ಆಸ್ಟ್ರೇಲಿಯಾ ಪ್ರವಾಸ ಕಥನ
ಆಸ್ಟ್ರೇಲಿಯಾ ಪ್ರವಾಸ ಕಥನ
( ಈ ವಿವರಗಳು ಸುಮಾರು 20 ವರ್ಷಕ್ಕೂ
ಹಳೆಯದಾಗಿದ್ದು ಇತ್ತೀಚೆಗೆ ಆಗಿರಬಹುದಾದ ಬದಲಾವಣೆಗಳನ್ನು ಗಣನೆಗೆ ತೆಗೆದುಕೊಂಡಿಲ್ಲ)
ಆಸ್ಟ್ರೇಲಿಯಾಕ್ಕೆ ಇದು ನನ್ನ ಮೊದಲ
ಪ್ರಯಾಣವೇನೂ ಅಲ್ಲ. ಕಳೆದ ಡಿಸೆಂಬರ್ ನಲ್ಲಿ ಹೋಗಿ ಆರು ವಾರಗಳು ತಂಗಿದ್ದೆ . ಆದರೆ ಈ ಬಾರಿಯ
ಪ್ರಯಾಣ ವಿಶೇವಾಗಿತ್ತು.ಮಗ ಡಿಗ್ರಿ ತೆಗೆದುಕೊಳ್ಳುವ ಸಮಾರಂಭವನ್ನು ನೋಡುವುದು ಸಂಭ್ರಮದ
ವಿಷಯವಾಗಿತ್ತು. ಈ ಬಾರಿಯ ಪ್ರಯಾಣದಲ್ಲಿ ಮೂರ್ತಿ ಬೇರೆ ನನ್ನ ಜೊತೆಗಿದ್ದರು . ಪ್ರತಿಬಾರಿಯೂ
ಅವರ ಕೆಲಸದ ಒತ್ತಡದಿಂದ ನಾನೊಬ್ಬಳೇ ಹೋಗಿ ಬರುವುದಾಗುತಿತ್ತು.ನಿಜವಾದ ಅರ್ಥದಲ್ಲಿ ಅದು ನಮ್ಮ
ಪ್ರವಾಸವೇ ಸರಿ.ಮೇ 6 ನೇ ತಾರಿಖು ಬಹಳ ಕಾತರದಿಂದ ಎದುರು ನೋಡುತ್ತಿದ್ದ ದಿನ. ಆಸ್ಟ್ರೇಲಿಯದಲ್ಲಿ
ಎಂ ಎಸ್ ಓದಿದ ನಮ್ಮ ಮಗ , ಮೇ ಹತ್ತನೇ ತಾರೀಖು ಶಾಸ್ತ್ರೋಕ್ತವಾದ ರೀತಿಯಲ್ಲಿ ಪದವಿ
ಸ್ವೀಕರಿಸುವವನಿದ್ದ.ಯಾವುದೇ ತಂದೆ ತಾಯಿಗಳ ಜೀವನದ ಮಹತ್ವದ ದಿನಗಳಲ್ಲಿ ಒಂದು. ಆ ಸಮಾರಂಭಕ್ಕೆ
ನಾವೂ ಬರಲೇಬೇಕೆಂಬ ಒತ್ತಾಯವೂ ಇದ್ದು ನಮಗೂ ಹೋಗುವ ಆಸೆ ತೀವ್ರವಾಗಿದ್ದುದರಿಂದ ಪ್ರಯಾಣಕ್ಕೆ
ಸಿದ್ಧರಾಗಿದ್ದೆವು.
6 ನೇ ತಾರೀಖು ಶನಿವಾರ ಬೆಳಗ್ಗೆ 9:30 ಕ್ಕೆ ಹೊರಡುವ ಸಿಂಗಪೂರ್ ಏರ್ಲೈನ್ಸ್ ಹತ್ತಿ ಆಸ್ಟ್ರೇಲಿಯಾಕ್ಕೆ ಹೊರಟೆವು.ಗೋಳದ ಒಂದು
ದಿಕ್ಕಿನಿಂದ ಇನ್ನೊಂದು ದಿಕ್ಕಿಗೆ ಸರಿಯಾಗಿ 180 ಡಿಗ್ರಿಗಳಲ್ಲಿ ಪ್ರಯಾಣ. ಸುಮಾರು 25 1/2
ಗಂಟೆಗಳ ದೀರ್ಘ ಪ್ರಯಾಣದಲ್ಲಿ ಮೂರು ಗಂಟೆಗಳಷ್ಟು ಕಾಲದ ವಿರಾಮ. ಬೆಳಗ್ಗೆ 9:30ಕ್ಕೆ
ಮ್ಯಾಂಚೆಸ್ಟರ್ ಬಿಟ್ಟ ನಾವು ಬೊಂಬಾಯಿ ತಲಪಿದಾಗ ರಾತ್ರೆ 11 ಗಂಟೆ ಯಾಗಿತ್ತು. ಒಂದು ಗಂಟೆಯ
ವಿರಾಮದ ನಂತರ ಹೊರಟ ವಿಮಾನ ಮಾರನೆಯ ಬೆಳಗ್ಗೆ 8:30ಕ್ಕೆ ಸಿಂಗಪೂರ್ ಅನ್ನು ತಲಪಿತು. ಎರಡು
ಗಂಟೆಗಳ ವಿರಾಮವಾದ ಕೂಡಲೆ ನಾವು ಇನ್ನೊಂದು ವಿಮಾನವನ್ನು ಏರಬೇಕಾಗಿದ್ದಿತು.ಏರ್ಪೋಟ್ ನಲ್ಲಿದ್ದ
"ಡ್ಯೂಟಿ ಫ಼್ರೀ" ಅಂಗಡಿಗಳಲ್ಲಿ ಒಂದೆರಡು ಸುಗಂಧ ತೈಲದ ಸೀಸೆಗಳು, ಹಾಗೂ ಒಂದು ಕ್ಯಾಮರಾ ಕೊಂಡುಕೊಂಡೆವು. ವಿಮಾನ ತನ್ನಹೊಟ್ಟೆಯನ್ನು
ತುಂಬಿಸಿಕೊಂಡು ನಮ್ಮ ಹೊಟ್ಟೆಗೂ ಸಾಕಷ್ಟು ತುಂಬಿಸಿಕೊಂಡು 10:30 ಗಂಟೆಗೆ ಹೊರಟಿತು.
ಸಿಂಗಪುರದಿಂದ 6 1/2 ಗಂಟೆಗಳ ಪ್ರಯಾಣ ’ಮೆಲ್ಬೋರ್ನ್’ ಗೆ . ಹಾಗಾಗಿ ಸಂಜೆ ಏಳು ಗಂಟೆಗೆ ಮೆಲ್ಬೋರ್ನ್ ತಲಪಿದೆವು.
ಪಶ್ಚಿಮದಿಂದ ಪೂರ್ವದ ಕಡೆಗೆ ನಡೆದಿದ್ದ
ನಾವು ಸುಮಾರು 9 ಗಂಟೆಗಳಷ್ಟು ಕಾಲವನ್ನು ಕಳೆದುಕೊಂಡಿದ್ದೆವು.
ಏರ್ಪೋರ್ಟಿಗೆ ನಮ್ಮ ಮಗ ರವಿ ತನ್ನ
ಗೆಳೆಯರೊಂದಿಗೆ ಬಂದಿದ್ದ. ನಮಗಾಗಿ ಹೊಸ ಬೀಟಲ್ಸ್ ಕಾರನ್ನು ತಂದಿದ್ದ. ಅದರಲ್ಲಿ ಕುಳಿತು ರವಿ
ವಾಸವಾಗಿದ್ದ ಮನೆಗೆ ಹೊರಟೆವು. ಮೊದಲ ಬಾರಿಗೆ ತನ್ನದೇ ಆದ ಕಾರನ್ನು ರವಿ ತಂದಿದ್ದ
ಎನ್ನುವುದರೊಡನೆ ಅವನೇ ಕಾರನ್ನು ನಡೆಸುತ್ತಿದ್ದ
ಎನ್ನುವುದು ನನಗೆ ಹೆಮ್ಮೆಯ ವಿಷಯವಾಗಿತ್ತು. ದಾರಿಯುದ್ದಕ್ಕೂ ಮೆಲ್ಬೋರ್ನ್ ನಗರದ ಸೌಂದರ್ಯವನ್ನು
ನೋಡುತಾ ಸಾಗುತ್ತಿದ್ದೆ. ಎಲ್ಲೆಡೆ ಹಸುರಿನಿಂದ ಕೂಡಿದ ವಿಸ್ತಾರವಾದ ರಸ್ತೆಗಳುಳ್ಳ ವಿರಳ
ಜನಸಂಖ್ಯೆಯ ನಗರ ಮೆಲ್ಬೋರ್ನ್ ಅತಿಸುಂದರ.
ದಾರಿಯುದ್ದಕ್ಕೂ ಸಾಲು ಮರಗಳು. ಪ್ರಕೃತಿಯ ಮಡಿಲಾದ ಇಂಗ್ಲೆಂಡಿನಿಂದ ಅಲ್ಲಿಗೆ ಹೋಗಿದ್ದರೂ ಅದೇನೋ ಒಂದು
ಆಕರ್ಷಣೆ .ಮೊದಲನೆಯ ನೋಟಕ್ಕೇ ಬಹಳ ಇಷ್ಟವಾಗುವ ನಗರ.
ರವಿ ವಾಸವಾಗಿದ್ದ ಮನೆಬ್ರಹ್ಮಚಾರಿಗಳ
ನಿವಾಸವಾದ್ದರಿಂದ ಅಲ್ಲಿ ಉಳಿದುಕೊಳ್ಳಲು ಸಾಧ್ಯವಾಗುವಂತಿರಲಿಲ್ಲ. ಆದರೆ ಅಲ್ಲಿಯೇ ಊಟ ಮಾಡಿ
ಸ್ನೇಹಿತರೆಲ್ಲ ಕುಶಲೋಪರಿ ಮುಗಿಸಿ ನಮಗಾಗಿ ವ್ಯವಸ್ಥೆಯಾಗಿದ್ದ ಮನೆಗೆ ಹೊರಟೆವು.ಪ್ರಯಾಣದ
ಪಟ್ಟಣಕ್ಕೆ ಸುಮಾರು ನಲವತ್ತು ಕಿ ಮೀ ದೂರದಲ್ಲಿದ್ದ ಮನೆಗೆ ಬಂದಿಳಿದೆವು. ಪ್ರಯಾಣದ ಆಯಾಸ
ಬಹಳವಾಗಿತ್ತಾದ್ದರಿಂದ ಮಲಗಿದ್ದೇ ತಡ ನಿದ್ದೆಯಾಳಕ್ಕೆ ಬಹುಬೇಗ ಇಳಿದಿದ್ದೆವು.
*********** ********************* *********************
ದಿನಾಂಕ 07-05-00 . ಪ್ರಯಾಣದ
ಆಯಾಸದಿಂದ ಮಲಗಿದ ನಮಗೆ ಕಾಲದ ಅಂತರವೂ ಸೇರಿ ಬೆಳಿಗ್ಗೆ ಎಳುವುದೇ ತಡವಾಯಿತು. ಬೆಳಿಗ್ಗೆ
ಎಂದರೇನು? ನಾವು ಎದ್ದಾಗ ಮಟ ಮಟ ಮಧ್ಯಾಹ್ನ 1 ಗಂಟೆ. ಹಾಗಾಗಿ
ಅಂದು ಹೆಚ್ಚೇನೂ ನೋಡುವುದು ಸಾಧ್ಯವಾಗಲಿಲ್ಲ. ಎದ್ದು ಸ್ನಾನ ಮುಗಿಸಿ, ಇದ್ದಲ್ಲಿಯೇ
ದೆವರಿಗೆ ಕೈಮುಗಿದು, ಉದರ
ಪೋಷಣೆಯನ್ನೂ ಮಾಡಿ ಮೆಲ್ಬೋರ್ನ್ ನಗರದ
ದರ್ಶನಕ್ಕಾಗಿ ಹೊರಟೆವು. ಕಾರಿನಲ್ಲೆ ಕುಳಿತು ನಗರವನ್ನು ಒಂದು ಪ್ರದಕ್ಷಿಣೆ ಮಾಡಿ
ಮನೆಗೆ ಹಿಂತಿರುಗಿ ಬಂದು ರಾತ್ರಿಯ ಊಟ ಮುಗಿಸಿ ಮಲಗಿದೆವು.
08-05-00 ಬೆಳಗ್ಗೆ ಬೇಗನೆ ಎದ್ದು
ಸ್ನಾನಾದಿಗಳನ್ನು ಮುಗಿಸಿ ಸಿಟಿಗೆ ಹೋಗಿ ( ಇಲ್ಲಿ ನಗರದ ಕೇಂದ್ರಸ್ಥಾನವನ್ನು ’ಸಿಟಿ’
ಎನ್ನುತ್ತಾರೆ, ಇಂಗ್ಲೆಂಡಿನಲ್ಲಿ ’ಟೌನ್ ಸೆಂಟರ್’ ಆದರೆ
ಅಮೆರಿಕನ್ನರಿಗೆ ’ಡೌನ್ ಟೌನ್’) . ನಗರದ ನಡುವಣ ರಸ್ತೆಗಳೂ ಅಗಲದಲ್ಲಿ ಏನೂ ಕಡಿಮೆಯಿಲ್ಲ.
ಜೊತೆಗೆ ಒಂದೊಂದು ಅಂಗಡಿಯೂ ಇಂಗ್ಲೆಂಡಿನಲ್ಲಿ ಕಾಣುವ ಅಂಗಡಿಗಳಿಗಿಂತ ಬಹಳ ದೊಡ್ಡವು.
ಅಸ್ಟ್ರೇಲಿಯಾದ ತವರು ಇಂಗೆಂಡಾದರೂ ಕೆಲವೊಂದು ವಿಚಾರಗಳಲ್ಲಿ ಅಮೆರಿಕೆಯನ್ನು ಅನುಸರಿಸಿದ್ದಾರೆ. ತುರ್ತಾಗಿ ಕೊಳ್ಳಬೇಕಾಗಿದ್ದ ಒಂದೆರಡು ಪದಾರ್ಥಗಳನ್ನು
ಖರೀದಿಸಿ ಆಸ್ಟ್ರೇಲಿಯಾದ ವಿಶಾಲವಾದ ಆ ಬೀದಿಗಳಲ್ಲಿ ಸುತ್ತಿ ,ಬಿಳಿಯರ
ನಡುವೆಯೂ ದೊರೆಯುವ ಮಸಾಲೆ ದೋಸೆ ಯನ್ನು ಕಟ್ಟಿಸಿ ಕೊಂಡು ನಂತರ ಗಣೇಶಮಂದಿರಕ್ಕೆ ಮಾಡಲೆಂದು ಹೊರಟೆವು. ನಗರಕ್ಕೆ 50 ಕಿಲೋಮೀಟರ್
ದೂರದಲ್ಲಿರುವ ಆ ಗಣೇಶನನ್ನು ನೋಡುವುದೇ ಒಂದು ಸೊಗಸು. ನಮ್ಮದೇ ಕಾರು ಇದ್ದದ್ದರಿಂದ ಪ್ರಯಾಣದ
ಅನುಕೂಲಕರವಾಗಿತ್ತು.ಇಲ್ಲದಿದ್ದರೂ ಟ್ರಾಮ್ ಗಳು, ರೈಲುಗಳು
ಎಲ್ಲದಿಕ್ಕಿನಲ್ಲೂ ಬೆಳಗ್ಗೆ 5:30 ರಿಂದ ರಾತ್ರೆ 12 ಗಂಟೆಯವರಗೆ ಎಡೆಬಿಡದೆ ಓಡಾಡುತ್ತವೆ. ನಮ್ಮ
ದೇಶದಲ್ಲಿರುವಂತೆಯೇ ಭವ್ಯವಾಗಿ ರಚಿತವಾಗಿರುವ ದೇವಾಲಯಗಳು ನಮ್ಮ ಸಂಸ್ಕೃತಿಯ ಆಳ ಹರಹುಗಳಿಗೆ
ಪ್ರಾತೀಕಗಳಾಗಿವೆ. ’ವಕ್ರತುಂಡ ವಿನಾಯಗರ್’ ಮಂದಿರ ಮೆಲ್ಬೋರ್ನ್ ನಗರದ ಮೊಟ್ಟಮೊದಲ ಹಿಂದೂ
ದೇವಸ್ಥಾನ. ಆದರೆ ಇಲ್ಲಿರುವ ಅರ್ಚಕರುಗಳು ಇನ್ಕಂಟ್ಯಾಕ್ಸ್ ವಿಭಾಗದಲ್ಲೋ , ಕಸ್ಟಮ್ಸ್ ವಿಭಾಗದಲ್ಲೋ ಇರಬೇಕಾದವರು ಅಪ್ಪಿತಪ್ಪಿ ದೇವಸ್ಥಾನದ ಅರ್ಚಕರಾಗಿಬಿಟ್ಟಿದ್ದಾರೆ.
