳ್ಳುತಿತ್ತು.ಮೌನದಿಂದ ಅವುಗಳ
ಆಹತವನ್ನು ಸಹಿಸಿತ್ತು.ದಡದ ಅಸಾಹಾಯಕತೆಯನ್ನು ನೋಡಿ ರಾಜುವಿಗೆ ಮರುಕ ಬಂದಿತು. ಜೊತೆಜೊತೆಗೆ ಅದರ
ಸ್ಥಿರತೆಯ ಬಗ್ಗೆ ಹೆಮ್ಮೆಯೂ ಆಯಿತು. ಜೀವನವೂ ಹಾಗೆಯೇ ಅಲ್ಲವೆ? ಕಷ್ಟ ನೋವುಗಳೆಂಬ ಹೊಡೆತಗಳು ಎಷ್ಟು ಬಿದ್ದರೂ ಸಹಿಸಲೇಬೇಕು. ಅವಗಳನ್ನು
ಅಪ್ಪಿಕೊಂಡು ಒಪ್ಪಿಕೊಳ್ಳಲೇ ಬೇಕು. ಅದರಲ್ಲೂ ನಮ್ಮಂತಹ ಕೆಳ ವರ್ಗದ ಜನ! ನಮ್ಮ ಪರಿಸ್ಥಿತಿಯೇ
ಇದಕ್ಕೆ ಕಾರಣವೇ? ಪ್ರತಿಭಟಿಸಲು ಸಾಧ್ಯವೇ ಇಲ್ಲವೆ? ನೂರಾರು ಆಲೋಚನೆಗಳು ತಲೆಯನ್ನು ತುಂಬಿ ಕಾಡುತ್ತಿದ್ದವು.
ಏಕ ಕೋಣೆಯ ಪುಟ್ಟಮನೆಯಲ್ಲಿ ಅಪ್ಪ ಅಮ್ಮಂದಿರೊಂದಿಗೆ
ವಾಸ. ಅಮ್ಮನ ಜೊತೆಗೆ ಅಪ್ಪನೂ ಮನೆಯಲ್ಲೇ
ಸದಾ ಇರುತ್ತಿದ್ದ. ಎಲ್ಲೂಕೆಲಸಕ್ಕೆ ಹೋಗದಿದ್ದ
ಅವನಿಗೆ ಹೆಂಡತಿಯ ಜೊತೆ ಕುಳಿತು ಟಿವೀ ನೋಡುವುದೊಂದೇ ಹವ್ಯಾಸ. ಹಾಗಿದ್ದರೂ ಇದುವರೆಗೂ ಹೇಗೋ ನಡೆದುಕೊಂಡು
ಬಂದಿತ್ತು .ಆದರೆ ನೆನ್ನೆ ತಾನೇ ಮದುವೆಯಾಗಿ ಹೆಂಡತಿಯನ್ನು ಮನೆಗೆ ಕರೆತಂದಾಗಿದೆ.ಹೆಂಡತಿಯ
ಹೆಸರು ಲಕ್ಷ್ಮಿ. ಅದೂ ಅಮ್ಮನ ಆಯ್ಕೆಯೇ! ರಾಜು
ತನ್ನ ಹೆಂಡತಿಯಾಗುವವಳನ್ನು ಮದುವೆಗೆ ಮುನ್ನ ನೋಡುವ ಅವಕಾಶವೇ ಸಿಗಲಿಲ್ಲ. ಹೆಸರಿಗೆ ತಕ್ಕಂತೆ
ರೂಪ. ನಿರಾಭರಣ ಸುಂದರಿ.ಅವಳ ನಗು ಎಂತಹವರನ್ನೂ ಮುದಗೊಳಿಸುವಂತಿತ್ತು.ಹೊಸ ಮನೆಯ ವಾತಾವರಣದಲ್ಲಿ
ಅವಳು ಮೌನದ ಗೊಂಬೆಯೇ ಆಗಿದ್ದಳು. ಮನೆಯೊಳಗೆ ಇನ್ನೂ ಕಾಲಿಡಲಿಕ್ಕಿಲ್ಲ. ಅಮ್ಮ ಅವಳಿಗೆ ಸ್ವಲ್ಪವೂ
ಸಂಕೋಚವಿಲ್ಲದೆ ಕೆಲಸ ಹೇಳಿದ್ದಳು.ಆಗಿನಿಂದ ಅವಳೇ ಅಡುಗೆ ಮನೆಗೆ ಜವಾಬ್ದಾರಿ. ಒಂದು ಕ್ಷಣವಾದರೂ
ಅವಳೊಡನೆ ಕುಳಿತು ಮಾತನಾಡಲಾಗಿಲ್ಲ ರಾಜುವಿಗೆ.
