ಶರಣು ಬಂದೆನು ನಾನು

 ಶರಣು ಬಂದೆನು ನಾನು  ನಿನ್ನ ಚರಣಕೆ ದೇವ

ಅನ್ಯರನು ನಾ ಕಾಣೆ ಕಷ್ಟಗಳ ಪರಿಹರಿಸೋ  /ಪಲ್ಲವಿ

            ನಾನು ನನ್ನದು ಎಂಬ ಸ್ವಾರ್ಥದಿಂದಲಿ ನಡೆದು

            ನಿನ್ನ ಸ್ಮರಣೆಯನೂ ಮರೆತಿದ್ದೆನಯ್ಯ

            ಎಲ್ಲ ಅರಿತಿಹೆನೆಂಬ ಅಹಂಕಾರದಲಿ ಮೆರೆದು 

            ಏನನೂ ಅರಿಯದಿಹ ಮೂಢಳಾದೆ ದೇವಾ/1/


ಪತಿಸುತರು ಎನ್ನವರು ಹಿತವನ್ನೆ ಕೋರುವರು 

ಒಡಹುಟ್ಟಿದವರಿವರು ಎನ್ನ ಬಾಂಧವರು

ಎಂದೆಲ್ಲ ಗಳಹುತಲಿ ಮೆರೆದಿದ್ದೆ ನಾನು 

ದಿಟವಾಗಿ ಎನ್ನೊಡೆಯ ನಿನ್ನ ಮರೆತೇನಯ್ಯ/2/


            ಮೂಢತನವದು ನನ್ನ ಮುಸುಕಿರಲು ಹೇ ದೇವಾ

        ನಿನ್ನ ಮಹಿಮೆಯ ನಾನು ಅರಿಯಲಾರದೆ ಹೋದೆ

        ಅಂದು ಆ ರಜಕನಿಗೆ ತಿಳಿವ ನೀಡಿದ ತೆರದಿ

        ಬಂದು ನೀ ನನ್ನನ್ನು ಉದ್ಧರಿಸು ಗುರುವೇ/3/


ಅನಸೂಯೆಗೊಲಿದ ತ್ರಿಮೂರ್ತಿಯೂ ನೀನೆ 

ಶ್ರೀಪಾದನಾಗಿ ಮೆರೆದ ದತ್ತಮೂರ್ತಿಯು ನೀನೆ

ನೀನೆ ಸಕಲರ ರಕ್ಷ ವಿಶ್ವದೊಡೆಯ ನೀನೆ

ಗಾಣಗಾಪುರದರಸ  ದತ್ತಗುರುವೇ /4/

ಸತ್ಯವತಿ ಮೂರ್ತಿ

 ಶ್ರೀಮತಿ ದೀಪಿಕಾ ಗೋಪಾಲ ಕೃಷ್ಣ ರಾಗ ಸಂಯೋಜಿಸಿ   ಹಾಡಿರುತ್ತಾರೆ. ಪಕ್ಕವಾದ್ಯದಲ್ಲಿ ಕಟ್ಟೆಪುರ ಆರ್ ಸತ್ಯಪ್ರಕಾಶ ಅವರು  ವಯೋಲಿನ್ ನುಡಿಸಿದ್ದಾರೆ. ಸಾಯಿ ಲಕ್ಷ್ಮಿ ಕೇಶವ ಅವರು ಮೃದಂಗವನ್ನು ನುಡಿಸಿರುತ್ತಾರೆ.

ರಚನೆ: ಡಾ ಸತ್ಯವತಿ ಮೂರ್ತಿ ಗಾಯಕಿ: ದೀಪಿಕ ಗೋಪಾಲಕೃಷ್ಣ ವಯೋಲಿನ್: ಕಟ್ಟೆಪುರ ಆರ್ ಸತ್ಯಪ್ರಕಾಶ್ ಮೃದಂಗ: ಸಾಯಿ ಶಿವ್ ಲಕ್ಷ್ಮಿಕೇಶವ್

ರಚನೆ; ಡಾ. ಸತ್ಯವತಿ ಮೂರ್ತಿ

ರಾಗ: ಹಂಸಧ್ವನಿ

ತಾಳ : ಮಿಶ್ರಛಾಪು





Comments

Popular posts from this blog

ದೇವಾ ಕರುಣೆಯ ನು ತೋರ ಲಾರೆಯ

ಕವಾಲಿ

ಹೊಂದಾಣಿಕೆ