ಅಥವ ಹಿಂದಿನ ಜನ್ಮದಲ್ಲಿ ವ್ಯಾಪಾರಿಗಳಾಗಿದ್ದು
ಅದರ ವಾಸನೆ ಈ ಜನ್ಮಕ್ಕೂ ಬಂದಿರಲಿಕ್ಕೆ ಸಾಕು. ಅಥವಾ ಮೊಟಕಾಗಿ ಹೇಳಬೇಕಾದರೆ ದೇವರ
ದಳ್ಳಾಳಿಗಳು . ದೇವರು ವರಕೊಡಬಹುದು ಕಾಯಿ ಕಪ್ಪುರವಿಲ್ಲದೆ! ಅರ್ಚಕರು ಮಾತ್ರ ವರಹ
ವಿಲ್ಲದೆ ದೇವರಿಗೆ ನಮ್ಮ ಶಿಫಾರಸ್ಸು
ಮಾಡುವುದಿಲ್ಲ. ಹಣ್ಣು ಕಾಯಿಗೆ ಕೊಟ್ಟ ತೆಂಗಿನಕಾಯಿಯ ಒಂದು ಹೋಳನ್ನು ಇಟ್ಟುಕೊಂಡು
ಉಳಿದುದನ್ನು ಹಿಂತಿರುಗಿಸುವುದಿಲ್ಲವೇ ಹಾಗೇ ನಾವು’ವರಹ’ ಕೊಟ್ಟರೆ ’ವರ’ ವಾಪಸ್ ಬರುತ್ತದೆ.
ಆದರೂ ನಾವೇನೂ ಜಗ್ಗುವವರಲ್ಲ. ದೇವರನ್ನು ನೋಡಿಯೆ ತೀರುತ್ತೇವೆ. (ಕ್ಷಮಿಸಿ ಮೂರ್ತಿಯನ್ನು!) . ನಾವು ದೇವಸ್ಥಾನಕ್ಕೆ
ಹೋಗುವ ವೇಳೆಗೆ ಮಧ್ಯಹ್ನ ವಾಗಿಹೋಗಿತ್ತು. ಹಾಗಾ
ಗಿ ದೇವಸ್ಥಾನದ ಬಾಗಿಲು ಮುಚ್ಚಿತ್ತು.ದೇವಸ್ಥಾನದ ಗರಿಮೆಯನ್ನು ಉಳಿಸಿಕೊಳ್ಳುವುದರಲ್ಲಿ ಅರ್ಚಕರು
ವಿಫಲರಾಗಿದ್ದಾರೆ ಎಂದರೆ ತಪ್ಪಾಗಲಾರದು.
ಮತ್ತೆ ತೆರೆಯುವುದು 5 ಗಂಟೆಗೆ , ಆದ್ದರಿಂದ ಅಲ್ಲೇ ಹತ್ತಿರದಲ್ಲಿ ಇದ್ದ ಭಾರತೀಯ ಅಂಗಡಿಗೆ ಧಾಳಿ
ಮಾಡಿದೆವು. ಅದು ಬರಿ ಅಂಗಡಿಯಲ್ಲ. ಹೋಟೆಲ್ ಸಹ ಆಗಿತ್ತು. ಉದ್ದಿನವಡೆ ಗಾಜಿನ ಮೂಲಕ
ಆಕರ್ಷಿಸಿತು. ಈಗಾಗಲೇ ಬೆಳಗ್ಗೆ ಕಟ್ಟಿಸಿತಂದಿದ್ದ ಮಸಾಲೆ ದೋಸೆ ಇದ್ದರೂ ಉದ್ದಿನವಡೆಯನ್ನು ನೋಡಿದ ಕೂಡಲೆ ಬಾಯಲ್ಲಿ ನೀರೂರಿ
ನಾನು ’ಉದ್ದಿನ ವಡೆ ತಿನ್ನೋಣ’ ಅಂದೆ.
ಆಯಿತು ಎಲ್ಲರೂ ಒಂದೊಂದು ವಡೆಯನ್ನು ತೆಗೆದುಕೊಂಡೆವು.ಆದರೆ ನನ್ನ
ಮಗನಿಗೆ ಅನುಭವ ಚೆನ್ನಾಗಿತ್ತು ಅಲ್ಲಿಯ ಹೋಟೆಲಿನ ತಿಂದಿಗಳ ಬಗೆಗೆ. ಅದಕ್ಕೇ ಅಂತ ಕಾಣುತ್ತೆ
ಒಂದೊಂದು ದೋಸೆಯನ್ನೂ ಮೊದಲೇ ಹೇಳಿಟ್ಟಿದ್ದ.
ಬಂತು ಉದ್ದಿನವಡೆ ತಟ್ಟೆಯಲ್ಲಿ ಸಿಂಗಾರವಾಗಿ ಸಾಂಬಾರಿನೊಡನೆ
ಬಂದಿತು.ಉದ್ದಿನ ವಡೆ ಕೊಟ್ಟ ಆ ಪುಣ್ಯಾತ್ಗಿತ್ತಿ ಒಂದು ಸುತ್ತಿಗೆಯೋ , ಹಾರೆಯೋ ಜೊತೆಗೆ ಕೊಡಬಾರದಿತ್ತೇ? ಫೋರ್ಕ್
ಮತ್ತು ಚಾಕುಗಳನ್ನು ಕೊಟ್ಟಳು. ಒಮ್ಮೆ ಚಾಕುವಿನಿಂದ ವಡೆಯನ್ನು ಕತ್ತರಿಸುವ ಪ್ರಯತ್ನ ಮಾಡಿದ್ದೇ
ತಡ ಅದು ತಪ್ಪಿಸಿಕೊಂಡು ಕೆಳಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿತು.ಇದಾದ ಮೇಲೆ ಇನ್ನೋದು
ವಡೆಯನ್ನು ಚಾಕುಬಿನಿಂದ ಮುಟ್ಟುವ ಧೈರ್ಯವಾಗಲಿಲ್ಲ.ಅದನ್ನು ತೆಗೆದು ಸಾಂಬಾರಿನೊಳಗೆ ಮುಳುಗಿಸಿ
ಹತ್ತು ನಿಮಿಷಗಳಷ್ಟು ಕಾದೆವು .ಸ್ವಲ್ಪ ಮೃದುವಾಯಿತು.ಹಣಕೊಟ್ಟ ತಪ್ಪಿಗೆ ಹೇಗೋ
ತಿಂದಾಯಿತು.ನನಗೀಗ ತಿಳ್ಲ್ಯಿತು ರವಿ ಮಾಸಾಲೆ ದೋಸೆಯನ್ನೇಕೆ ಕಟ್ಟಿಸಿಕೊಂಡು ಬಂದಿದ್ದ ಎಂದು.
ವಡೆಯನ್ನು ತಿಂದು ಉಂಟಾದ ಸಂಕಟವನ್ನು ನೀರುಕುಡಿದು ನೀಗಿಸಿಕೊಂಡದ್ದಾಯಿತು.ಅಲ್ಲಿಂದ ಮತ್ತೆ
ದೇವಸ್ಥಾನಕ್ಕೆ ಹೋದೆವು. ಬಾಗಿಲು ತೆರೆದಿತ್ತು. ಭವ್ಯವಾದ ಮಂದಿರದಲ್ಲಿ ಪ್ರತಿಷ್ಟಿತವಾಗಿರುವ
ಸುಂದರವಾದ ಗಣಪತಿ, ಶಿವ , ವಿಷ್ಣು ಅಂಬೆ
ಎಲ್ಲರ ದರ್ಶನ ಮಾಡಿ ಹಣ್ಣುಕಾಯಿ ಅರ್ಚನೆ ಮಾಡಿಸಿಕೊಂಡು ಹೊರಗೆ ಬಂದೆವು.ಹೇಳಲು ಮರೆತೆ. ಇಲ್ಲಿ
ಸಿಲೋನಿನ ಹಾಗೂ ಕೇರಳದ ಜನ ಬಹಳ ಇರುವುದರಿಂದ ಇಲ್ಲಿನ ದೇವಸ್ಥಾನಗಳಲ್ಲಿ ನಮ್ಮ ದಕ್ಷಿಣ ಇಂಡಿಯಾದ
ದೇವಸ್ಥಾನಗಳಲ್ಲಿ ಮಾಡುವಂತೆಯೆ ಅರ್ಚನಾದಿಗಳನ್ನು ಮಾಡುತ್ತಾರೆ.ಅಲ್ಲಿಂದ ಹಿಂತಿರಿಗಿ ಬಂದು ಅಚ್ಚುಕಟ್ಟಾಗಿ ಅಡಿಗೆ ಮಾಡಿ ಊಟ ಮಾಡಿ ಮಲಗಿದೆವು
ದಿನಾಂಕ 10-05-00 ನಾವು ಉದ್ದೇಶವಿಟ್ಟು
ಬಂದದಿನ. ಕಾನ್ವೋಕೇಶನ್ ಮಧ್ಯಾಹ್ನ 2 ಗಂಟೆಗೆ.
ಆದರೆ ಪದವಿ ಸ್ವೀಕರಿಸುವ ಅಭ್ಯರ್ಥಿಗಳು
12 ಗಂಟೆಗೇ ಅಲ್ಲಿರಬೇಕು. ಹಾಗಾಗಿ ರವಿ ನಮಗಿಂತ ಮೊದಲೇ ಕಾರ್ಯಕ್ರಮದ ಸ್ಥಳಕ್ಕೆ ತಲಪಿದ್ದ. ನಾನು , ಮೂರ್ತಿ ಹಾಗೂ ರವಿಯ ಸ್ನೇಹಿತರ ಮನೆಯವರು 1 ಗಂಟೆಯ ವೇಳೆಗೆ ತಲಪಿದೆವು.
ಎರಡು ಗಂಟೆಗೆ ಸರಿಯಾಗಿ ಕಾರ್ಯಕ್ರಮ ಆರಂಭವಾಯಿತು. ಮೊದಲು ಬ್ಯಾಚುಲರ್ಸ್ ಡಿಗ್ರೀ ಪದವಿ ಪ್ರಾದಾನ
ನಡೆಯಿತು. ನಂತರ ಮಾಸ್ಟರ್ಸ್. ವಿಶ್ವವಿದ್ಯಾನಿಲಯದ ಪರವಾದ ಗೌನು ಧರಿಸಿ ತಲೆಗೆ ಟೊಪ್ಪಿಯಿಟ್ಟು
ರವಿ ವೇದಿಕೆಯ ಮೇಲೆ ಬಂದು ಪ್ರಶಸ್ತಿಪತ್ರವನ್ನು ಸ್ವೀಕರಿಸಿದಾಗ ಹೆಮ್ಮೆ ಎನಿಸಿತು. ನಮ್ಮೆಲ್ಲ ಶ್ರಮ ಸಾರ್ಥಕವೆನಿಸಿ
ಕೃತಕೃತ್ಯತೆಯ ಕಣ್ಣೀರು ಹರಿಯಿತು. ಎಮ್ ಎಸ್ ಡಿಗ್ರಿಯನ್ನು ಹೈ ಡಿಸ್ಟಿಂಕ್ಷನ್
ನಲ್ಲಿ ದಾಟಿದ ಮಗನ ಬಗ್ಗೆ ಸಹಜವಾಗಿಯೇ
ಹೆಮ್ಮೆಯುಂಟಾಯಿತು. ಮಧ್ಯಾಹ್ನ 3:30 ರ ವೇಳೆಗೆ ಸಮಾರಂಭ ಮುಗಿಯಿತು.ನಂತರ ಉಪಹಾರದ ವ್ಯವಸ್ಥೆ.
ವರ್ಷಕ್ಕೆ ಮೂರು ಬಾರಿ ಪದವಿ ಪ್ರದಾನ ಸಮಾರಂಭ ನಡೆಯುವುದರಿಂದ ಒಂದೇ ಬಾರಿಗೆ ಎಲ್ಲ ಪದವೀ
ಧರರನ್ನೂ ಕಲೆ ಹಾಕ ಬೇಕಿಲ್ಲ.
4:30 ರವೇಳೆಗೆ ಎಲ್ಲ ಮುಗಿದು ಮನೆಗೆ
ಹೋಗಿ ಈಗಾಗಲೇ ಸಿದ್ಧಮಾಡಿಟ್ಟಿದ್ದ ಸೂಟ್ಕೇಸ್ಗಳನ್ನು ಹಿಡಿದು ಸಿಡ್ನಿಗಾಗಿ ಹೊರಟೆವು.ರಾತ್ರೆ 9
ಗಂಟೆಗೆ ಹೊರಟ ವಿಮಾನ ಸಿಡ್ನಿಯನ್ನು 10 ಗಂಟೆಗೆ ತಲಪಿತು. ನಮಗೆ ಬೇಕಾದ ಊಟದ ಸೂಚನೆಯನ್ನು
ನಾವುಕೊಡದೇ ಇದ್ದಿದ್ದರಿಂದ ವಿಮಾನದಲ್ಲಿ ತಿನ್ನಲು ನಮಗೇನೂ ಸಿಗಲಿಲ್ಲ.ಬಿಸ್ಕೆಟ್ ಮತ್ತು
ಚಾಕೋಲೇಟ್ಗಳಲ್ಲೇ ತೃಪ್ತಿ ಹೊಂದಬೇಕಾಯಿತು.ನಮಗೆ ಮೂರು ಇಸ್ಪೇಟು ಪ್ಯಾಕುಗಳನ್ನು ಕೊಟ್ಟು ನಮ್ಮ
ಮನವೊಲಿಸಲು ಪ್ರಯತ್ನಿಸಿದಳು ಗಗನಸಖಿ. ಅವಳಿಗೂ ನಮಗೆ ಊಟಸಿಗದಿದ್ದದ್ದು ಮನ್ಸಸ್ಸಿಗೆ ಕಹಿ
ಎನಿಸಿತ್ತು. ಆ ಇಸ್ಪೇಟ್ ಎಲೆಗಳನ್ನೇ ತಿನ್ನುವಂತಿದ್ದಿದ್ದರೆ........
ಸಿಡ್ನಿಯ ಏರ್ಪೋಟ್ನಿಂದ ಟ್ಯಾಕ್ಸೀ
ಹಿಡಿದು ನಾವೀಗಾಗಲೆ ಬುಕ್ ಮಾಡಿದ್ದ ಗೆಜ಼ೆಬೋ ಹೋಟೆಲ್ಗೆ ತಲಪಿದೆವು. ಇಲ್ಲಿ ಒಂದುವಿಷಯ ಹೇಳಲೇಬೇಕು.