ಮನೆಗೆ ಹೊಸಬಳಾಗಿ ಬಂದ ತನ್ನ ಹೆಂಡತಿಯನ್ನು ಮುದ್ದಿಸಿ ,ರಮಿಸಿ
ಅವಳನ್ನು ಒಲಿಸಿಕೊಳ್ಳುವ ಆಸೆ ಆಸೆಯಾಗಿಯೇ ಉಳಿದಿತ್ತು.ಬೆಳಗಿನ ಹೊತ್ತು ಏಕಾಂತದಲ್ಲಿ ಅವಳೊಡನೆ
ಮಾತನಾಡುವುದಿರಲಿ ರಾತ್ರೆಯಹೊತ್ತು ಮಲಗಲೂ ಬೇರೆ ಕೋಣೆಯಿರಲಿಲ್ಲ. ಈ ಯೋಚನೆಗಳ ಜೊತೆಗೆ ಆಟೋ
ಓಡಿಸುವಾಗ ಬರುವಾಗಿನ ಗಿರಾಕಿಗಳ ಅಸಹನೀಯ ವರ್ತನೆಯನ್ನೂ ಸಹಿಸಿಕೊಳ್ಳಬೇಕಾಗಿತ್ತು. ಚಿತ್ರ
ವಿಚಿತ್ರವಾದ ವ್ಯಕ್ತಿಗಳು ಬರುತ್ತಿದ್ದರು. ಕೆಲವರು ಕೂಡುವ ಮೊದಲೇ ಫೋನಿಗೆ ಬಾಯಿಕೊಟ್ಟಿದ್ದು
ಸುತ್ತಮುತ್ತಿನ ಪರಿವೆಯಿಲ್ಲದೆ ಒಂದೇ ಸಮನೆ ಎತ್ತರದ ಧ್ವನಿಯಲ್ಲಿ ಮಾತನಾಡುತ್ತ
ಕುಳಿತಿರುತ್ತಿದ್ದ ಪ್ರಯಾಣಿಕರು ,ಹೊಸದಾಗಿ ಮದುವೆಯಾದ ಗಂಡಹೆಂಡಿರ
ಪ್ರಣಯ , ಅತ್ತೆಯ ಮೇಲಿನ ಕೋಪವನ್ನು ಗಂಡನ ಮೇಲೆ ತೀರಿಸಿಕೊಳ್ಳುವ
ಹೆಣ್ಣುಮಗಳು. ಅತ್ತೆ ಕೊಡುವ ಕಾಟವನ್ನು ಕಣ್ಣೀರು ಹರಿಸುತ್ತ ಅಮ್ಮನಿಗೆ ಹೇಳಿಕೊಳ್ಳುವ
ಹೆಣ್ಣುಮಗಳು. ಹೆಂಡತಿಯ ರಗಳೆಗೆ ಬೇಸತ್ತ ಗಂಡನ ಪ್ರಲಾಪ, ವಯಸ್ಸಾದ
ಜೋಡಿಗಳ ಸಂಕಟ, ಪ್ರಪಂಚವನ್ನೇ ಗೆಲ್ಲುವಂತಹ ಹುಮ್ಮಸ್ಸಿನ ತರುಣ
ತರುಣಿಯರ ಕೇಕೆ,ನಗು ,
ಎಲ್ಲಿಗೆ ಹೋಗಬೇಕು ಎಂಬುದೇ ತಿಳಿಯದೆ ಕೂರುವ ತರುಣರು, ಒಂದೇ ಎರಡೇ
? ಇವೆಲ್ಲವೂ ರಾಜುವಿಗೇನೋ
ಅನಿವಾರ್ಯ. ಆದರೆ ಇವಾವುದರ ಸಂಬಂಧವೂ ಇರದ , ಅಟೋ ಕೂಡ ಅವರ ಈ
ದಾಂಧಲೆಯೆಲ್ಲವನ್ನೂ ಸಹಿಸಬೇಕಾಗಿಬರುತ್ತಿತ್ತು .
ರಾಜುವಿನ ತಲೆ ಸಿಡಿದುಹೋಗುತ್ತಿತ್ತು.
ಇನ್ನೂ ಹೊಸದಾಗಿ ಮದುವೆಯಾದ ಗುಂಗಿನಲ್ಲಿದ್ದ ಅವನಿಗೆ ಇಂದು ನಡೆದ ಘಟನೆಯಿಂದ ಮನಸ್ಸು
ಕಲಕಿತ್ತು. ಆಟೋವನ್ನು ಬಾಡಿಗೆಗೆ ಹಿಡಿದಿದ್ದ ರಾಜು . ಬೆಳಗಿನಿಂದ ರಾತ್ರೆಯವರೆಗೆ ಅದನ್ನು
ಓಡಿಸಿ ಬಂದ ಹಣದಲ್ಲಿ ಬಾಡಿಗೆ ಕೊಟ್ಟು , ಪೆಟ್ರೋಲ್ ಗೆ ಹಣ
ಕೊಟ್ಟು ಉಳಿಯುತ್ತಿದ್ದ ಹಣದಲ್ಲಿ ಮನೆಗೆ
ಅಡುಗೆಗೆ ಬೇಕಾದ ಪದಾರ್ಥಗಳನ್ನು ತರುವುದಕ್ಕೇ ಮುಗಿದುಹೋಗುತಿತ್ತು.
ಈಗ ಹೆಂಡತಿ ಬಂದಿದ್ದಾಳೆ, ಅವಳಿಗಾಗಿ ಏನಾದರೂ ಕೊಂಡುಕೊಳ್ಳಬೇಕು, ಒಳ್ಳೆಯ ಬಟ್ಟೆ ಬರೆ ಧರಿಸಬೇಕು, ಅವಳೊಡನೆ ಸುತ್ತಾಡಲು
ಹೋಗಬೇಕು .... ಏನೆಲ್ಲ ಕನಸುಗಳು .ಆದರೆ ಇದೆಲ್ಲ ಹೇಗೆ ಸಾಧ್ಯ?
"ಏ ಬರ್ತೀಯೇನಪ್ಪ ಬೋರಿವೆಲಿ?" ಗಿರಾಕಿಯೊಬ್ಬನ ಪ್ರಶ್ನೆ ಮನಸ್ಸಿನಲ್ಲೇ
ಮಂಡಿಗೆ ತಿನ್ನುತ್ತಿದ್ದ ರಾಜುವನ್ನು ವಾಸ್ತವ ಜಗತ್ತಿಗೆ ಎಳೆದುತಂದಿತ್ತು.
’ಇಲ್ಲ ಸ್ವಾಮಿ ಬರೋಕ್ಕಾಗೋಲ್ಲ ಹೊತ್ತಾಯ್ತು ಮನೇಗೆ ಹೋಗ್ಬೇಕು’.
