ಸ್ನೂಪಿ

 

ಸ್ನೂಪಿ

ಆಫೀಸಿನಲ್ಲಿ ಎಂದಿನಂತೆ ಫೈಲುಗಳ ಸಮುದ್ರದಲ್ಲಿ ಮುಳುಗಿದ್ದೆ.ಕೂಡುವ ಕಳೆಯುವ ಲೆಕ್ಕದಲ್ಲಿ ತಲೆ ಬಿಸಿಯಾಗಿತ್ತು.ಹೊರಗಿನ ಪ್ರಪಂಚದ ಅರಿವೂ ಇರಲಿಲ್ಲ.ಸ್ವಾಭಾವಿಕವಾಗಿಯೇ ನಾನು ಯಾವುದೇ ಕೆಲಸ ಮಾಡಹೊರಟವ್ರಾ ಸುತ್ತಲಿನ ಪರಿವೆ ಇರುವುದಿಲ್ಲ.  ಅಂತಹುದರಲ್ಲಿ ಅಂಕೆ ಸಂಖ್ಯೆಗಳ ನಡುವೆ ಮುಳುಗಿದ್ದೆನೆಂದರೆ ಕೇಳುವುದೇನು? ಇಹಪರದ ಅರಿವೂ ಇರಲಿಲ್ಲ.ಇದ್ದಕಿದ್ದ ಹಾಗೆ ಆಫೀಸಿನಲ್ಲಿ ಗದ್ದಲ ಕೇಳಿಸಿತು.ಎಲ್ಲರೂ ಆತಂಕಗೊಂಡಿದ್ದಾರೆ.ಎಲ್ಲರ ಬಾಯಲ್ಲೂ ಒಂದೇ ಮಾತು. ಸ್ನೂಪಿ ಎಲ್ಲೋ ಕಾಣಿಸುತ್ತಿಲ್ಲ.ಅಯ್ಯೋ ನನ್ನ ಸ್ನೂಪಿ ಯಿಲ್ಲದೆ ಜೀವದಿಂದ ಇರುವುದಾದರೂ ಹೇಗೆ? ನನ್ನ ಬಾಳೇ ಬರಡಾಯಿತು. ಜೀವಕ್ಕೆ ಜೀವದಂತಿದ್ದ ನನ್ನ ಸ್ನೂಪಿಯೇ ನನ್ನನ್ನು ತೊರೆದು ಹೋದಮೇಲೆ ಬದುಕಿದ್ದುತಾನೇ ಏನು ?

ಬಾಸ್ ಉವಾಚ.

ಡ್ಯಾಡಿ ಯಾಕ್ ಡ್ಯಾಡಿ? ಸ್ನೂಪಿ ಹೀಗ್ಮಾಡ್ದ? ಅವ್ನಿಗೇನು ಕಡಿಮೆ ಮಾಡಿದ್ರಿ ನೀವು? ಅವನಿಗೆ ಬೇಕಾದದ್ದೆಲ್ಲ ತೆಕ್ಕೊಟ್ಟಿದ್ದೀರಿ.ರಾಜಕುಮಾರನ ಹಾಗೆ ನೋಡ್ಕೊಂಡಿದಿರಿ.ಅಂತಹುದರಲ್ಲಿ ಹೀಗೆ ಮಾಡೋದೆ?

 

ಬಾಸ್ನ ಪ್ರೀತಿಯ ಪುತ್ರಿ ನೀತಾಳ ಉವಾಚ

 

ಮಮ್ಮಿ ಮಮ್ಮಿ ಏನ್ಮಮ್ಮಿ ಸ್ನೂಪಿ ಬರೋಲ್ವಂತ?"

 

ಯಾಕ್ ಡ್ಯಾಡಿ ನೀನ್ಹೇಳು ಡ್ಯಾಡಿ ? ಯಾಕ್ ಬರೋಲ್ವಂತೆ

  ಎಲ್ಲರಿಗಿಂತ ಕಿರಿಯ ಆದಿತ್ಯನ ಗೊಳೋ!

 

ಅಯ್ಯೋ ನನ್ನ ಕಂದ ಸ್ನೂಪಿ ಇನ್ನಿಲ್ಲಮ್ಮ . ನಮ್ಮ ಮೇಲೆ ಕೋಪ ಮಾಡ್ಕೊಂಡು ಮನೆ ಬಿಟ್ಟು ಹೊರಟ್ಹೋಗಿದಾನೆ. ಎಲ್ಲಿದಾನೋ ಇಲ್ಲವೋ ? ಮತ್ತೆ ಮನೆ ಸೇರ್ತಾನೋ ಇಲ್ವೋ? ಏನ್ಮಾಡೋದೋ? ಒಂದೂ ತಿಳಿತಾ ಇಲ್ಲ ,ಅಂಬಿಕಾಳ ಸಾಂತ್ವನ

.’ಸಾರ್ ನಂದೊಂದು ಸಲಹೆ ಸಾರ್, ಬೆನ್ನು ಬಗ್ಗಿಸಿ ಹಲ್ಲು ಗಿಂಜುತ್ತ ನುಡಿದ ಮಹೇಶ  .

 

ಏನ್ರೀ ಅದು? ಹೇಳಿ.

 

ಈಗಿಂದೀಗ್ಲೆ ಹೋಗಿ ಪೋಲೀಸ್ ಕಂಪ್ಲೇಂಟ್ ಕೊಟ್ಟು ಬರ್ಲಾ ಸಾರ್?

 

ಏನ್ರಿ ನೀವ್ಹೇಳೋದು ಮನೆ ಮಾತು ಬೀದಿ ಪಾಲಾಗ್ಲಿ ಅಂತಾನ? ಪೋಲೀಸ್ನೋರಿಗೆಲ್ಲ ತಿಳಿಸೋದೂ ಬೇಡ. ರಂಪ ರಾದ್ಧಾಂತ ಮಾಡೋದೂ ಬೇಡ.

 

ನಾವೇ ಹುಡುಕೋಣ, ಸಿಗ್ದೆ ಎಲ್ಲಿಗ್ಹೋಗ್ತಾನೆ? ಹೊಟ್ಟೆ ಹಸಿದ್ರೆ ವಾಪಸ್ ಬಂದೇ ಬರ್ಬೇಕು .

 

ಡ್ಯಾಡಿ ನೀವು ಹಾಗೆಲ್ಲ ಹೇಳ್ಬೇಡಿ ಡ್ಯಾಡಿ.

