ಲಾವಣಿ

ಭುವನೇಶ್ವರಿಯ ಚರಣಕೆ ವಂದಿಸಿ
ಹಾಡುವೆ ಇಂದಿನ ಲಾವಣಿಯ
ಕೇಳಿರಿ ಸೋದರ ಸೋದರಿಯರೆ
ಕನ್ನಡದೀ ಇತಿಹಾಸವನು

ಸಾವಿರವೆರಡು ವರ್ಷಗಳ್ಹಿಂದೆ
ಹುಟ್ಟಿದಳಿವಳು ಈ ನೆಲದೆ
ಆಡುತ ಪಾಡುತ ಅಂಬೆಗಾಲಿಡುತ
ನಿಂತಳು ನಡಿಗೆಯ ಕಲಿತಳು

ಶಿವಕೋಟ್ಯಾಚಾರ್ಯನು ಕನ್ನಡ ಗದ್ಯದಿ
ವಡ್ಡಾರಾಧನೆಯ  ರಚಿಸಿದನು
ವೈಯಾರಿ ಚೆಲುವಿ ಕನ್ನಡಿತಿಯ
ಹೆಜ್ಜೆಗೆ ಗೆಜ್ಜೆಯ ತೊಡಿಸಿದನು

ನೋಡುತ ನೋಡುತ ಬೆಳೆದಳು ಇವಳು
ಹತ್ತು ವರುಷದ ಹೆಣ್ಮಗಳು
ಸೊಬಗಿನ ಸಿರಿಯ ದೇವತೆಯಿವಳು
ಕನ್ನಡ ಕಾವ್ಯ ಕನ್ನಿಕೆಯು

ರಾಷ್ಟ್ರಕೂಟರ ರಾಜನು ತಾನು
ಅಮೋಘವರ್ಷ ನ್ರಪತುಂಗನು
ಕವಿರಾಜ ಮಾರ್ಗದಿ ಮಾರ್ಗವ ತೋರುವ
ಬಳೆಗಳನಿವಳಿಗೆ ತೊಡಿಸಿದನು


ಪಂಪರು ಪೊನ್ನರು ರನ್ನರು ಜನ್ನರು
ಸಿಂಗರಿಸಿದರು ಕಾವ್ಯದಲಿ
ಪಂಪನ ಭಾರತ  ಪೊನ್ನನ ಪುರಾಣ
ರನ್ನನ ಭೀಮ ವಿಜಯವು

ಮತ್ತೆ ಜನ್ನನ ಯಶೋಧರಚರಿತೆಯು
ಪಟ್ಟೆಯ ಸೀರೆಯು ತಾನಾಯ್ತು
ತುಂಬು ಜೌವ್ವನದ ಚೆಲುವಿಯ ಚೆಲುವಿಗೆ
ಕಳಶವನಿಟ್ಟಂತೆ ತಾನಾಯ್ತು

ಬಂದನು ನಾರ್ಣಪ್ಪ ಕುಮಾರವ್ಯಾಸನು
ಹರಿಹರ ರಾಘವಾಂಕರು
ತೊಡಿಸಿದರಿವಳಿಗೆ ಅಂಚಿನ ಕುಪ್ಪುಸ
ಷಟ್ಪದಿ  ರಗಳೆ ಕಾವ್ಯದಲಿ

ದಾಸರು ಶರಣರು ಪದಗಳು ವಚನದಿಂದ
ತಂದರು ಮುಖಕೇ ಕಂತೀಯ
ಕಾಂತೆಯ ಮುಖದೊಳು ಲಾಸ್ಯವ ತೋರಲು
ಮುದ್ದಣ ಮನೋರಮೆ ಹುಟ್ಟಿದರು

