ಯುಗಾದಿ
ಮಗಳಿಗೆ ಜ್ವರ
ಔಷಧಿಗಾಗಿ ನಡೆದಿದ್ದೆ ಡಾಕ್ಟರೆಡೆಗೆ
ದಾರಿಯಲ್ಲಿ ಕುಳಿತಿದ್ದ ಹಸ್ತ ಸಾಮುದ್ರಿಕ
ನಗರಿವಿರದೆಯೆ ಕೈಚಾಚಿದ್ದೆ ಅವನ ಮುಂದೆ
ಭೇಷ್ ಭೇಷ್ ಬಲ್ಸೊಗಸು ಬಲ್ಸೊಗಸು
ಜಬರ್ದಸ್ತ್ ಕೈ ಎಂದ
ಹಸ್ತವನು ಅತ್ತಿತ್ತ ತಿರುಗಿಸಿ
ಭೂತಕನ್ನಡಿಹಾಕಿ ಗೆರೆಗಳನ್ನು ಎಣಿಸಿದ
ಈ ಒಂದಾರೆಂಟು ತಿಂಗಳು ಕಷ್ಟಪಟ್ಟುಬಿಡು
ನಂತರ ನೋಡು ನಿನ್ನ ಭವಿಷ್ಯ
ರಾಜ ದರ್ಬಾರು
ಇಲ್ಲಿ ನೋಡು ಈ ಉದ್ದಗೆರೆ ಹಾದು ಹೋಗಿದೆ ಇಲ್ಲಿ ನಡುವಿನಲ್ಲಿ
ಇದು ತರುವುದು ಸುಖದ ನೆರೆ
ಖುಲಾಯಿಸುತ್ತದೆ ಕಾಲ ನಿನಗೆ ಯುಗಾದಿಯ ವೇಳೆಗೆ
ನೆಚ್ಚು ನನ್ನ ಮಾತನ್ನು
ನಾ ಹೇಳಿದ್ದೆಲ್ಲ ಸತ್ಯ
ಸುರಿಯುತ್ತದೆ ಹಣದ ಮಳೆ
ಹರಿಯುತ್ತದೆ ಸುಖದ ಹೊಳೆ
ಕೊರತೆ ಕಷ್ಟವೆಂಬುದು ಸುಳಿಯದು
ಎಂದೆಲ್ಲ ಕೊರೆದಾಗ
ಉಬ್ಬಿಹೋದೆ ನಾನು
ಔಷಧಿಯ ಹಣ ಕಾಣಿಕೆಯ ಹುಂಡಿಗೆ ತೆತ್ತು
ಬರಿಗೈಯಲ್ಲಿ ಮನೆ ಸೇರಿದೆ ಬರಲಿರುವ ಸುಖದ ಅಮಲಿನಲ್ಲಿ
ಬಂದುಹೋದವು ಒಂದರ ಮೇಲೊಂದು ಯುಗಾದಿಗಳು!
ತರಲಿಲ್ಲ ಒಂದೂ ಸುಖದ ತುಣುಕೊಂದು
ಕಾಯುತ್ತಿದ್ದೇನೆ ಆ ಯುಗಾದಿಗೆ
ನನಗೆ ಸುಖ ತರುವ ಯುಗಾದಿಗೆ
ಎಂದು ಬಂದೀತು ?ಎಂದು ಬಂದೀತು?
ಎಂದು ಬಂದೀತು? ಎಂದು
ಉದಯವಾಣಿ ದೇಸಿಸ್ವರ ದಲ್ಲಿ 01-05-2021 ರಂದು ಪ್ರಕಟವಾಗಿದೆ
ಡಾ ಸತ್ಯವತಿ ಮೂರ್ತಿ
Comments
Post a Comment