ನೀವು ಹೀಗೆ ಅಸಡ್ಡೆ ಮಾಡಿದ್ದರಿಂದಲೇ ಅವನು ಮನೆ ಬಿಟ್ಟು ಹೋಗಿದ್ದು. ಅವನಿಗೆ ನೀವು ಯಾವಾಗ್ಲೂ  ಏನಾದ್ರೂ ಅಂತಾನೆ ಇರ್ತಿರ. ನೀತಾಳ ಆಕ್ಷೇಪಣೆ

 

ಇಲ್ಲ ಮಹರಾಯ್ತಿ, ತಪ್ಪಾಯ್ತು, ನನಗೇನು ಅವನನ್ನ ಕಂಡರೆ ಪ್ರೀತಿಯಿಲ್ಲ ಅಂದ್ಕೊಂಡ್ಯ? ಏನೋ ಕೋಪದಲ್ಲಿ ಹಾಗಂದೆ.

 

ರೀ, ಹೀಗೇ ಮಾತಾಡ್ತಾ ಕೂತ್ಕೊಂಡ್ರೆ ಹೊತ್ತು ಕಳೆದುಹೋಗುತ್ತೆ, ಆಮೇಲೆ ಅವನು ನಮ್ಗೆ ಸಿಗದಷ್ಟು ದೂರ ಹೊರಟ್ಹೋದ್ರೆ? ನಡುವೆಯೇ ಬಾಯಿಹಾಕಿದಳು ಧರ್ಮಪತ್ನಿ ಅಂಬಿಕ.

 

ಹೌದು ಕಣೆ ನೀನ್ಹೇಳೋದೂ ಸರಿ . ಈಗ್ಲೆ ಹುಡ್ಕೋಕ್ಕೆ ಹೊರಡ್ಬೇಕು

 

ಸಾರ್ ಹೀಗ್ಮಾಡೋಣ,  ನಾನು ಪರೇಶ  ಮ್ಯಂಚೆಸ್ಟರ್ ಉತ್ತರಕ್ಕೆ ಹೋಗ್ತೀವಿ, ಮಹೇಶ ಸೋಮನಾಥನ್ನ ಕರ್ಕೊಂಡು ಪೂರ್ವ ದಿಕ್ಕಿನಕಡೆಗೆ ಹೋಗ್ಲಿ, ರಾಜಣ್ಣ , ಜಾನ್ ಜೊತೇಲಿ ದಕ್ಷಿಣ ದಿಕ್ಕಿಗ್ಹೋಗ್ಲಿ, ಇನ್ನು ಮೇರಿ ಪ್ರಮೀಳ ಇಬ್ಬರೂ ಪಶ್ಚಿಮ ದಿಕ್ಕಿಗ್ಹೋಗ್ಲಿ. ಆಗ ಎಲ್ಲಿದ್ರೂ ಸಿಕ್ಕೇ ಸಿಗ್ತಾನೆ ಅಂತ  ಉಸಿರು ಬಿಡದೆ ಬೃಹತ್ ಯೋಜನೆ ಮಾಡಿದವನಂತೆ ಒಂದೇ ಉಸಿರಿಗೆ ಹೇಳಿದ ಕಿರೀಟ.

 

ಸರಿ ಹಾಗೇ ಮಾಡಿ ನಾವು ಮನೆ ಸುತ್ತಮುತ್ತ ಎಲ್ಲಾ ಹುಡುಕ್ತೀವಿಅಂದರು ಬಾಸ್ ಮಹಾಶಯರು.

 

ಅಂತೂ  ಒಂದು ದೊಡ್ಡ ಪಟಾಲಮ್ಮೇ  ಹೊರಟಿತು ಯುವರಾಜ ಸ್ನೂಪಿಯ ಹುಡುಕಾಟಕ್ಕೆ. ಟಾರ್ಚುಗಳ ಅಗತ್ಯವಿರಲಿಲ್ಲ, ಕಾರಣ ಇಂಗ್ಲೆಂಡಿನಲ್ಲಿ   ಬೇಸಗೆಯಲ್ಲಿ ರಾತ್ರಿ ಕತ್ತಲಾಗುವುದೇ ಬಹಳ ತಡ.

ಇಷ್ಟೆಲ್ಲ  ಹಗರಣಕ್ಕೆ ಕಾರಣನಾದ ಕಥಾನಾಯಕ ಯಾರು? ಮನೆ ಬಿಟ್ಟು ಹೋದದ್ದು ಏಕೆ? ಇತ್ಯಾದಿ ಪ್ರಶ್ನೆಗಳು ಸಹಜ. ಮನೆ ಬಿಟ್ಟು ಹೋದದ್ದು ಬೇರೆ ಯಾರೂ ಅಲ್ಲ , ಬಾಸ್   ಪ್ರೀತಿಯ ನಾಯಿ ಸ್ನೂಪಿ!

ಮನೆಬಿಟ್ಟ ಕಾರಣವನ್ನು ಸ್ನೂಪಿಯೇ ಹೇಳಬೇಕು. ಸ್ವಾತಂತ್ರೇಚ್ಛೆಯಿಂದ ಹೋಗಿದ್ದರೂ ಹೋಗಿರಬಹುದು.ಅಥವಾ ರಾಜೋಪಚಾರದ ಹೊಡೆತ ತಾಳಲಾರದೆ ಮನೆ ಬಿಟ್ಟಿರಲೂ ಬಹುದು,ಇಲ್ಲ ಸಾಮಾನ್ಯ ನಾಯಿಗಳ ಜೀವನದರ್ಶನ ಮಾಡಲು ಹೋಗಿರಲಿಕ್ಕೂ ಸಾಕು. ಅಂತೂ ಈಗ ಸ್ನೂಪಿ ಮನೆಯಲ್ಲಿಲ್ಲ.

 

ಕ್ಯಾ ಸಾಬ್ ಐಸೆ ಕೈಸೆ ಛೋಡ್ ದಿಯ ಸ್ನೂಪಿಕೋ, ಘರ್ಮೆ ಕೋಯಿ ನಹೀ ಥಾ ಕ್ಯಾ?ಕುತೂಹಲದ ಮುದ್ದೆಯಾದ ಕಾರಿನ ಡ್ರೈವರ್ ಖಾದಿರನ ಪ್ರಶ್ನೆ.

 

ಅವನ ಪ್ರಶ್ನೆಗೆ ಸಮಾಧಾನದ  ಉತ್ತರಕೊಡಲು ಯಾರು ಸಿದ್ಧರಿರಲಿಲ್ಲ ಎನ್ನುವುದು ಬೇರೆ ಪ್ರಶ್ನೆ.

