ನಿಲ್ಲಿಸದಿರು ಉಸಿರಾಟವ
17-05-2021
ನಿಲ್ಲಿಸದಿರು ಉಸಿರಾಟವ ನನ್ನಮ್ಮಾ......
ನಿಲ್ಲಿಸದಿರು ನನ್ನಮ್ಮ ಉಸಿರಾಟವ
ವಾಯುವನು ನೀ ನಿಯಂತ್ರಿಸು
ಅವನೊಡನೆ ಹೋಗದಿರು ಕತ್ತಲೆಯ ರಾತ್ರಿಯೊಳಗೆ ನುಸುಳಿ
ಇನ್ನೇನು ಬಂದೀತು ಕೊರೆಯಾದ ಆಮ್ಲಜನಕ......
ಮುಖವಾಡದಲ್ಲಿರಬೇಕು ದೂರನಿಲ್ಲಬೇಕು ನಾನು
ಎಷ್ಟುಹತ್ತಿರವಾದರೂ ಬಲುದೂರ ಸಮುದ್ರದ ನೀರು
ನಾನಿಲ್ಲೇ ನಿನ್ನ ಸನಿಹದಲ್ಲಿ! ಅಮ್ಮ ಕೇಳುವುದೇ ನನ್ನೀ ಕೂಗು!
ಇನ್ನೇನು ಬಂದೀತು ಬಂದೀತು ಆಮ್ಲಜನಕ......
ತಾತಮುತ್ತಾತಂದರು , ಅಜ್ಜಿಯರು ಕರೆದರೆಂಬ ನೆಪಬೇಡ
ಹೊಳೆವತಾರೆಗಳು ಮನಸೆಳೆದವೆನ್ನಬೇಡ
ಕಾಲವಿನ್ನೂ ಮುಗಿದಿಲ್ಲ , ತೆರಳದಿರು ನಮ್ಮನಗಲಿ!
ಇನ್ನೇನು ಬಂದೀತು ಬಂದೀತು ಆಮ್ಲಜನಕ......
ಹಾಲು ನೀಡುವವ, ಪೇಪರನು ಹಾಕುವವ
ನೆರೆಮನೆಯ ಪುಟ್ಟಹುಡುಗಿ ಅವಳಾ ಮುದ್ದುಬೆಕ್ಕು
ಅತ್ತೆ, ಅಮ್ಮ, ಅಕ್ಕ, ನಿನ್ನ ಹಿತೈಷಿಗಳು ಕಾದಿಹರು
ಇನ್ನೇನು ಬಂದೀತು ಬಂದೀತು ಆಮ್ಲಜನಕ.....[31] ..
ಯಮನೊಡನೆ ಹೋರಾಡುವ ಡಾಕ್ಟರುಗಳು
ಗಳಿಗೆಗೊಮ್ಮೆ ನಿನ್ನ ನೋಡುವ ನರ್ಸುಗಳು
ಎಲ್ಲರ ಶುಭಾಶಯವು ನಿನಗೆ, ಉಸಿರಾಡುತ್ತಿರಮ್ಮ
ಇನ್ನೇನು ಬಂದೀತು ಬಂದೀತು ಆಮ್ಲಜನಕ.......
ಆಮ್ಲಜನಕಕ್ಕಾಗಿ ಸಾಲಿನಲಿ ನಿಂತೆ ಗಂಟೆಗಂಟೆ ಗಳು
ಕಂಡಕಂಡವರ ಕೈಮುಗಿದೆ, ಬೇಡಿದೆ ಕೂಗಾಡಿದೆ
ಕೊನೆಗೆ ಕದ್ದುತಂದೆ , ದುರದೃಷ್ಟ ಸಿಲಿಂಡರ್ ಖಾಲಿ
ಇನ್ನೇನು ಸಿಕ್ಕೀತು ಸಿಕ್ಕೀತು ಆಮ್ಲಜನಕ......
ಮತ್ತೆ ಹುಡುಕಿದೆ ಬಿಡಲಿಲ್ಲ ಸಿಗುವನಕ
ಈಗಿನ್ನೂ ಸಿಕ್ಕಿದೆ ಕೊನೆಗೊಮ್ಮೆ..ನನ್ನಮ್ಮ
ಕಾಲನಾಹತಿಗೆ ಸರಿಯದಿರು ನಂಬು ನನ್ನನ್ನು
ಇನ್ನೇನು ಬಂದೀತು ಬಂದೀತು ಆಮ್ಲಜನಕ.......
ಉರಿವ ಧಗೆ, ಸುಟ್ಟಹೆಣಗಳ ಹೊಗೆಯಡಿಯಲ್ಲಿ ನಗರಗಳು
ಸುಡಲೂ ಆರದೆ ಬಂದುಬಿದ್ದ ಹೆಣಗಳ ಹೊತ್ತ ಗಂಗೆಯ ಮಡಿಲು
ಸಹಿಸಲಾರದೀ ಹೃದಯವೊಡೆವಾ ದೃಶ್ಯ! ನೀ ದೃಢವಾಗಿರಬೇಕು
ಇನ್ನೇನು ಬಂದೀತು ಬಂದೀತು ಆಮ್ಲಜನಕ......
ವಸಂತನ ಅಹ್ಲಾದ ಪೂರ್ಣಚಂದ್ರನ ತೇಜಸ್ಸು
ಕಾಣಿಸದೆ? ಕೇಳಿಸದೆ ಕೋಗಿಲೆಯ ಕುಹು ಕುಹು?
ದೀವಳಿಗೆ ಸಂಭ್ರಮವ ಕೊಡಲು ನೀನಿರಬೇಕು
ಇನ್ನೇನು ಬಂದೀತು ಬಂದೀತು ಆಮ್ಲಜನಕ......
ನಿನ್ನ ನಾ ಮನೆಗೆ ಕೊಂಡೊಯ್ಯುವೆನಮ್ಮಾ ಜೀವಸಹಿತ!
ಡಾ ಸತ್ಯವತಿ ಮೂರ್ತಿ
Comments
Post a Comment