’ಇಲ್ಲಾ ಅನ್ಬೇಡಾಪ್ಪ, ಹೆಂಡತಿಗೆ ಆರೋಗ್ಯ ಸರಿಯಿಲ್ಲ, ಅವಳಿಗೆ "ಔಷಧಿ ತೊಗೊಂಡು ಹೋಗ್ತಾ
ಇದೀನಿ.ಕರ್ಕೊಂಡು ಹೋಗಪ್ಪ"
"ಇಲ್ಲ ಸ್ವಾಮಿ ಬರೋಕ್ಕಾಗೋಲ್ಲ , ಬೇರೆ
ಆಟೋ ತಗೊಳ್ಳಿ"
"ನೋಡು ನೀನು ಇಲ್ಲ ಅನ್ಬೇಡ , ನಿನಗೆ ನಾನು
ಎರಡರಷ್ಟು ಬಾಡಿಗೆ ಕೊಡ್ತೀನಿ. "
’ಕ್ಷಮಿಸಿ ಸ್ವಾಮಿ, ಬರೋಕ್ಕಾಗೋಲ್ಲ , ಆ
ಕಡೆಯಿಂದ ಬರೋವಾಗ ಗಿರಾಕಿ ಸಿಕ್ಕೋಲ್ಲ. ಖಾಲಿ
ಬರಬೇಕಾಗುತ್ತೆ.
’ಹೋಗಲಿ , ನಾನು ಎರಡರಷ್ಟು ಕೊಟ್ಟು ಮೇಲೆ ಅಲ್ಲಿಂದ
ಬರೋಕ್ಕೆ ಎಷ್ಟು ಮೀಟರ್ ಆಗುತ್ತೋ ಅದನ್ನೂ ಕೊಡ್ತೀನಿ, ಇಲ್ಲ ಅನ್ಬೇಡ
ಬಾಪ್ಪ. ನನ್ನ ಹೆಂಡತಿ ಉಳೀಬೇಕಾದರೆ ಬೇಗ ಔಷಧಿಕೊಡಬೇಕಪ್ಪ. ’
ಇಷ್ಟೆಲ್ಲ ಗೋಗರೆಯುತ್ತಿದ್ದುದನ್ನು ನೋಡಿ , ಹೋಗಲಿ
ಅವರಿಗೆ ಸಹಾಯವೂ ಆಯಿತು ಸ್ವಲ್ಪ ಹೆಚ್ಚಾಗಿ ಹಣ ಸಿಕ್ಕಿದರೆ ಒಳ್ಳೆಯದೇ ಹೋಗಿ ಬರೋಣ ಎಂದು ಯೋಚಿಸಿ
ಮನಸ್ಸಿಲ್ಲದಿದ್ದರೂ ಹೊರಟ.
ಬೋರಿವೆಲಿಯ ಕೊನೆಯ ತನಕ ಕರೆದುಕೊಂಡು ಹೋದ ಆ ಗಿರಾಕಿ ಅಲ್ಲೊಂದು ಅಂಗಡಿಯ ಮುಂದೆ ಆಟೋ
ನಿಲ್ಲಿಸಲು ನಿಲ್ಲಿಸಲು ಹೇಳಿದ. ನಿಂತ
ಕೂಡಲೇ ಆಟೋದಿಂದ ಇಳಿದು ಎರಡು ಸಾವಿರ ರೂಪಾಯಿಗಳ
ನೋಟನ್ನು ಕೊಟ್ಟ’.
’ಚಿಲ್ಲರೆ ಇಲ್ಲ ಸ್ವಾಮಿ, ಚಿಲ್ಲರೆ ಕೊಡಿ’
ಹೌದಾ ಆಯಿತು. ಇಗೋ ಇಲ್ಲೆ ನೋಡು ಕಾಣಿಸ್ತಾ
ಇದೆಯಲ್ಲ, ಅದೇ ನನ್ನ ಮನೆ ಈಗ ತಂದುಕೊಟ್ಟೆ, ಒಂದೇ ನಿಮಿಷ. ಎಂದು ರಾಜುವಿನ
ಪ್ರತಿಕ್ರಿಯೆಗೂ ಕಾಯದೆ ರಸ್ತೆಯ ಆಚೆಬದಿಗೆ ನಡೆದ.
ನಿಜವೆಂದು ನಂಬಿದ ರಾಜು ಕಾಯುತ್ತ ಕುಳಿತ.
ಗಂಟೆ ಗಟ್ಟಲೆ ಕಾಯ್ದರೂ ಆ ಮನುಷ್ಯನ ಪತ್ತೆಯಿಲ್ಲ. ಕಡೆಗೆ ನಿರಾಸೆಯಿಂದ ಹಿಂತಿರುಗಿದ್ದ ರಾಜು.
ಅಲ್ಲಾ ಜನ ಆಟೋದವರನ್ನು ಕೆಟ್ಟವರು , ಮೋಸ
ಮಾಡುತ್ತಾರೆ. ಹೆಚ್ಚು ಹಣ ಕೀಳುತ್ತಾರೆ, ಒಬ್ಬರೇ ಸಿಕ್ಕಿದರೆ ಅವರನ್ನು
ಲೂಟಿ ಮಾಡುತ್ತಾರೆ, ಎಂದೆಲ್ಲ ದೂರುತ್ತಾರೆ . ಆದರೆ ಆಟೋದವರನ್ನು
ಹೀಗೆ ಜನ ಸತಾಯಿಸುತ್ತಾರೆಂಬುದು ಪ್ರಾಯಶಃ
ಹೆಚ್ಚು ಜನಕ್ಕೆ ತಿಳಿದಿಲ್ಲ. ತಿಳಿದಿದ್ದರೂ ಇದಕ್ಕಾಗಿ ಯಾರೂ ಏನೂ ಮಾಡುವುದಿಲ್ಲ ಅವರ ಪರವಾಗಿ
ಮಾತನಾಡುವವರೂ ಇಲ್ಲ.
ಈ ರೀತಿಯ ಅನುಭವ ರಾಜುವಿಗೆ ಹೊಸದೇನೂ ಆಗಿರಲಿಲ್ಲ.ಇದು ಒಂದು ಘಟನೆ ಅಷ್ಟೆ.