 

************  ************  ************

 

ಬೋಪಣ್ಣನ ಜೊತೆಹೊರಟ ರಂಗಣ್ಣ ಎಲ್ಲ ಕಡೆಯೂ ಸ್ನೂಪಿಗಾಗಿ ಹುಡುಕಿ ಬರಿಗೈಯಲ್ಲಿ ಮನೆಗೆ ಬಂದ. ಕಂಡ ಶ್ವೇತ ವರ್ಣದ ಶ್ವಾನಗಳನ್ನೆಲ್ಲ ದೃಷ್ಟಿಸಿ ನೋಡಿದ್ದ, ನೋಡೀ ನೋಡೀ ಅವನ ಕಣ್ಣು ನೋವು ಕಂಡಿತಷ್ಟೆ! ಸ್ನೂಪಿಯನ್ನಲ್ಲ.

 

ರಂಗಣ್ಣ ಬರಿಗೈಯಲ್ಲಿ ಬಂದ ಕೂಡಲೆ ನೀತಳ ನಿರೀಕ್ಶೆ ನಿರಾಶೆಯ ಆಳಕ್ಕೆ ಇಳಿಯತೊಡಗಿತು.ತನ್ನೊಡನೆ ಆಡಲು ಇರುತ್ತಿದ್ದ ಸ್ನೂಪಿ ಇನ್ನಿಲ್ಲ ಎಂಬುದು ಅವಳಿಗೆ ದೊಡ್ಡ ಕೊರಗಾಯಿತು.ಸ್ನೂಪಿ ಮನೆಗೆ ಬಂದಲ್ಲದೆ ತಾನು ಊಟ ಮಾಡುವುದಿಲ್ಲವೆಂದು ಸತ್ಯಾಗ್ರಹ ಹೂಡಿದಳು.

 

ನಾಯಿಯನ್ನು ಕಳೆದುಕೊಂಡ ದುಖಃದ ಜೊತೆಗೆ ಈಗ ಮಗಳನ್ನು ಸಂತೈಸುವ ಸಂಕಟವೂ ಬಂದು ಸೇರಿತು ಅಂಬಿಕಳಿಗೆ. ಆದರೂ ಸದ್ಯಕ್ಕೆ ಅವಳಿಗೆ ಸಮಾಧಾನ ಹೇಳುವುದು ಕಷ್ಟದ ಕೆಲಸವೇನೂ ಆಗಿರಲಿಲ್ಲ. ಯಾಕೆಂದರೆ ಇನ್ನೂ ನಾಯಿಯನ್ನು ಹುಡುಕ ಹೋಗಿರುವ ಎಲ್ಲರೂ ಹಿಂದಿರುಗಿ ಬಂದಿರಲಿಲ್ಲವಲ್ಲ!

 

ಅಯ್ಯೋ ಎಷ್ಟು ಚೆನ್ನಾಗಿತ್ತು ನಮ್ಮ ಸ್ನೂಪಿ.ಹಾಲಿನಂತೆ ಬಿಳುಪು ಅದರ ಮೈಬಣ್ಣ.ಅದರ ಕಣ್ಣುಗಳೋ ಹೊಳೆಯುವ ನಕ್ಷತ್ರಗಳು. ನೋಡಲು ಎಷ್ಟು ಮುದ್ದೋ ಅಷ್ಟೇ ಚುರುಕು ಕೂಡ. ಅಲ್ವೇನ್ರಿ?  ಮಡದಿಯ ಉದ್ಗಾರ.

 

ಅಲ್ಲಮ್ಮ ನಾವು ಸ್ನೂಪೀನ ಯಾವಾಗ ಕರ್ಕೊಂಡ್ಬಂದಿದ್ದು ಹೇಳು?

 

ಅದು ಹುಟ್ಟಿದ ಒಂದ್ವಾರಕ್ಕೇ ಕರೆದುಕೊಂಡು ಬಂದಿದ್ವಿ ಕಣೆ.ಅವತ್ನಿಂದ ಇವತ್ತಿನ ವರೆಗೂ ಒಂದಿವಸಾನೂ ಹೀಗೆ ಮಾಡಿರಲಿಲ್ಲ

 

ಮಾತಿನ ನಡುವೆ ಇದ್ದಕ್ಕಿದ್ದಂತೆ ಲಂಡನ್ ನಲ್ಲಿ ಓದುವುವುದಕ್ಕೆಂದು ಹೋಗಿದ್ದ ತಮ್ಮನ ನೆನಪಾಯಿತು ನೀತಾಳಿಗೆ.

 

ಡ್ಯಾಡಿ ಡ್ಯಾಡಿ ನಾನೀಗ್ಲೆ ಹೋಗಿ ರಾಜಿವಂಗೆ ಫೋನ್ ಮಾಡಿ  ವಿಷಯ ತಿಳಿಸ್ತೀನಿ’.

 

ಅಯ್ಯೋ ಬೇಡ  ಕಣಮ್ಮ , ಅವ್ನು ಅತ್ತೂ ಕರೆದೂ  ಗೋಳಾಡೋದಿರ್ಲಿ ಕಾಲೇಜು ಬಿಟ್ಟು ಓಡಿ ಬಂದ್ಬಿಡ್ತಾನೆ.ಅವನಿಗೆ ಸ್ನೂಪಿ ಅಂದ್ರೆ ಜೀವಕ್ಕಿಂತ ಹೆಚ್ಚು.ಪ್ರಪಂಚದಲ್ಲಿ ಅವನು ಏನಾದ್ರೂ ಕಳ್ಕೊಳ್ಳೋದಿಕ್ಕೆ ಸಿದ್ಧ ಆದರೆ ಸ್ನೂಪಿಯನ್ನಲ್ಲ. ಅಂಬಿಕಾಳ ಕಳಕಳಿ.

 

ಆದ್ರೂ ಅಮ್ಮ ಅವನಿಗೆ ತಿಳಿಸದೆ ಹೋದ್ರೆ ಆಮೇಲೆ ಬೈತಾನೆ. ಅದಕ್ಕೆ ತಿಳಿಸ್ಬಿಡ್ತೀನಿ

 

