ಈ ಪರಿಯ ಸೊಬಗು

 

ಈ ಪರಿಯ ಸೊಬಗು

 

 

ಸುಂದರವಾದ ನಗುನಗುತ್ತಿರುವ ಮುಖ.ಮೈ ತುಂಬುವ ಬಿಳಿಯುಡುಗೆ. ಬೆನ್ನಿಗೆ ಅಂಟಿಕೊಂಡಂತೆ ಎರಡು ರೆಕ್ಕೆಗಳು. ಇದು ಬಾಲ್ಯದಿಂದಲೂ ನನ್ನಲ್ಲಿ ಉಂಟಾದ ಪರಿಯ ಕಲ್ಪನೆ.ಅಮ್ಮ ನನಗೆ ’ಪರಿ’ಗಳ ಪವಾಡಗಳನ್ನು ಅಗಾಗ್ಗೆ ಹೇಳುತ್ತಿದ್ದುದೇ ಇದಕ್ಕೆ ಕಾರಣ.ಪ್ರಾಪಂಚಿಕ ತಿಳುವಳಿಕೆ ಕಡಿಮೆ ಇದ್ದಾಗಿನ ವಯಸ್ಸು. ’ಪರಿ’ ಯಾವಾಗಲಾದರೂ , ಹೇಗೆ ಬೇಕಾದರೂ ಬಂದು ಪವಾಡವೆಸಗುವಳೆಂದು  ಸಂಪೂರ್ಣ ನಂಬಿದ್ದ ನಾನು ಕುಳಿತಾಗ, ನನ್ನ ಪಕ್ಕ ಸ್ಥಳ ಬಿಟ್ಟು ಮುದುರಿ ಕುಳಿತರೆ , ಮಲಗಿದಾಗ ನನ್ನ ಹಾಸಿಗೆಯ ಒಂದು ಬದಿಯನ್ನು ಪರಿಗಾಗಿ ಮೀಸಲಿಡುತ್ತಿದ್ದೆ. ಅಮ್ಮನ ಪ್ರಭಾವಕ್ಕೆ  ಬಾಲ್ಯದಿಂದಲೂ ಒಳಗಾಗಿದ್ದ ನನ್ನಲ್ಲಿ ಅಮ್ಮನ ಕಲ್ಪನೆ ನಂಬಿಕೆಗಳೇ ಬೆಳೆದು ಉಳಿದಿದ್ದವು ಎಂದರೆ ತಪ್ಪಾಗಲಾರದು.ಅಮ್ಮನಂತೆ ನನಗೂ ಪವಾಡಗಳಲ್ಲಿ ನಂಬಿಕೆ.

ಆದರೆ ನನ್ನ ಅಜ್ಜಿ ಹಾಗಲ್ಲ.ಆಕೆ ಇದಕ್ಕೆ ತದ್ವಿರುದ್ಧ.’ ಜೀವನ ಎಂದರೆ ಮಂತ್ರಕ್ಕುದುರುವ ಮಾವಿನ ಕಾಯಲ್ಲ.ಬಂದ ಕಷ್ಟ ಸುಖಗಳನ್ನು ಬಂದಂತೆ ಸ್ವೀಕರಿಸಿಎದುರಿಸಬೇಕು.ಅಂದಂದಿನ ಜೀವನವನ್ನು ಎದುರಿಸಿ ಮರುದಿನದ ಜೀವನಕ್ಕೆ ಸಿದ್ಧವಾಗಬೇಕು. ಅದು ಬಿಟ್ಟು ನೆನ್ನೆಯ ಅಥವ ನಾಳೆಯ  ಚಿಂತೆಯಲ್ಲಿ ಮುಳುಗಿ ನಾವು ಬಯಸಿದ್ದನ್ನು ಕೊಡಬೇಕಾದರೆ ಯಾವುದೋ ಅವ್ಯಕ್ತ ಶಕ್ತಿಯೊಂದು ಬರಬೇಕು ,ಎಂದು ಕೈಕಟ್ಟಿ ಕೂರುವುದು ಸರಿಯಲ್ಲ. ಜೀವನದ ವಾಸ್ತವತೆಯನ್ನು ಅರಿತು ಬದುಕಬೇಕು.---- ಇವು ಆಕೆಯ ತತ್ವಗಳು. ಅಂತೆಯೇ ಬದುಕಿದವಳು.

