ದತ್ತಾತ್ರೇಯ ಸುಪ್ರಭಾತ
ಏಳು ಪಾವನ ಚರಣ ಏಳು ಪರಮಾ ಕರುಣ
ಏಳು ದತ್ತಾತ್ರೇಯ ಏಳು ಗುರವೇ
ಏಳು ದೇವರದೇವ ಗಾಣಗಾಪುರದರಸ
ಏಳು ಭಕ್ತರ ರಕ್ಷ ಪರಮ ಗುರವೇ
ಹಕ್ಕಿಚಿಲಿಪಿಲಿಗಾನ ಮಧುರತೆಯ ಸ್ವರತಾನ
ನಿನಗೆಂದೆಕಾದಿಹುದು ಶ್ರೀಪಾದನೇ
ಮಂದವಾಗೆಸೆಯುತಿಹ ಮಾರುತನು ತಾನಿಂದು
ನಿನಗೆ ಕಾದಿಹನಯ್ಯ ಬೆಳಗಾಯಿತೂ
ರಾಜ್ಯ ಪದವಿಯ ಪಡೆದ ರಜಕನಿಂದಿಹನಿಲ್ಲಿ
ಚರಣವಾರೋಗಿಸಲು ಏಳು ಗುರುವೇ
ವೇದವನೆ ನುಡಿದನಾ ಕುಲಹೀನನು ತಾನು
ಬಂದಿಹನು ನಿನ್ನನ್ನು ಸೇವಿಸಲು ದೇವ
ವಿಶ್ವಮೂರ್ತಿಯೆ ನಿನ್ನ ಅಪರಿಮಿತ ಶಕ್ತಿಯನು
ಅರಿತ ತಿವಿಕ್ರಮಯತಿಯು ಐತಂದಿಹನು
ಪರಿಪರಿಯ ಪುಷ್ಪದೊಳು ನಿನ್ನ ಪೂಜಿಸಲೆಂದು
ಕಾದು ನಿಂದಿಹನೇಳು ಬೆಳಗಾಯಿತೂ
ಬಂಜೆ ಮುದುಕಿಯು ಎನಗೆ ಪುತ್ರನನು ಕರುಣಿಸಿದೆ
ಎನ್ನ ಕರ್ಮವ ತೊಳೆದು ಉದ್ಧರಿಸಿದೇ
ಎಂದು ಪಾಡುತ ಮಹಿಮೆ ನಿಂದಿಹಳು ಗಂಗಾ
ಏಳು ದತ್ತಯ್ಯನೇ ಬೆಳಗಾಯಿತೂ
ಯತಿನರಸಿಂಹನಾಗಿ ನಿನ್ನ ಹಡೆದಾ ಅಂಬ
ಬಂದಿಹಳು ನಿನ್ನನ್ನು ಮುದ್ದಿಸಲು ತಾ
ಮೂಕನಾದಾ ಮಗನ ಮಾತುಗಳ ಲಾಲಿಸಲು
ಹಂಬಲಿಸಿ ಬಂದಿಹಳು ಏಳು ಯತಿವರನೇ
ಅವರೆಬಳ್ಳಿಯ ಕಿತ್ತು ಅಕ್ಷಯದ ಹೊನ್ನಿತ್ತು
ಐಸಿರಿಯ ತುಂಬಿದಾ ವಿಪ್ರನಂ ನೋಡೇಳು
ಹೊಲದ ಬೆಳೆಯನು ಕಿತ್ತು ಎರಡುಪಟ್ಟನು ಬೆಳೆಸಿ
ಭಕ್ತಿಯೊಳಗಿಹ ಶಕ್ತಿಯ ಜಗಕೆ ತೋರಿದೆ
ಅಂದು ಮಾಧವ ತಂದ ನಾಲ್ಕು ಹಿಡಿಯಕ್ಕಿಯಲಿ
ನಾಲ್ಕು ಸಾಸಿರ ಉಂಡು ತಣಿದು ತೇಗಲು
ಮೂಕನಾದಾನು ತಾನು ಮಾಧವನು ಬೆರಗಿನಲಿ
ಎಚ್ಚರಿಸಲೂ ಏಳು ಬೆಳಗಾಯಿತೂ
ಬಂಜೆ ಎಮ್ಮೆಯು ಕರೆದ ಅದ್ಭುತವ ನೋಡಿದಾ
ದಂಪತಿಗಳೈತಂದು ನಿಂದಿಹರಲ್ಲಿ
ಅಷ್ಟರೂಪದಿ ಅಂದುದೀವಳಿಗಗೈತಂದು
ವಿಶ್ವರೂಪವ ನೀನು ಮೆರೆದೆ ಗುರುವೇ
ಈಶ ಕಲ್ಲೇಶ ನೀ ಈಶ ಸರ್ವೇಶ ನೀ
ಎಂದು ಪೊಗಳುತಲಿಹನು ನರಹರಿ ಕವಿಯು
ಕುಷ್ಟರೋಗವ ಕಳೆದೆ ಜ್ಞಾನವನು ಕರುಣಿಸಿದೆ
ಮೂರ್ಖನಿಗೆ ಬುದ್ಧಿಯನು ನೀಡಿದೇ ಗುರುವೇ
ನಿನ್ನ ನಂಬದೆ ಬಂದ ಎನಗನುಗ್ರಹ ಮಾಡಿ
ಎನ್ನ ಉದ್ಧರಿಸಿದಾ ಗುರುವೇ ಏಳು
ಎಂದು ಬೇಡುತಲಿಹನು ನಂದಿಕವಿ ಬಂದಿಲ್ಲಿ
ಬೆಳಗಾಯಿತೇಳಯ್ಯ ಪರಮಗುರುವೇ
ಭಕ್ತವೃಂದವು ನಿನ್ನ ಸೇವೆಗೆಂದೇ ಬಂದು
ಕಾದು ನಿಂದಿಹರೇಳು ಬೆಳಗಾಯಿತೂ
ನಿನ್ನ ಸೇವಿಸಲೆಂದು ಹಾಲುತುಪ್ಪವ ತಂದು
ನೆರೆದಿಹರು ಶಿಷ್ಯರೂ ಏಳು ಗುರುವೇ
ಮಂಗಳವು ಗುರು ದತ್ತಾತ್ತ್ರೇಯಗೆ
ಮಂಗಳವು ಅನಸೂಯೆಗೊಲಿದ ತ್ರಿಮೂರ್ತಿಗೆ
ಮಂಗಳವು ನರಸಿಂಹ ಸರಸ್ವತಿಗೆ
ಮಂಗಳವು ಗಾಣಗಾಪುರದರಸಗೆ
ಸರ್ವಂ ಸದ್ಗುರು ಚರಣಾರವಿಂದಾರ್ಪಣಮಸ್ತು
ಗುರುದೇವ ದತ್ತ
ಸತ್ಯವತಿ ಮೂರ್ತಿ
Comments
Post a Comment