ಸಿಡ್ನಿಯ ಬಹುತೇಕ ಟ್ಯಾಕ್ಸಿಗಳಲ್ಲಿ ಡ್ರೈವರನ
ಆಸನವನ್ನು ಹೊಂದಿಕೊಂಡಂತೆ ಬುಲೆಟ್ಪ್ರೋಫ಼ಿನ ತೆರೆಯ ಕವಚವಿರುತ್ತದೆ. ಈ ಹಿಂದೆ
ಯಾರೋ ಡ್ರೈವರನನ್ನು ಹೊಡೆದು ಸಾಯಿಸಿದ್ದರಂತೆಅದಕ್ಕಾಗಿ ಈ ವ್ಯವಸ್ಥೆ.ಪ್ರಾಯಶಃ ಪ್ರಪಂಚದ
ಬೇರಾವ ನಗರದಲ್ಲೂ ಈ ರೀತಿಯ ವ್ಯವಸ್ಥೆ ಇರಲಾರದು ಎನಿಸಿತು.(ಈ ಲೇಖನ ಬರೆದಾಗಲೇ ಇಪ್ಪತ್ತು
ವರ್ಷಕ್ಕೂ ಹೆಚ್ಚಾಗಿವೆ, )
ಇದರ ಜೊತೆಗೆ ಇನ್ನೂ ಒಂದು ವಿಚಿತ್ರ
ಆದರೂ ಸತ್ಯ ಎಂದರೆ ರಾತ್ರೆ ಹನ್ನೆರಡು ಗಂಟೆಯಮೇಲೆ ಯಾವ ವಿಮಾನವೂ ಕೆಳಗಿಳಿಯುವಂತಿಲ್ಲ, ಮೇಲೆ ಹಾರುವಂತಿಲ್ಲ. ಜನರ ನಿದ್ದೆಗೆ ಶಾಂತಿಗೆ ಭಂಗ ವಾಗುತ್ತದೆಂಬ
ಕಾರಣದಿಂದ ಈ ವ್ಯವಸ್ಥೆ ಎಂಬ ಅಂಬೋಣ. ಜನನಿಬಿಡವಾದ ಸಿಡ್ನಿ ರಾತ್ರೆ ಹನ್ನೆರಡು ಗಂಟೆಯ ಮೇಲೆ
ಹೆಚ್ಚುಕಡಿಮೆ ಸಂಪೂರ್ಣ ಶಾಂತವಾಗಿರುತ್ತದೆ.
ದಿನಾಂಕ 11-05-00
ಬೆಳಗ್ಗೆ ಬೇಗನೆ ಎದ್ದು ದಿನನಿತ್ಯದ ಕರ್ಮಗಳನ್ನು ಮುಗಿಸಿ ತಿಂಡಿತಿಂದು ರಸ್ತೆಗಾಗಿ ಕೆಲವು ಡ್ರಿನ್ಕ್ಸ್ ಹಾಗೂ ಕುರುಕಲು ಬೇಕಾದ
ತಿಂಡಿಗಳನ್ನಿಟ್ಟುಕೊಂಡು ಹತ್ತು ಗಂಟೆಗೆ ಕಾರಿನಲ್ಲಿ ಕುಳಿತು ಬ್ಲೂ ಮೌಂಟನ್ಶ್ ನೋಡಲು ಹೊರಟೆವು.
ನ್ಯೂಯಾರ್ಕ್ ನಗರವನ್ನು ನೆನಪಿಗೆ ತರುವ ಸಿಡ್ನಿಯ ಗಗನ ಚುಂಬಿ ಕಟ್ಟಡಗಳನ್ನು ನೋಡುವುದೇ ಒಂದು
ಬೆರಗು. ಎತ್ತಿದ ಕುತ್ತಿಗೆಗೆ ನೋವು ಬರಬೇಕು , ಅಷ್ಟೆತ್ತರದ
ಕಟ್ಟಡಗಳು ರಸ್ತೆಯ ಆಚೀಚೆ ಬದಿಗೆ.ರಸ್ತೆಗಳಲ್ಲಿ ವಾಹನಗಳ ಗಡಿಬಿಡಿಯ ಸಂಚಾರ ರಾತ್ರೆಯಾದರಂತೂ
ಕಣ್ಣುಕುಕ್ಕುವ ದೀಪಗಳ ಬೆಡಗು.ಇವೆಲ್ಲ ನಗರದ ಸೌಂದರ್ಯವನ್ನು ಹೆಚ್ಚಿಸಿವೆ.ಸುಮಾರು ಎರಡು ಗಂಟೆಗಳ
ಪ್ರಯಾಣ ಮುಗಿಸಿ ಬ್ಲ್ಯೂ ಮೌಂಟನ್ಸ್ ತಲಪಿದೆವು.ಅಲ್ಲಿ ಒಂದುಗಗನಯಾತ್ರೆ, ಇನ್ನೊಂದು ರೈಲು ಪ್ರಯಾಣ.ಎರಡಕ್ಕೂ ಟಿಕೆಟ್ ಕೊಂಡಾಯಿತು.ಪರ್ವತದ ಆ ತುದಿಯಿಂದ ಈ
ತುದಿಯವರೆಗೆ ಕಟ್ಟಿರುವ ಹಗ್ಗದ ಮೇಲೆ ಚಲಿಸುವ ಬುಟ್ಟಿಗಳಲ್ಲಿ ಪ್ರಯಾಣ.ಅಂತರದಲ್ಲಿ ಅಂತರಾಳದ
ಯಾತ್ರೆ? ಎಲ್ಲವೂ
ಸುಖಾಂತವಾದರೆ ಬಹಳ ಸೊಗಸು ಹಾಗೂ ಥ್ರಿಲ್! ಅಪ್ಪಿ ತಪ್ಪಿ ಹಲಿಕಿತ್ತೋ ತಪ್ಪಿಯೋ ಹೋಯಿತೆಂದರೆ
ಜೀವದ ಆಸೆ ಬಿಟ್ಟುಬಿಡಬೇಕು!ಆದರೂ ನಾವು ಹೋಗಿಬಂದೆವು.ಸೊಗಸಾದ ದೃಶ್ಯ. ಒಂದರ ಪಕ್ಕದಲ್ಲಿ
ಒಂದರಂತೆ ಸುಮಾರು ಒಂದೇ ಎತ್ತರದ ಮೂರು
ಕೋಡುಗಲ್ಲುಗಳು
ಪರ್ವತಕ್ಕೆ ಹೊಂದಿಕೊಂಡಂತೆ ಇವೆ.ಅವನ್ನು
"three sisters" ಎಂದು ಕರೆಯುತ್ತಾರೆ.
ವಿಡಿಯೋ ಕ್ಯಾಮರ ಜೊತೆಗಿದ್ದುದರಿಂದ ಅಲ್ಲಿನ ದೃಶ್ಯಗಳನ್ನು ಸೆರೆಹಿಡಿಯಲು ಅನುಕೂಲವಾಯಿತು.ಆಕಾಶ
ಬುಟ್ಟಿಯ ಚಾಲಕನಿಗೆ ನಮ್ಮ ಮೇಲೇನೋ ವಿಶೇಷ ಕರುಣೆ, ಆದರ. ನಮ್ಮ
ಕ್ಯಾಮರವನ್ನು ನಮ್ಮ ಕೈಯಿಂದ ಇಸಿದುಕೊಂಡ. ಕಸಿದುಕೊಂಡ ಎಂದೇ ಹೇಳಬೇಕು. ಒಂದು ಕ್ಷಣಾ
ಗಾಬರಿಯಾಯಿತು. ನಾವು ಮಾಡಬಾರದ್ದೇನೂ ಮಾಡಿಲ್ಲ ತಾನೆ ಅನ್ನುವಂತೆ ನಾನು ಮೂರ್ತಿ ಹಾಗೂ ರವಿಯ
ಕಡೆಗೆ ನೋಡಿದೆ. ಅಷ್ಟರಲ್ಲಿ ಚಾಲಕ ಜಾನ್
"I will get you a photograph , come on all three stand there " ಎಂದು ಹೇಳಿ ಆಕಾಶಬುಟ್ಟಿಯೊಳಗೇ ನಿಲ್ಲಿಸಿ ಫೋಟೋ ತೆಗೆದುಕೊಟ್ಟ. ಮುಂದಿನ ಥ್ರಿಲ್ ರೈಲು
,ಸುಮಾರು ಅರ್ಧ ಕಿಲೋಮೀಟರ್ ಎತ್ತರದಿಂದ ಕೆಳಕ್ಕೆ 52 1/2ಯಲ್ಲಿ ಇಳಿದು ಅದೇ ರಭಸದಿಂದ
ಮೇಲಕ್ಕೆ ಬರುತ್ತದೆ. ಹೇಗೆ ಹೋಗುತ್ತದೆ , ಕೆಳಗೆ ಹೇಗೆ ಇರುತ್ತದೆ ಎಂಬ
ಕಲ್ಪನೆ ಇರದ ನಾನು ಮುಂದೆಯೇ ಕುಳಿತುಕೊಳ್ಳೋಣ
ಚೆನ್ನಾಗಿರುತ್ತದೆ ಎಂದು ತೀರ ಮುಂದಿನ ಸೀಟಿನಲ್ಲಿ ಕುಳಿತೆ. ರವಿ ಹಾಗೂ ಮೂರ್ತಿ
ಧೈರ್ಯವಿದೆಯ ನಿನಗೆ? ಎಂಡು ಕೇಳಿದಾಗಲೂ "ಹೂಂ ನನಗೇನು ಹೆದರಿಕೆ?" ಬನ್ನಿ ಹೋಗೋಣ ಮುಂದೇನೇ ಕೂರೋಣ ಎಂದು
ಒತ್ತಾಯಿಸಿದೆ.. ನಡುವೆ ನಾನು , ಅಕ್ಕಪಕ್ಕದಲ್ಲಿ ರವಿ ಹಾಗೂ ಮೂರ್ತಿ.
ಒಂದೆರಡು ನಿಮಿಷಗಳ ಕಾಲ ರೈಲು ಪ್ರಯಾಣ ಚೆನ್ನಾಗಿಯೇ ಇತ್ತು. ಮರುಕ್ಷಣದಲ್ಲಿ ಗುಹೆಯೊಳಗೆ
ನುಗ್ಗಿದ ರೈಲು ಪಾತಳಕ್ಕೆ ಬೀಳುತ್ತಿದೆ ಎನಿಸಿತು.ನನ್ನ ಧೈರ್ಯವೆಲ್ಲ ಉಡುಗಿತು. ನಾನು ಸತ್ತೆ
ಎಂದೇ ಭಾವಿಸಿದೆ. ನನ್ನ ಗುರು, ನನ್ನ ಆರಾಧ್ಯ ದೈವ ದತ್ತಾತ್ರೇಯನ
ಸ್ಮರಣೆ ಮಾಡುತ್ತಭದ್ರವಾಗಿ ಕಣ್ಣುಗಳನ್ನು ಮುಚ್ಚಿ ರವಿ ಹಾಗೂ ಮೂರ್ತಿಯ ಕೈಹಿಡಿದು ಕುಳಿತೆ.
ಆದರೂ ನಾನು ಬಿದ್ದೇಬಿಡುತ್ತೇನೆ ಎನಿಸುತಿತ್ತು. ’ಅಮ್ಮ ಕಣ್ಣು ತೆಗೆ ಏನೂ ಭಯವಿಲ್ಲ, ಇದನ್ನೇ ನೀನು ನೋಡಲಿಲ್ಲ ಎಂದರೆ ಬಂದದ್ದೇ ವ್ಯರ್ಥ ಎಂದು ಮೂರ್ತಿ ಆಲಾಪಿಸುತ್ತಿದ್ದರೆ,
ರವಿ ಅಮ್ಮಾ ಕಣ್ಬಿಡಮ್ಮ, ಮಜಾ ಇರುತ್ತೆ ನೋಡು
ಹೆದರ್ಕೋಬೇಡ’ ಅಂತ ಧೈರ್ಯ ತುಂಬುವ ಪ್ರಯತ್ನ ಮಾಡುತ್ತಿದ್ದ. ಆದರೆ ನಾನು ಮಾತ್ರ ಜಪ್ಪಯ್ಯ ಅಂದರೂ ಕನ್ಣು ಬಿಡಲಿಲ್ಲ. ರೈಲು ತಳ ಮುಟ್ಟುವವರೆಗೂ
ರೆಪ್ಪೆಗಳು ಕಣ್ಣಿಗಂಟಿಕೊಂಡುಬಿಟ್ಟಿದ್ದವು . ರೈಲು ನಿಂತಕೂದಲೆ ಅಬ್ಬ ಬದುಕಿದೆ ಎಂದು ಹೊರಕ್ಕೆ
ನೆಗೆದೆ.ಮೇಲಕ್ಕೆ ಹೋಗಬೇಕಾದರೆ ಮೆಟ್ಟಿಲುಗಳಿವೆಯೇ ? ಎಂದು
ವಿಚಾರಿಸಿದೆ . ಕಾರಣ ವನ್ನೇನೂ ವಿವರಿಸಬೇಕಾಗಿಲ್ಲವಲ್ಲ! ಆದರೆ ನನಗೆ ಆರೈಲಿನ ಯೋಗ
ತಪ್ಪುವಂತಿರಲಿಲ್ಲ. ಮೇಲೆ ಹೋಗಲು ಆ ರೈಲನ್ನುಳಿದು ಬೇರಾವ
ಮಾರ್ಗವೂ ಇರಲಿಲ್ಲ.’ ಅನ್ಯಥಾ ಶರಣಂ
ನಾಸ್ತಿ’ ಆದರೆ ಈ ಬಾರಿ ನಾನಾಗಲೇ ಪಾಠ ಕಲಿತಿದ್ದೆ. ಮಧ್ಯದ ಸೀಟನ್ನಾರಿಸಿ ಕುಳಿತೆ, ಭಯವಾದರೂ ಮುಂದೇನಾಗಬಹುದೆಂಬ ಕಲ್ಪನೆ ಯಿದ್ದುದರಿಂದ ಸಾವರಿಸಿ ಕುಳಿತಿದ್ದೆ. ಕಣ್ಣು
ಮುಚ್ಚಲಿಲ್ಲ ಎಂದು ನೆನಪು. ಜೊತೆಗೆ ಕೆಳಕ್ಕೆ ಹೋಗುವಾಗಿನ ರಭಸ ಮೇಲಕ್ಕೆ ಹೋಗುವಾಗ ಸಹಜವಾಗಿಯೇ
ಕಡಿಮೆಯಿತ್ತು. ಗುರುತ್ವಾಕರ್ಷಣೆಯ ಪಾಠ ಓದಿದ್ದು ಅನುಕೂಲವಾಯಿತೆಂದು ನೆನಪು. ಅಂತೂ ಮೇಲೆ
ಬಂದಾಯಿತು. ಜೀವ ನಡುಗಿಸುವ ಈ ನನ್ನ ಅನುಭವಗಳು ರವಿ ಹಾಗೂ ಮೂರ್ತಿಗೆ ರೋಮಾಂಚಕವಾದ ಸುಂದರ
ಅನುಭವಗಳು! ಮುಂದಿನ ಥ್ರಿಲ್ ’ಮೋಟರ್ ಬೈಕ್’
ಅದರ ಹತ್ತಿರ ಹೋಗಲೂ ನಾನು ನಿರಾಕರಿಸಿದೆ ಚಾಲಕನ ಅಕ್ಕಪಕ್ಕದ ಸೀಟುಗಳಲ್ಲಿ ಕುಳಿತು ರವಿ ಹಾಗೂ
ಮೂರ್ತಿ ಹೊರಟರು. ಅದೇನೋ ಅವನು ಒಂದೇ ಚಕ್ರದ ಮೇಲೆ ಓಡಿಸುತ್ತಾನಂತೆ ಅದೂ ಅತ್ತಿತ್ತ ತಿರುಗಿಸಿ
ಸರ್ಕಸ್ಸಿನೋಪಾದಿಯಲ್ಲಿ. ನನಗೇಕೆ ಆ ಗೊಡವೆ? ನಾನು
ದೂರವೇ ಉಳಿದೆ. ಆದರೆ ಅವರು ಹಿಂತಿರುಗಿ ಬಂದಮೇಲೆ ಕೊಂಚ ಧೈರ್ಯ ಬಂದು ನಿಂತಿರುವ ಮೋಟರ್ ಬೈಕ್
ಮೇಲೆ ಕುಳಿತು ಫೋಟೋ ತೆಗೆಸಿಕೊಳ್ಳುವುದನ್ನು ಮರೆಯಲಿಲ್ಲ.
ಅಲ್ಲಿಂದ ಸುಮಾರು 3 ಗಂಟೆಗೆ ಹೊರಟು ಸಿಡ್ನಿನಗರಕ್ಕೆ
ಹಿಂದಿರುಗಿದೆವು. ಹಿಂದಿನ ದಿನದ ಪುನರಾವೃತ್ತಿ ಆಗದಿರಲೆಂದು ಸಂಜೆಯೇ ಇಂಡಿಯನ್ ಹೋಟೆಲಿಗಾಗಿ ಹುಡುಕಿದೆವು. ಹೋಟೆಲ್ಗಳೇನೋ ಸಿಕ್ಕಿದವು.
