ಯಗಾದಿ ಬರುತ್ತೆ ಬರುತ್ತೆ ಬಂತು --- ಓಡಿಹೋಯಿತು

 

ಯಗಾದಿ ಬರುತ್ತೆ ಬರುತ್ತೆ ಬಂತು --- ಓಡಿಹೋಯಿತು

 

ನಾಳೆ ಯುಗಾದಿ ಹಬ್ಬ. ಸಂಭ್ರಮವೋ ಸಂಭ್ರಮ. ಕೆಲಸದಿಂದ ನೇರವಾಗಿ ಮಾರ್ಕೆಟ್ಗೆ ಹೋಗಿ ಬೇಕಾದ ಪದಾರ್ಥಗಳನ್ನೆಲ್ಲ ತಂದಾಯಿತು. "ಬೆಳಗ್ಗೆ ಎಲ್ಲರೂ ಬೇಗನೆ ಏಳಬೇಕು. ಎದ್ದು ತಲೆಗೆ ಸ್ನಾನ ಮಾಡಿ , ಪೂಜೆಗೆ ಬರಬೇಕು.ಅಪ್ಪ , ಅಜ್ಜ ಇಬ್ರು ಪೂಜೆ ಮಾಡಿದಮೇಲೆ ಮಂಗಳಾರತಿ ತೆಗೆದುಕೊಂಡು ಬೇವುಬೆಲ್ಲ ತಿನ್ನಬೇಕು. ತಿಳೀತಾ? " ಮನೆಯಲ್ಲಿ ಹಿಂದಿನ ರಾತ್ರಿಯೇ ಎಲ್ಲರಿಗೂ ತಾಕೀತು ಮಾಡಿಯಾಗಿತ್ತು. ಶೆಲ್ಫಿನ  ಹಿಂದಕ್ಕೆ  ಹೋಗಿ ಕುಳಿತಿದ್ದ ’ಯುಗ ಯುಗಾದಿ ಕಳೆದರೂ’ ಹಾಡಿನ ಧ್ವನಿ ಮುದ್ರಣ ವನ್ನು ಹುಡುಕಿ ತೆಗೆದಿಟ್ಟಾಯಿತು .

ಬೆಳಗ್ಗೆ6 ಗಂಟೆಗೆ ಅಲಾರಂ ಹೊಡೆದ  ಕೂಡಲೆ ಎದ್ದು ಯುಗಾದಿ ಹಾಡನ್ನು ಹಚ್ಚಿ,  ಪೊರಕೆಯಿಂದ ಅಂಗಳವನ್ನು ಗುಡಿಸಿ ಮನೆಮುಂದೆ ಅಂದವಾದ ರಂಗೋಲಿಯನ್ನು ಬಿಡಿಸಿ ನನ್ನ ಕಲಾಕೃತಿಗೆ ನಾನೇ ಮೆಚ್ಚಿಕೊಂಡು, ಒಳಗೆ ಬಂದು ದೇವರ ಪೂಜೆಗೆ ಅಣಿಮಾಡಿಯಾಯಿತು.ಅಷ್ಟರಲ್ಲಿ ಫೋನ್ನಲ್ಲಿ ಮೆಸ್ಸೇಜ್ ಬಂದ ಶಬ್ದವಾಯಿತು. ಯುಗಾದಿ ಹಬ್ಬಕ್ಕೆ ಶುಭಾಶಯ ಕೋರುತ್ತ ಸಂದೇಶಗಳನ್ನು ಕಳುಹಿಸುತ್ತಿರುವ ಮಿತ್ರರು ಬಂಧುಗಳಿಗೆಲ್ಲ ನಾನೂ ಸಂದೇಶ ಕಳುಹಿಸಿದ್ದಾಯಿತು.(ಇಂಡಿಯದಲ್ಲಾಗಲೇ ಮಧ್ಯಾಹ್ನ ಅಲ್ಲವೆ?) ಆ ವೇಳೆಗೆ ಗಂಟೆ 9 ಹೊಡೆಯಿತು.