ಮತ್ತೊಮ್ಮೆ ತನಗೆ ಬರಲಾಗುವುದಿಲ್ಲ, ಮನೆಗೆ ಹೋಗಲು ತಡವಾಗಿದೆಯೆಂದರೂ
ಬಲವಂತವಾಗಿ ಅಟೋದೊಳಕ್ಕೆ ಮೂವರು ನುಗ್ಗಿ ಕುಳಿತು ನಿರ್ಜನ ಜಾಗದ ವಿಳಾಸ ತಿಳಿಸಿ ಅಲ್ಲಿಗೆ ಹೋದಮೇಲೆ ಇವನನ್ನು ಚೆನ್ನಾಗಿ ಬಡಿದು , ಅವನಲ್ಲಿದ್ದ ಹಣವನ್ನೆಲ್ಲ
ಕಿತ್ತುಕೊಂಡು ಹೋದರು.
ಇವೆರಡಕ್ಕಿಂತ ಭಯಾನಕ ಒಂದು ಹೆಣ್ಣುಮಗಳ ಮೋಸ. ಬಹಳ ಅಚ್ಚುಕಟ್ಟಾಗಿ ಡ್ರೆಸ್ ಮಾಡಿಕೊಂಡು
ಕೈಯಲ್ಲಿ ಫೋನ್ ಹಿಡಿದು ಇಂಗ್ಲೀಷಿನಲ್ಲಿ ಮಾತನಾಡುತ್ತ ನೋಡಿದವರಿಗೆ ತುಂಬ ಕಲಿತವಳಂತೆ , ನಾಗರಿಕಳಂತೆ
ಕಾಣುತಿದ್ದ ಹೆಣ್ಣುಮಗಳು ಸೀದಾ ಬಂದು ಆಟೋ ಏರಿದಳು. ಅವಳು ಕೊಟ್ಟ ವಿಳಾಸಕ್ಕೆ ಕರೆದೊಯ್ದ
ನಮ್ಮ ಲೇಖನದ ನಾಯಕ ರಾಜು. ಇಳಿದವಳೇ ಗುಲಾಬಿ
ಬಣ್ಣದ ಎರಡುಸಾವಿರದ ನೋಟನ್ನು ತೋರಿಸಿ ಚಿಲ್ಲರೆ ಇದೆಯ ಅಂದಳು. ಇಲ್ಲ ಮೇಡಂ ನೀವೆ ಕೊಡಿ
ಅಂದದ್ದಕ್ಕೆ, ಅವನು ಚೇತರಿಸಿಕೊಳ್ಳಲೂ ಬಿಡದೆ " ಏನಪ್ಪ ಒಂದು ಚಿಲ್ಲರೆ ಸಹ ಇಲ್ಲ್ವ?"
ಇದೆಂಥ ಆಟೋ ಒಡಿಸ್ತೀಯಾಪ್ಪ? ಬಂದವರೆಲ್ಲ
ಚಿಲ್ಲರೆ ಇಟ್ಕೊಂಡೇ ಬರೋಕ್ಕಾಗುತ್ಯೆ?ಚಿಲ್ಲರೆ ಇಟ್ಟುಕೊಳ್ಳದೇ ರಿಕ್ಷ
ಓಡಿಸಿದುದೇ ತಪ್ಪು. ಚಿಲ್ಲರೆಯ ಜವಾಬ್ದಾರಿ ರಿಕ್ಷಾ ಡ್ರೈವರನದೇ ಹೊರತು
ಪ್ರಯಾಣಿಕರದಲ್ಲ" ಎಂದು ಹೇಳಿ ಅವನ ಮೇಲೆ
ಸಿಟ್ಟಿನಿಂದ ಮಾತನಾಡತೊಡಗಿದಳು.’ ಅವಳ ಅಕ್ರೋಶವನ್ನು ನೋಡಿದ ರಾಜು ತಕ್ಷಣ
ಕೊಡಿ ಮೇಡಂ ನಾನೇ ಚಿಲ್ಲರೆ ತರುತ್ತೇನೆ’ ಎಂದು ಅವಳ ಕೈಯಲಿದ್ದ ನೋಟಿನ ಕಡೆಗೆ ಕೈಚಾಚಿದ.
ಅಷ್ಟೆ! ಅವಳು ನೋಟನ್ನು ಅವನಿಗೆ
ಕೊಡುವುದಿರಲಿ ಅವನು ತನ್ನ ಕೈಹಿಡಿದೆಳೆದು ತನ್ನ
ಮಾನಭಂಗ ಮಾಡಲು ಪ್ರಯತ್ನಿಸಿದ. ಒಬ್ಬಳೇ ಹೆಂಗಸು ಬಂದರೆ ಹೀಗೆ! ಯಾರಾದರೂ ಕಾಪಾಡಿ ಕಾಪಾಡಿ ಎಂದು
ಬೊಬ್ಬಿಟ್ಟಳು. ಆ ಹಾದಿಯಲ್ಲಿ ಹಾಯ್ದುಹೋದ
ವ್ಯಕ್ತಿಯೊಬ್ಬ ಇವಳ ಆಕ್ರಂದನವನ್ನು ಕೇಳಿ
ಡ್ರೈವರನದೇ ತಪ್ಪು ಎನ್ನುವಂತೆ
’ಯಾಕೆ ಮನೆಯಲ್ಲಿ ಅಕ್ಕ ತಂಗಿಯರಿಲ್ಲವ? ಹೋಗು ಹೊರಕ್ಕೆ ಕಾಂಪೌಂಡ್ ಒಳಕ್ಕೆ ಯಾಕೆ ಬಂದೆ ? ’ ಎಂದು ದುರುಗುಟ್ಟಿ ನೋಡಿದ. ಅಷ್ಟರಲ್ಲಿ ಅದೆಲ್ಲಿಂದಲೋ ಇನ್ನೊಬ್ಬ ವ್ಯಕ್ತಿಬಂದ.