ಹೋಗಿ ಫೋನ್ ಮಾಡಿ ವಿಷಯ ತಿಳಿಸಿಯೇ ಬಿಟ್ಟಳು.ರಾಜೀವ ತನ್ನ ತಂದೆ ತಾಯಿಗೆ ಎಷ್ಟು ಮುದ್ದೋ ಸ್ನೂಪಿ ಅವನಿಗೆ ಅಷ್ಟೇ ಮುದ್ದು . ಒಂದು ಕ್ಷಣವೂ ಅದನ್ನು ಬಿಟ್ಟಿರದ ಅವನು ಕಾಲೇಜಿಗೆ ದೂರದ ಲಂಡನ್ ಗೆ ಹೋಗಬೇಕಾಗಿ ಬಂದಾಗ ದೊಡ್ದ ರಂಪವನ್ನೇ ಮಾಡಿದ್ದ.ಸ್ನೂಪಿಯನ್ನೂ ತನ್ನ ಜೊತೆಯಲ್ಲೇ ಕರೆದೊಯ್ಯುತ್ತೇನೆ ಎಂದು ಹಠ ಮಾಡಿದ್ದ. ಆದರೆ ಮನೆಯವರೆಲ್ಲ ಸಮಜಾಯಿಷಿ ಹೇಳಿದ ಮೇಲೆ ಬಿಟ್ಟುಹೋಗಿದ್ದ. ಸ್ನೂಪಿ ಕಾಣುತ್ತಿಲ್ಲ ಎಂಬ ಸುದ್ದಿ ಬಂದಾಗ ಅವನು ಪ್ರಯೋಗ ಶಾಲೆಯಲ್ಲಿದ್ದ.ಮಾಡುತ್ತಿದ್ದ ಪ್ರಯೋಗವನ್ನು ಅರ್ಧಕ್ಕೇ ಬಿಟ್ಟು ಕಾಲೇಜಿಗೆ ಮರುದಿನ ಬರುವುದಿಲ್ಲ ಎಂದು ತಿಳಿಸಿ ಅಲ್ಲಿಂದಲೇ ಸೀದಾ ಸ್ನೂಪಿಯನ್ನು ಹುಡುಕಲು ಹೊರಟ.ಅವನು ಕಾರನ್ನು ನಡೆಸುತ್ತಿದ್ದ ವೇಗದಲ್ಲಿ ಪೋಲಿಸಿನವರ ಗಮನಕ್ಕೆ ಬರದೆ ತಪ್ಪಿಸಿಕೊಂಡುದಷ್ಟೆ ಅಲ್ಲದೆ ಯಾರಿಗೂ ಯಮಪುರಿಯ ದಿಕ್ಕನ್ನು ತೋರಿಸದೇ ಬಂದುದೇ ಹೆಚ್ಚು. ಮನೆಯ ಮುಂದೆ ನಿಲ್ಲಿಸಿದ ಕಾರಿಗೆ ಬೀಗವನ್ನೂ ಹಾಕದೆ ಒಳನುಗ್ಗಿದ. ಆದರೆ ಮನೆಯಲ್ಲಿ ಯಾರೂ ಇಲ್ಲವೆಂದು ತಿಳಿದಾಗ ನಿರಾಶೆಯಾಯಿತು.ಸ್ನೂಪಿ ಇದ್ದ ಪುಟ್ಟದಾದ ಅರಮನೆಯಂತಿದ್ದ ಗೂಡಿನ ಕಡೆ ನೋಡಿದ.

ಖಾಲಿಯಿದ್ದ ಮನೆ ಬಿಕೋ ಎನ್ನುತಿತ್ತು.ಸ್ನೂಪಿಗಾಗಿಯೇ ಅಚ್ಚುಕಟ್ಟಾಗಿ ಮೆತ್ತನೆ ಹಾಸಿಗೆ ಹೊದಿಕೆಗಳನ್ನು ಸೇರಿಸಿ ಮಾಡಿದ್ದ ಏರ್ಕಂಡಿಷನ್ ಕೊಠಡಿಯ ಕಂಡೀಷನ್ನನ್ನು ನೋಡಿ ದುಖಃವುಕ್ಕಿಬಂದಿತು.ಜೀವನದಲ್ಲಿ ಅವನು ಅದುವರೆವಿಗೆ ಅತ್ತಿದ್ದನೋ ಇಲ್ಲವೋ , ಅಂದು ಮಾತ್ರ ಧರಾಕಾರವಾಗಿ ಅತ್ತಿದ್ದ.ಇಲ್ಲೇ ಎಲ್ಲೋ ಇರಬಹುದೇನೋ ಎಂದು  ಮನೆಯ ಸುತ್ತುಮುತ್ತಿನ ಆವರಣದಲ್ಲೆಲ್ಲಾ ಹುಡುಕಾಡಿದ. ಆದರೆ ಎಲ್ಲೂ ಕಾಣದಾದಾಗ ನಿರಾಶೆಯಿಂದ ಫ಼್ಯಾಕ್ಟರಿಯ ಕಡೆಗೆ ನಡೆದ.ಅಲ್ಲಿ ಎಲ್ಲ ಕೆಲಸಗಾರರೂ  ಒಂದೊಂದು ದಿಕ್ಕಿಗೆ ಹಂಚಿದಂತೆ ಹೋಗಿರುವುದೂ , ಈಗಾಗಲೇ ಒಂದು ದಿಕ್ಕಿನಿಂದ ನಕಾರಾತ್ಮಕ  ಉತ್ತರ ಬಂದಿರುವುದೂ , ನೀತ ಉಪವಾಸ ಸತ್ಯಾಗ್ರಹ ಹೂಡಿರುವುದು, ಎಲ್ಲ ತಿಳಿಯಿತು.ಕೂಡಲೇ ತಾನೂ ಸ್ನೂಪಿ ಸಿಗುವ ತನಕ ಊಟ ಮಾಡುವುದಿಲ್ಲವೆಂದು ಘೋಷಿಸಿದ. ತನ್ನ ಕಾರನ್ನು ಅಲ್ಲಿಯೇ ಬಿಟ್ಟು ಅಲ್ಲೇ ಇದ್ದ ತಂದೆಯ ಕಾರನ್ನು ತೆಗೆದುಕೊಂಡು ಸ್ನೂಪಿಯನ್ನು ಹುಡುಕ ಹೊರಟ. ಸ್ನೂಪಿ ಸಿಗುವತನಕ ಮನೆಗೆ ಬರುವುದಿಲ್ಲ ಎಂತಲೂ ಘೋಷಿಸಿದ.

 

ಬಹಳ ಉತ್ಸಾಹ ತೋರಿಸಿ ಸ್ನೂಪಿಯನ್ನು ಹುಡುಕಲು ಹೊರಟಿದ್ದರೂ ಕಿರೀಟನಿಗೆ ಅದು ಅಷ್ಟು ಪ್ರಿಯವಾದ ಕೆಲಸವೇನೂ ಆಗಿರಲಿಲ್ಲ. ಅವತ್ತಿನ ಕೆಲಸದಿಂದ ಸ್ವಲ್ಪಹೊತ್ತು ಬಿಡುಗಡೆ ಸಿಕ್ಕಿತು ಎನ್ನುವುದೇ ಒಂದು ಸಮಾಧಾನ ಅಷ್ಟೆ. ಇಲ್ಲದ ಉತ್ಸಾಹ ತೋರಿಸಿ ಹೇಳಿದಮೇಲೆ ಹೋಗಲೇ ಬೇಕಲ್ಲ, ಹೋಗಿದ್ದೂ ಆಯಿತು , ಇದೆಲ್ಲಿ ಹೋಗಿದೆಯೋ  ಶ್ವಾನವನ್ನು ಹುಡುಕಿಕೊಂಡು ತಿರುಗುವ ಕೆಲಸ ನಮ್ಮ ಹಣೆಯಲ್ಲಿ ಬರೆದಿದ್ದರೆ ಯಾರೇನು ಮಾಡಿಯಾರು? ಪರೇಶನದೂ ಅದೇ ಅನಿಸಿಕೆ. ಹೇಳಿಕೇಳಿ ಬ್ರಾಹ್ಮಣ ಪುರೋಹಿತರ ಮಗನಾದ ಅವನಿಗೆ ಕೆಲಸ ಬೇಡವಾಗಿತ್ತು. ಆದರೇನು ಮಾಡುವುದು? ಯಜಮಾನನ ಅಪ್ಪಣೆಯನ್ನು ಮೀರಲು ಸಾಧ್ಯವೇ?