ಆಗ ನಾನಿನ್ನೂ ಹದಿಹರೆಯದ ಚಿಕ್ಕ ಹುಡುಗಿ.ಅರೆಬರೆ ತಿಳುವಳಿಕೆ.ನಮ್ಮ ನೆರೆಮನೆಯಲ್ಲಿದ್ದ ಗರ್ಭಿಣಿ ಹೆಂಗಸಿಗೆ ಒಂದು ರಾತ್ರೆ ಇದ್ದಕಿದ್ದಂತೆ ನೋವು ಕಾಣಿಸಿಕೊಂಡಿತು. ದಿನ ತುಂಬದ ಆಕೆಗೆ ಗರ್ಭಪಾತವಾದೀತೆಂದು ಎಲ್ಲರೂ ಹೆದರಿದರು.ನನ್ನ ಅಮ್ಮ ನೆರೆಮನೆಗೆ ಹೋಗಿ ಆಕೆಗೆ ಸಂತ್ವನ ಹೇಳಿ ಆಕೆಯೊಡನೆ ತಾನೂ ಅತ್ತು ಕಣ್ಣೀರು ಸುರಿಸಿ’ದೇವರ ಮೆಲೆ ಭರವಸೆ ಇಡು ಅವನು ಹೇಗೋ ನೆರವು ನೀಡುತ್ತಾನೆ, ಎಂದಷ್ಟೇ ಹೇಳುವುದನ್ನು ಬಿಟ್ಟು ಬೇರೇನೂ ಮಾಡಲಾಗಲಿಲ್ಲ. ಇಲ್ಲಿ ಇವರು ಇಷ್ಟು ಮಾತನಾಡಿ ಕಾಲಹರಣ ಮಾಡುತ್ತಿರುವಾಗ ನನ್ನ ಅಜ್ಜಿ ಮೂರುಕಿಲೋಮೀಟರುಗಳ ಹಾದಿಯನ್ನು (ಆ ಕೊರೆಯುವ ಚಳಿಯಲ್ಲಿಯೂ ) ನಡೆದುಹೋಗಿ ಡಾಕ್ಟರನ್ನು ಕರೆದುತಂದಳು. ಸಮಯಕ್ಕೆ ಸರಿಯಾಗಿ ಔಷಧೋಪಚಾರ ನಡೆದು ಆಕೆಯ ನೋವು ಕಡಿಮೆಯಾಯಿತು.

ಅಮ್ಮ ಅಂದಳು ’ನಾನು ಹೇಳಲಿಲ್ಲವೇ? ದೇವರಲ್ಲಿ ಭರವಸೆಯಿಡು ಎಂದು! ಅವನಲ್ಲಿ ಭರವಸೆ ಇಟ್ಟರೆ ಯಾವ ಪರಿಯೋ ಬಂದು ಸಹಾಯ ಸಿಗುತ್ತದೆ’