ಅಷ್ಟು ಹೇಳಿದ್ದರೂ ಇನ್ನೂ ರಜೆಯ ಗುಂಗಿನಲ್ಲಿ ಮಲಗೇ ಇದ್ದ ಮಕ್ಕಳನ್ನು  ಬಲವಂತವಾಗಿ ಏಳಿಸಿ ಸ್ನಾನಕ್ಕೆ ಕಳುಹಿಸಿಯಾಯಿತು, ಸ್ನಾನ ಮಾಡಿ ಸಿದ್ಧವಾಗಿದ್ದ ನನ್ನ ಮಾವ ಹಾಗೂ ಯಜಮಾನರ ಪೂಜೆಗೆ  ಎಲ್ಲ ಸಾಮಗ್ರಿ ಇದೆಯೇ ಎಂದು ನೋಡಿ ಯಾಯಿತು. ಇಷ್ಟು ಹೊತ್ತಿಗೆ ಅಡುಗೆ ಮನೆ ನನ್ನನ್ನು ಕೈಬೀಸಿ ಕರೆಯುತ್ತಿತ್ತು. ಯುಗಾದಿ ಹಬ್ಬ ! ಇಡ್ಲಿ ಕಡುಬು ಬೆಳಗಿನ ತಿಂಡಿಗೆ, ದೇವರ ನೈವೇದ್ಯಕ್ಕೆ ಇರಲೇಬೇಕಲ್ಲವೆ? ಅದಕ್ಕೆಂದೇ ಮತುವರ್ಜಿಯಿಂದ ನೆನ್ನೆಯೇ ಹಿಟ್ಟು ರುಬ್ಬಿಟ್ಟಿದ್ದಾಗಿತ್ತು. ಹಾಗಾಗಿ ಅವೆರಡನ್ನೂ ಸಿದ್ಧಮಾಡುವುದರಲ್ಲಿ ಒಂದು ಗಂಟೆಗೂ ಹೆಚ್ಚು ಸಮಯ ವಾಯಿತು. ಯಜಮಾನರ ಪೂಜೆ ಮುಗಿಯುತ್ತ ಬಂದಿತ್ತು. ಮಕ್ಕಳೂ ಸಿದ್ಧರಾಗಿದ್ದರು. ಎಲ್ಲರೂ ಸೇರಿ ಮಂಗಳಾರತಿ ಮಾಡಿ ದೇವರ ಅನುಗ್ರಹಕಾಗಿ ಪ್ರಾರ್ಥಿಸಿ ’ಶತಾಯುಃ ವಜ್ರದೇಹಾಯಸರ್ವಸಂಪತ್ಕರಾಯಚ , ಸರ್ವಾರಿಷ್ಟ ವಿನಾಶಾಯ ನಿಂಬಕಂದಳ ಭಕ್ಷಣಂ’ಶ್ಲೋಕ ಹೇಳಿ , ಹೇಳಿಸಿ ಬೇವು ಬೆಲ್ಲ ಸ್ವೀಕರಿಸಿಯಾಯಿತು. ಬೇವು ಬೆಲ್ಲ ಹಂಚುವಾಗ ಮಕ್ಕಳಿಗೆ ಹೆಚ್ಚಾಗಿ ಬೆಲ್ಲವೇ ಬರುವಂತೆ ಕೈಚಳಕ ತೋರಿಸಿದ್ದು ಮಕ್ಕಳ ಮೇಳಿನ ಪ್ರೀತಿಗಾಗಿ, ಮತ್ತೆ ಅವರಿಗೆ ಯಾವ ನೋವೂ ಬಾರದಿರಲಿ ಎಂಬ ತಾಯಿ ಮನಸ್ಸಿನ ಸದಾಶಯ ಎಂದು ಹೇಬೇಕಾಗಿಲ್ಲ ಅಲ್ಲವೇ? ಅಂತೂ ಬೇವು ಬೆಲ್ಲದ ಸೇವನೆ ಮುಗಿದು ಇಡ್ಲಿ ಕಡುಬುಗಳನ್ನು ಧ್ವಂಸಮಾಡಿ ಉಟ್ಟ ಹೊಸ ಬಟ್ಟೆಗಳ ಅಂದವನ್ನು ಒಬ್ಬರಿಗೊಬ್ಬರು ಗುಣಗಾನ ಮಾಡುತ್ತ ನಡುನಡುವೆ ಸ್ನೇಹಿತರು, ಬಂಧುಗಳೊಡನೆ ಫೋನಿನಲ್ಲಿ ಮಾತನಾಡುವ ವೇಳೆಗೆ ಗಂಟೆ 11:30. ಮಧ್ಯಾಹ್ನಕ್ಕೆ ಹಬ್ಬದಡುಗೆ ಮಾಡಬೇಕು. ತಿಂದ ತಿಂಡಿಯಿನ್ನೂ ಗಂಟಲಿನಿಂದ ಇಳಿದಿರಲಿಲ್ಲ , ಅಡುಗೆಗೆ ತರಕಾರಿಗಳನ್ನು ಹೆಚ್ಚಿಕೊಂಡದ್ದಾಯಿತು. ಯುಗಾದಿ ಅಂದಮೇಲೆ ಒಬ್ಬಟ್ಟು ಮಾಡದಿರಲು ಆದೀತೆ? ನಮ್ಮ ಮನೆಯವರಿಗೆ ಕಾಯೊಬ್ಬಟ್ಟು ಇಷ್ಟವಾದರೆ ಮಕ್ಕಳಿಗೆ ಬೇಳೆ ಒಬ್ಬಟ್ಟು ಬೇಕು. ಹಾಗಾಗಿ ಎರಡೂ ರೀತಿಯ ಒಬ್ಬಟ್ಟೂ ತಯಾರು ಮಾಡಿ ಅಡುಗೆ ಮುಗಿಸುವ ವೇಳೆಗೆ  ಎಲ್ಲರೂ ಊಟಕ್ಕೆ ಸಿದ್ಧರಾಗಿದ್ದರು. ಅದೆಷ್ಟು ಬೇಗ ಇಡ್ಲಿ ಕಡುಬು ಅರಗಿಹೋಯಿತೋ ಕಾಣೆ. ಅಂತೂ ಎಲ್ಲರಿಗೂ ಹಬ್ಬದೂಟವನ್ನು ಬಡಿಸಿ ನಾನು ಊಟ ಮಾಡುವ ವೇಳೆಗೆ ಗಂಟೆ 3:30. ಅಡಿಗೆ ಮಾಡಿದರಾಯಿತೆ? ಪಾತ್ರೆ ತೊಳೆದು ಇಡಬೇಕಲ್ಲವೇ? ಇಲ್ಲದಿದ್ದರೆ ಮಾರನೆಯ ದಿನ ಕೆಲಸಕ್ಕೆ ಹೋಗುವ ಮುನ್ನ  ಅಡಿಗೆ ಮಾಡುವುದಕ್ಕೆ ಪಾತ್ರೆ ಇರಬೇಕಲ್ಲ!