ಉತ್ತರ ದಿಕ್ಕಿನಲ್ಲಿ ಹೋಗಿ ಎಲ್ಲ ಕಡೆಯೂ ಹುಡುಕಿಯಾಯಿತು. ಎಲ್ಲೂ ಕಣ್ಣಿಗೆ ಬೀಳಲಿಲ್ಲ ಸ್ನೂಪಿ!

ಅತ್ತ ಪೂರ್ವ ದಿಕ್ಕಿನ ಕಡೆಗೆ ಸ್ನೂಪಿಯನ್ನು ಹುಡುಕಲು ಹೊರಟ ಮಹೇಶ ತಾನೇನೋ ದೊಡ್ಡ ಸಾಧನೆಯನ್ನು ಮಾಡುತ್ತಿದ್ದೇನೆ ಎನ್ನುವಂತೆ ಬಹಳ ಉತ್ಸಾಹದಿಂದ ಕೂಡಿದ್ದ. ರಸ್ತೆಯಲ್ಲಿ ಕಂಡ ಕಂಡ ಬಿಳಿಯ ಶ್ವಾನಗಳನ್ನು ಸ್ನೂಪಿಯೇ ಇರಬಹುದೆಂಬ ಸಂಶಯದ ದೃಷ್ಟಿಯಿಂದ ನೋಡುತ್ತಿದ್ದ. ಆದರೆ ಹತ್ತಿರ ಹೋದಕೂಡಲೆ ನಿರಾಶೆಯಿಂದ ಹಿಂತಿರುಗುತ್ತಿದ್ದ. ಕೆಂಪು ಸೀರೆ ಉಟ್ಟವರೆನ್ನೆಲ್ಲ ನನ್ನ ಹೆಂಡಂದಿರೇನೋ ಎಂದು ಭಾವಿಸುವ ಗಂಡನಂತಾಗಿದ್ದ. ಅವನ ಪ್ರಯತ್ನವೊಂದೂ ಸಫಲವಾಗಲಿಲ್ಲ.  ದಕ್ಷಿಣದ ಕಡೆಗೆ ಹೊರಟ ರಾಜಣ್ಣ ಸ್ನೂಪಿಯ ಭಾವ ಚಿತ್ರದೊಂದಿಗೆ ಅಲ್ಲಲ್ಲಿ ಕಾರಿನಿಂದಿಳಿದು ಸಿಕ್ಕಿ ಸಿಕ್ಕಿದವರನ್ನು ಚಿತ್ರ ತೋರಿಸಿ ಕೇಳುತ್ತಿದ್ದ.’ನೀವು ಚಿತ್ರದ ನಾಯಿಯನ್ನೇನಾದರೂ ನೋಡಿದಿರ?ಅಂತ. ಆದರೆ ಯಾರಿಂದಲೂ ಸಕಾರತ್ಮಕ ಉತ್ತರ ಬರಲಿಲ್ಲ. ಚೆನ್ನ ಮಲ್ಲಿಕಾರ್ಜುನನ್ನು ಅರಸಿದ ಅಕ್ಕಮಹಾದೇವಿಯಂತೆ  ಬಾಸ್ ಭಕ್ತ ಜಾನ್ ಸಹ ಕಂಡಕಂಡವರನ್ನು ನೀವು ನೋಡಿದಿರ? ನಮ್ಮ ಸ್ನೂಪಿಯನ್ನು ನೀವು ಕಂಡಿರ? ಬೆಳ್ಳಗೆ ಮೈತುಂಬ ಕೂದಲು ತುಂಬಿದ್ದ ಮುದ್ದಾದ ನಾಯಿ ಸ್ನೂಪಿಯನ್ನು ಕಂಡಿರಾ? ಎಂದು ಕೇಳಿದ್ದೇ ಕೇಳಿದ್ದು. ಹೊಳೆಯುವ ಕಣ್ಗಳಿದ್ದ ಸ್ನೂಪಿ !ಇವನಿಗೇನೋ ನಾಯಿಯನ್ನು ಹುಡುಕಿ , ಬಾಸ್ ಬಳಿ ಭೇಷ್ ಎನಿಸಿಕೊಳ್ಳುವ ಹಂಬಲ. ಜನಕ್ಕೇನು ? ಯಾರೂ ಇವನ ವರ್ಣನೆಗೆ ಕಿವಿಗೊಡಲಿಲ್ಲ.

 

ಸ್ನೂಪಿಯನ್ನು ಹುಡುಕಲು ಹೊರಟ ಎಲ್ಲರೂ ಒಬ್ಬೊಬ್ಬರೇ ಬರಿಗೈಯಲ್ಲಿ ಹಿಂದಿರುಗಿ ಬರತೊಡಗಿದರು. ಒಬ್ಬೊಬ್ಬರು ಬಂದಾಗಲೂ ನೀತ ಮತ್ತು ಆದಿತ್ಯ ಆಸೆಯ ಕಣ್ಣಿಂದ ಅವರ ಕಡೆಗೆ ನೋಡುತ್ತಿದ್ದರು. ಆದರೆ ಬಂದವರೆಲ್ಲರೂ ಅವರಿಗೆ ನಿರಾಶೆಯನ್ನೇ ಉಂಟು ಮಾಡಿದರು. ಎಲ್ಲರಿಗಿಂತ ಕಡೆಗೆ ಬಂದವರು ಮೇರಿ ಮತ್ತು ಪ್ರಮೀಳ. ಅವರೂ ಹುಡುಕಿ ಹುಡುಕಿ ಸುಸ್ತಾಗಿ ಬರಿಗಯಲ್ಲಿ ಹಿಂದಿರುಗಿದರು. ಎಲ್ಲರ ಮುಖದಲ್ಲೂ ನಿರಾಶೆ ಎದ್ದು ಕಾಣುತಿತ್ತು. ಬಾಸ್ ಮತ್ತು ಆತನ ಪತ್ನಿ ಇಬ್ಬರೂ ಅತ್ಮೀಯರೊಬ್ಬರನ್ನು ಕಳೆದುಕೊಂಡ ಮುಖವನ್ನು ಹೊತ್ತು ಕೂತಿದ್ದರು.

