ಸಿಗಲಿಲ್ಲ ಪುರಸೊತ್ತು

 

ಸಿಗಲಿಲ್ಲ ಪುರಸೊತ್ತು

 

 

ಒಂದೊಮ್ಮೆ ಹುಡುಕಿ ದಣಿದಿದ್ದಳು ರಮಾಳ ಹೆಣ್ಮಗಳು

ಮನೆಗೆಲಸದ ನಡುವಲ್ಲಿ, ಟಿಫಿನ್, ಕ್ಯಾರಿಯರ್ಗಳ ತಯಾರಿಯಲ್ಲಿ

ಗಂಡನ ಉಪಚಾರದಲಿ , ಮಕ್ಕಳ ಹೋಂವರ್ಕ್ ಸಮಯಕ್ಕೆ ಮುಗಿಸುವಲ್ಲಿ 

ಸಮೀಪದ ಅಂಗಡಿಗಳಲಿ,  ಎಲ್ಲಿ ,ಎಲ್ಲಿಯಾದರೂ ದೊರೆತೀತೆ?


ಒಮ್ಮೆ ನಿಟ್ಟುಸಿರುಬಿಟ್ಟು ಕುಳಿತಿರಲು ದೊರೆತೀತೆ ? ಎಂದು

ಎಲ್ಲೆಲ್ಲಿ ಅಲೆದು ಹುಡುಕಾಡಿದರೂ ಸಿಕ್ಕಿರಲಿಲ್ಲ ಪುರಸೊತ್ತು,

ಅಂತೂ ಇಂತೂ ಎಡೆಬಿಡದ ಭಗೀರಥ ಪ್ರಯತ್ನದಲಿ

ಕಡೆಗೂ ಸಿಕ್ಕಿತ್ತು ಬಹಳಷ್ಟು ಹಂಬಲಿಸಿದ ಆ ಸವಲತ್ತು!


ಮಹಿಳೆಯರ ಸ್ವಾತಂತ್ರ್ಯದ ಕೂಗಿನಡಿಯಲ್ಲಿ

ಸಮಾನತೆಗೆ ಹೋರಾಡುವ ಸತ್ಯಾಗ್ರಹದ ನಡುವಲ್ಲಿ

ಪುರುಷರೊಡನೆ ಪೈಪೋಟಿಮಾಡುವ ಆಕ್ರೋಶದಲ್ಲಿ

ತಮಗಾಗಿಸ್ಪೇಸ್ಹುಡುಕುವ ತರಾತುರಿಯಲ್ಲಿ!


ಅಂದೇ ಬಂದಿತು ಕುತ್ತಿಗೆ! ಗಂಡಸಿನ ಪುರಸೊತ್ತಿಗೆ

ಹುಡುಕುವ ಸರದಿ  ಬಂದಿತು ಬಡಪಾಯಿ ಗಂಡಸಿಗೆ!

ಮಕ್ಕಳನು ಶಾಲೆಗಟ್ಟುವ ಗಡಿಬಿಡಿಯಲ್ಲಿ,

ಆಫೀಸಿನಲ್ಲಿ ದುಡಿದು ಸಂಜೆ ಮನೆ ಸೇರುವಲ್ಲಿ.


ಒಗೆದ ಬಟ್ಟೆಗಳ ಮಡಿಸಿ ಜೋಡಿಸುವಲ್ಲಿ

ಸ್ವಿಂಮ್ಮಿಂಗು, ಕ್ರಿಕೆಟ್ಟು, ಇತ್ಯಾದಿಗಳಿಗೆ ಮಕ್ಕಳನೊಯ್ಯುವಲ್ಲಿ

ಮಾಡಿದ್ದ ಅಡಿಗೆ ಬಡಿಸುವಲ್ಲಿ. ಪಾತ್ರೆ ತೊಳೆಯುವಲ್ಲಿ.

ಕಡೆಗೆ ಮನೆಕಸ ಗುಡಿಸಿ ಒರೆಸುವಲ್ಲಿ!


ಸಂದು ಗೊಂದುಗಳಲಿ  ಹುಡುಕಿ ದಣಿದದ್ದೇ ಬಂತು

ಸಿಗದಾಯ್ತು ಪುರಸೊತ್ತು, ರಾತ್ರೆ ಹತ್ತಾಯ್ತು, ದೇಹ ಬಳಲಿತು

ಮಕ್ಕಳನು ಮಲಗಿಸುವಲ್ಲಿ ಹುಡುಕಿದ್ದಾಯ್ತು

ಎಲ್ಲಿಯೂ ಸಿಗಲಿಲ್ಲ ಅರೆ ಕ್ಷಣಕೂ! ಬರಿ ಬಳಲಿದ್ದೇ ಬಂತು.


ತಿಳುವಳಿಕೆ ಹೇಳಿತ್ತು , ಇನ್ನೆಲ್ಲಿ ನಿನ್ನ ಗತ್ತು?

ಇರಬೇಕು ನೀನೆಂದು ಪತ್ನಿಯಾ ಸುತ್ತು

ಹಿಂದೊಂದು ಕಾಲದಲಿ ನಿನ್ನ ಸ್ವತ್ತಾಗಿದ್ದ ಪುರಸೊತ್ತು,

ಕಾಲದ ಕರಾಮತ್ತಿಗೆ ಸಿಕ್ಕಿ ಆಗಿಹೋಗಿದೆ ಸ್ತ್ರೀಯರಾ ಸ್ವತ್ತು

 

ಡಾ ಸತ್ಯವತಿ ಮೂರ್ತಿ

21-05-2021 ರಂದು ಅನಿವಾಸಿ ಪತ್ರಿಕೆಯಲ್ಲಿ ಪ್ರಕಟವಾಗಿದೆ

 ಅಮೆರಿಕದ ಕನ್ನಡಿಗರ ಕೂಟದಿಂದ ಪ್ರಕಟವಾಗುವ ಪತ್ರಿಕೆಯಲ್ಲಿ ಇದರ ತಿದ್ದಿದ ರೂಪ ಪ್ರಕಟವಾಗಿದೆ . 

Comments

Popular posts from this blog

ಕವಾಲಿ

ಏಳು ಪಾವನ ಚರಣ /ಏಳು ಪರಮಾ ಕರುಣ

ದೇವಾ ಕರುಣೆಯ ನು ತೋರ ಲಾರೆಯ