ಪಾತ್ರೆಗಳನ್ನೆಲ್ಲ ತೊಳೆದು ಅಡಿಗೆ ಮನೆ ಶುದ್ಧಿಮಾಡಿ "ಉಸ್ಸಪ್ಪಾ" ಎನ್ನುವ ವೇಳೆಗೆ ಸಂಜೆ 6 ಗಂಟೆ. ’ದೇವರಿಗೆ ದೀಪ ಹಚ್ಚಿ ಮುಚ್ಚಂಜೆಯಾಗ್ತಾ ಇದೆ’ ಅಂದ ನನ್ನ ಮಾವನವರ ಕೂಗಿಗೆ ಓಗೊಟ್ಟು ದೀಪ ಹಚ್ಚಿ ಬಂದಾಯಿತು. ಈ ನಡು ನಡುವೆ ಕಾಫಿಯ ಸೇವನೆಯಂತೂ  ಇದ್ದೇ ಇತ್ತು.

ಇನ್ನು ರಾತ್ರಿಗೆ ಏನು ಅಡಿಗೆ ಮಾಡುವುದು ಎಂದು ಯೋಚಿಸುತ್ತಿರುವಾಗ ನನ್ನ ಕೆಲಸದ ಒತ್ತಡ ನೋಡಿದ ನನ್ನವರು "ಇನ್ನೇನೂ ಮಾಡಬೇಡ , ಏನಿದೆಯೋ ಅದನ್ನೇ ಹಂಚಿಕೊಂಡು ತಿಂದರಾಯಿತು" ಎಂದರು

ಬೇಳಗಿನಿಂದ ಒಂದೇ ಸಮನೆ ಕೆಲಸಮಾಡುತ್ತಿದ್ದ ನನಗೂ ಅದೇ ಬೇಕಾಗಿದ್ದಿತು. ಅಲ್ಲದೆ ಅಷ್ಟು ಹೊತ್ತಿಗೆ ಹಬ್ಬದ ಅಮಲು ಇಳಿಯತೊಡಗಿತ್ತು. ಮಧ್ಯಾಹ್ನದ ಅಳಿದುಳಿದ ಅಡುಗೆಯನ್ನೇ ಊಟಮಾಡಿ ಮಲಗುವವೇಳೆಗೆ ರಾತ್ರೆ 9:30 . ಬೆಳಗ್ಗೆ ಬೇಗನೇ ಏಳಬೇಕು. ಕೆಲಸಕ್ಕೆ ಹೊರಡುವ ವೇಳೆಗೆ ತಿಂಡಿ ಅಡುಗೆ ಎಲ್ಲ ಆಗಬೇಕಲ್ಲ. ಅಂತೂ ಉಕ್ಕಿದ ಸಂಭ್ರಮದಿಂದ ಕಾಯುತ್ತಿದ್ದ ಯುಗಾದಿ  ಬಂತು

ಓಡಿಯೂ ಹೋಯಿತು. ಯುಗಾದಿಯ ದಿನವೆಲ್ಲ ಎಲ್ಲರಿಗೂ ಶುಭ ಹಾರೈಸಿದ್ದೂ ಹಾರೈಸಿದ್ದೇ! ಜೀವನದ ಅತ್ಯಮೂಲ್ಯವಾದ ದಿನ ಕಳೆದುಹೋಯಿತೆಂಬ ಪರಿವೆಯೂ ಇಲ್ಲದೆ ಹಬ್ಬವನ್ನು ಆಚರಿಸಿಯಾಯಿತು.

ಮರುದಿನ ಬೆಳಗ್ಗೆ  ಮಾಮೂಲಿ ಹಾಡು .

ನಿಜವಾಗಿಯೂ ಬೇವು ಬೆಲ್ಲದ ಸೇವನೆಯ ಹಿಂದಿರುವ ತತ್ವವನ್ನು ತಿಳಿದರೆ ಯುಗಾದಿಯ ನಿಜವಾದ ಅರ್ಥ ತಿಳಿದಂತೆ!

ಅಷ್ಟಿಲ್ಲದೆ ದತ್ತಾತ್ರೇಯ ಬೇಂದ್ರೆಯವರು ಹೇಳಿದರೆ ? ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ, ನಮ್ಮನಷ್ಟೆ ಮರೆತಿದೆ.


ಅನಿವಾಸಿ ಅಂಗಳದಿಂದ 2021 ರ್ಪ್ರಿ ಲ್ ತಿಂಗಳಿನಲ್ಲಿ ಪ್ರಕಟವಾಗಿದೆ 

 

 

 

 

 

Comments

Popular posts from this blog

ದೇವಾ ಕರುಣೆಯ ನು ತೋರ ಲಾರೆಯ

ಕವಾಲಿ

ಹೊಂದಾಣಿಕೆ