ಅವನನ್ನು ನೋಡಿದ ಕೂಡಲೆ ಆಕೆ ’ ಅಬ್ಬ ಬಂದೆಯಲ್ಲ
ಕಡೆಗೂ! ಅಲ್ಲ ಮನೆಯ ಮುಂದೆ ಆಟೋ ನಿಂತಾಗಲೂ ಬೇಗ ಬರಬೇಡವೇ? ನೋಡು ಈ
ಡ್ರೈವರ್ ಎಂತಹ ಚಾಲಾಕಿನವನು. ನನ ಕೈಹಿಡಿದು ಎಳೆಯುತ್ತಿದ್ದ. ರಾತ್ರೆ ಹೊತ್ತಿನಲ್ಲಿ ಒಬ್ಬಳೆ ಹೆಣ್ಣುಮಗಳು
ಒಡಾಡುವುದು ಎಷ್ಟು ಕಷ್ಟ ಈ ದಿನಗಳಲ್ಲಿ! ಎಂದು
ಇಲ್ಲ ಸಲ್ಲದ ಚಾಡಿಹೇಳುತ್ತ ಅವನೊಡನೆ ಹೊರಟೇ ಬಿಟ್ಟಳು.
ಬಾಡಿಗೆ ಕೊಟ್ಟು ಹೋಗಿ ಮೇಡಂ ಅನ್ನುವ ರಾಜುವಿನ ಕೂಗು ಬರಿ ಅಲ್ಲಿದ್ದ ಕಟ್ಟಡಗಳಿಗೆ ತಾಗಿ
ವಾಪಸ್ಸಾಯಿತು. ಇಂತಹ ಹೆಣ್ಣುಮಕ್ಕಳೂ ಇದ್ದಾರಲ್ಲ! ಎಂದು ಮೂಗಿನ ಬೆರಳಿಟ್ಟ ರಾಜು. ಅಂತೂ ಇಂತೂ
ರಾಜುವಿನ ಶ್ರಮದ ದುಡಿಮೆ ಅವನಿಗೆ ದೊರಕಲಿಲ್ಲ.
ಈ ರೀತಿಯ ಘಟನೆಗಳು ನಡೆದಾಗಲೆಲ್ಲ ರಾಜು
ಸಮುದ್ರ ತೀರಕ್ಕೆ ಬಂದು ಕೂತಿರುತ್ತಿದ್ದ.ಇಂದೂ ಅದೇ ಮಾಡಿದ್ದ. ಬರುವ ಆದಾಯದಲ್ಲಿ
ಪರಿಸ್ಥಿತಿಯನ್ನು ಉತ್ತಮ ಪಡಿಸುವ ಮಾತಂತೂ ಇಲ್ಲವೇ ಇಲ್ಲ. ಹೇಗಾದರೂ ಲಕ್ಷ್ಮಿಯನ್ನು ಮನೆಯಿಂದ ಆಚೆಗೆ ಕರೆದುಕೊಂಡು
ಹೋಗಬೇಕು. ಅವಳೊಡನೆ ನಗರವನ್ನು ಸುತ್ತಿಬರಬೇಕು. ಅವಳ ಕೈಕೈಹಿಡಿದು ರಸ್ತೆಯಲಿ ನಡೆಯಬೇಕು ,ಅವಳಿಗೆ ಬೇಕಾದ ತಿನಿಸನ್ನು ಸಣ್ಣ ಪುಟ್ಟ ಅಲಂಕಾರದ ವಸ್ತುಗಳನ್ನೂ
ಕೊಡಿಸಬೇಕು ಎಂಬೆಲ್ಲ ಕನಸುಗಳು. ಈ ಕನ,ಸುಗಳೊಟ್ಟಿಗೆಯೇ ಮನೆಯನ್ನು
ಸೇರಿದ.
ಮನೆಯಲ್ಲಿಯ ವಾತಾವರಣವೇ ಬೇರೆಯಿದ್ದಿತು.ಮದುವೆಯಾಗಿ ಗಂಡನ ಮನೆಯನ್ನು ಸೇರಿದ್ದ ತಂಗಿ ಗಂಡನ
ಜೊತೆಯಲ್ಲಿ ಜಗಳವಾಡಿ ಮನೆಗೆ ಹಿಂತಿರುಗಿದ್ದಳು.ಗಂಡ ಬೇರೆ ಮನೆಯನ್ನು ಮಾಡಲಿಲ್ಲವೆಂಬುದೇ ಅವಳು
ತೌರಿಗೆ ಬರಲು ಕಾರಣ. ರಾಜುವಿಗೆ ಆಕಾಶ ತಲೆಯ ಮೇಲೆ ಕಳಚಿ ಬಿದ್ದಂತಾಯಿತು.ಇದ್ದ ನಾಲ್ಕು ಜನಕ್ಕೇ
ಮಲಗಲು ಸ್ಥಳವಿರದ ಆ ಮನೆಯಲ್ಲಿ ಐದನೆಯವಳಾಗಿ
ತಂಗಿಯೂ ಬಂದರೆ ಮಾಡುವುದೇನು? ಹೆಂಡತಿಯ ಕಡೆಗೆ ತಿರುಗಿ ನೋಡುವುದೂ ದೊಡ್ಡ ಪ್ರಯಾಸವೇ! ತಂಗಿ ಬಂದ ಮಾರನೆಯ ದಿನವೇ ಅಪ್ಪ ಅಮ್ಮ ತಂಗಿಯನ್ನೂ
ಕರೆದುಕೊಂಡು ಊರು ಸುತ್ತಲು ಹೊರಟರು. ಹೊಸದಾಗಿ ಮದುವೆಯಾಗಿ ಬಂದ ಹೆಣ್ಣುಮಗಳನ್ನು ಅಡಿಗೆ
ಕೆಲಸಕ್ಕೆ ಮನೆಯಲ್ಲಿ ಬಿಟ್ಟು ಹೊರಟಿದ್ದರು. ತನಗೇನೋ ಅದೃಷ್ಟ ಕೂಡಿಬಂದಿದೆ ಎನ್ನಿಸಿತು
ರಾಜುವಿಗೆ. ತಂಗಿ ಬಂದದ್ದಕ್ಕೆ ಬೇಸರಿಸುತ್ತಿದ್ದ ಅವನ ಮನಸ್ಸು ಈಗ ಅವಳನ್ನು ಕೊಂಡಾಡತೊಡಗಿತ್ತು.