ಸ್ನೂಪಿ ಇನ್ನಿಲ್ಲ , ನಮ್ಮ ಪಾಲಿಗೆ ಅವನ ಋಣ ಮುಗಿಯಿತು. ಇನ್ನೇನು ಮಾಡಲಾದೀತು. ನಡೆಯಿರಿ ಎಲ್ಲ ನಿಮ್ಮ ನಿಮ್ಮ ಕೆಲಸ ನೋಡಿ ಎಂದು ಬಹಳ ನಿರಾಶೆಯಿಂದ ಅಲ್ಲಿ ಸೇರಿದ್ದ ಎಲ್ಲರನ್ನೂ ಹೋಗಲು ಹೇಳಿದ.

 

ನೀತ , ಅವಳಮ್ಮ ಕಿರಿಯ ಮಗನ್ನೂ ಕರೆದುಕೊಂಡು ಮನೆಗೆ ಹಿಂತಿರುಗಲು ಸಿದ್ಧವಾದರು. ಅನಿರೀಕ್ಷಿತ ಸಾವನ್ನು ಕಂಡವರಂತೆ ಬೆಚ್ಚಿದ ಅವರ ಮುಖಗಳು ಸಪ್ಪಗಾಗಿ ಉತ್ಸಾಹವನ್ನು ಕಳೆದುಕೊಂಡಿದ್ದವು. 

 

ಅದುವರೆಗೆ ತಡೆಹಿಡಿದಿದ್ದ ಕಣ್ಣೀರು ಸ್ನೂಪಿ ಇನ್ನಿಲ್ಲ ಎಂಬ ಅನಿಸಿಕೆ  ದೃಢವಾಗುತ್ತಲೇ ಕೆಳಗುರುಳಿತು. ಯಾರಿಗೂ ಕಾಣದಂತೆ ಕಣ್ಣೊರೆಸಿಕೊಳ್ಳುತ್ತಲೇ  ಅಂಬಿಕ , ನೀತಳ ಜೊತೆಗೆ ಕಾರಿನೆಡೆಗೆ ನಡೆದಳು. ಇನ್ನೇನು  ಕಾರಿನೊಳಗೆ ಕೂರಬೇಕು ! ಅಷ್ಟರಲ್ಲಿ ರಾಜೀವನ ಕಾರು ಕಣ್ಣಿಗೆ ಬಿತ್ತು. ರಾಜೀವನ ನಗುಮುಖ ಕಳೆದುಹೋದ ಆಸೆಯನ್ನು ಚಿಗುರಿಸಿದವು. ಕಾರನ್ನು ನಿಲ್ಲಿಸಿ ಬಾಗಿಲು ತೆಗೆದ ಕೂಡಲೇ ಕೆಳಕ್ಕೆ ಜಿಗಿದ ಸ್ನೂಪಿಯನ್ನು ನೋಡಿ ಅವರ ಸಂತೋಷ ಹಿಡಿಸಲಾರದಾಯಿತು. ಓಡಿ ಹೋಗಿ ಬಾಚಿ ತಬ್ಬಿಕೊಂಡಳು ನೀತ. ಸ್ನೂಪಿ ಸಿಕ್ಕಿತೆಂಬ ಸಂತೋಷದ ಜೊತೆಗೆ ಮಕ್ಕಳ ಉಪವಾಸ ತಪ್ಪಿತಲ್ಲ ಎಂದು ನಿಟ್ಟುಸಿರು ಬಿಟ್ಟಳು ಅಂಬಿಕ. ಸ್ನೂಪಿ ಸಿಕ್ಕಿದ ಸುದ್ದಿಕೇಳಿದ ಕೂಡಲೇ ಮಾಡುತ್ತಿದ್ದ ಕೆಲಸಗಳನ್ನು ನಿಲ್ಲಿಸಿ ಎಲ್ಲರೂ ಓಡೋಡಿ ಬಂದರು. ಸಧ್ಯ ಸಿಕ್ಕಿದನಲ್ಲ ಸ್ನೂಪಿ ! ಎಲ್ಲರ ಬಯಲ್ಲೂ ಇದೇ ಉದ್ಗಾರ .

“ಹೌದೂ, ಎಲ್ಲರೂ ಹುಡುಕಿ ಹಿಂತಿರುಗಿದ್ದರು.ನಿನಗೆಲ್ಲಿ ಸಿಕ್ಕಿದ ಇವನು? ಅಪ್ಪನ ಪ್ರಶ್ನೆ ರಾಜೀವನಿಗೆ. " ಅಪ್ಪ ಅದು ನನ್ನ ಅದೃಷ್ಟ ಅಂತಲೇ ಹೇಳಬೇಕು. ಹೊರಟು ಸ್ವಲ್ಪ ದೂರ ಹೋಗುತ್ತಲೇ ಕಾರಿನಲ್ಲಿ ಪೆಟ್ರೋಲ್ ಕಡಿಮೆ ಇರುವುದು ಅರಿವಿಗೆ ಬಂತು. ಅಲ್ಲೇ ಹತ್ತಿರದಲ್ಲಿದ್ದ ಗ್ಯಾಸ್ ಸ್ಟೇಷನ್ ಗೆ ಹೋಗಿ ಪೆಟ್ರೋಲ್ ತುಂಬಿ ಹಣ ಕೊಡಲು ಕೌಂಟರ್ ಬಳಿ ನಡೆದೆ. ನನ್ನ ಆಶ್ಚರ್ಯಕ್ಕೆ ಬಾಗಿಲ ಬದಿಯಲ್ಲಿ ಏನನ್ನೋ ಕಳೆದುಕೊಂಡವರಂತೆ ಏಕಾಂಗಿಯಾಗಿ ನಿಂತಿದ್ದ ನಮ್ಮ ಸ್ನೂಪಿ ಕಾಣಿಸಿತು. ನನ್ನನ್ನು ಕಂಡಕೂಡಲೆ ಮೈಮೇಲೆ ಹಾರಿ ಬಂದಿತು. ಅಲ್ಲಿಂದ ಈಗ ನಿಮ್ಮ ಮುಂದೆ ಇದ್ದೇವೆ. "ಅಂದ   .

