ಹೊಂದಾಣಿಕೆ
ಹೊಂದಾಣಿಕೆ
ಚೆದುರಿದ ಕಾಳನು ಅನ್ನದ ಅಗುಳನು
ರೊಟ್ಟಿಯ ತುಣುಕನು ಚುಂಚಿನಲಿ
ಒಂದನೂ ಬಿಡದೆ ಭೇದವ ಮಾಡದೆ
ರುಚಿ ಅರುಚಿಗೆ ಕಾಲ ಕಳೆಯದೆ
ಅಪ್ಪ ಅಮ್ಮದಿರು ಅಕ್ಕತಂಗಿಯರು
ಅಣ್ಣ ತಮ್ಮದಿರು ಬಂಧುಬಾಂಧವರು
ಅಕ್ಕಪಕ್ಕದ ಅವರಿವರೆಲ್ಲರು ಕೂಡಿ
ತಿನ್ನುತಿವೆ ಸಮಭೋಗದಲಿ ಸಮಭಾಗದಲಿ
ಶೀಘ್ರದಿ ನುಂಗಿ ಮುಗಿಸಲು ಬೇಕು
ಹೊತ್ತನು ಮೀರದೆ ಹೋಗಲು ಬೇಕು
ಗೂಡಲಿ ಹಸಿವೆಗೆಕಿರುಚುವ ಮರಿಗೆ
ಹೊಟ್ಟೆಗೆ ತುತ್ತನು ಒಯ್ಯಲು ಬೇಕು
ಒಮ್ಮೆ ಒಂದು ಗುಟುಕನು ಹಿಡಿದು
ಬಂದಿತು ದೂರದ ಮಾಡಿನ ಮೇಲ್ಗಡೆ
ಉಳಿದವು ಹೆಕ್ಕಲು ಅನುವನು ಕೊಡುತ
ತನ್ನಯ ಕೊಕ್ಕಿನ ಊಟವ ಮುಗಿಸಲು.
ಒಮ್ಮೆಯು ಒಂದರ ಕಚ್ಚಾಟವ ಕಾಣೆ
ಜಗಳವದಂತೂ ಇಲ್ಲವೆ ಇಲ್ಲ
ಸರದಿಗೆ ಕಾಯುತ ತಾಳ್ಮೆಯ ಲಿರುವರು
ಎಲ್ಲರು ಅಲ್ಲಿ ಸಮಭಾಗಿಗಳು
ಕೂಡಿ ಬಾಳುವುದರಲ್ಲಿ ಸುಖವಿದೆ
ಒಗ್ಗಟ್ಟಿನಲ್ಲಿ ಎಲ್ಲರ ಬಲವಿದೆ
ಭೂಮಿಯು ಇತ್ತುದು ಎಲ್ಲರ ಸ್ವತ್ತು
ಸ್ವಾರ್ಥಕೆ ಹಮ್ಮಿಗೆ ಇಲ್ಲವು ಹೊತ್ತು
ಹೊಂದಾಣಿಕೆಯಿದು ಮನುಜನಲ್ಲಿಲ್ಲ
ಹಕ್ಕಿಯ ನೋಡಿಯೂ ಕಲಿಯುವುದಿಲ್ಲ
ನಾನು ನನ್ನದು ಸ್ವಾರ್ಥವದಿಲ್ಲದೆ
ಸಮತಾಭಾವವ ಹೇಳುತ್ತವಲ್ಲ!
ಅದಂದಿನ ಜೀವನ ಅಂದಿಗೆ ಮೀಸಲು
ಬರುವುದು ನಾಳೆ ಏನೇ ಇರಲಿ
ಇಂದಿನ ಬದುಕನು ಬದುಕುವ ತಂತ್ರವ
ಹಕ್ಕಿಯ ನೋಡಿ ಕಲಿಯಲು ಬೇಕು
ಬಂದಿತು ಅಲ್ಲಿ ಹೊಸ ಹಕ್ಕಿಯೊಂದು
ಬಣ್ಣದಿ ಅದುವೆ ಇವುಗಳಿಗೆ ಹೊರತು
ಅಚ್ಚ ಬಿಳಿಯ ಬಣ್ಣದು ಅದರದು
ದೇಹವೋ ಗಾತ್ರದಿ ಇಮ್ಮಡಿಯದರದು
ನುಗ್ಗುವುದಿಲ್ಲ ಬೆದರಿಸುವುದಿಲ್ಲ
ಕಾಯ್ವುದು ತನ್ನಯ ಸರದಿಯು ಬರಲು
ಎಲ್ಲರ ಜೊತೆಯಲಿ ಸಮ ಸಮದಲಿ!
ಮೊದಲು ಬಂದಗೆ ಮೊದಲ ತುತ್ತು
ಇರುವುದ ಹಂಚಿ ತಿನ್ನಲು ಕಲಿಯಿರಿ
ನಾನು ನನ್ನದು ಮಂತ್ರವ ತ್ಯಜಿಸಿರಿ
ಮೇಲು ಕೀಳು ಭೇದವ ಮರೆಯಿರಿ
ಹಕ್ಕಿಗಳಂತೆ ಬಾಳಲು ಕಲಿಯಿರಿ
ಡಾ ಸತ್ಯವತಿ ಮೂರ್ತಿ
೧೨-೦೮-೨೦೨೧
Comments
Post a Comment