ಹೆಂಡತಿಯನ್ನು ಜೊತೆಗೆ ಕರೆದೊಯ್ಯದೇ ಇದ್ದದಂತು ಇನ್ನೂ ಸಂತೊಷವೆನಿಸಿತು. ಸಿಕ್ಕಿದ ಅವಕಾಶವನ್ನು
ಉಪಯೋಗಿಸಿಕೊಳ್ಳಲು ತೀರ್ಮಾನಿಸಿ ಅಂದು ಕೆಲಸಕ್ಕೆ ಹೋಗದೆ ಪೇಟೆ ಬೀದಿಗೆ ಹೋಗಿ ಅವಳಿಗಾಗಿ
ಬಣ್ಣಬಣ್ಣದ ಬಳೆಗಳನ್ನೂ , ಒಂದು ಸೆಂಟ್ ಬಾಟಲನ್ನೂ ಕೊಂಡುಕೊಂಡು ಮನೆಗೆ ಹೋಗಿ ಲಕ್ಷ್ಮಿಗೆ ಕೊಟ್ಟು ಬೇಗ
ಸಿದ್ಧವಾಗಿ ಬರುವಂತೆ ಹೇಳಿ ಅವಳನ್ನು ಕರೆದುಕೊಂಡು
ಹೊರಟ. ಆದರೆ ಹೋಗುವುದಾದರೂ ಎಲ್ಲಿಗೆ? ಹೋಟೆಲಿಗೆ ಹೋಗಿ
ಒಂದೆರಡು ಗಂಟೆಗಳು ಏಕಾಂತದಲ್ಲಿ ಕಳೆದುಬರೋಣವೆಂದರೆ ಪೋಲೀಸರ ಹೆದರಿಕೆ.ಗಂಡಹೆಂದಿರಾದರೂ ಅವರ
ಬಾಯಿಗೆ ಬಿದ್ದರೆ ಅವಮಾನ.ಅದೂ ಅಲ್ಲದೆ ರೂಮಿನ ಬಾಡಿಗೆಯೂ ದುಬಾರಿ. ಪೇಟೆ ಬೀದಿಯಲ್ಲಿ ಸುತ್ತಾಡೋಣವೆಂದರೆ ಜನಜಂಗುಳಿ
.ಆದ್ದರಿಂದ ಹೆಚ್ಚು ಓಡಾಡದ , ಮನೆಗೆ ಹತ್ತಿರದಲ್ಲೇ ಇದ್ದ
ಪಾರ್ಕಿನಲ್ಲಿ ಅವಳೊಡನೆ ಮಾತನಾಡುವ ಯೋಚನೆಯಿಂದ
ಹೋಗಿ ಕುಳಿತ. ಒಬ್ಬರಿಗೊಬ್ಬರು ಇನ್ನೂ ಅಪರಿಚಿತರಾಗಿಯೇ ಇದ್ದ ಇಬ್ಬರಿಗೂ ಮಾತು ಹೊರಡದಾಯಿತು.
ಹೆಚ್ಚುಹೊತ್ತು ಕೂರುವಂತೆಯೂ ಇಲ್ಲ. ಹೊರಗೆ ಹೋಗಿದ್ದ ಅಪ್ಪ ಅಮ್ಮ ಮನೆಗೆ ಬರುವಷ್ಟರಲ್ಲಿ
ಹೋಗಬೇಕು. ಲಕ್ಷ್ಮಿ ಇನ್ನೂ ಅಡಿಗೆ ಮುಗಿಸಬೇಕಾಗಿದೆ .ಅಡಿಗೆ ಮುಗಿಯದೆ ಹೋಗಿ ಲಕ್ಷ್ಮಿ ಮಾತು
ಕೇಳಬೇಕಾದೀತು. ಅಂತೂ ಹೆಂಡತಿಯೊಡನೆ ಬಹಳಷ್ಟು ಮಾತನಾಡಿ ತನ್ನ ಪರಿಚಯವನ್ನು ಅವಳಿಗೆ ಮಾಡಿಕೊಟ್ಟು
, ಪ್ರೀತಿ ತೋರಿಸುವೆನೆಂದುಕೊಂಡಿದ್ದ
ರಾಜುವಿನ ಯೋಚನೆಯೆಲ್ಲ ತಲೆಕೆಳಗಾಯಿತು. ಮನೆಯ ಕಡೆಗೆ ಹೊರಟಾಯಿತು. ಏನು ಮಾಡುವುದು
? ಹೇಗೆ ಮಾಡುವುದು? ತನ್ನವರನ್ನೆಲ್ಲ ಬಿಟ್ಟು ಹೊಸ
ಆಸೆಗಳನ್ನು ಹೊತ್ತು ತಂದಿರಬಹುದಾದ ತನ್ನ ಹೆಂಡತಿಯ ಬಗೆಗೆ ಅವನಿಗೆ ಕನಿಕರ ಒಂದೆಡೆ ಉಕ್ಕಿದರೆ
ಮತ್ತೊಂದೆಡೆ ತಾನು ಮದುವೆಯಾಗಿಯೂ ಅವಳ ಸಂಗದಲ್ಲಿರಲು ಅವಕಾಶವಿಲ್ಲವಲ್ಲ ಎಂದು ಪರಿತಾಪ.
