ಅಪ್ಪನಿಗೆ
ಅಪ್ಪನಿಗೆ
ಅಪ್ಪ ನಿನ್ನನ್ನು ನೋಡಿದಾಗಲೆಲ್ಲ
ಅಂದುಕೊಳ್ಳುತ್ತೇನೆ
ಎಷ್ಟು ಕಠಿಣ ನೀ ಕಲ್ಲೆದೆಯವನು!
ನಡೆಯಲು ಬರದೆ ನಾ ಅಡಿಗಡಿಗೆ
ಬೀಳುತಿದ್ದಾಗ
ಕಣ್ಣೀರು ಕೆನ್ನೆಮೇಲುರುಳಿ
ಕೆಳಗಿಳಿಯುವಾಗ
ಅಮ್ಮ ಬಂದು ನನ್ನನೆತ್ತಿ ಮುದ್ದಾಡಿ
ರಮಿಸಿರಲು
ಮಡಿಲಿಂದ ನನ್ನ ಬಿಡಿಸಿಬಿಟ್ಟು
ಕೆಳಗಿಟ್ಟು
ನೀ ಹೇಳುತ್ತಿದ್ದೆ ಗಟ್ಟಿಯಾಗಬೇಕು ನೀನು
!
ಶಾಲೆಯಲ್ಲಿ ಮೊದಲದಿನ ಅಪರಿಚಿತರೆಲ್ಲ
ಅಮ್ಮನೂ ಬಳಿಯಲ್ಲಿಲ್ಲ,ನನ್ನನರಿತವರಾರೂ ಇಲ್ಲ
ಒಬ್ಬಂಟಿ ನಾನು ಹೆದರಿಕೆಯಲಿ ಅಳಲು
ಮುದ್ದಿಸಲಿಲ್ಲ , ಸಂತೈಸಲಿಲ್ಲ ಬದಲಾಗಿ
ನೀ ಹೇಳುತ್ತಿದ್ದೆ ಗಟ್ಟಿಯಾಗಬೇಕು
ನೀನು!
ಆಟವಾಡುವ ನಡುವೆ ನಾ ಬಿದ್ದು ಪೆಟ್ಟ
ತಿಂದು
ಮಂಡಿ ತರಚಿರಲು , ಸಹಿಸಲಾರದ ನೋವಿರಲು
ಗೆಳೆಯರೆನ್ನನು ಛೇಡಿಸುತ್ತ
ನಗುತ್ತಿದ್ದರೆ
ಬಳಿಬಂದು ನೀವುತಲಿ ಮಂಡಿಯನು
ನೀಹೇಳುತ್ತಿದ್ದೆ ,ಗಟ್ಟಿಯಾಗಬೇಕು ನೀನು!
ಕ್ಲಾಸಿನಲಿ ಟೀಚರಿಂದ ಏಟು ತಿಂದುದನು
ಅಮ್ಮನಿಗೆ ಹೇಳಿ ಅಳುತಿದ್ದರೆ ಅವಮಾನದಲಿ
ಎಲ್ಲಿಂದಲೋ ಬಂದು ಬಳಿ
ನಿಲ್ಲುತ್ತಿದ್ದೆ
ಬಂದುದನು ಎದುರಿಸಬೇಕು, ಅಳದಿರಬೇಕು
ನೀ ಹೇಳುತ್ತಿದ್ದೆ ,ಗಟ್ಟಿಯಾಗಬೇಕು ನೀನು!
ಎಲ್ಲದಕು ಯಾವುದಕು ಒಂದೆ ಮಂತ್ರವು
ನಿನ್ನದು
ನೀ ಗಟ್ಟಿಯಾಗಬೇಕು , ನೀ ಗಟ್ಟಿಯಾಗಬೇಕು.
ಈಗ
ನನ್ನದೊಂದೇ ಮಾತಿದೆ ನೀನೀಗ ಕೇಳಬೇಕು
ನಾ ಕಣ್ಣೆದುರು ಇರುವವರೆಗೆ ಮುಚ್ಚಬಾರದು
ನೀ ಕಣ್ಣು
ನಿನ್ನನ್ನಗಲಿ ಬದುಕಿರುವಷ್ಟು
ಗಟ್ಟಿಯಾಗಿಲ್ಲ ನಾನಿನ್ನೂ!!
ಡಾ ಸತ್ಯವತಿ ಮೂರ್ತಿ
ಸಂಕೇತಿ ಸಂಗಮ
ಜುಲೈ2021 ಸಂಚಿಕೆ, ಅನಿವಾಸಿ ಅಂಗಳದಿಂದಲೂ
ಪ್ರಕಟವಾಗಿದೆ
Comments
Post a Comment