ಇನ್ನೊಮ್ಮೆ ನನ್ನ ಗೆಳತಿಯೊಬ್ಬಳು ಪ್ರಯಾಣ ಮಾಡಬೇಕಾಗಿದ್ದ ರೈಲು ಅಪಘಾತಕ್ಕೀಡಯಿತು.ನನ್ನ ಗೆಳತಿಗೆ ಸಂತೋಷವೋ ಸಂತೋಷ. ರೈಲು ಅಪಘಾತಕ್ಕೊಳಗಾಗಿದ್ದಕ್ಕಲ್ಲ, ತಾನು ಆ ರೈಲಿನಲ್ಲಿ ಪ್ರಯಾಣ ಮಾಡಲಿಲ್ಲವಲ್ಲ ಎಂದು. ಸದ್ಯ ಪರಿಯ ದೆಸೆಯಿಂದ ನಾನು ಸಾಯುವುದು ತಪ್ಪಿತು.ನೆನ್ನೆ ನನ್ನ ಕನಸಿನಲ್ಲಿ ಪರಿ ಬಂದು ನಾನು ಪ್ರಯಾಣ ಮಾಡಬಾರದು ಎಂದು ಹೇಳಿದಳು. ಅದಕ್ಕೇ ನಾವು ಇಂದು ಉಳಿದುಕೊಂಡೆವು..... ಎಂದೆಲ್ಲ ಹೇಳಿದಾಗ ನನಗೂ ನಿಜವಿರಬಹುದೆನ್ನಿಸಿತು. ಅದನ್ನೇ ಅಮ್ಮ ಅಜ್ಜಿ ಎಲ್ಲರಿಗೂ ಹೇಳಿದೆ.ಅಮ್ಮ ನನ್ನ ಮಾತಿಗೆ ಸಂಪೂರ್ಣ ತಲೆದೂಗಿದರೆ ಅಜ್ಜಿ ’ ಅಯ್ಯೋ ಬಿಡೆ , ನಿನ್ನ ಆ ಪರಿನಿನ್ನ ಗೆಳತಿಯನ್ನು ಮಾತ್ರ ಉಳಿಸಿದಳ ?ಬೇರೆಯವರನ್ನೇಕೆ ಸಾಯಲು ಬಿಟ್ಟಳು?ಅವರನ್ನೇಕೆ ಉಳಿಸಲಿಲ್ಲ?ನೋಡು ಇದೆಲ್ಲ ಕಾಕತಾಳೀಯ ಅಷ್ಟೆ.’ ಎಂದು ಖಡಾಖಂಡಿತವಾಗಿ ಹೇಳಿಬಿಟ್ಟಳು. ಅಜ್ಜಿಯ ಮಾತು ನನ್ನಲ್ಲಿ ವಿಚಾರವೆಬ್ಬಿಸಿತು. ಹೌದು ಪರಿ ಒಬ್ಬಳ ಜೀವನವನ್ನು ಕಾಪಾಡಬಹುದಾದರೆ ಉಳಿದವರನ್ನು ಏಕೆ ಉಳಿಸಲಿಲ್ಲ?...... ಪ್ರಶ್ನೆ ಪ್ರಶ್ನೆಯಾಗಿಯೇ ಉಳಿಯಿತು.

 

*****************                              *******************                  *******************

ಈ ಮಾತು ಕಳೆದು ಈಗಾಗಲೇ ಹದಿನೈದು ವರ್ಷಗಳೇ ಉರುಳಿಹೋಗಿವೆ. ನನ್ನ ಅಜ್ಜಿ ಈಗಿಲ್ಲ. ನನಗೆ ಒಬ್ಬಳೇ ಮಗಳು. ಅವಳೇ ನನ್ನ ಜೀವನದ ಸರ್ವಸ್ವ. ನಾನು ಹೊರಗಡೆ ಹೋಗುವಾಗಲೆಲ್ಲ ಅವಳನ್ನೂ ಜೊತೆಯಲ್ಲಿ ಕರೆದುಕೊಂಡು ಹೋಗುತ್ತೇನೆ.