ತಲೆಯೆಲ್ಲ ಕಾದು ಕೆಂಡವಾಯಿತು. ಯೋಚಿಸಿ ಹಣ್ಣಾಯಿತು ಬುದ್ಧಿ.
ಇದ್ದಕಿದ್ದಂತೆ ಹೊಳೆದದ್ದು ತನ್ನ ತಂಗಿಯನ್ನು ಅವಳ ಗಂಡನ ಮನೆಗೆ ಕಳುಹಿಸುವುದು. ಅದು ಮೊದಲ
ಹೆಜ್ಜೆ. ಅವಳನ್ನು ಹೇಗಾದರೂ ಒಪ್ಪಿಸಿ ಬಿಡಬಹುದೇನೋ. ಅಮ್ಮನದೆ ತಕರಾರು. ತನ್ನ ಮಗಳನ್ನು
ಸರಿಯಾಗಿ ನೋಡಿಕೊಳ್ಳದ ಆ ಮನೆಗೆ ಅವಳನ್ನು ಕಳುಹಿಸುವುದಿಲ್ಲ ಎಂಬ ಹಟ.
ಆಗತಾನೆ ಮನೆಗೆ ಬಂದಿರುವ ಸೊಸೆಯ ಬಗ್ಗೆ
ಒಮ್ಮೆಯೂ ಯೋಚಿಸದ ತಾಯಿ ತನ್ನ ಮಗಳು ಎಂದೊಡನೆ ಅವಳನ್ನು ವಹಿಸಿಕೊಂಡು ಬಂದಳು. ತನ್ನ ಮಗಳ
ತಪ್ಪೇನೂ ಇಲ್ಲ, ಅವಳ ಅತ್ತೆ ಮಾವ ಅವಳನ್ನು ಸರಿಯಾಗಿ
ನೋಡಿಕೊಳ್ಳುತ್ತಿಲ್ಲ, ಅಳಿಯ ಬೇರೆ ಮನೆ ಮಾಡಿದರೆ ಕಳುಹಿಸುವುದು
ಇಲ್ಲದಿದ್ದರೆ ಇಲ್ಲ ಎಂದು ಹಟ ಹಿಡಿದು ಕೂತಿದ್ದಳು. ರಾಜು ಎಷ್ಟೇ ತಿಳುವಳಿಕೆ ಹೇಳಿದರೂ ಅಮ್ಮ
ಒಪ್ಪದೇ ಹೋದಾಗ ಅವನಿಗೆ ವಿಪರೀತ ಸಿಟ್ಟು ಬಂದಿತ್ತು. ಮಗಳ ಮೇಲಿನ ಮಮತೆಯಿಂದ ಅವಳಿಗಾಗುವ
ಕಷ್ಟವನ್ನು ಸಹಿಸದ ತಾಯಿಗೆ ತನ್ನ ಹೆಂಡತಿಯ ಮೇಲೇ ಅದೇ ರೀತಿಯ ಮಮತೆ ಇರಬೇಕಲ್ಲವೇ? ಅವಳೂ ಬೇರೆಯವರ ಮನೆಯ ಹೆಣ್ಣುಮಗಳು. ಅವಳನ್ನು ನಡೆಸಿಕೊಳ್ಳುವ ರೀತಿ ಸರಿಯೇ? ಎಂದು ಪ್ರಶ್ನಿಸಿದ. ಮಗಳಿಗೆ ಬೇಡದ ವಾತಾವರಣ ಸೊಸೆಗೆ ಇದ್ದರೆ ಸರಿಯೇನು? ಮಗಳು ಎಲ್ಲರ ಸೇವೆ ಮಾಡಬೇಕಾದೀತು ಎಂದು ಅಂಜುವ ನಿನಗೆ ಸೊಸೆಯಿಂದ ಎಲ್ಲ ಕೆಲಸವನ್ನೂ
ಮಾಡಿಸುವುದು ಸರಿಯಲ್ಲ ಎಂಬುದು ತಿಳಿದಿಲ್ಲವೇನು? "ಒಂದು
ಕಣ್ಣಿಗೆ ಬೆಣ್ಣೆ ಮತ್ತೊಂದು ಕಣ್ಣಿಗೆ ಸುಣ್ಣವೆ? "ಎಂದು ರಾಜು
ಪ್ರಶ್ನೆ ಕೇಳಿದಾಗ ರಂಗಮ್ಮ ನಿರುತ್ತರಳಾದಳು.
ಗೀತ ಗಂಡನ ಮನೆಗೆ ಹೋಗದೆ ಇಲ್ಲೇ ಇರುವ ತೀರ್ಮಾನ ಮಾಡಿದರೆ ನಾನು ಮನೆ ಬಿಟ್ಟು
ಹೋಗುತ್ತೇನೆ’ ರಾಜು ನಿರ್ಧಾರವಾಗಿ ಹೇಳಿದಾಗ ,ಇವರ ಮಾತುಕತೆಗಳನ್ನು
ಕೇಳುತ್ತಿದ್ದ ಗೀತಳಿಗೆ ರಾಜುವಿನ ಮಾತಿನಲ್ಲಿಯ ಸತ್ಯ ಗೋಚರವಾಯಿತು. ಲಕ್ಷ್ಮಿ ತನ್ನ ಅಪ್ಪ
ಅಮ್ಮನೊಡನೆ ಹೊಂದಿಕೊಂಡು ಇರಬೇಕು ಎಂದು ಬಯಸುವಂತೆಯೇ ತಾನೂ ತನ್ನ ಮನೆಯಲ್ಲಿ ಹೊಂದಿಕೊಂಡು
ಹೋಗಬೇಕೆನ್ನುವ ಅರಿವು ಬಂದಿತು. ಇಷ್ಟೆಲ್ಲ ಆಗುವ ವೇಳೆಗೆ ರಾಜು ಫೋನ್ ಮಾಡಿ ಸತೀಶನನ್ನು
ಕರೆಸಿದ್ದ. ಇವನ ಫೋನಿಗಾಗಿಯೇ ಕಾಯುತ್ತಿದ್ದ ಸತೀಶ ಓಡೋಡಿಬಂದ. ಅವನಿಗೂ ತನ್ನ ಹೆಂಡತಿಯನ್ನು ಬಿಟ್ಟಿರುವುದು ಸಹಿಸದಾಗಿತ್ತು.