ಆದರೆ ನಮ್ಮ ಮಡಿವಂತ ಅಡಿಗೆ ( ಬೆಳ್ಳುಳ್ಳಿ ಹಾಕದ) ಇಲ್ಲ ಎಂದಾಗ ಪುನಃ ನಿರಾಶೆ. ಬೇರೇನೂ ದಾರಿಕಾಣದೆ ಉಪ್ಪಿನಕಾಯಿಗೆ
ಶರಣಾಗುವ ನಿರ್ಧಾರ ಮಾಡಿದೆವು ನಾನು ಮತ್ತು ಮೂರ್ತಿ. ರವಿಯೇನೋ ಆ ದೇಶದಲ್ಲಿದ್ದುಕೊಂಡು
ಸಂದರ್ಭಕ್ಕೆ ತಕ್ಕಂತೆ ಬೆಳ್ಳುಳ್ಳಿ ಇದ್ದರೂ ತಿನ್ನುವ ಅಭ್ಯಾಸ ಮಾಡಿಕೊಂಡಿದ್ದ. ದಿನದಿನವೂ ಹಸಿದುಕೊಡಿರಲು
ಸಾಧ್ಯವಿಲ್ಲವಲ್ಲ. ಅಣುರೇಣು ತೃಣಕಾಷ್ಠಗಳಲ್ಲೆಲ್ಲ ಪರಮಾತ್ಮನಿರುವಂತೆ ಎಲ್ಲ ಅಡಿಗೆಗಳಲ್ಲೂ ಬೆಳ್ಳುಳ್ಳಿ! ಅಂತೂ ಅನ್ನ ರೊಟ್ಟಿ ಗಳನ್ನು ಪ್ಯಾಕ್
ಮಾಡಿಸಿಯಾಯಿತು.ಇಷ್ಟು ಬೇಗ ಹೋಟೆಲ್ಲಿಗೆ ಹಿಂತಿರುಗುವುದು ಬೇಡ "ಡಾರ್ಲಿಂಗ್ ಹಾರ್ಬರ್" ಹಾಗೂ
"ಸಿಡ್ನಿ ಬ್ರಿಡ್ಜ್" ನೋಡಿಯೇ
ಹಿಂತಿರುಗೋಣ ಎಂದು ತೀರ್ಮಾನಿಸಿ ಸೀದಾ ಸಿಡ್ನಿ ಬ್ರೀಡ್ಜ್ ಬಳಿಗೆ ಬಂದೆವು. ಬಾಣದ
ಆಕಾರದಲ್ಲಿ ನಿರ್ಮಿತವಾಗಿರುವ ಬ್ರಿಡ್ಜ್ ಬಹಳ ಆಕರ್ಶಕವಾಗಿದೆ. ಬ್ರಿಡ್ಜ್ ನ ಮೇಲೇರಲು 150
ಮೆಟ್ಟಿಲುಗಳು. ಅವನ್ನು ಹತ್ತಿ ಇಳಿಯುವ ಸಾಹಸಕ್ಕೆ ಹೋಗದೆ
ದೂರದಿಂದಲೇ ಬ್ರಿಡ್ಜ್ ಮೇಲೆ ಓಡಾಡುವ ವಾಹನಗಳನ್ನು ನೋಡಿ ತೃಪ್ತಿ ಹೊಂದಿದೆವು.
ಡಾರ್ಲಿಂಗ್ ಹಾರ್ಬರ್ ದ್ವೀಪಕ್ಕೆ ಹೋಗಲು ದೋಣಿಗಾಗಿ ಕಾದುಕುಳಿತೆವು.ಕಡೆಯ ಟ್ರಿಪ್ನ ದೋಣಿ
ನಮ್ಮನ್ನು ಹಾರ್ಬರ್ಗೆ ಕರೆದೊಯ್ದಿತ್ತು. ವಿಶಾಲವಾದ ಹಾರ್ಬರ್ ನೋಡಲು ಬಹಳ ಸುಂದರ. ಡಾರ್ಲಿಂಗ್
ಹಾರ್ಬರ್ ನಂತೆಯೇ ಉಳಿದ ಹಾರ್ಬರ್ ಗಳಿಂದಲೂ ಜನರು ನಿತ್ಯ
ಸಿಡ್ನಿಗೆ ಪ್ರಯಾಣ ಮಾಡುತ್ತಾರೆ. ಕೆಲಸ ಮಾಡಲು ಬೆಳಿಗ್ಗೆ ಹಾರ್ಬರ್ ನಿಂದ ಸಿಡ್ನಿಗೆ ಬಂದು ಸಂಜೆಗೆ ಹಿಂತಿರುಗುವವರೂ
ಇದ್ದಾರೆ.ಅಲ್ಲಿಂದ ಹಿಂದಿರುಗಿ ಬಂದು "OPERA HOUSE' ನೋಡಿದೆವು.ಹೆಚ್ಚು ಕಡಿಮೆ ಅರಳಿದ
ತಾವರೆಯ ಆಕಾರದಲ್ಲಿ ರಚಿತವಾಗಿತುವ ಕಲಾಕ್ಷೇತ್ರದಲ್ಲಿ ಆಗಾಗ ಇಂಗ್ಲಿಷ್ ಶಾಸ್ತ್ರೀಯ ಸಂಗೀತದ
ಕಛೇರಿಗಳು ನಡೆಯುತ್ತವೆ. ನಾವು ಹೋದದ್ದು ಚಳಿಗಾಲವಾದ್ದರಿಂದ ಯಾವ ಕಛೇರಿಗಳೂ ಇರಲಿಲ್ಲ.
ಏನಿಲ್ಲದಿದ್ದರೂ ಆ ಸಮುದ್ರದ ತಟದಲ್ಲಿ ನಿಂತು ಸುತ್ತಮುತ್ತಲೂ ದೀಪಗಳಿಂದ ಝಗಝಗಿಸುವ ಕಟ್ಟಡಗಳನ್ನೂ ಅವುಗಳ
ಪ್ರತಿಬಿಂಬವನ್ನು ತೋರುತ್ತ ಹೊಳೆಯುವ ನೀರನ್ನೂ ಹಂಸಗಳಂತೆ ಒಂದೆಡೆಯಿಂದ ಮತ್ತೊಂದೆಡೆಗೆ ಓಡಾಡುವ
ಟ್ಯಾಕ್ಸಿ ದೋಣಿಗಳು ಹಾಗೂ' ferry' ಗಳನ್ನೂ ನೋಡುತ್ತಿದ್ದರೆ
ಇಂದ್ರಲೋಕದ ವೈಭವದ ಕಲ್ಪನೆಗೆ ಗರಿ ಮೂಡುತ್ತದೆ.ಸಮಯ ಕಳೆದದ್ದೇ ತಿಳಿಯುವುದಿಲ್ಲ. ರಾತ್ರೆ
ಹತ್ತೂವರೆ ಗಂಟೆಯವರೆಗೂ ಅಲ್ಲಿದ್ದು ನಾವು ಹೋಟೆಲಿಗೆ ಹಿಂತಿರುಗಿದೆವು.ಈಗಾಗಲೇ ಹೋಟೆಲಿನಿಂದ ತಂದ ಊಟವನ್ನು ಎಲ್ಲರೂ ಮುಗಿಸಿ ಮಲಗಿದೆವು.
ದಿನಾಂಕ 12-05-00
ಬೆಳಗ್ಗೆ ಬೇಗನೆ ಎದ್ದು ಸ್ನಾನ ಮಾಡಿ
ತಿಂಡಿ ಮುಗಿಸಿ 11 ಗಂಟೆಯ ವೇಳೆಗೆ ಕಾರಿನಲ್ಲಿ
ಏರ್ಪೋರ್ಟಿಗೆ ಹೋದೆವು. "GOLD COAST" ಗೆ
ಹೊರಡುವ ವಿಮಾನ ಮಧ್ಯಹ್ನ1:30 ಕ್ಕೆ ಇತ್ತು. "QUANTAS" ವಿಮಾನದಲ್ಲಿ ನಮ್ಮ ಪ್ರಯಾಣ. ನಾವು ಹೊರಟದ್ದು ಶುಕ್ರವಾರ. ಹೋಗುತ್ತಿರುವುದು ಸಮುದ್ರ
ತೀರದ ನಗರ.ಸ್ವಾಭಾವಿಕವಾಗಿಯೇ ವಾರದ ರಜೆಯನ್ನು ಕಳೆಯಲು ಜನ ಅಲ್ಲಿಗೆ ಹೋಗುತ್ತಿದ್ದರು.ಹೀಗಾಗಿ
ವಿಮಾನ ಭರ್ತಿಯಾಗಿತ್ತು.ಹಾಗಾಗಿಯೂ ನಮಗೆ ಕಿಟಕಿಯ ಪಕ್ಕದ ಸೀಟು ದೊರಕಿತ್ತು.ಸಿಡ್ನಿ ಬಹಳ "Busy"
ನಗರ.ಹೆಚ್ಚು ಕಡಿಮೆ ಲಂಡನ್ ನಂತೆ! ಆದರೆ ಅದರ ರೂಪರೇಷೇ ನ್ಯೂಯಾರ್ಕ್ ನಗರದಂತೆ.
ಆದರೆ "ಗೋಳ್ಡ್ ಕೋಸ್ಟ್" ಎತ್ತರವಾದ ಕಟ್ಟಡಗಳಿಂದ ಕೂಡಿದ್ದರೂ ವಿರಳವಾದ
ಜನಸಂಖ್ಯೆಯನ್ನು ಹೊಂದಿದ ಪ್ರದೇಶ. ಅದನ್ನು ಇಲ್ಲಿಯ ಜನ
ಅಮೆರಿಕಾದ "ಫ಼್ಲೋರಿಡಾ" ಗೆ ಹೋಲಿಸುತ್ತಾರೆ. ಗೋಳ್ಡ್ ಕೋಸ್ಟ್ ಅನ್ನು
’ಕ್ವೀನ್ಸ್ ಲ್ಯಾಂಡ್’ ಎಂದೂ ಕರೆಯುತ್ತಾರೆ. ಪ್ರಯಶಃ ಮಾತೃದೇಶವಾದ ಇಂಗ್ಲೆಂಡನ್ನು
ಸ್ಮರಿಸಿಕೊಳ್ಳುವ ರೀತಿ ಇದಿರಬಹುದೇನೋ. ಸ್ಥಳಗಳ ಹೆಸರುಗಳು, ಮಾರ್ಗಸೂಚಿಗಳು
ಎಲ್ಲವೂ ಇಂಗ್ಲೆಂಡಿನಲ್ಲಿರುವಂತೆಯೇ ಇವೆ.ಅಮೆರಿಕಾದ ಅನುಕರಣೆ ಕೆಲವುಕಡೆ. ಕೆಲವುಕಡೆ
ಇಂಗ್ಲೆಂಡ್.ಅಂತೂ ಆಸ್ಟ್ರೇಲಿಯನ್ನರು "Best of both the worlds" ತೆಗೆದುಕೊಂಡು ತಮ್ಮ ದೇಶವನ್ನು ಸಿಂಗರಿಸುತ್ತಿದ್ದಾರೆ.ಗೋಳ್ಡ್ ಕೋಸ್ಟನ್ನು ಮಧ್ಯಹ್ನ
ಮೂರು ಗಂಟೆಗೆ ತಲಪಿದೆವು.ನಮ್ಮ ಟಿಕೇಟಿನಲ್ಲೇ ಏರ್ಪೋಟಿನಿಂದ ನಮ್ಮ ನಿಆಸಕ್ಕೂ ಹಿಂತಿರುಗಿಹೋಗುವಾಗ ಏರ್ಪೋಟಿಗೆ
ತಲಪಿಸುವ ಏರ್ಪಾಡೂ ಇದ್ದಿತು. ಹಾಗಾಗಿ ನಾವು ವಿಮಾನದಿಂದ ಇಳಿದ ಕೂಡಲೆ ನಮಗಾಗಿ ಕಾಯ್ದಿದ್ದ
ಬಸ್ಸಿನಲ್ಲಿ ಕುಳಿತು ನಾವು ಈಗಾಗಲೇ ಬೂಕ್ ಮಾಡಿದ್ದ ಅಪಾರ್ಟ್ಮೆಂಟ್ಗೆ ಹೋದೆವು.
ರಸ್ತೆಯುದ್ದಕ್ಕೂ ಎಡಬಲಗಳೆರಡರಲ್ಲೂ ಗಗನಚುಂಬಿಕಟ್ಟಡಗಳಿಂದ ಮಿನುಗುತ್ತಿರುವ ಹೋಟೆಲುಗಳು.
ಉದ್ದಕ್ಕೂ ಸಮುದ್ರದ ತೀರ. ಬಹುಸುಂದರವಾದ ನೋಟ. ರಸ್ತೆಯಲ್ಲಿ ಬರುವಾಗಲೇ ದೊಡ್ಡ ಏಷ್ಯನ್ ಸೂಪರ್
ಮಾರ್ಕೆಟ್ ಇರುವುದನ್ನು ಗಮನಿಸಿದ್ದೆ, ಅದನ್ನು ಹೇಳಿದ ಕೂಡಲೆ ಮೂರ್ತಿ
ಎಂದರು ’ನೀವು ಹೆಂಗಸರು ಎಲ್ಲಿ ಹೋದರೂ ಹೊಟ್ಟೆಯ ಬಗೆಗೆ ಮೊದಲು ಯೊಚಿಸುವುದು ’ ಎಂದು ತಮಾಷೆ
ಮಾಡಿದರು. ಅದೂ ನಿಜವೇ ನಮಗೆ ಎಲ್ಲಿ ಹೋದರೂ ಮೊದಲು ಎಲ್ಲರ ಹೊಟ್ಟೆಗೆ ಹೇಗೆ? ಎಂಬ ಯೋಚನೆ. ಅದರಲ್ಲೂ ನನ್ನಂತಹವರಿಗೆ ! ದಾರಿಯುದ್ದಕ್ಕೂ ಇಕ್ಕೆಲದಲ್ಲೂ ಮರಗಿಡಗಳ
ಸಾಲು ,ವಿಶಾಲವಾದ ರಸ್ತೆಗಳು, ಚಿನ್ನದ
ತೀರವೆಂದೇ ಪ್ರಸಿದ್ಧಿಯಾಗಿರುವ ಈ ಪ್ರದೇಶದಲ್ಲಿ ಮೊದಮೊದಲಿಗೆ ಬಹಳಷ್ಟು ಚಿನ್ನ
ದೊರಕಿರಬಹುದೆಂಬುದು ಊಹೆ, ಕ್ವೀನ್ಸ್ ಲ್ಯಾಂಡ್ ಹೋಲಿಕೆಯಲ್ಲಿ ಫ಼್ಲೋರಿಡವನ್ನು ನೆನಪಿಸುತ್ತದೆ ಅಂಬ
ಮಾತನ್ನು ಆಗಲೇ ಹೇಳಿದ್ದೇನೆ. ಇದು ಅವರಿವರ ಅಂಬೋಣವೇ ಹೊರತು ನನ್ನ ಸ್ವಂತ ಅನುಭವದ್ದಲ್ಲ. ಕಾರಣ
ನಾನಿನ್ನೂ ಫ಼್ಲೋರಿಡ ನೋಡಿಲ್ಲ. ಆದ್ದರಿಂದ ಖಚಿತವಾಗಿ ಹೇಳಲಾರೆ.ಒಮ್ಮೊಮ್ಮೆ ಆಸ್ಟ್ರೇಲಿಯನ್ನರ ಈ
ಅನುಕರಣೆ ತೀರ ವಿಪರೀತ ಎನಿಸುವಷ್ಟರ ಮಟ್ಟಿಗಿದೆ ಎಂದರೆ ಆಶ್ಚರ್ಯವಲ್ಲ. ಅಪಾರ್ಟ್ ಮೆಂಟ್ ಬಹಳ
ಅಚ್ಚುಕಟ್ಟಾಗಿದ್ದು, ಸುಂದರವಾಗಿತ್ತು. ಆರನೇ ಅಂತಸ್ತಿನಲ್ಲಿದ್ದ ಆ
ಮನೆಯಿಂದ ರಸ್ತೆಯಲ್ಲಿ ಓಡಾಡುವ ವಾಹನಗಳಷ್ಟೇ
ಸಮುದ್ರ ತೀರವನ್ನೂ ಬಾಲ್ಕನಿಯಲ್ಲಿ ನಿಂತು ನೋಡಲು ಆಗುತಿತ್ತು.ಹಿತವಾದ ತಂಗಾಳಿ, ಬಾಲ್ಕನಿಯಲ್ಲಿ ಆರಾಮ ಕುರ್ಚಿಯಲ್ಲಿ ಕುಳಿತು ಪಕ್ಕದಲ್ಲಿ ಕುರುಕಲು ಇದ್ದರೆ ಬೇರೆ
ಸ್ವರ್ಗದ ಕಲ್ಪನೆಯೇಕೆ ಬೇಕು? ನಾವಿಳಿದುಕೊಂಡಿದ್ದ ಅಪಾರ್ಟ್ ಮೆಂಟ್ಗೆ
ಹೊಂದಿಕೊಂಡಂತೆ ಈಜುಕೊಳ ಟೆನ್ನಿಸ್ ಕೋರ್ಟ್ ಎಲ್ಲವೂ ಇದ್ದವು. ಮನೆಗೆ ಬಂದು ಸುಧಾರಿಸಿಕೊಂಡು
ಕಾಫಿ ಮಾಡಿಕೊಂಡು ಕುಡಿದು ಮಾರ್ಕೆಟ್ ನೋಡಿಬರಲು
ಹೊರಟೆವು. ದೊಡ್ಡ ನಗರವೇನೂ ಅಲ್ಲದಿದ್ದರೂ ಆಕರ್ಷಕವಾಗಿದೆ.ಬೀಚ್ ಗೆ ಹೊಂದಿಕೊಂಡಂತೆ ಅಂಗಡಿಗಳೂ
ಇವೆ. ಅಲ್ಲಿಯೇ ಇದ್ದ ಏಷ್ಯನ್ ಅಂಗಡಿಯೊಂದರಿಂದ ನಮಗೆ ಬೇಕಾದ ಅಕ್ಕಿ ಬೇಳೆ ತರಕಾರಿಗಳನ್ನು ಕೊಂಡು
ತಂದೆವು. ಒಂದು ಗಂಟೆಯಲ್ಲಿ ಸಾರು ಅನ್ನ ಹಪ್ಪಳ ಪಲ್ಯ ಎಲ್ಲ ಸಿದ್ಧವಾಯಿತು.ಚಪಾತಿಯನ್ನು
ಹೋಟೆಲಿನಿಂದ ಕೊಂಡುತಂದಿದ್ದೆವು.ಮಿಡಿ ಮಾವಿನಕಾಯಿ ಉಪ್ಪಿನಕಾಯಿ, ಮೊಸರೂ
ಎಲ್ಲವೂ ಇದ್ದವು. ಇದಕ್ಕಿಂತ ರಸಗವಳ ಇನ್ನೇನು
ಬೇಕು? ಮೂರೂ ಜನರು ತೃಪ್ತಿಯಿಂದ ತಿಂದು ಮಲಗಿದೆವು.
ದಿನಾಂಕ 13-05-00
ಬೆಳಗ್ಗೆ ಬೇಗನೆ ಎದ್ದು ಎಲ್ಲರೂ
ಸ್ನಾಅದಿಗಳನ್ನು ಮುಗಿಸಿ ಬೇಗನೆ ಸಿದ್ಧರಾದೆವು. ಸಮುದ್ರದಲ್ಲಿ ಮೋಟರ್ ಬೈಕ್ ಓಡಿಸುವುದಕ್ಕೆ, ( jet skiing) ಹಾಗೂ ಸೀ ವರ್ಳ್ಡ್( Sea World) ಗೆ ಟಿಕೆಟ್ ಕೊಂಡಾಗಿತ್ತು. 10
ಗಂಟೆಗೆ ಸರಿಯಾಗಿ ನಮ್ಮನ್ನು ಕರೆದುಕೊಂಡುಹೋಗಲು ವಾಹವ ಸಿದ್ಧವಾಗಿ ಬಂದಿತು. ಸಮುದ್ರದ
ನೀರಿನಲ್ಲಿ life jacket ತೊ ಟ್ಟ ಅಪ್ಪಮಕ್ಕಳಿಬ್ಬರೂ ಸಾಕಷ್ಟು ಮೋಜು ಮಾಡಿದರೆ ನಾನು ನೀರಿನ ಮಧ್ಯದಲ್ಲಿ ಕುಳಿತು, ಒಮ್ಮೊಮ್ಮೆ ನಿಂತು
ಅವರ ಮೋಜನ್ನು ಅನಂದಿಸುತ್ತಿದ್ದೆ. ಕ್ಯಾಮರಾದಲ್ಲಿ ಸೆರೆಹಿಡುತ್ತಿದ್ದೆ ಕೂಡ.ಬಹಳ ಸೊಗಸಾದ
ದೃಶ್ಯ. ತೀರದುದ್ದಕ್ಕೂ ಗಗನ ಚುಂಬಿ ಸೌಧಗಳು. ನಮ್ಮಂತೆಯೇ ಉತ್ಸುಕರಾದ ಜನ, ಕ್ಷಣಕ್ಕೊಮ್ಮೆ ಶಬ್ದ ಮಾಡುತ್ತ ಹಾರಾಡುವ ಹೆಲಿಕಾಪ್ಟರ್ ಗಳು( ಇವೂ ನಗರ ವೀಕ್ಷಣೆಗಾಗಿ
ಪ್ರವಾಸಿಗರಿಗೆ ಇರುವ ಸೌಲಭ್ಯ.) ಒಂದು ಗಂಟೆಯ ಕಾಲ skiing ಆದಮೇಲೆ
ಅಲ್ಲಿಗೆ ನಮ್ಮನ್ನು ಕರೆದುಕೊಂಡುಬಂದ ವ್ಯಕ್ತಿಯೇ ನಮ್ಮನ್ನು Sea World ಗೆ ಕರೆದುಕೊಂಡು ಹೋಗಿ ಬಿಟ್ಟ.ಇಲ್ಲಿ ಇನ್ನೊಂದು ವಿಷಯ ಹೇಳಲು ಮರೆತೆ. ವ್ಯಾನಿನಲ್ಲಿ
ಕುಳಿತಿದ್ದಾಗ ರವಿ ತನ್ನ ಮೊಬೈಲ್ ಫೋನನ್ನು ನನ್ನ
ಕೈಗೆ ಕೊಟ್ಟಿದ್ದ. ನಾನು ಅದನ್ನು ನನ್ನ ಕೋಟಿನಜೋಬಿನೊಳಗಿಟ್ಟಿದ್ದೆ.Sea World ಗೆ ಹೊರಡುವುದಕ್ಕೆ ಮುಂಚೆ ಫೋನಿನ
ನೆನಪಾಗಿ ಹುಡುಕಿದರೆ ಎಲ್ಲಿಯೂ ಸಿಗಲಿಲ್ಲ. ನಮ್ಮನ್ನು ಕರೆದುಕೊಂಡು ಬಂದ ವ್ಯಕ್ತಿ ಬಹಳ
ಸಭ್ಯನಾದುದರಿಂದ ತನ್ನ ಫೋನಿನಿಂದ ರಿಂಗ್ ಮಾಡಿ ಫೋನ್ ರಿಂಗಾಗುತ್ತಿದೆ. ಆದ್ದರಿಂದ ಎಲ್ಲಿಯೋ ಬಹಳ
ಸುರಕ್ಷಿತವಾಗಿದೆ , ವ್ಯಾನಿನಲ್ಲೇ ಇರಬಹುದು ಅಂತ ಹೇಳಿಹಿಂತಿರುಗಿ
ಹೋಗಿ ಪತ್ತೆಮಾಡಿ ತಂದುಕೊಟ್ಟ.ಅನ್ಯಾಯವಾಗಿ ನೂರಾರು ಡಾಲ್ರ್ ಗಳು ಖರ್ಚಾಗುವುದಲ್ಲ ಎಂದು
ಕೊರಗುತ್ತಿದ್ದ ನನಗೆ ಸಮಾಧಾನವಾಯಿತು. Sea World , ..............., ........................ ಹೀಗೆ ಮೂರು ರೀತಿಯ ಸೃಷ್ಟಿಯನ್ನು
ಇಲ್ಲಿ ಬೇರೆ ಬೇರೆ ಕಡೆ ನೋಡಬಹುದು.ನಮಗೆ
ಸಮ್ಯಾವಕಾಶ ಕಡಿಮೆ ಇದ್ದದ್ದರಿಂದ Sea
World ಗೆ ಮಾತ್ರ
ಹೋದೆವು.ಇಲ್ಲೂ ಅಮೆರಿಕಾದ ಅನುಕರಣೆಯೇ! ಅಲ್ಲಿಯ ಡಿಸ್ನಿ ಲ್ಯಾಂಡ್ ನಂತೆ ಇಲ್ಲಿಯೂ! ನೋರಾರು
ತರಹದ ಆಟಗಳು , ಅದ್ಭುತಗಳು, ನೀರಿನಲ್ಲಿ
ನಿಧಾನವಾಗಿ ಚಲಿಸುತ್ತ ಚಲಿಸುತ್ತ ಇದ್ದಕಿದ್ದಂತೆ ಅತಿ ಎತ್ತರದಿಂದ ಕೆಳಕ್ಕೆ ಧುಮ್ಮಿಕ್ಕುವ
ದೋಣಿಗಳು.! ಅಬ್ಬಾ ನನ್ನ ಹೃದಯ ಒಂದು ಕ್ಷಣ ಸ್ತಬ್ಧವಾಗಿತ್ತು. "ಬರ್ಮುಡ ಟ್ರೈ ಆಂಗಲ್" ನೊಳಕ್ಕೆ
ಹೋಗುವುದಕ್ಕೆ ಮುಂಚೆಯೇ ದ್ವಾರದಲ್ಲಿದ್ದ ವಿವರಣಾಧಿಕಾರಿಗಳು, ಬರ್ಮುಡ ಟ್ರೈ ಆಂಗಲ್ ನ್ನು ಅದ್ಭುತ, ಭಯಾನಕ
ಎಂದೆಲ್ಲ ವರ್ಣಿಸಿದುದನ್ನು ನೋಡಿ ನಾನು ಹಿಂದಕ್ಕೆ ಬಂದು ಬಿಟ್ಟೆ.ರವಿ ಹಾಗೂ ಮೂರ್ತಿ ಮಾತ್ರ
ಹೋಗಿಬಂದರು. ಅದು ಅದ್ಭುತವೇನೋ ಹೌದು ಆದರೆ ಭಯಾನಕವಾಗಿರಲಿಲ್ಲ. ನೀನೂ ಬಂದಿರಬೇಕಾಗಿತ್ತು ಎಂದು
ಬೇಸರಿಸಿಕೊಂಡರು. ಒಂದೇ ಹಳಿಯ ಮೇಲೆ ಚಲಿಸುವ ರೈಲು
(ಮಾನೋ )ಇಲ್ಲಿಯ ಮತ್ತೊಂದು ಆಕರ್ಷಣೆ. Sea
World ನ ಒಂದು ಕಡೆಯಿಂದ ಮತ್ತೊಂದು ಕಡೆಗೆ ಜನಗಳನ್ನು ಕೊಂಡೊಯ್ಯುತ್ತ ಸದಾ
ಗಸ್ತು ಹೊಡೆಯುತ್ತಿರುತ್ತದೆ ಈ ರೈಲು. ಬೇಕಾದಾಗ ಬೇಕಾದಲ್ಲಿ ಹತ್ತಿ ಇಳಿಯಿರಿ ಅಭ್ಯಂತರವೇನೂ
ಇಲ್ಲ. ಇಂಗ್ಲೆಂಡ್ ಮಾದರಿಯ (ಕ್ಯಾಸೆಲ್) ಕೋಟೆ ಯೊಂದನ್ನು ನಿರ್ಮಿಸಿದ್ದಾರೆ.ನಾವು ನೋಡಿದ
ರೋಮಾಂಚಕ ಆಟಗಳಲ್ಲಿ skew Show ಒಂದು. ನೀರಿನಲ್ಲಿ ಲೀಲಾಜಾಲವಾಗಿ
ಸರ್ಕಸ್ ಮಾಡುವ ಆ ಯುಕ ಯುವತಿಯರನ್ನು ಕಂಡು ಬೆರಗಾಗಿದ್ದೇನೆ.ಎಲ್ಲಕ್ಕಿಂತ ಆಶ್ಚರ್ಯಕರ ಹಾಗೂ
ಕುತೂಹಲಕರವಾದುದು ಎಂದರೆ " ಡಾಲ್ಫಿನ್ ಶೋ" ಆ ಮೂಕ ಪ್ರಾಣಿಗಳ ಆಟವನ್ನು
ನೋಡಿದವರಾರೂ ಬೆರಗಾಗಬೇಕು.ತಮ್ಮ ಯಜಮಾನ ಹೇಳಿದ
ಹಾಗೆ ಕೇಳುವ ಅವು ಯಜಮಾನನ ಆಜ್ಞೆಗೆ ತಕ್ಕಂತೆ ನಡೆಯುತ್ತವೆ.ಏಳೆಂಟು ಡಾಲ್ಫಿನ್ ಗಳು ಒಂದೇ
ರೀತಿಯಲ್ಲಿ ಅಭಿನಯಿಸಬೇಕಾದರೆ ಅದರ ಹಿನ್ನೆಲೆಯಲ್ಲಿ ಅವುಗಳಿಗೆ ನೀಡಿರುವ ತರಬೇತಿ, ಅವುಗಳನ್ನು ತರಬೇತಿ ಮಾಡಿರುವ ಚಾಣಾಕ್ಷತೆ ಇವುಗಳನ್ನು ಎಷ್ಟು ಹೊಗಳಿದರೂ ಸಾಲದು. ನಾವು
ನೀರೆರೆಚಿದರೆ ತಾವೂ ನೀರೆರೆಚುವ , ಟಾ ಟಾ ಮಾಡಿದರೆ ತಾವೂ ಮಾಡುವ,
ಸನ್ನೆ ಮಾಡಿ ಹೇಳಿದರೆ ತಮ್ಮ ಸ್ಥಾನಕ್ಕೆ ವಿಧೇಯವಾಗಿ ಹಿಂತಿರುಗುವ , ಗಾಯನಕ್ಕೆ ತಕ್ಕಂತೆ ನರ್ತಿಸುವ,ಒಂದೇ ಎರಡೇ ವಿವಿಧ
ರೀತಿಯಲ್ಲಿ ಮನರಂಜನೆ ನೀಡುವ ಡಾಲ್ಫಿನ್ ಗಳು ವಿಶೇಷ ಆಕರ್ಷಣೆ ಹೌದು. 60 ಕಿಲೋಮೀಟರ್ ವೇಗದಲ್ಲಿ
ಈಜುವ ಈ ಪ್ರಾಣಿಗಳು ಮನುಷ್ಯರಿಗೆ ನೆರವಾಗುವುವು.ಆದರೆ
ಮನುಷ್ಯನಂತೆಯೇ ಲಂಚಕೋರರೂ ಹೌದು. ಮೀನು ಹಾಕಿದ ಹೊರತು ಪ್ರತಿಕ್ರಿಯಿಸುವುದಿಲ್ಲ.ಅವುಗಳ
ಆಟವನ್ನು ನೋಡುತ್ತ ಸಮಯ ಕಳೆದದ್ದೇ ತಿಳಿಯಲಿಲ್ಲ.
ಡಾಲ್ಫಿನ್ ಶೋ ಮುಗಿದ ಮೇಲೆ ಮಾನೋ ರೈಲ್
ಹತ್ತಿ Sea World ನ ಹೊರಕ್ಕೆ ಬಂದು ಟ್ಯಾಕ್ಸಿ ಹತ್ತಿ
ಮನೆಗೆ ಹಿಂದಿರುಗಿದೆವು. ಹುರುಳಿ ಕಾಯಿ ಪಲ್ಯ , ಸಾರು ಅನ್ನ ಹಪ್ಪಳ
ಮಾಡಿ ಅಚ್ಚುಕಟ್ಟಾಗಿ ಊಟ ಮಾಡಿದೆವು. ಎಷ್ಟಾದರೂ ಸಂಕೇತಿಗಳಲ್ಲವೇ! ಎಲ್ಲಿದ್ದರೂ ಊಟವೇ ನಮಗೆ ಪ್ರಾಮುಖ್ಯ.