ಕಂತೆಯ ಮುಖದೊಳು ಹಣೆಬೊಟ್ಟ ಕಾಣದೆ
ಲಕ್ಷ್ಮೀಶ ಕವಿಯು ತಾನೊಂದು
ಜೈಮಿನಿ ಭಾರತ ರಚಿಸುತ ಆಕೆಗೆ
ಹಣೆಯಲಿ ತಿಲಕವ ರಚಿಸಿದನು

ಸಂಪ್ರದಾಯದೀ ಕನ್ಯೆಗೆ ತಂದರು
ಆಧುನಿಕತೆಯ ಸೌಂದರ್ಯ
ಇಂಗ್ಲಿಷ್ ಗೀತೆಗಳ ಒನಪು ವಯ್ಯಾರ
ಬೆಳ್ಳೂರು ಮೈಲಾರ ಶ್ರೀಕಂಠಯ್ಯ

ಬೇಲೂರು ಶಿಲೆಯ ಸೌಂದರ್ಯ ಬಣ್ಣಿಸಿ
ಮಂಕುತಿಮ್ಮನ ಕಗ್ಗಕೆ ಹೊಂದಿಸಿ
ತೊಡಿಸಿದರ್ ಡಿವಿಜಿ ಕೊರಳಿಗೆ ಪದಕವನ್ನ
ಕಿವಿಗಳಿಗ್ವಜ್ರದ ಓಲೆಯನು

ಬೇಂದ್ರೆ ಕುವೆಂಪು ಕಾರಂತ ಮಾಸ್ತಿ
ತೊಡಿಸಿದರಿವಳಿಗೆ ಮಕುಟವನು
ತರಾಸು ಅನಕ್ರ ಕೆ ಎಸ್ ನ  ಗೋಕಾಕ
ನವರತ್ನಗಳನು ಕೆತ್ತಿದರು

ನಾಕುತಂತಿಗೆ ರಾಗವ ಹೊಂದಿಸಿ
ರಾಮಾಯಣದ ದರ್ಶನ ಮಾಡಿಸಿ
ಮೂಕಜ್ಜಿ ಕನಸ ಕಾಣುತಲಿರಲು
ಚಿಕವೀರ ರಾಜೇಂದ್ರನುದಿಸಿದನು

ದುರ್ಗಾಸ್ತಮಾನವ ಸಂಧ್ಯಾರಾಗದಿ
ಬಣ್ಣೀಸುತಿವರು ನಡೆದಿರಲು
ಮೈಸೂರು ಮಲ್ಲಿಗೆ ಕಂಪನ್ನು ನೀಡಿತು
ಭಾರತ ಸಿಂಧು ರಶ್ಮಿಯಲಿ

ಕನ್ನಡ ರಾಜ್ಯದ ಉತ್ಸವವಿದುವೆ
ಕನ್ನಡಿತಿಯ ಉತ್ಸವವು
ಕನ್ನಡ ಕಾವ್ಯ ಕನ್ನಿಕೆಯಿವಳು
ತುಂಬು ಜವ್ವನ ರೂಪಸಿಯು

ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ
ಸಿರಿಗನ್ನಡಂ ಏಳ್ಗೆಂಬ ಮಾತಂದು
ನರಕ್ಕಕ್ಕೆ ಇಳಿಸಿದ್ರು ಹಾಡುವ ರತ್ನನ್ನ
ಸ್ಮರಿಸುತೀ ಲಾವಣಿ ಮುಗಿಸುವೆನು

ಸಂಕೇತಿ ಸಂಪದ, ಶ್ರಾವಣ ಬ್ಲಾಗ್, ಉದಯವಾಣಿ ಪತ್ರಿಕೆಗಳಲ್ಲಿ ಪ್ರಕಟವಾಗಿದೆ
















Comments

Popular posts from this blog

ಕವಾಲಿ

ಏಳು ಪಾವನ ಚರಣ /ಏಳು ಪರಮಾ ಕರುಣ

ದೇವಾ ಕರುಣೆಯ ನು ತೋರ ಲಾರೆಯ