 

*******   *******                       **************                                 **************

 

ಅದು ಸರಿ ಸ್ನೂಪಿ ಎಲ್ಲ ಬಿಟ್ಟು ಪೆಟ್ರೋಲ್ ಸ್ಟೇಷನ್ ಬಳಿ ಏನು ಮಾಡುತ್ತಿತ್ತು?

ಇದನ್ನು ಸ್ನೂಪಿಯ ಬಾಯಲ್ಲೇ ಕೇಳಿದರೆ ಚೆನ್ನಲ್ಲವೇ?

ಕೆಲವು ತಿಂಗಳುಗಳ ಹಿಂದೆ ಇದೇ ಪೆಟ್ರೋಲ್ ಸ್ಟೇಷನ್ ಬಳಿ ನನಗೊಬ್ಬಳು ಗೆಳತಿ  ಸಿಕ್ಕಿದ್ದಳು, ಪ್ರಥಮ ನೋಟದಲ್ಲೇ ನಮ್ಮಿಬ್ಬರಿಗೂ ಪ್ರೇಮವಾಯಿತು. ದೂರದಿಂದಲೇ ನೋಡಿದ್ದರೂ ಒಬ್ಬರನ್ನೊಬ್ಬರು ಮೆಚ್ಚಿಕೊಂಡಿದ್ದೆವು. ಕಣ್ಣುಗಳು ಮಾತಾಡಿಕೊಂಡಿದ್ದವು. ಕೆಲವೇ ಕ್ಷಣಗಳಲ್ಲಿ ಅವಳು ನನ್ನ ಹೃದಯವನ್ನು ಅಪಹರಿಸಿದ್ದಳು. ಅವಳೂ ನನ್ನನ್ನು ಇಷ್ಟಪಟ್ಟಳೆಂದು ಕಾಣುತಿತ್ತು.  ನಮ್ಮನ್ನು ಹಿಡಿದಿಟ್ಟಿದ್ದ ಯಜಮಾನರುಗಳ ಬೆಲ್ಟುಗಳನ್ನೇ ಎಳೆದುಕೊಂಡು ಇಬ್ಬರೂ ಒಬ್ಬರನ್ನೊಬ್ಬರು  ಮೈಗೆ ಮೈ ಸವರಿ ನಿಂತೆವು.  ನಮ್ಮಿಬ್ಬರದೂ ಯಾವುದೋ ಜನ್ಮದ ಬಂಧವಿರಬೇಕು ! ಇಲ್ಲದಿದ್ದರೆ ಪ್ರಥಮ ಬಾರಿಗೇ ಅಷ್ಟು ಆಕರ್ಷಣೆ!ಆದರೇನು? ನಮಗೆ ಉಂಟಾಗುವ ಭಾವನೆಗಳನ್ನು ತೋಡಿಕೊಳ್ಳಲು ಸಾಧ್ಯವೇ? ಮಾತೇ ಬಾರದ ಮೂಕ ಪ್ರಾಣಿಗಳು ನಾವು!  ಅವಳಾ ಸಂಗದ ಸುಖ ಒಂಡೆರಡು ಕ್ಷಣಗಳು ಮಾತ್ರ!

 

ಲಿಲ್ಲಿಯನ್ನು ( ನನ್ನಷ್ಟಕ್ಕೆ ನಾನೇ ಪ್ರೀತಿಯಿಂದ ಇಟ್ತ ಹೆಸರು) ಕರೆತಂದವರು ತಮ್ಮ ಕೆಲಸ ಮುಗಿಸಿ ತಮ್ಮ ಪಾಡಿಗೆ ತಾವು ಹೊರಟುಹೋದರು.  ಅಂದಿನಿಂದ ನನಗೆ ಊಟ ನಿದ್ರೆಗಳು ಬೇಡವಾದವು. ಅವಳನ್ನು ಎಂದು ನೋಡಿಯೇನೋ ಎಂಬ ತವಕ. ನಾನು ಊಟಬಿಟ್ಟಿದ್ದು ಮನೆಯವರ ಗಮನಕ್ಕೆ ಬಂದಿತು. ಆದರೇನು ? ಅವರು ನನ್ನನ್ನು ಡಾಕ್ಟರರ ಬಳಿಗೆ ಒಯ್ದರು. ಡಾಕ್ಟರು ಅದೇನೋ ಔಷಧಿಯನ್ನು ಕೊಟ್ಟು  ಏನೋ ಹೇಳಿ ಕಳುಹಿಸಿದರೇ ಹೊರತು ನನ್ನ ಮಾನಸಿಕ ಸ್ಥಿತಿಯನ್ನು ಗುರುತಿಸಲಿಲ್ಲ.

 

ಆಫೀಸಿಗೆ ಸಮೀಪದಲ್ಲೇ ಇದ್ದ ಪೆಟ್ರೋಲ್ ಸ್ಟೇಷನ್ ಗೆ ಮನೆಯಿಂದ ಬರಲು ನನಗೆ ರಸ್ತೆ ತಿಳಿಯುತ್ತಿದ್ದಿಲ್ಲ. ಹಾಗಾಗಿ ಸುಮ್ಮನೆ ಮನಸ್ಸಿನಲ್ಲೇ ಕೊರಗುತ್ತಿದ್ದೆ.ಇಂದು ಅದೇನೋ ನನ್ನನ್ನೂ ಆಫೀಸಿಗೆ ಕರೆದು ತಂದರು.

 

ನನಗಾದ ಸಂತೋಷ ಅಷ್ಟಿಷ್ಟಲ್ಲ. ಹೇಗಾದರೂ ಇಲ್ಲಿಂದ ತಪ್ಪಿಸಿಕೊಂಡು ಒಮ್ಮೆ ಹೋಗಿ ನನ್ನ ಲಿಲ್ಲಿಯನ್ನು ನೋಡಿ ಬರಬೇಕು ಎಂದು ಕಾಯುತ್ತಿದ್ದೆ. ಎಲ್ಲರೂ ತಮ್ಮ ತಮ್ಮ ಕೆಲಸದಲ್ಲಿ ಮಗ್ನರಾಗಿದ್ದ ಸಂದರ್ಭ ಉಪಯೋಗಿಸಿಕೊಂಡು ಓಡೋಡಿ ಬಂದೆ.ಮೊದಲನೆ ಬಾರಿಗೆ ನಾನು ರಸ್ತೆಗಿಳಿದಿದ್ದೆನಾದ್ದರಿಂದ ಕ್ಷಣಕ್ಕೊಮ್ಮೆ ಸುಂಯ್   ಸುಂಯ್  ಎಂದು ಬರುವ ವಾಹನಗಳಿಂದ ತಪ್ಪಿಸಿಕೊಂಡು  ಒದುವುದು ಕಷ್ಟವಾಯಿತು. ಅಂತೂ ಹೇಗೋ ನನ್ನ ನೆನಪನ್ನು ಅನುಸರಿಸಿ ಬಂದು ಸೇರಿದೆ, ನಾನು ನನ್ನ ಲಿಲ್ಲಿ ಸಂಧಿಸಿದ್ದ ಪೆಟ್ರೋಲ್ ಸ್ತೇಷನ್ ಅನ್ನು. ಆದರೆ  ನನಗೆ ನಿರಾಶೆ ಕಾದಿತ್ತು. ನಾನು ಹುಡುಕಿಬರುವೆನೆಂಬುದು ಅವಳಿಗೇನು ಗೊತ್ತು? ಅದಲ್ಲದೆ ಅವಳು ಇರುವುದು ಎಲ್ಲೋ ? ಅವಳನ್ನು ಅವಳ ಮನೆಯವರು ಬಿಟ್ಟಿರಬೇಕಲ್ಲ?  ಅವಳೂ ನನ್ನಂತೆಯೇ ಪರಿತಪಿಸುತ್ತಿರಬೇಕು! ಇವರಿಗೇನು? 