ದಿನಂಕ 14-05-00 ಇಂದು ಎಲ್ಲಿಗೂ
ಹೋಗುವುದು ಬೇಡ , ಆಯಾಸವಾಗಿದೆ, ಜೊತೆಗೆ
"ಗೋಳ್ಡ್ ಕೋಸ್ಟ್" ವೈಭವವನ್ನು ಮನೆಯ ಬಾಲಕನಿಯಲ್ಲೇ ಕುಳಿತು ಸವಿಯೋಣ, ಈಜು ಕೊಳಕ್ಕೂ ಸ್ವಲ್ಪ ಹೊತ್ತು ಹೋದರಾಯಿತು ಎಂತೆಲ್ಲ ನಾನೂ ಮೂರ್ತಿ ತರ್ಕಿಸಿದ್ದೆವು.
ರವಿ "Rangler" ಜೀಪ್ ಬುಕ್ ಮಾಡಿ ನಮ್ಮನ್ನು ಬ್ರಿಸ್ಬೇನ್ ಗೆ ಕರೆದೊಯ್ಯಲು ಉತ್ಸುಕನಾಗಿದ್ದ. ನಾನೇ
ಹಿಂದೇಟು ಹಾಕಿದೆ." ಬ್ರಿಸ್ಬೇನ್ ಬೇಡ ಎಂದರೆ ಆಯಿತು, ಇಲ್ಲೇ 50
ಕಿಲೋಮೀಟರ್ ದೂರದಲ್ಲಿ 'Rain forest' ಇದೆ ,60 ಕಿಲೋಮೀಟರ್ ದೂರದಲ್ಲಿ ಒಂದು ಕೊಲ್ಲಿಯಿದೆ, ಯವುದಾದರೂ
ಒಂದನ್ನು ನೋಡಿಬರೋಣ ಎಂದ. ನಾನು ’Rain forest’ ಗೆ ಹೋಗೋಣ
ಚೆನ್ನಾಗಿರುತ್ತೆ ಎಂದೆ. ನಾನು ಅಸ್ತು ಎಂದಮೇಲೆ ಕೇಳುವುದೇನಿದೆ? ಯಾವುದಕ್ಕೂ
ಅಡ್ಡಗಾಲು ಹ್ಆಕುವವಳು ನಾನೇ. ನಾನೇ ಒಪ್ಪಿಕೊಂಡ ಮೇಲೆ ಅವರ ಉತ್ಸಹಕ್ಕೇನು ಕೊರತೆ? ಸಾಕಷ್ಟು ಬುತ್ತಿ ಕಟ್ಟಿಕೊಂಡು ಹೊರೆಟೆವು. ನಾನಂದುಕೊಂಡದ್ದೇ ಒಂದು. ಆದದ್ದೇ ಒಂದು. (
ಕಾಡು ಎಂದುಕೊಂಡೆನೇ ಹೊರತು ಆ ಕಾಡನ್ನು ತಲಪುವ ದಾರಿಯ ಬಗೆಗೆ ಯೋಚಿಸಲಿಲ್ಲ) ಆಸ್ಟ್ರೇಲಿಯಾದ
ರಸ್ತೆಗಳು ಬಹಳ ವಿಶಾಲವಾದವುಗಳು.ನಾಲ್ಕು ರಸ್ತೆ ಬರಲು ನಾಲ್ಕು ರಸ್ತೆ ಹೋಗಲು.ಹೀಗೆ ಎಂಟು
ರಸ್ತೆಗಳು.ಅತ್ತಿತ್ತ ಎತ್ತರದ ಕಟ್ಟಡಗಳು ಅಷ್ಟೇನೂ ಬಿಜಿ ಇಲ್ಲದ ರಸ್ತೆಗಳು
ಇವುಗಳ ಆನಂದವನ್ನು ಸವಿಯುತ್ತ ಸಾಗಿದ್ದ
ನನಗೆ ಕ್ರಮೇಣ ಗಿಡಮರಗಳ ಸಾಲು ಗೋಚರಿಸತೊಡಗಿತು. ಆಹಾ! ಕಾಡಿನೊಳಕ್ಕೆ ಬಂದೇ ಬಿಟ್ಟೆವು
ಎಂದುಕೊಂಡು ವಿಡಿಯೋ ಕ್ಯಾಮರಾವನ್ನು ಕಣ್ಣಿಗಿಟ್ಟು ಕುಳಿತೆ. ಆದರೆ ಇದೇನು ಇದ್ದಕಿದ್ದಹಾಗೆ ನಮ್ಮ
ವಾಹನ ಮೇಲೇರುತ್ತಿದೆಯಲ್ಲ!. ರಸ್ತೆಯ ಕಡೆಗೆ ಕಣ್ಣು ಹಾಯಿಸುತ್ತೇನೆ! ವಾಹನಗಳು ಓಡಾಡಲು ಇರುವ
ಒಂದೇ ಸಣ್ಣ ರಸ್ತೆಯಲ್ಲಿ ನಮ್ಮ ವಾಹನ ಮೇಲೇರುತ್ತಿದೆ.! ನಾನಿನ್ನು ಸುಮ್ಮನೆ
ಕುಳಿತಿರದಾದೆ.ಇದೇನಿದು?”Rain forest" ಅಂದ್ಬಿಟ್ಟೂ
ಘಾಟಿನ ಮೇಲೆ ಹೋಗ್ತಿದೀರಲ್ಲ? ಕೆಳಕ್ಕೆ ನಡೆಯಿರಿ, ನಾನು ಮೇಲೆ ಬರುವುದಿಲ್ಲ ಎಂದೆ. ಆದರೆ ಹಿಂತಿರುಗಲು ದಾರಿಯಿದ್ದರೆ ತಾನೆ? ವಿಧಿಯಿಲ್ಲದೆ ಪ್ರಯಾಣ ಮುಂದುವರಿಸಬೇಕಾಯಿತು.ಮೂರ್ತಿ ಹಾಗೂ ರವಿ ಆರಾಮವಾಗಿ ಜೀಪ್ನ ಅಂದ
ಚೆಂದ ರೂಪ ರೇಷೆಗಳನ್ನು ಚರ್ಚೆಮಾಡುತ್ತ ಸಾಗುತ್ತಿದ್ದಾರೆ . ನನಗೋ ಒಳಗೇ ಹೆದರಿಕೆ. ಒಂದೊಂದು
ಹೇರ್ಪಿನ್ ತಿರುವು ಬಂದಾಗಲೂ ನನ್ನ ಜೀವ ಬಾಯಿಗೆ ಬರುತ್ತಿತ್ತು .ಒಂದು ಕಡೆ ಪ್ರಪಾತ ಮತ್ತೊಂದು ಕಡೆ ಬೆಟ್ಟ. ( ಪ್ರಾಯಶಃ ಈ ರೀತಿಯ ಹೆದರಿಕೆ ಬರಿ ನನಗೆ ಮಾತ್ರವಿರಬೇಕು,)
ಎದುರಿನಿಂದ ವಾಹನ ಬಂದಾಗ ದಾರಿಕೊಡಲೆಂದು ಪಕ್ಕಕ್ಕೆ ಸರಿದರೆ ನನಗೆ ಹೆದರಿಕೆ.
ಕ್ರಮೇಣ ನನ್ನ ಕೈಕಾಲಿನ ಶಕ್ತಿಯುಡುಗಿ ಬಾಯೊಣಗುತ್ತ
ಬಂದಿತು. ಆದರೆ ಹಾಗೆಂದು ಹೇಳಲಾರೆ. ಅವರೂ ಸುಮ್ಮನೆ ಗಾಬರಿಯಾದರು ಎಂಬ ಅಂಜಿಕೆ ಬೇರೆ.ಬೇರೆ
ರೀತಿಯಲ್ಲಿ ಮಾತು ತಿರುಗಿಸಿದೆ.ಈಗಲೇ ಎರಡು ಗಂಟೆ ಪೂರ್ತಿ ಮೇಲಕ್ಕೆ ಹೋದರೆ ಹಿಂತಿರುಗಲು
ಕತ್ತಲೆಯಾಗುತ್ತದೆ. ಈ ದಾರಿ ಕತ್ತಲೆಯ ಪ್ರಯಾಣಕ್ಕೆ ಸರಿಯಲ್ಲ. ಈಗಲೇ ಕೆಳಕ್ಕೆ ಹೋಗಿಬಿಡೋಣ
ಎಂದೆ. ಆದರೆ ಈ ನನ್ನ ಮಾತುಗಳು ಬೆಟ್ಟದ ತಪ್ಪಲಿನಲ್ಲಿ ಮಾಯವಾದುವೇ ಹೊರತುಅವರಿಬ್ಬರಲ್ಲಿ
ಯಾರೊಬ್ಬರ ಕಿವಿಗಳನ್ನೂ ಮುಟ್ಟಲಿಲ್ಲ. ಈ ಹೊತ್ತಿಗೆ ನಮ್ಮ ಜೀಪು ನಿಜವಾದ ದಟ್ಟಕಾಡಿನ ನಡುವೆ
ಚಲಿಸುತ್ತಿತ್ತು. ಎರಡೂ ಕಡೆಗೇ ಎತ್ತರತ್ತೆರವಾಗಿ ಬೆಳೆದ ಮರಗಳು. ಮಧ್ಯೆ ಕಿರಿದಾದ ಹಾದಿ. ಅಂತೂ
ಇಂತೂ ಕಡೆಗೂ ನಾವು ತಲಪ ಬೇಕಾದ ಸ್ಥಳ ಬಂದಿತು. ಅಲ್ಲಿಂದ ನಾಲ್ಕೂವರೆ ಕಿಲೋಮೀಟರ್
ನಡೆದರೆ ಜಲಪಾತವಿದೆಯಂತೆ. ಜಲಪಾತದ ಬಳಿಗೆ ಹೋಗುವುದಿರಲಿ ಹಿಂದಿರುಗಿ ಹೋದರೆ ಸಾಕಾಗಿತ್ತು ನನಗೆ.
ಗಂಗೆ ಯಮುನೆಗಳು ಧುಮ್ಮಿಕ್ಕಲು ಸಿದ್ಧವಾಗಿದ್ದವು ನನ್ನ ಕಣ್ಣುಗಳಿಂದ! ಜಲಪಾತವೂ ಬೇಡ ಏನೂ ಬೇಡ
ಮನೆಗೆ ಹೋಗೋಣ ನದೆಯಿರಿ ಎಂದು ಹಟ ಮಾಡಿದೆ.ಮೂರ್ತಿ ಕರಗಿದರು. ಜಲಪಾತವನ್ನು ನೋಡುವ ಆಸೆ ಅದಮ್ಯವಾಗಿದ್ದರೂ
ನನ್ನ ಕಣ್ಣೀರು ನೋಡಲಾರದೆ ನನ್ನ ಹಟಕ್ಕೆ ಮಣಿದು ಹಿಂದಿರುಗಿ ಹೊರಟರು. ಈಗಿನ್ನೂ ಎರಡೂವರೆ
ಗಂಟೆಗಳ ಕಾಲ ರವಿ ಡ್ರೈವ್ ಮಾಡಿದ್ದರಿಂದ ಮೂರ್ತಿ ಗಾಡಿಯನ್ನು ನಡೆಸಲು
ಸಿದ್ಧರಾದರು.ಪರಿಚಯವಿಲ್ಲದ ರಸ್ತೆ, ಬೆಟ್ಟದ ಹಾದಿ. ಆದರೂ ಯಾವ
ಅಂಜಿಕೆಯೂ ಇಲ್ಲದೆ ಚಾಕಚಕ್ಯತೆಯಿಂದ ಜೀಪ್ ನಡೆಸಿ ನಮ್ಮನ್ನು ಕೆಳಕ್ಕೆ ಕರೆತಂದರು. ನನಗೆ ಹೋದ
ಜೀವ ಮರಳಿ ಬಂದಂತಾಯಿತು. ಯಾವುದೋ ಅವ್ಯಕ್ತ ಭಯದಿಂದ ನಡುಗಿದ್ದ ನಾನು ಪ್ರಕೃತಿ ಸೌಂದರ್ಯವನ್ನೂ
ಸವಿಯದೆ ಹಿಂದಿರುಗಿದ್ದೆ.ಬೆಟ್ಟದ ಕೆಳಕ್ಕೆ ಇಳಿದಕೂಡಲೆ ರವಿ ತಾನೇ ಜೀಪು ನಡೆಸಿದ.
ಆಯಾಸವಾಗಿದ್ದರೂ ಯೌವನದ ಹುಮ್ಮಸ್ಸು! ನಾಲ್ಕು ಚಕ್ರಗಳ ಗಾಡಿಯನ್ನು ನಡೆಸಲು ಎರಡೇ ತಿಂಗಳುಗಳ
ಹಿಂದೆ ಅನುಮತಿ ಪತ್ರವನ್ನು ಪಡೆದಿದ್ದ ರವಿ ಗಾಡಿ ಓಡಿಸಿದ ರೀತಿ . ಧೈರ್ಯ ತಾಳ್ಮೆ
ಶ್ಲಾಘನೀಯ.ಅಲ್ಲಿಂದ ಸೀದಾ ಹೋಗಿ ಬೀಚ್ ನಲ್ಲಿ ಕುಳಿತೆವು.ಸಮುದ್ರದ ಅಲೆಗಳಿಗೆ ಕಾಲುಕೊಟ್ಟು ಅವು
ಕಾಲನ್ನು ಮುಟ್ಟಿ ಸೋತು ಹಿಂತಿರುಗುವುದನ್ನು ನೋಡುವುದೇ ಒಂದು ಸೊಗಸು.
ಸೋಲೊಪ್ಪದೆ ಮತ್ತೆ ಮತ್ತೆ ದಡವನ್ನು
ಮುಟ್ಟುವ ಅಲೆಗಳು ನಮಗೆ ಜೀವನದ ಪಾಠ ಕಲಿಸುತ್ತಿವೆಯೇ?ಅಂತೂ
ಈಗ ಸ್ವಲ್ಪ ಹೊತ್ತಿನ ಮುಂಚೆ ಸುಂದರ ಆದರೂ ಭಯಂಕರವಾದ ಪ್ರಕೃತಿಯನ್ನು ಎದುರಿಸಲು ಹೆದರಿದ್ದ ನಾನು
ಶಾಂತಮಯವಾದ ತಂಗಾಳಿಯ ಆಸರೆಯಲ್ಲಿ, ಆಲಿಂಗನದಲ್ಲಿ ಮೈಮರೆತಿದ್ದೆ.
ಕತ್ತಲಾಗುವ ತನಕ ಅಲ್ಲೇ ಕುಳಿತಿದ್ದೆವು. ನಂತರ ಏಷ್ಯನ್ ಸೂಪರ್ ಮಾರ್ಕೆಟ್ ಗೆ ಹೋಗಿ ಅಡುಗೆಗೆ
ಬೇಕಾದ ಕೆಲವು ಪದಾರ್ಥಗಳನ್ನು ಕೊಂಡು ಮನೆಗೆ ಹಿಂದಿರುಗಿದೆವು. ಅಡಿಗೆ ಮಾಡಿ ಊಟ ಮಗಿಸಿ ಮಲಗುವ
ವೇಳೆಗೆ ಹನ್ನೆರಡೂ ಹೊಡೆದಿತ್ತು.