ಸತೀಶ ತನ್ನ ತಪ್ಪಿರುವುದನ್ನು ಒಪ್ಪಿಕೊಂಡು ಎಲ್ಲರಿಂದಲೂ ಕ್ಷಮೆ ಕೇಳಿದ. ತನ್ನ ಅಸಹಾಯಕತೆಯೇ ಗೀತಾಳ ಮೇಲೆ ಕೈಮಾಡುವಂತೆ
ಮಾಡಿತೆಂದು , ಇನ್ನೆಂದೂ ಆರೀತಿ ವ್ಯವಹರಿಸುವುದಿಲ್ಲ ಎಂದೂ ವಿವರಿಸಿ
ಮನ್ನಿಸುವಂತೆ ಬೇಡಿದ. ಗೀತಳಿಗೂ ಗಂಡನ ಮೇಲೆ ಪ್ರೀತಿ. ಆದ್ದರಿಂದ ಅವನೊಡನೆ ಹೊರಡಲು ತಯಾರಾದಳು.
ಅಮ್ಮ ಅರೆ ಮನಸ್ಸಿನಿಂದಿದ್ದರೂ ಗೀತ ಮಾತ್ರ ತಾನು
ಅಲ್ಲಿರುವುದೇ ಸರಿ ಎಂದು ಹೇಳಿ ಹೊರಟಳು.
ಅಂದಿನ ಅವಳ ತೀರ್ಮಾನ ಇಂದಿನ ಸುಖದ ಬದುಕಿಗೆ
ನಾಂದಿಯಾಯಿತು.ಒಂದು ಗಂಡುಮಗುವಿನ ತಾಯಿಯಾದ ಗೀತ ತನ್ನ ಮಗನಿಗೆ ಸೂಕ್ತವಾದ ವಿದ್ಯಾಭ್ಯಾಸ
ಕೊಡಿಸುವ ಪಣತೊಟ್ಟಿದ್ದಾಳೆ . ತನ್ನಂತೆ ಒಂದೇ ಕೋಣೆಯ ಮನೆಯಲ್ಲಿರದೆ ದೊಡ್ಡಮನೆಯನ್ನು
ಕೊಳ್ಳುವಂತಾಗಲೀ ಎಂದು ಆಶಿಸುತ್ತಾಳೆ.
ಇತ್ತ ರಾಜುವಿನ ತಾಯಿಗೂ ತಿಳುವಳಿಕೆ
ಬಂದಿತು. ಸ್ವಭಾವತಃ ಕೆಟ್ಟವಳಲ್ಲದ ರಂಗಮ್ಮ ತನ್ನ ಸುಖವನ್ನು ನೋಡಿಕೊಳ್ಳುವ ಆತುರದಲ್ಲಿ ಮನೆಗೆ
ಬಂದ ಸೊಸೆಯ ಕಡೆಗೆ ಗಮನ ಕೊಡಲಿಲ್ಲ. ಮನೆಯ ಕೆಲಸದ
ಜವಾಬ್ದಾರಿಯನ್ನು ಅತ್ತೆಯೂ ಹಂಚಿಕೊಂಡದ್ದರಿಂದ ಲಕ್ಷ್ಮಿ ತನಗೆ ಗೊತ್ತಿರುವ ಕೈಕೆಲಸದ
ಪ್ರತಿಭೆಯಿಂದ ಹೊಲಿಗೆ ಕಲಿತು ಒಂದು ನೌಕರಿ
ಹಿಡಿದ್ದಿದ್ದಾಳೆ. ಇದರಿಂದ ಮನೆಯ ಸ್ಥಿತಿಯೂ ಉತ್ತಮವಾಗಿದೆ. ರಾಜುವೂ ಬೆಳಗಿನಿಂದ ಸಂಜೆಯ ತನಕ
ಅಟೋವನ್ನು ಓಡಿಸಿ ಸಂಜೆಯಹೊತ್ತಿಗೆ ಮನೆಗೆ
ಹಿಂತಿರುಗುತ್ತಾನೆ. ಹೆಂಡತಿ , ಅಪ್ಪ ಅಮ್ಮಂದಿರ ಜೊತೆ ಕುಳಿತು ಊಟ ಮಾಡುತ್ತಾನೆ.
ಕೈಯಲ್ಲಿ ನಾಲ್ಕಾರು ಕಾಸು ಕೂಡಿದೆ. ಸದ್ಯದಲ್ಲೆ ಎರಡು ಕೋಣೆಗಳಿರುವ ಮನೆಯನ್ನು ಕೊಳ್ಳಲು
ಯೋಚಿಸಿದ್ದಾರೆ.
ನಡೆದ ಕಹಿಘಟನೆಗಳೆಲ್ಲ ಮರೆತುಹೋಗಿ ನೆಮ್ಮದಿಯ ಬಾಳುವೆ ರಾಜುವಿನದಾಗಿದೆ ಎನ್ನುವುದು
ಸಮಾಧಾನಕರವಾದ ವಿಷಯ.
ಡಾ ಸತ್ಯವತಿ ಮೂರ್ತಿ
29-08-2022 ಕರ್ಮವೀರದಲ್ಲಿ ಪ್ರಕಟವಾಗಿದೆ.
Comments
Post a Comment