ಕಾರಿನಲ್ಲಿ ಪೆಟ್ರೋಲ್ ಮುಗಿಯುತ್ತ ಬಂದಿದ್ದಿತು. ಮಗಳನ್ನು ಶಾಲೆಗೆ ಕಳುಹಿಸಿ, ಪಂಪ್ ನಿಂದ ಕಾರಿಗೆ ಪೆಟ್ರೋಲ್ ತುಂಬಿಸಿದೆ.ಇಲ್ಲಿನ ವ್ಯವಸ್ಥೆ ತಿಳಿದಿದೆಯಲ್ಲ! ಎಲ್ಲ ಸ್ವಯಂ ಸೇವೆ! (ಅಂದಹಾಗೆ ನಾನು ನೆಲೆಸಿರುವುದು ಇಂಗ್ಲೆಂಡಿನಲ್ಲಿ ಎನ್ನುವ ವಿಚಾರ ಹೇಳಲು ಮರೆತಿದ್ದೆ.) ಕಾರಿಗೆ ಪೆಟ್ರೋಲ್ ತುಂಬಿಸಿ ಕೌಂಟರಿನಲ್ಲಿದ್ದ ವ್ಯಕ್ತಿಗೆ ಹಣ ಕೊಡಲೆಂದು ಪರ್ಸ್ ತೆಗೆಯಲು ಬ್ಯಾಗಿನೊಳಕ್ಕೆ ಕೈಹಾಕಿದೆ. ಕೈ ಬ್ಯಾಗಿನೊಳಗಿನ ತಳವನ್ನು ಕೆದರಿತು. ಪರ್ಸ್ ಹಾಗೂ ಕ್ರೆಡಿಟ್ ಕಾರ್ಡುಗಳನ್ನಿಟ್ಟಿದ್ದ ವ್ಯಾಲೆಟ್  ಸಿಗಲಿಲ್ಲ. ಗಾಬರಿಯಿಂದ ಪರ್ಸ್ನ ಬಾಯಗಲಿಸಿ ಹುಡುಕಿದ್ದಾಯಿತು.ಏನೂ ಪ್ರಯೋಜನವಾಗಲಿಲ್ಲ ಹಣಕೊಡದೆ ಹೋಗುವಂತಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಅವಮಾನ.ಸುಮ್ಮನೆ ಬ್ಯಾಗಿನೊಳಗೇ ಕೈಯಿಟ್ಟು ಕ್ಷಣಹೊತ್ತು ನಿಂತೆ.  ಕೌಂಟರಿನಲ್ಲಿದ್ದ ವ್ಯಕ್ತಿ ಅಸಹನೆಯಿಂದ ನನ್ನತ್ತ ನೋಡುತ್ತಿದ್ದ.ಏನೂ ತೋರದೆ ನಿರಾಶೆ ನಾಚಿಕೆಗಳಿಂದ ತಲೆಯಾಡಿಸುತ್ತ ಬರಿಗೈ ಹೊರತೆಗೆದೆ. ಅಷ್ಟರಲ್ಲಿ ಕೈ ಒಂದು ಮುಂದೆ ಚಾಚಿ ಬಂದು ಐವತ್ತು ಪೌಂಡುಗಳ ನೋಟನ್ನು ಕೊಡುತ್ತ ತೆಗೆದುಕೊಳ್ಳಿ ಎಂದಿತು. ಹಿಂದಕ್ಕೆ ತಿರುಗಿ ನೋಡಿದರೆ ಒಬ್ಬ ಆಂಗ್ಲ ಸಭ್ಯವ್ಯಕ್ತಿ ನನ್ನ ಹಿಂದೆ ನಿಂತಿದ್ದ. ’ ನಾನು ನಿಮ್ಮನ್ನು ಅಷ್ಟುಹೊತ್ತಿನಿಂದ ಗಮನಿಸುತ್ತಿದ್ದೆ, ನೀವು ಹಣಕ್ಕಾಗಿ ಹುಡುಕುತ್ತಿದ್ದ ರೀತಿನೋಡಿ ನಿಮ್ಮ ಬಳಿ ಹಣ ಇರಲಾರದೆಂಬ ಸಂಶಯಬಂದಿತು. ತೆಗೆದುಕೊಳ್ಳಿ ಪೆಟ್ರೋಲ್ ಬಿಲ್ ಕೊಡಿ , ಎಂದ. ಥ್ಯಾಂಕ್ಸ್ ಎಂದು ಹೇಳಿ, ಮರು ಮಾತಾಡದೆ ಆತನಿಂದ ಆ ಹಣವನ್ನು ತೆಗೆದುಕೊಂಡು ಬಿಲ್ ಪಾವತಿ ಮಾಡಿ ಹೊರಗೆ ಬಂದು ಆ ವ್ಯಕ್ತಿಗಾಗಿ ಕಾಯುತ್ತ ನಿಂತೆ. ಆತನ  ಬ್ಯಾಂಕಿನ ಖಾತೆಯ ವಿವರಣೆ ತೆಗೆದುಕೊಂಡು ಮತ್ತೊಮ್ಮೆ ವಂದನೆ ಸಲ್ಲಿಸುವ ಉದ್ದೇಶದಿಂದ. ಎಷ್ಟು ಸಮಯ ವಾದರೂ ಹೊರಗೆ ಬಾರದ್ದನ್ನು ನೋಡಿ ಇನ್ನೂ ಒಳಗೆ ಏನುಮಾಡುತ್ತಿರಬಹುದು? ನೋಡೋಣ , ಎಂದುಕೊಂಡು ಒಳಗೆ ಹೋಗಿ ನೋಡಿದರೆ  ಅಲ್ಲಿ ಯಾರೂ ಇರಲಿಲ್ಲ. ಕೌಂಟರ್ ಖಾಲಿ ಇತ್ತು. ಕೌಂಟರಿನಲ್ಲಿದ್ದ ವ್ಯಕ್ತಿಯನ್ನು ವಿಚಾರಿಸಿದಾಗ ತಿಳಿಯಿತು. ಆತ ನನಗೆ ಹಣಕೊಟ್ಟ ಕೆಲವೇ ನಿಮಿಷಗಳಲ್ಲಿ ಅಲ್ಲಿಂದ ಹೊರಟು ಹೋಗಿದ್ದ. ಅಂದಿನಿಂದ ಇಂದಿನವರೆಗೂ ಅದೇ ಪೆಟ್ರೋಲ್ ಸ್ಟೇಷನ್ ಗೆ ಹೋಗುತ್ತಲೇ ಇದ್ದೇನೆ. ಆ ವ್ಯಕ್ತಿ ಮತ್ತೆ ಸಿಕ್ಕಾನೆಯೆ? ಆತನ ಹಣವನ್ನು ಹಿಂದಿರುಗಿಸಿ ವಂದನೆಗಳನ್ನು ಹೇಳಲು ಅವಕಾಶ ಸಿಕ್ಕೀತೆ? ಎಂದು? 

 

***************                       ***************                       **************

 

ನನ್ನ ಅಜ್ಜಿ, ನನ್ನ ಗೆಳತಿಗೆ ಪ್ರಯಾಣವನ್ನು ತಡೆದ ಪ್ರೇರಣೆ , ಪೆಟ್ರೋಲ್ ಸ್ಟೇಷನ್ ನಲ್ಲಿ ಸಿಕ್ಕಿದ ವ್ಯಕ್ತಿ ............ ಇವರೆಲ್ಲ ಪರಿಗಳೇ?

 

ಡಾ ಸತ್ಯವತಿ ಮೂರ್ತಿ


ಈ ಲೇಖನ ಉದಯವಾಣಿ ದೇಸೀಸ್ವರದಲ್ಲಿ 15-05-2021 ರಂದು ಪ್ರಕಟವಾಗಿದೆ






 

Comments

Popular posts from this blog

ಕವಾಲಿ

ಏಳು ಪಾವನ ಚರಣ /ಏಳು ಪರಮಾ ಕರುಣ

ದೇವಾ ಕರುಣೆಯ ನು ತೋರ ಲಾರೆಯ