ದತ್ತಾತ್ರೇಯ ಸುಪ್ರಭಾತ

 ಏಳು ಪಾವನ ಚರಣ ಏಳು ಪರಮಾ ಕರುಣ

ಏಳು ದತ್ತಾತ್ರೇಯ ಏಳು ಗುರುವೇ


ಏಳು ದೇವರದೇವ ಗಾಣಗಾಪುರದೊಡೆಯ 

ಏಳು ಭಕ್ತರಕ್ಷ ಪರಮ ಗುರುವೇ


ಹಕ್ಕಿ ಚಿಲಿಪಿಲಿ ಗಾನ ಮಧುರತೆಯ ಸುರತಾನ

ನಿನಗೆಂದೆ ಕಾದಿಹುದು  ಶ್ರೀಪಾದನೇ


ಮಂದವಾಗೆಸೆಯುತಿಹ ಮಾರುತನು ತಾನಿಂದು

ನಿನಗೆ ಕಾದಿಹನಯ್ಯ ಬೆಳಗಾಯಿತೂ


ರಾಜ್ಯಪದವಿಯ ಪಡೆದ ರಜಕನಿಂದಿಹನಿಲ್ಲಿ

ಚರಣವಾರೋಗಿಸಲು ಏಳು ಗುರುವೇ


ವೇದವನೆ ನುಡಿದನಾ ಕುಲಕೆ ಹೀನನು ತಾನು

ಬಂದಿಹನು ನಿನ್ನನ್ನು ಸೇವಿಸೆ ದೇವಾ


ವಿಶ್ವಮೂರ್ತಿಯು ನಿನ್ನ ಅಪರಿಮಿತ ಶಕ್ತಿಯನು

ಅರಿತ ತಿವಿಕ್ರಮ ಯತಿ   ಐತಂದಿಹನು


ಪರಿಪರಿಯ ಪುಷ್ಪದೊಳು ನಿನ್ನ ಪೂಜಿಸಲೆಂದು

ಕಾದು ನಿಂದಿಹನೇಳು ಬೆಳಗಾಯಿತೂ


ಬಂಜೆ ಎಮ್ಮೆಯು ಕರೆದ ಅದ್ಭುತವ ನೋಡಿದಾ

ದಂಪತಿಗಳೈತಂದು ನಿಂದಿಹರಿಲ್ಲಿ


ಅಷ್ಟರೂಪದಿ ಅಂದು ದೀವಳಿಗೆಗೈತಂದು

ವಿಶ್ವರೂಪವ ನೀನು ಮೆರೆದೆ ಗುರುವೇ


ಈಶ ಕಲ್ಲೇಶ ನೀ ಈಶ ಸರ್ವೇಶ ನೀನೆಂದು

 ಪೊಗಳುತಲಿಹನು ನರಹರಿ ಕವಿಯು


ಕುಷ್ಟರೋಗವ ಕಳೆದೆ ಜ್ಞಾನವನು ಕರುಣಿಸಿದೆ

ಮೂರ್ಖನಿಗೆ ಬುದ್ಧಿಯನು ನೀಡಿದೇ ಗುರುವೆ


ನಿನ್ನ ನಂಬದೆ ಬಂದ ಎನಗನುಗ್ರಹಮಾಡಿ

ಎನ್ನ ಉದ್ಧರಿಸಿದಾ ಗುರುವೆ ಏಳು


ಎಂದು ಬೇಡುತಲಿಹನು ನಂದಿಕವಿ ಬಂದಿಲ್ಲಿ

ಬೇಳಗಾಯಿತೇಳಯ್ಯ ಪರಮ ಗುರುವೇ


ಭಕ್ತವೃಂದವು ನಿನ್ನ ಸೇವೆಗೆಂದೇ ಬಂದು

ಕಾದು ನಿಂದಿಹರೇಳು ಬೆಳಗಾಯಿತೂ


ನಿನ್ನ ಸೇವಿಸಲೆಂದು ಹಾಲು ತುಪ್ಪವ ತಂದು

ನೆರೆದಿಹರು ಶಿಷ್ಯರೂ ಏಳು ಗುರುವೇ


ಬಂಜೆ ಮುದುಕಿಯುಯೆನಗೆ ಪುತ್ರನನು ಕರುಣಿಸಿದೆ

ಎನ್ನ ಕರ್ಮವ ಕಳೆದು ಉದ್ಧರಿಸಿದೇ


ಎಂದು ಪಾಡುತ ಮಹಿಮೆ ನಿಂದಿಹಳು ಗಂಗಾ

ಏಳು ದತ್ತಯ್ಯನೇ ಬೆಳಗಾಯಿತೂ

 

ಯತಿ ನರಸಿಂಹನಾಗಿ ನಿನ್ನ ಹಡೆದಾ ಅಂಬ

ಬಂದಿಹಳು ನಿನ್ನನ್ನು ಮುದ್ದಿಸಲು ತಾ

 

ಮೂಕನಾದ ಮಗನ ಮಾತುಗಳ ಲಾಲಿಸಲು

ಹಂಬಲಿಸಿ ಬಂದಿಹಳು ಏಳು ಯತಿವರ

 

ಅವರೆ ಬಳ್ಳಿಯ ಕಿತ್ತು ಅಕ್ಷಯದ ಹೊನ್ನಿತ್ತು

ಐಸಿರಿಯ ತುಂಬಿದಾ ವಿಪ್ರನಂ ನೋಡೇಳು

 

ಹೊಲದ ಬೆಳೆಯನು ಕಿತ್ತು ಎರಡುಪಟ್ಟನು ಬೆಳೆಸಿ

ಭಕ್ತಿಯೊಳಗಿಹ ಶಕ್ತಿಯ ಜಗಕೆ ತೋರಿದೆ

 

ಅಂದು ಭಾಸ್ಕರ ತಂದ ನಾಲ್ಕು ಹಿಡಿಯಕ್ಕಿಯಲಿ

ನಾಲ್ಕು ಸಾಸಿರ ಉಂಡು ತಣಿದು ತೇಗಲು

 

ಮೂಕನಾದನು ತಾನು ಭಾಸ್ಕರನು ಬೆರಗಿನಲಿ

ಎಚ್ಚರಿಸಲೂ ಏಳು ಬೆಳಗಾಯಿತೂ



ಮಂಗಳವು ಗುರು ದತ್ತಾತ್ರೇಯಗೆ

ಮಂಗಳವು ಅನಸೂಯೆಗೊಲಿದ ತ್ರಿಮೂರ್ತಿಗೆ

ಮಂಗಳವು ನರಸಿಂಹ ಸರಸ್ವತಿಗೆ

ಮಂಗಳವು ಗಾಣಗಾಪುರದರಸಗೆ

 

 

 












Comments

Popular posts from this blog

ಕವಾಲಿ

ಏಳು ಪಾವನ ಚರಣ /ಏಳು ಪರಮಾ ಕರುಣ

ದೇವಾ ಕರುಣೆಯ ನು ತೋರ ಲಾರೆಯ