 

ತಮ್ಮ ಸಂತೋಷವೊಂದನ್ನು ಬಿಟ್ಟರೆ ಬೇರೇನೂ ಇಲ್ಲ. ಚಿಕ್ಕ ಆದಿತ್ಯ ಚೆಂಡುಗಳನ್ನು ಎಸೆದಾಗ ಓಡಿಹೋಗಿ ತಂದುಕೊಟ್ಟು ಆಟವಾಡುವುದಕ್ಕೆ! ಮನೆಗೆ ಬಂದವರ ಎದುರು  ನನಗೆ ಕಲಿಸಿರುವ ಶಿಸ್ತಿನ ಪಾಠವನ್ನು ಇವರು ಹೇಳಿದಂತೆ ಮಾಡಿ ತೋರಿಸಿ ಒಪ್ಪಿಸಿ ಅವರಿಗೆ ಹೆಮ್ಮೆಯುಂಟುಮಾಡುವುದಕ್ಕೆ!

 

ಇವರಿಗೇನು ಗೊತ್ತು ನನಗೂ ಮನಸ್ಸಿದೆ, ಆಸೆಯಿದೆ, ನನ್ನದೇ ಜೀವನ ಮಾಡುವ ಬಯಕೆಯಿದೆ ಅಂತ! ಏನು ಮಾಡುವುದು ನಾ ಮಾಡಿದಾ ಕರ್ಮ ಬಲವಂತವಾದರೆ!

 

ಹಾಗಾದರೆ ನಾನೇಕೆ ಹಿಂದಕ್ಕೆ ಬಂದೆ ಎಂದು ಕೇಳುತ್ತೀರಿ ಅಲ್ಲವೆ?  ನನ್ನ ಗೆಳತಿಯಂತೂ ಸಿಗಲಿಲ್ಲ. ಸಿಕ್ಕಿರುವ ಇವರ ಆಶ್ರಯವನ್ನೂ ಕಳೆದುಕೊಂಡರೆ...... ಮತ್ತೆಂದಾದರೂ ನನ್ನ ಲಿಲ್ಲಿ’ ಸಿಗಬಹುದಾದರೆ ಇವರೊಡನೆ ಇದ್ದರೆ ಮಾತ್ರ!

ಅದಕ್ಕೇ ಸಧ್ಯ ಯಾವ ಪುಂಡಪೋಕರಿಗಳ ಕೈಗೂ ಸಿಗದೆ ಇವರನ್ನು ಕಂಡಕೂಡಲೆ ಓದಿಬಂದದ್ದು!

****************                 *****************                            ****************

 

ನೀವೆಲ್ಲ ಹೋಗಿ ನಿಮ್ಮ ನಿಮ್ಮ ಕೆಲಸ ಮಾಡಿ. ಇವತ್ತಿನ ಕೆಲಸವೆಲ್ಲ ಹಾಳು ಸ್ನೂಪಿಯಿಂದ. ಕರ್ಕೊಂಡು ಬರ್ಬೇಡಿ ಅಂದ್ರೆ ಕೇಳೋಲ್ಲ ಇಲ್ಲಿಗೆ ಕರ್ಕೊಂಡ್ಬಂಡು ಸಮಸ್ಯೆಗಳನ್ನ ತರ್ತಾರೆ. ಬಾಸ್ ಸ್ನೂಪಿ ಸಿಕ್ಕಿತೆಂಬ ಸಂತೋಷವಿದ್ದರೂ ಕೆಲಸ ಹಾಳಾಗಿ ನಷ್ಟವಾಯಿತಲ್ಲಎಂದು ಗೊಣಗಾಟ.

ನೀತಾ ಸ್ನೂಪೀನ ಎಲ್ಲೂ ಬಿಡಬೇಡ. ಮತ್ತೆ ತಪ್ಪಿಸಿಕೊಂಡಾನು. ಬಾ ಕಾರಿನಲ್ಲಿ ಅವನ್ನನ್ನು ಕೂರಿಸಿಕೊಂಡು ಕುಳಿತುಕೋ ಹೋಗೋಣ. ಸಧ್ಯ ಇನ್ಯಾವತ್ತೂ ಎಲ್ಲೂ ಇವನನ್ನು ಒಬ್ಬನನ್ನೆ ಬಿಡಬಾರದು.  ನಿಜವಾಗಿಯೂ ಸ್ನೂಪಿಯ ಬಗ್ಗೆ ಚಿಂತಿಸುತ್ತಿದ್ದ ಅಂಬಿಕಾಳ ಎಚ್ಚರಿಕೆಯ ಮಾತು.

ಸರಿಯಾಗಿ ಕರೆದುಕೊಂಡು ಹೋಗು ಅಂಬಿಕಾ .. ಅಪ್ಪ ಮಕ್ಕಳ ತಾಕೀತು.

 ಅಂತೂ ಸ್ನೂಪಿ ತನ್ನ ಪ್ರಣಯ ಪ್ರಸಂಗವನ್ನು ಹೇಳಲಾರದೆ ಸಂಕಟದಿಂದ ಮತ್ತೆ ಮನೆ ಸೇರಿತು.

 

ಡಾ ಸತ್ಯವತಿ ಮೂರ್ತಿ

 

 ಅವಧಿ ಪತ್ರಿಕೆಯಲ್ಲಿ ದಿನಾಂಕ 06-07-2021 ರಂದು ಪ್ರಕಟವಾಗಿದೆ

Comments

Popular posts from this blog

ಕವಾಲಿ

ಏಳು ಪಾವನ ಚರಣ /ಏಳು ಪರಮಾ ಕರುಣ

ದೇವಾ ಕರುಣೆಯ ನು ತೋರ ಲಾರೆಯ