ದಿನಾಂಕ 15-05-00 ಬೆಳಿಗ್ಗೆ 8 ಗಂಟೆಗೇ
ಎದ್ದು ಬಾಡಿಗೆಗೆ ತಂದಿದ್ದ ಜೀಪ್ ವಾಪಸ್ಸು ಕೊಟ್ಟು ಸ್ನಾನ ಮಾಡಿ ತಿಂಡಿ ತಿಂದು ನಮ್ಮನ್ನು
ಏರ್ಪೋರ್ಟಿಗೆ ಕರೆದೊಯ್ಯಬೇಕಾದ ಬಸ್ಸಿಗಾಗಿ ಕಾದುಕುಳಿತೆವು 10:30 ಕ್ಕೆ ಬರಬೇಕಾದ ಬಸ್ಸು 11 ಗಂಟೆ
ಸಮಿಪಿಸಿದರೂ ಬರದಾದಾಗ ಕೊಂಚ ಕಳವಳವಾಯಿತು. ಹನ್ನೊಡು ಗಂಟೆಗೊಮ್ಮೆ ಬಂದಿತು ಬಸ್ಸು. ನಮಗೆಷ್ಟು
ಆತುರವೋ ಡ್ರೈವರ್ ಅಷ್ಟೇ ನಿಧಾನ. ಮಧ್ಯೆ ಮಧ್ಯೆ
ಬಸ್ಸು ನಿಲ್ಲಿಸುತ್ತ ಪ್ರಯಾಣಿಕರನ್ನು ಹತ್ತಿಸಿಕೊಳ್ಳುತ್ತ ಹೋಗುತ್ತಿದ್ದ ಅವನನ್ನು ನೋಡಿ
ಇವನೇಕೆ ಹೀಗೆ? ನಮ್ಮನ್ನು ಸರಿಯಾದ ಸಮಯಕ್ಕೆ ತಲಪಿಸುತ್ತಾನೆಯೇ ಈತ?ಎಂದೆಲ್ಲ ಯೋಚಿಸುವಂತಗುತ್ತಿತ್ತು. ಆದರೆ ಪ್ರತಿನಿತ್ಯ ಇದೇ ಕೆಲಸ ಮಾಡುವ ಆತನಿಗೆ ಸಮಯದ
ಪ್ರಜ್ಞೆ ಇರುವುದಿಲ್ಲವೇ! ಅಂತೂ ನಮ್ಮನ್ನು ಸರಿಯಾದ ಸಮಯಕ್ಕೆ ಕರೆದೊಯ್ದ ಎನ್ನಿ.
ಹನ್ನೆರಡು ಗಂಟೆಗೆ ಸರಿಯಾಗಿ ನಮ್ಮ
ವಿಮಾನ ರನ್ವೇ ಯಲ್ಲಿ ಚಲಿಸಲು ಪ್ರಾರಂಭಿಸಿತು.ಆದರೆ ಆ ಪೈಲಟ್ ಗಣಪತಿ ಪೂಜೆಯನ್ನು ಮಾಡದೆ
ಹೊರಟಿದ್ದನೋ ಏನೋ ಮತ್ತೆ ಹೊರಟ ಸ್ಥಳಕ್ಕೆ ಹಿಂದಿರುಗಬೇಕಾಯಿತು.ಅದೇನೋ ಒಂದು ರೇಡಿಯೋ ಕೆಲಸ
ಮಾಡುತ್ತಿಲ್ಲ ಎಂದು ಹೇಳಿದ.ಅಂತೂ ಹತ್ತು ನಿಮಿಷಗಳು ತಡವಾಗಿ ಹೊರಟಿತು ವಿಮಾನ. ಅಂತರಿಕ್ಷಕ್ಕೆ
ಹಾರಿದ ಮೇಲೆ ವಿಮಾನದ ತೊಂದರೆಯನ್ನು ಹೇಳದೆ ಮೊದಲೇ ಗುರುತಿಸಿ ಸರಿ ಮಾಡಿದ್ದಕ್ಕೆ ಆ ಪೈಲಟ್ಗೆ
ಮನಸ್ಸಿನಲ್ಲೇ ವಂದಿಸಿದೆವು. ಅವನು ಯಾವ ದೇವರನ್ನು ಬೇಕಾದರೂ ಪೂಜಿಸಿರಲಿ ಅಂತೂ ಆ ದೈವವೇ ನಮ್ಮ
ಸಹಾಯಕ್ಕೆ ಬಂದಿತು.ಗೋಳ್ಡ್ ಕೋಸ್ಟನ್ನು ಬಿಟ್ಟು
ವಿಮಾನ ಆಕಾಶಕ್ಕೆ ಜಿಗಿಯುವಾಗಿನ ದೃಶ್ಯ ಮನೋಹರ. ಸಮುದ್ರ ತೀರದುದ್ದಕ್ಕೂ ಇರುವ ಗಗನ
ಚುಂಬಿಕಟ್ಟಡಗಳ ಮೇಲೇರಿ ಆಕಾಶದಲ್ಲಿ ನಿಂತು ಪುಟ್ಟ ಆಟಿಕೆಗಳಂತೆ ಕಾಣುವ ಆ ಕಟ್ಟಡಗಳನ್ನು
ನೋಡಿದಾಗ ಬೃಹತ್ತಿಗೂ ಬೃಹತ್ತು ಇರುವುದರ ಸಾಕಾರವಾಗುತ್ತದೆ.ಗಗನದಲ್ಲಿ ಸಂಚರಿಸುವಾಗ
ಕಾಣುವ ಮೋಡಗಳ ಸಮುದ್ರ ಇಂದ್ರಲೋಕದ ಕಲ್ಪನೆಯ ಗರಿ ಕೆದರುತ್ತದೆ.ಈಗ ಇನ್ನೇನು ಇಂದ್ರನ ಅಪ್ಸರೆಯರು
ಬಂದು ನರ್ತಿಸಬಹುದು ಎಂದು ಕಾಯುವಂತಾಗುತ್ತದೆ.ಮಗದೊಮ್ಮೆ ನಿಬಿಡವಾಗಿ ಮೆತ್ತನೆಯ ದಟ್ಟವಾದ
ಹಾಸಿಗೆಯಂತೆ ಹರಡಿರುವ ಮೋಡಗಳ ಮೇಳೆ " ನಾರಾಯಣ, ನಾರಾಯಣ"
ಎಂದು ಹಾಡುತ್ತ ನಾರದರು ಬಂದರೇನೋ ಎನಿಸುತ್ತದೆ. ಅಲ್ಲಲ್ಲಿ ನಡುನಡುವೆ ಒತ್ತೊತ್ತಾಗಿದ್ದರೂ
ತುಣುಕು ತುಣುಕಾಗಿರುವ ಮೋಡಗಳು. ಛತ್ರಿಯಂತೆ!
ವಿಮಾನ ನೆ ಲಕ್ಕೆ ಅತಿ ಸಮೀಪದಲ್ಲಿ ಹೋಗುತ್ತಿರುವಾಗಲಂತೂ ಗಿಡಮರಬಳ್ಳಿಗಳು, ಜನ.
ಎಲ್ಲದರ ಮೇಲೂ ಪದರ ಪದರ ವಾದ ಮೋಡಗಳು. ಆರಾಮ
ಪಡೆಯುತ್ತಿರುವ ಜನಕ್ಕೆ ನೆರಳೊದಗಿಸುತ್ತಿರುವಂತೆ.
ಹಸಿರು , ಕೆಂಪು , ಕಂದು
ಬಣ್ಣಗಳಲ್ಲಿ ಕತ್ತರಿಸಿಟ್ಟ ಅಚ್ಚುಗಳಂತೆ ಕಾಣುವ ನೆಲ ಆಕರ್ಷಣೀಯ. ಆದಹಾರವಿಲ್ಲದೆ ಎಕ್ಕಿದ
ಹತ್ತಿಯ ಹಾಗೆ ಕಾಣುವ ಮೋಡಗಳನ್ನು ಕಂಡರೆ ಮಕ್ಕಳು ’ಐಸ್ಕ್ಯಾಂಡಿ" ಎಂದು ಕಡ್ಡಿಯೊಂದನ್ನು
ಹುಡುಕ ಹೊರಟರೆ ಆಶ್ಚರ್ಯವಲ್ಲ. ನಮ್ಮ ಅಜ್ಜಿ ಇದನ್ನೇನಾನದರೂ ನೋಡಿದ್ದರೆ ಖಂಡಿತ ವಾಗಿಯೂ ’ ಲೇ
ಅಮ್ಮ ಅದನ್ನ ಸ್ವಲ್ಪ ತೊಗೊಂಡು ಬ್ಯಾಗಿನೊಳಕ್ಕೆ ಹಾಕ್ಕೋ
ಮನೆಗೆ ಹೋಗಿ ಬತ್ತಿ ಮಾಡೋಕ್ಕೆ ಆಗುತ್ತೆ ಎನ್ನುತ್ತಿದ್ದರು.ಅಷ್ಟು ಸುಂದರ , ಸುಮನೋಹರ ! ನೀಲಗಗನದ ಬೆಳ್ಳಿಮೋಡಗಳ ಸಂತೆ. ನಮ್ಮನ್ನು ಸ್ವರ್ಗಲೋಕಕ್ಕೊಯ್ಯುವಂತೆ.
ವಿಮಾನದಲ್ಲಿ ಕುಳಿತು ಕಿಟಕಿಯಾಚೆಗೆ ನೋಡುವುದೂ ಒಂದು ಸೊಗಸು.ಎತ್ತರೆತ್ತರದ ಪರ್ವತಗಳನ್ನೇರಿ,
ವಿಶಾಲವಾದ ಸಮುದ್ರವನ್ನು ಹಾರಿ
ಚಲಿಸುವ ವಿಮಾನದ ಮೋಜು! ಇದ್ದಕಿದ್ದಂತೆ ವಿಮಾನದ ಚಕ್ರ ನೆಲಕ್ಕಪ್ಪಳಿಸಿದಾಗ ಕಲ್ಪನಾ ಲೋಕದಿಂದ
ಹೊರಕ್ಕೆ ಬಂದೆ. ನಾವಾಗಲೇ ಮೆಲ್ಬೋರ್ನ್ ನೆಲವನ್ನು ಮುಟ್ಟಿದ್ದೆವು.ನಮ್ಮ ಮನೆಗೇ ಬಂದಷ್ಟು
ಸಂತೋಷವಾಯಿತು.ಕಾರಣ ಮೆಲ್ಬೋರ್ನ್ ನಗರ ಶಾಂತ, ಗಂಭೀರ.
ವಿದ್ಯಾವಂತ, ಬುದ್ಧಿವಂತ ವಯಸ್ಸಿಗೆ ಬಂದ ಹೆಣ್ಣು ಮಗಳು ಮೆಲ್ಬೋರ್ನ್. ಆಡಂಬರ , ಥಳುಕು ಬೆಳಕಿನ
ಬೆಡಗಿ ಸಿಡ್ನಿ! ಸಿಡ್ನಿಯಲ್ಲಿಯ ಜನಜೀವನ ಬಲು ತೀವ್ರ, ತರಾತುರಿ.
ಮೆಲ್ಬೋರ್ನ್ ನಲ್ಲಿ ಹದವಾದ ವೇಗದ ಜೀವನ.ಇನ್ನು ಗೋಳ್ಡ್ ಕೋಸ್ಟ್ ಪ್ರೇಕ್ಷಣಿಯ ಸ್ಥಳವಾಗಿ
ರಂಜಿಸುವಷ್ಟು ವಾಸಸ್ಠಳವಾಗಿ ಆಕರ್ಷಿಸಲಾದು ಎಂದು ನನ್ನ ಅನಿಸಿಕೆ. ಹೀಗಾಗಿ ಮೆಲ್ಬೋರ್ನ್ ಬಗೆಗೆ
ಯಾವುದೋ ಅರಿಯದ ಆತ್ಮೀಯತೆ. ಪ್ರಯಶಃ ನಮ್ಮ ರವಿ ಅಲ್ಲಿ ಓದಿದ್ದು ಇರಬಹುದೆ? ಮನೆಗೆ ಬರುವ ವೇಳೆಗೆ ನಾಲ್ಕೂವರೆ ಗಂಟೆ. ಅಂದು ಇನ್ನೆಲ್ಲೂ ಹೋಗದೆ ಮನೆಯಲ್ಲಿ ವಿಶ್ರಾಂತಿ ಪಡೆದು ರಾತ್ರೆ ಅಡಿಗೆ ಮಾಡಿ ಊಟ
ಮಾಡಿ ಮಲಗಿದೆವು.
ದಿನಾಂಕ 16-05-00
ಗ್ರೇಟ್ ಓಷನ್ ರೋಡ್ , ಹೆಸರೇ ಹೇಳುವಂತೆ ಓಷನ್ನೂ ಗ್ರೇಟೂ, ರೋಡೂ
ಗ್ರೇಟು. ಸುಮಾರು 100 ಕಿಲೋಮೀಟರ್ ಗಳ ಉದ್ದಕ್ಕೆ ಚಾಚಿರುವ ಸಮುದ್ರತೀರದುದ್ದಕ್ಕೂ ಅಚ್ಚುಕಟ್ಟಾದ ರಸ್ತೆಯನ್ನೂ, ಅಲ್ಲಲ್ಲಿ
ತಂಗುದಾಣಗಳನ್ನೂ ನಿರ್ಮಿಸಿದ್ದಾರೆ.ಸಮುದ್ರತೀರದುದ್ದಕ್ಕೂ ಕಾರಿನಲ್ಲಿ ಚಲಿಸುತ್ತ ಹೋಗುವುದೇ
ಒಂದು ಸೊಗಸು.ಒಂದು ಕಡೆಗೆ ಸಮುದ್ರ ಮತ್ತೊಂದು ಕಡೆಗೆ ಒತ್ತಾದ ಕಾಡು .ಪ್ರಕೃತಿಯ ವರವಿತ್ತ
ಸೌಂದರ್ಯ. ಅನುಭವಿಸುವ ಮನಸಿದ್ದು ಪ್ರಕೃತಿಯ ಚೆಲುವನ್ನು ಆಸ್ವಾದಿಸುವ ಹೃದಯವಿದ್ದು ದಣಿಯದ
ಕಣ್ಣುಗಳಿದ್ದರೆ ಅ ಸ್ಥಳವನ್ನು ಬಿಟ್ಟುಬರಲು ಮನಸ್ಸೇ ಬಾರದು. ಮಧ್ಯಹ್ನ 1 ಗಂಟೆಗೆ ಹೊರಟ ನಾವು
ಸುಮಾರು ಏಳು ಗಂಟೆಗಳ ಪ್ರಯಾಣ ಮಾಡಿ ಕೊನೆಯನ್ನು
ತಲಪಿ ಅಲ್ಲಿ ತಂಗಿದೆವು.ಬೆಳಗ್ಗೆ ಏಳುತ್ತಲೇ ಹಿಂದಿರುಗಿ ಪ್ರಯಾಣ.
ದಾರಿಯಲ್ಲಿ ಲಂಡನ್ ಬ್ರಿಡ್ಜ್ ನೋಡಿದೆವು.
ಅಸ್ಟ್ರೇಲಿಯಾದಲ್ಲಿ ಲಂಡನ್ ಬ್ರಿಡ್ಜ್ ಎಲ್ಲಿಂದ ಬಂದಿತು ? ಎಂದು ಗಾಬರಿಯಾಗಬೇಕಾಗಿಲ್ಲ.ಇಲ್ಲಿ ಪ್ರತಿಯೊಂದಕ್ಕೂ ಅಮೆರಿಕಾ ಅಥವ ಇಂಗ್ಲೆಂಡ್ ದೇಶದ
ಪ್ರತಿಮೆಗಳನ್ನು ಬಳಸಿದ್ದಾರೆ . ಸಮುದ್ರದ ನಡುವೆ
ಬ್ರಿಡ್ಜ್ ಆಕಾರದಲ್ಲಿ ರೂಪಿತವಾಗಿರುವ ಕಲ್ಲುಕಟ್ಟಡವನ್ನು ಲಂಡನ್ ಬ್ರಿಡ್ಜ್ ಎಂದು
ಕರೆಯುತ್ತಾರೆ. ಯಥಾ ಯಥಾ ಲಂಡನ್ ಬ್ರಿಡ್ಜ್ ನಂತೆ ಇರದಿದ್ದರೂ ನೈಸರ್ಗಿಕವಾಗಿ ನೀರಿನ ನಡುವೆ
ರೂಪಿತವಾಗಿರುವ ಅ ಬ್ರಿಡ್ಜ್ ಆಕರ್ಷಕವಾಗಿದೆ. ಅಲ್ಲಿಂದ ಮುಂದೆ ಬಂದರೆ ’ಟ್ವೆಲ್ವ್ ಅಪ್ಪೋಸಲ್ಸ್’
. ಕ್ರಿಸ್ತನ ಉಪದೇಶವನ್ನು ಪ್ರಪಂಚಕ್ಕೆ ಸಾರಲು ಹೊರಟ ಹನ್ನೆರಡು ಮಂದಿ ಶಿಷ್ಯರ
ಹೆಸರುಗಳನ್ನು ಸಮುದ್ರದ ನಡುವೆ ಎದ್ದುನಿಂತಿರುವ
ಹನ್ನೆರಡು ಕಂಭಗಳಿಗೆ ಇಟ್ಟಿದ್ದಾರೆ.ನಮ್ಮೊಡನೆ ಬಂದಿದ್ದ
ಯಾತ್ರಿಕರಲ್ಲಿ ಯಾರೋ ಇವು ಟೆಲ್ವ್ ಅಪ್ಪೋಸಲ್ಸ್ ಆದರೆ ಅವುಗಳ ಪಕ್ಕದಲ್ಲಿ ಅನತಿ
ದೂರದಲ್ಲಿ ರುವ ಚಿಕ್ಕ ಕಲ್ಲುಗಳು ಹಾಫ್ ಅಪ್ಪೊಸಲ್ಸ್ ಇರಬಹುದೇ ಎಂದು ಕುಚೇಷ್ಟೆ ಮಾಡಿದರು.
ಅಲ್ಲಿಂದ ಮುಂದೆ ನಾವು ಹೆಲಿಕಾಪ್ಟರ್ ನಲ್ಲಿ ಕುಳಿತು ಒಂದು ಪ್ರದಕ್ಷಿಣೆ ಹಾಕಿದೆವು. ಆ ದೃಶ್ಯ
ಮನೋಹರ. ಮೇಲಿಂದ ಕೆಳಗೆ ನೋಡಿದಾಗ ಕಾಣುವ ಆ ನಗರ ಸೌಂದರ್ಯ ಅಪರೂಪ. ಅಂತೂ ನಾವು ಅಲ್ಲಿದ್ದಷ್ಟು
ದಿನವೂ ಒಂದಲ್ಲ ಒಮ್ಡು ಕಡೆಗೆ ನಮ್ಮನ್ನು ಕರೆದುಕೊಂಡು ಹೋಗಿದ್ದ ರವಿ. ಅವನು ಅಲ್ಲಿಯೇ
ವಾಸವಾಗಿದ್ದರಿಂದ ಅವ್ನಿಗೆ ನೋಡಬಹುದಾದ ನಮಗೆ ಆಸಕ್ತಿ ಉಂಟಗುವಂತಹ ಸ್ಥಳಗಳ ಪರಿಚಯ ಚೆನ್ನಾಗಿ
ಇದ್ದದ್ದು ಅನುಕೂಲವಾಯಿತು. ಎಶ್ಟೇ ಒಳ್ಳೆಯದಾದರೂ ಎಲ್ಲದಕ್ಕೂ ಒಂದು ಕೊನೆ ಯಿದ್ದೇ
ಇರುತ್ತದೆಯಲ್ಲವೇ? ಹಾಗೆಯೇ ನಾವು ಇನ್ನೂ ಓಮ್ದಷ್ಟು ದಿನ ಅಲ್ಲಿಯೇ
ಇರಬೇಕೆಂಬ ಮನಸ್ಸಾದರೂ ನಾವಿಬ್ಬರೂ ಇನ್ನೂ ವೃತ್ತಿಯಲ್ಲಿದ್ದುದರಿಂದ ಅದಕ್ಕಿಂತ ಹೆಚ್ಚಿನ ರಜೆ
ಸಿಗುವುದು ಸಾಧ್ಯವಿರಲಿಲ್ಲ.
ಹಾಗಾಗಿ ಕೊನೆಗೆ ಮಗನನ್ನು ಬೀಳ್ಕೊಟ್ಟು
ಹೊರಟು ಬರುವ ದಿನ ಬಂದಿತು. ರವಿ ಏರ್ಪೋಟ್ ನಮ್ಮೊಡನೆ ಬಂದು ಬೀಳ್ಕೊಟ್ಟ. ಮಗನನ್ನು ಬಿಟ್ಟು
ವಾಪಸ್ ಬರಬೇಕಲ್ಲ ಎಂಬ ದುಖಃ , ಮತ್ತೊಂದೆಡೆ ನೌಕರಿಯ ಅನಿವಾರ್ಯ. ಅಂತೂ
ಕಣ್ಣಲ್ಲಿ ನೀರುತುಂಬಿಕೊಂಡೇ ಅಲ್ಲಿಂದ ಹೊರಟಾಯಿತು .
ಸಿಂಗಪುರದವರೆಗೆ ಸೊಗಸಾಗಿದ್ದ ಪ್ರಯಾಣ
ಸಿಂಗಪುರವನ್ನು ಬಿಟ್ಟಕೂಡಲೆ ಸಿಂಹ
ಸ್ವಪ್ನವಾಗುತ್ತದೆ ಎಂದು ಯಾರು ನೆನೆದರು?ಸಿಂಗಪುರದಲ್ಲಿ
ಒಂದು ದಿನ ತಂಗಿ ಮುಂದಕ್ಕೆ ಹೋಗಬೇಕಾಗಿದ್ದ ಕಾರಣ ನಮಗೆ ಏರ್ಲೈನ್ಸ್ ನವರಿಂದಲೇ ಹೋಟೆಲ್
ವ್ಯವಸ್ಥೆ ಹಾಗೂ ಏರ್ಪೋರ್ಟ್ ನಿಂದ ಹೊಟೆಲ್ ಮತ್ತೆ ವಾಪಸ್ ಏರ್ಪೋಟ್ ಗೆ ಏರ್ಲೈನ್ಸ್ ಅವರದ್ದೇ ವ್ಯವಸ್ಠೆ ಇದ್ದಿತಾದ್ದರಿಂದ
ಅರ್ಧ ಆಯಾಸ ಕಡಿಮೆಯಾಗಿತ್ತು. ಸಿಂಗಪುರದಲ್ಲಿ ಹೋಟೆಲ್ಲಿಗೆ ಬಂದವರೇ ಕೈಕಾಲು ಮುಖ ತೊಳೆದು ಸ್ನಾನ ಮಾಡಿ ಹಾಸಿಗೆ ಸೇರಿದೆವು.
ಪ್ರಯಾಣದ ಆಯಾಸದ ಜೊತೆಗೆ ಇಷ್ಟು ದಿನಗಳೂ ಸುತ್ತಿದ್ದ ಆಯಾಸ ಬೇರೆ ಕಾಡುತಿತ್ತು. ನಡು
ಮಧ್ಯಾಹ್ನಕ್ಕೆ ಸಿಂಗಪುರವನ್ನು ತಲಪಿದ ನಾವು ಸಂಜೆಯ ತನಕ
ಮಲಗಿ ನಂತರ ಎದ್ದು ಮತ್ತೆ ಮುಖ ತೊಳೆದು ಸಿಂಗಪುರವನ್ನು ಒಂದು ಸುತ್ತು ಹೋಗಿಬಂದೆವು.
ನಮಗಿದ್ದ ಕಾಲಾವಕಾಶದ ಮಿತಿಯಲ್ಲಿ ಅದಕ್ಕಿಂತ ಹೆಚ್ಚೇನು ಮಾಡಲು ಸಾಧ್ಯವಿರಲಿಲ್ಲ.
ನಿಶ್ಚಿತವೇಳೆಗೆ ಬಂದ ಕಾರಿನಲ್ಲಿ ಕುಳಿತು ಏರ್ಪೋರ್ಟ್ ತಲಪಿದೆವು. ಇದ್ದಕಿದ್ದಹಾಗೆ ನಮ್ಮ
ಪ್ರಯಾಣದಲ್ಲಿ ಕೊಂಚ ಬದಲಾವಣೆಯನ್ನು ತಂದಿದ್ದರು ಏರ್ಲೈನ್ಸ್ ನವರು. ಸಾಕಷ್ಟು ಪ್ರಯಾಣಿಕರಿಲ್ಲದ ಕಾರಣ ನಮ್ಮ ಸಿಂಗಪುರದಿಂದ ಬೊಂಬಾಯಿಗೆ ಬರಬೇಕಾಗಿದ್ದ ವಿಮಾನವನ್ನು ರದ್ದು ಮಾಡಿ
ನಮ್ನನ್ನು ’ಆಮ್ಸ್ಟರ್ಡ್ಯಾಮ್’ ಹೋಗುವ ವಿಮಾನದಲ್ಲಿ ತುರುಕಲಾಯಿತು.ಒಂದು ಸೀಟೂ ಬಿಡದೆ
ಒತ್ತಡದಿಂದ ಕೂಡಿದ್ದ ಆ ವಿಮಾನದಲ್ಲಿ ನಮ್ಮ ಆಯ್ಕೆಯ ಸೀಟಿನ ಮಾತು ಹಾಗಿರಲಿ ನಮ್ಮಿಬ್ಬರಿಗೂ
ಕೂರಲು ಒಟ್ಟಿಗೆ ಸೀಟು ದೊರೆತುದೇ ನಮ್ಮ ಭಾಗ್ಯವೆನ್ನಬೇಕು . ಆದರೆ ಆ ಸಂತೋಷವೂ ಬಹಳ ಕಾಲ
ಉಳಿಯಲಿಲ್ಲ.ನಮ್ಮ ಹಿಂದಿನ ಸೀಟಿನಲ್ಲಿ ಇಂಗ್ಲೀಷು ಅಥವ ನಮಗೆ ಬರುವ ಇನ್ಯಾವುದೇ ಭಾಷೆ ಬರದ ಚೈನಾದ
ಒಂದು ಕುಟುಂಬ ಕುಳಿತಿತ್ತು.ಗಂಡಹೆಂಡತಿರ ನಡುವೆ ಎರಡು ಸಣ್ಣ ಮಕ್ಕಳು. ನಮ್ಮ ಸೀಟಿನ ಹಿಂದಕ್ಕೆ
ಸರಿಯಾಗಿ ಮಕ್ಕಳಿಬ್ಬರ ಸೀಟುಗಳು.ಗ್ಂಭೀರ ತನದ ಮಕ್ಕಳುಗಳಾದರೇ ಅಷ್ಟು ದೂರ ಸುಮ್ಮನೆ
ಕುಳಿತಿರುವುದು ಕಷ್ಟ.ಆದರೆ ಚೇಷ್ಟೆ ಮಾಡುವ ಆಚಿಕ್ಕ ವಯಸ್ಸಿನ ಮಕ್ಕಳಿಗೆ ನಮ್ಮ ಸೀಟು ಆಟದ ವಸ್ತುವಾಗಿ
ಕಂಡಿರಬೇಕು. ಇಬ್ಬರೂ ಯಾವುದೋ ಪಂದ್ಯದಲ್ಲಿ ಭಾಗವಹಿಸಿರುವಂತೆ ನಮ್ಮ ಸೀಟುಗಳನ್ನು ಬಲವಾಗಿ
ಒದೆಯತೊಡಗಿದರು. ಅವರಿಗೆ ಅದೊಂದು ಮನರಂಜನೆಯ ಸಾಧನವಾಯಿತು. ಬೆಕ್ಕಿಗೆ ಚೆಲ್ಲಾಟ ಇಲಿಗೆ
ಪ್ರಾಣಸಂಕಟ. ಅವರ ಆ ಒದೆತ ನಮಗೆ ನಮ್ಮ ಪ್ರಯಾಣದ
13 ಗಂಟೆಗಳಕಾಲವೂ ಸಹಿಸಬೇಕಾದ ಸಂದಿಗ್ಧತೆಯನ್ನು
ತಪ್ಪಿಸಿಸ್ಕೊಳ್ಳಲು ಸಾಧ್ಯವಿರಲಿಲ್ಲ. ಯಾವತೊಂದರೆಯೂ ಇಲ್ಲದೆ ಆ ಎಕಾನಮಿ ಕ್ಲಾಸಿನಲ್ಲಿ ಕುಳಿತು
ದೀರ್ಘ ಪ್ರಯಾಣ ಮಾಡುವುದೇ ಕಷ್ಟ. ಅಕ್ಕಪಕ್ಕದವರ ಸಲ್ಲಾಪಗಳ ಜೊತೆಗೆ ಅವರು ತಿನ್ನುವ ನಮಗಾಗದ
ಆಹಾರಗಳ ಗಂಧ ,ಸಮೀಪದಲ್ಲೇ
ಇರುವ ಟಾಯ್ಲೆಟ್ಗಳ ಗಂಧ ಇವೆಲ್ಲ ಸಹಿಸಿ
ಕಿಷ್ಕಿಂಧೆಯ ಆ ಆಸನದಲ್ಲಿ ಕುಳಿತು ಬರುವುದನ್ನು ನೆನೆಸಿಕೊಂಡರೆ ವಿಮಾನ ಪ್ರಯಾಣದ
ಹುಚ್ಚು ಯಾರಿಗಾದರೂ ಬಿಟ್ಟುಹೋಗುತ್ತದೆ. ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ! ನೋಡಲು ಕೇಳಲು ಸೊಗಸು ವಿಮಾನ ಪ್ರಯಾಣ! ಆದರೆ ಆ ಒಳಗಿನ
ಸಂಕಟ ಪರಮಾತ್ಮನಿಗೇ ಪ್ರೀತಿ. ದುಡ್ಡುಕೊಟ್ಟು ದೈಯಾ ಹಿಡಿಸಿಕೊಂಡಂತೆ! ಆದರೇನು ಮಾಡುವುದು ಗೋಳದ
ಒಂದು ತುದಿಯಿಂದ ಇನ್ನೊಂದು ತುದಿಗೆ ಹೋಗಬೇಕಾದರೆ ಅನುಭವಿಸಲೇ ಬೇಕು. ಇನ್ನು ಈ ರೀತಿಯ ಬೋನಸ್ ಸಿಕ್ಕಿಬಿಟ್ಟರೆ ಗತಿ! ಮೊದಲೇ
ಕೊಳೆ ಅದರ ಮೇಲೆ ಮಳೆ! ( ಮಕ್ಕಳ ಒದೆತಕ್ಕೆ ಸಿಕ್ಕ ಆ ಸೀತುಗಳ ಮೇಲೆ ಕುಳಿತ ನಮಗೆ ಅತಿಹೆಚ್ಚು
ಹಣಕೊಟ್ಟು ಹರಿದ ಮುರಿದ ಸೀಟಿನಲ್ಲಿ ಕುಳಿತು ಪ್ರಯಾಣ ಮಾಡಬೇಕಾಗಿರುವ ’ಸೂಪರ್ ಡೀಲಕ್ಸ್’
ಬಸ್ಸುಗಳ ನೆನಪಾಯಿತು. ಅದರ ಬಗ್ಗೆ ದೂರು
ಕೊಟ್ಟರೂ ಪ್ರಯೋಜನವಾಗದೆ ಹೊಯಿತಾದರೂ ಕೊಂಚ ಕಡಿಮೆಯಾಯಿತೆನ್ನಬೇಕು. ಈ ಬದಲಾವಣೆಯಿಂದ
ಕಷ್ಟಪಡುತ್ತಿದ್ದರೂ ಮೂರ್ತಿಗೆ ಒಂದು ಸಮಾಧಾನ. ಅದೇಕೋ ಅವರಿಗೆ ಬೊಂಬಾಯಿಯ ಮೂಲಕ ಹೋಗುವುದು
ಬೇಡವಾಗಿತ್ತು. ಆಮ್ಸ್ಟರ್ ಡ್ಯಾಮ್ ನಿಂದ
ಪ್ರಯಾಣ ಅಷ್ಟೇನೂ ಅಸುಖವಾಗಿರಲಿಲ್ಲ. ಅಂತೂ ನಮ್ಮ ಅಸ್ಟ್ರೇಲಿಯ ಪ್ರವಾಸವನ್ನು ಮುಗಿಸಿ ನಮ್ಮ
ಮ್ಯಾಂಚೆಸ್ಟರ್ ತಲಪಿ ನಿಡಿದಾದ ಉಸಿರು ಬಿಟ್ಟೆವು , ಸಧ್ಯಕ್ಕೆ
ಎಲ್ಲಿಯೂ ವಿಮಾನದಲ್ಲಿ ಹೋಗಬಾರದೆನಿಸಿತ್ತು .
28-07-2021 ಉದಯವಾಣಿ ದೇಸೀಸ್ವರದಲ್ಲಿ ಪ್ರಕಟವಾಗಿದೆ
Comments
Post a Comment