ದುಷ್ಟ ಅಂಚೆಯವನು
ನೀನೇಕೆ ಹತಾಶಳಾಗಿ ಕುಳಿತಿರುವೆ ನನ್ನಮ್ಮ
ಮಳೆಯ ಇರಿಚಲು ಒಳಗೆ ಹಾರುತಿವೆ
ಬಟ್ಟೆ ನಿನ್ನವು ತೊಯ್ದುಹೋಗುತಿವೆ
ಅರಿವಿರದೆ ಮೈಮರೆತು ನೆಲದಲ್ಲಿ ಕುಳಿತಿರುವೆ?
ಚರ್ಚಿನ ಗಡಿಯಾರ ನಾಲ್ಕು ಬಾರಿಸಿದ್ದೂ ಕೇಳಿಸಿಲ್ಲೇನು?
ಇನ್ನೇನು ತಮ್ಮ ಬರುವ ಹೊತ್ತಾಯ್ತು ಶಾಲೆಯಿಂದ.
ಅದರರಿವೂ ಇರದೆ ಅಪರಿಚಿತಳಂತಿರುವೆಯಲ್ಲ!
ಓ.... ! ಅಪ್ಪನಿಂದ ಪತ್ರಬರಲಿಲ್ಲವೇನು ಇನ್ನೂ?
ನೋಡಿದ್ದೆ ನಾನು ಹೋಗುತ್ತಿದ್ದ ಅಂಚೆಯವನನ್ನ!
ಎಲ್ಲರಿಗೂ ಪತ್ರ ತಂದುಕೊಟ್ಟವನನ್ನ!
ಅಪ್ಪನ ಪತ್ರವನು ಮಾತ್ರ ಕೊಡದೆ ಹೋದನು,
ತನಗೇ ಓದಲು ಬೇಕೇನೋ? ಬಹಳ ದುಷ್ಟನವನು.
ನೀ ಬೇಸರಿಸದಿರು ಅದಕಾಗಿ ನನ್ನಮ್ಮ.
ನಾಳೆ ಸಂತೆಯು ನೆರೆಯೂರಿನಲಿ
ಆಳುಗಳ ಕಳಿಸಿ ತರಿಸು ಪೇಪರು ಪೆನ್ನುಗಳ
ನಾನೇ ಕೈಯಾರ ಬರೆದುಕೊಡುವೆ ಅಪ್ಪನಾ ಪತ್ರಗಳ!
ಎದೆ ತಟ್ಟಿ ಹೇಳುವೆನು, ಒಂದೂ ತಪ್ಪನು ನೀ ಕಾಣಲಾರೆ
ನನಗೆಲ್ಲ ಗೊತ್ತು ’ಅ’ ಇಂದ ”ಅಃ" ತನಕ
ಏಕಮ್ಮ ನಗುತಿಹೆ ನನ್ನ ಮಾತನು ಕೇಳಿ?
ನಿನಗೆ ನಂಬಿಕೆ ಯಿಲ್ಲವೇನು? ಅಪ್ಪನಂತೆ ನಾ ಗುಂಡಾಗಿ ಬರೆಯೆನೇನು?
ನಂಬು ನನ್ನನ್ನು , ಪೇಪರಿಗೆ ರೂಲುದೊಣ್ಣೆಯನಿಟ್ಟು
ಅಪ್ಪನಷ್ಟೇ ಮುತುವರ್ಜಿಯಲಿ , ಬರೆವೆನು ದಪ್ಪ ದಪ್ಪಕ್ಷರಗಳಲಿ
ಚಿಂತಿಸಬೇಡ ನೀನು ನಾ ಬರೆದ ಪತ್ರವನು ಕೊಡೆನು ಅಂಚೆಯವನಿಗೆ
ನಾನೇ ಕೊಡುವೆ ತಂದು ನಿನ್ನ ಕೈಗೆ! ಓದಿ ಹೇಳುವೆ ಒಂದೊಂದೇ ಅಕ್ಷರವ!
ನನಗೆ ತಿಳಿದಿದೆ ಅಮ್ಮ ಅಂಚೆಯವನ ಮನಸ್ಸು, !
ನಿನಗೆ ಕೊಡಲಾರ ಅವ ಸುಂದರ ಪತ್ರಗಳ!!
ಡಾ ಸತ್ಯವತಿ ಮೂರ್ತಿ
ಆಧಾರ: ರವೀಂದ್ರ ನಾಥ ಟಾಗೋರ್ ಅವರ "THE CRESCENT MOON"
ನಿಂದ ಆಯ್ದ " THE WICKED POSTMAN"
ಕನ್ನಡಪ್ರಭ ಪತ್ರಿಕೆಯಲ್ಲಿ ಜನವರಿ ೨೦೨೨ ರಲ್ಲಿ ಪ್ರಕಟವಾಗಿದೆ.
ಕುವೆಂಪು ಪ್ರಾಧಿಕಾರದ ಚಾತುರ್ಮಾಸಿಕ ಪತ್ರಿಕೆಯಲ್ಲೂ ಆಗಸ್ಟ್ ೨೦೨೨ ರಲ್ಲಿ ಪ್ರಕಟವಾಗಿದೆ.
Comments
Post a Comment